Simha Roopini movie review. ಮಹಾಲಕ್ಷ್ಮಿ ಮಾರಮ್ಮನಾದ ಕಥೆ “ಸಿಂಹ ರೂಪಿಣಿ” ಚಿತ್ರ ವಿಮರ್ಶೆ

ಚಿತ್ರ: ಸಿಂಹರೂಪಿಣಿ
ಚಿತ್ರ ವಿಮರ್ಶೆ
ರೇಟಿಂಗ್ – 3.5/5

ನಿರ್ಮಾಪಕರು :  ನಂಜುಂಡೇಶ್ವರ
ನಿರ್ದೇಶಕರು : ಕಿನ್ನಾಳ್ ರಾಜ್
ಸಂಗೀತ : ಆಕಾಶ್ ಪರ್ವ
ಛಾಯಾಗ್ರಹಣ : ಕಿರಣ್ ಕುಮಾರ್.

ಕಲಾವಿದರು – ಸುಮನ್, ಹರೀಶ್ ರೈ, ತಬಲ ನಾಣಿ, ದಿನೇಶ್ ಮಂಗಳೂರು, ಯಶ್ ಶೆಟ್ಟಿ, ನೀನಾಸಂ ಅಶ್ವತ್, ದಿವ್ಯಾ ಆಲೂರು, ವಿಜಯ್ ಚಂಡೂರು, ಸಾಗರ್,    ಅಂಕಿತಾಗೌಡ, ಯಶಸ್ವಿನಿ ಸುಬ್ಬೇಗೌಡ, ಖುಷಿ ಬಸ್ರೂರು, ಸಾಗರ್, ಆರವ್ ಲೋಹಿತ್

ಸಿಂಹರೂಪಿಣಿ ಇದು ಕನ್ನಡದ ನೆಲೆಘಟ್ಟಿನ ಭಾವನೆಗಳ ಧೈವಶಕ್ತಿಯ ಚಿತ್ರ.


ಭಾರತದ ನೆಲದಲ್ಲಿ ಸಾವಿರಾರು ಆಚರಣೆ, ಆ ಆಚರಣೆಗಳಿಗೆ ಅದರದ್ದೇ ಆದ ಸಂಸ್ಕೃತಿ, ಆ ಸಂಸ್ಕೃತಿಗಳಿಗೆ ಅನುಗುಣವಾಗಿ ದೇವರುಗಳ ಪೂಜೆ, ಪುನಸ್ಕಾರಗಳು ಬಹಳ ಹಿಂದಿನಿಂದ ತನ್ನ ತನಗಳನ್ನು ಉಳಿಸಿಕೊಂಡು ಬಂದಿವೆ.
ಅದೇ ನಿಟ್ಟಿನಲ್ಲಿ ಮೂಡಿಬಂದಿರುವ, ಇತ್ತೀಚೆಗೆ ತೆರೆಕಂಡ ಸಿಂಹರೂಪಿಣಿ ಚಿತ್ರ ಕೂಡ ಒಂದು.

ನಂಬಿಕೆ, ಅಪನಂಬಿಕೆಗಳ ಆಚಾರ ವಿಚಾರಗಳಲ್ಲಿ ಅವರವರದ್ದೇ ಆದ ಒಂದಷ್ಟ ನಿಲುವುಗಳಿವೆ. ವಿಜ್ಞಾನ ಎಷ್ಟೇ ಮುಂದುವರೆದರೂ ಎಲ್ಲರನ್ನು ಕಾಯುವ, ಎಲ್ಲವನ್ನು ಸಂಭಾಳಿಸುವ ಶಕ್ತಿಯೊಂದಿದೆ ಅದುವೇ ಧೈವಶಕ್ತಿ.
ಇಂತಹ ಧೈವದ ಒಂದಷ್ಟು ಪವಾಡಗಳನ್ನು ಇಂದಿನ ಸಮಾಜದ ಮುಂದಿಡುವ ಪ್ರಯತ್ನವನ್ನು ನಿರ್ದೇಶಕ ಕಿನ್ನಾಳ್ ರಾಜ್ ಮಾಡಿದ್ದಾರೆ.


