ರಾಜರತ್ನನಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರ ಕಣ್ಣೀರ ವಿದಾಯ
ರಾಜರತ್ನನಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರ ಕಣ್ಣೀರ ವಿದಾಯ. ಅಧಿಕಾರ ಪಕ್ಕಕ್ಕಿಟ್ಟು ಮಾನವೀಯತೆ ಮೆರೆದ ಮಾನ್ಯ ಮುಖ್ಯಮಂತ್ರಿ
ಪುನೀತ್ ರಾಜಕುಮಾರ್ ಸಾವಿನ ಆಘಾತ ನಿಜಕ್ಕೂ ಕನ್ನಡ ನಾಡಿಗೆ, ಅಭಿಮಾನಿ ಬಳಗಕ್ಕೆ ಹಾಗೂ ಚಿತ್ರರಂಗಕ್ಕೆ ಬರಸಿಡಿಲು ಬಡಿದು ನೆಲಕ್ಕೊರಗಿದಂತಾಗಿದೆ.
ಎಲ್ಲರ ಕಣ್ಮುಂದೆ ಎಲ್ಲರಿಗೂ ಪ್ರೀತಿಯಿಂದ ತಲೆಬಾಗಿ ಗೌರವಿತವಾದ ಬದುಕು ಕಟ್ಟಿಕೊಂಡು ಈ ನಾಡಿನ ಜನರ ಅಪಾರ ಪ್ರೀತಿ ಅಭಿಮಾನ ಗಳಿಸಿ ಶಿಖರದೆತ್ತರಕ