ಈ ಹಿಂದೆ ಹಿಟ್ಲರ್ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಕಿನ್ನಾಳ್ ರಾಜ್ ಈಗ ದೇವಿಯ ಮೊರೆ ಹೋಗಿದ್ದಾರೆ.

ಒಂದು ಸಿನಿಮಾ ಅಂದ ಮೇಲೆ ಅದಕ್ಕೊಂದು ಕಥೆ, ಚಿತ್ರಕಥೆ, ಸಂಭಾಷಣೆ ಇರುತ್ತೆ.
ಆದರೆ  ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಎಲ್ಲವೂ ಆಗಿದ್ದು ದೊಡ್ಡಬಳ್ಳಾಪುರ ದಲ್ಲಿನ ಯರಪ್ಪನ ಹಳ್ಳಿಯಲ್ಲಿ ಕೃಷ್ಣ ಎನ್ನುವರ ಮೈ ಮೇಲೆ ಆವಾಹನೆ ಆಗುವ ಮಾರಮ್ಮ ದೇವಿಯಿಂದ. ಈ ದೇವಿಯೂ ಸ್ವತಃ ತನ್ನ ಕಥೆಯನ್ನು ಹೇಳಿ ಅದನ್ನು ಸಿನಿಮಾ ರೂಪಕ್ಕೆ ತರಲು ಆಜ್ಞೆಯನ್ನು ನೀಡಿ  ಪ್ರತಿಯೊಂದು ಹೆಜ್ಜೆಗೂ ಸಹಕರಿಸಿದ್ದು. ಈ ಯರಪ್ಪನ ಹಳ್ಳಿಯ ಮಾರಮ್ಮ ದೇವಿ. ಇದು ನಿಜಕ್ಕೂ ಅಚ್ಚರಿ ಪಡುವಂತ ವಿಷಯ.

ಸಿನಿಮಾದಲ್ಲಿನ ಪ್ರತಿಯೊಂದು ಪಾತ್ರವನ್ನು ಯಾರು ಅಭಿನಯಿಸಬೇಕು ಎನ್ನುವುದನ್ನು ತಾಯಿಯೇ ನಿರ್ದರಿಸಿದ್ದಾರೆ.

ದೇವಿ ಮಾರಮ್ಮನಾಗಿದ್ದು ಹೇಗೆ, ಮಾರಮ್ಮನ ಜಾತ್ರಯಲ್ಲಿ ಕೋಣವನ್ನು ಬಲಿ ಕೊಡುವುದು ಏಕೆ, ಮಾರಮ್ಮ ಆವಾಹನೆಯಾಗಿ ಜನರ ಕಷ್ಟಗಳನ್ನು ಹೇಗೆ ನಿವಾರಿಸುತ್ತಾರೆ ಎನ್ನುವುದನ್ನು ಕಿನ್ನಾಳ್ ರಾಜ್ ತೆರೆಯ ಮೇಲೆ ತಂದಿದ್ದಾರೆ.

ಇತ್ತೀಚೆಗೆ ಭಕ್ತಿಪ್ರಧಾನ ಚಿತ್ರಗಳು ಬೆರಳಣಿಕೆಯಷ್ಟು ಬಹಳ ಕಡಿಮೆಯಾಗಿದೆ. ಈಗ ಬಿಡುಗಡೆಯಾಗಿರುವ ’ಸಿಂಹರೂಪಿಣಿ’ ಚಿತ್ರ ದೇವರ ಬಗ್ಗೆ, ಆಚಾರ ವಿಚಾರಗಳ ಬಗ್ಗೆ ಆಸಕ್ತಿ ಮತ್ತು ಭಕ್ತಿ ಇರುವವರಿಗೆ ಈ ಚಿತ್ರ ಕಂಡಿತ ಇಷ್ಟವಾಗುತ್ತದೆ.

ಭಕ್ತಿ ಸಿನಿಮಾದಲ್ಲಿ ಪವಾಡ, ಮಹಿಮೆಗಳು ಇರುವುದು ಸಹಜ. ಅದರಂತೆ ಇದರಲ್ಲೂ ಎಲ್ಲವನ್ನು ಸಂದರ್ಭಕ್ಕೆ ತಕ್ಕಂತೆ ತೋರಿಸಲಾಗಿದೆ. ಎಲ್ಲಿಯೂ ಅಸಹಜ ಎನ್ನುವಂತ ದೃಶ್ಯಗಳು ಇರದೆ, ಪ್ರೇಕ್ಷಕರಿಗೆ  ಮಾರಮ್ಮನ ಮೇಲೆ ಇನ್ನಷ್ಟು ಭಕ್ತಿ ಹೆಚ್ಚಾಗುವುದಂತು ನಿಜ.

ಪಾರ್ವತಿದೇವಿಯ ಅವತಾರಗಳ ಸಪ್ತಮಾತೃಕೆಯರಲ್ಲಿ ಕೊನೆಯ ಅವತಾರ ಮಾರಮ್ಮ ದೇವಿ. ದುಷ್ಟರನ್ನು ಸಂಹಾರ ಮಾಡಿದರೆ, ನಂಬಿದ ಭಕ್ತರಿಗೆ ಅಭಯ ನೀಡುತ್ತಾಳೆ. ಭೂಮಿಯಲ್ಲಿ ದೇವತೆಗಳು ಅವತಾರವೆತ್ತಲು ಹಲವಾರು ಕಾರಣಗಳಿವೆ. ಅದೇ ರೀತಿ ಮಾರಮ್ಮ ಯರಪ್ಪನ ಹಳ್ಳಿಗೆ ಬರಲು ಕಾರಣವೇನು? ಅಲ್ಲಿನ ಜನರ ಸಂಸ್ಕ್ರತಿ, ಆಚಾರ ವಿಚಾರ ಇದೆಲ್ಲಾವನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಕೆಜಿಎಫ್’ ಚಿತ್ರಕ್ಕೆ ಹಾಡು ಬರೆದಿದ್ದ ಕಿನ್ನಾಳ್ ರಾಜ್ ಹಲವಾರು ಹಿಟ್ ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ. ಹಾಗೆಯೇ ಸಿಂಹರೂಪಿಣಿ ಚಿತ್ರದ ಗೀತೆಗಳನ್ನು ರಚಿಸಿದ್ದಾರೆ. ಖಿನ್ನಾಳ್ ರಾಜ್ ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಆಕಾಶ್‌ಪರ್ವ ಸಂಗೀತದಲ್ಲಿ ಎರಡು ಹಾಡುಗಳು ಮೂಡಿ ಬಂದಿದೆ. ಚಿತ್ರಕ್ಕೆ ಹಿನ್ನೆಲೆ ಸಂಗೀತ ಪೂರಕವಾಗಿದೆ.

ಚಿತ್ರ ಇನ್ನು ನಿರ್ಮಾಣ ಮಾಡಿರುವ ಕೆ.ಎಂ.ನಂಜುಡೇಶ್ವರ, ಅಮ್ಮನ ಭಕ್ತನಾಗಿರುವುದರಿಂದ ದೇವಿಯ ಕುರಿತಂತೆ ಒಂದಷ್ಟು ತಿಳಿಯದ ವಿಷಯಗಳನ್ನು ಚಿತ್ರರೂಪದಲ್ಲಿ ತೋರಿಸಲು ಸಹಕಾರಿಯಾಗಿದ್ದಾರೆ.


 
ನಿರೂಪಕಿ ಅಂಕಿತಾಗೌಡ ಮೊದಲ ಬಾರಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮಾರಮ್ಮ ದೇವಿಯಾಗಿ ಯಶಸ್ವಿನಿ ಸುಬ್ಬೆಗೌಡ, ತುಂಬಾ ಚನ್ನಾಗಿ ಮಾರಮ್ಮನ ಪಾತ್ರವನ್ನು ನಿಭಾಯಿಸಿದ್ದಾರೆ. ಜಮೀನ್ದಾರನಾಗಿ ಹಿರಿಯ ನಟ ಸುಮನ್, ದೇವಿ ಮೈ ಮೇಲೆ ಆವಾಹನೆಯಾಗುವ ಪಾತ್ರದಲ್ಲಿ ನಿರೂಪಕಿ, ಜಾನಪದ ಹಾಡುಗಾರ್ತಿ ದಿವ್ಯಾ ಆಲೂರು ಮೊದಲ ಬಾರಿಗೆಬಣ್ಣ ಹಚ್ಚಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ, ದೇವಿ ಆರಾಧಕರಾಗಿ ಹರೀಶ್‌ರೈ, ವಿಜಯ್‌ಚೆಂಡೂರು, ತಬಲಾನಾಣಿ, ಸಾಗರ್. ಗೌಡನಾಗಿ ದಿನೇಶ್‌ಮಂಗಳೂರು, ದೇವಿಯ ಪತಿಯಾಗಿ ಯಶ್‌ಶೆಟ್ಟಿ, ತಂದೆಯಾಗಿ ನೀನಾಸಂಅಶ್ವಥ್, ಬಾಲದೇವಿಯಾಗಿ ಖುಷಿಬಸ್ರೂರು, ಖಳನಟನಾಗಿ ಆರವ್‌ಲೋಹಿತ್ ಸೇರಿದಂತೆ ನೂರ ಇಪ್ಪತ್ತ್ತನಾಲ್ಕು ಪೋಷಕ ಕಲಾವಿದರುಗಳಿಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹಾಡಿನಲ್ಲಿ ಪ್ಯಾನ್ ಇಂಡಿಯಾ ಸಂಗೀತ ಸಂಯೋಜಕ ರವಿಬಸ್ರೂರು ಕಾಣಿಸಿಕೊಂಡಿದ್ದಾರೆ. ಎಲ್ಲರೂ ತಮಗೆ ನೀಡಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ. ಕಿರಣ್‌ಕುಮಾರ್ ಛಾಯಾಗ್ರಹಣ ಇದೆಲ್ಲಕ್ಕೂ ಪೂರಕವಾಗಿದೆ. ಕೊನಗೆ ಭಾಗ-2 ಬರುತ್ತದೆ ಎಂಬ ಸುಳಿವು ನೀಡಿದ್ದಾರೆ. ಹಾಗೆಯೇ ಚಿತ್ರದಲ್ಲಿ ಹಲವಾರು ಪವಾಡಗಳು ನಡೆದಿವೆ ಆದರೆ ನಿರ್ದೇಶಕರು ಗೌಪ್ಯವಾಗಿ ಇಟ್ಟಿದ್ದಾರೆ. ಬಹುಶ ಚಿತ್ರದ 2ನೇ ಭಾಗದಲ್ಲಿ ತೋರಿಸಬಹುದೇನೋ..?

ಚಿತ್ರದಲ್ಲಿ ಒಂದಷ್ಟು ಉಪಕಥೆಗಳ, ರಿವರ್ಸ್ ಪ್ಲೇನಲ್ಲಿ ಪ್ರೇಕ್ಷಕರಿಗೊಂದಿಷ್ಟು ಗೊಂದಲವಾಗುತ್ತದೆ. ಎಡಿಟಿಂಗ್ ನಲ್ಲಿ ಸಿನಿಮಾದ ಕಥೆ ಮತ್ತು ಪಾತ್ರಗಳನ್ನು ಏಕಾ ಏಕಿ ಎಲ್ಲೆಂದರಲ್ಲಿ ಕತ್ತರಿಸಿರುವಂತೆ ಕಾಣುತ್ತದೆ. ಈ ಚಿತ್ರಕ್ಕೆ ಇನ್ನೊಂದಿಷ್ಟು ಬಜೆಟ್ ಹೆಚ್ಚಾಗಿ ಸಿಕ್ಕಿದ್ದರೆ ಚಿತ್ರ ಇನ್ನೂ ಚನ್ನಾಗಿರುತ್ತಿತ್ತು.

ಚಿತ್ರ ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ. ಒಟ್ಟಾರೆ ದೇವರನ್ನು ನಂಬುವವರಿಗೆ ಪಕ್ಕಾ ಪೈಸಾ ವಸೂಲ್ ಸಿನಿಮಾವೆಂದು ಖಂಡಿತವಾಗಿ ಹೇಳಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor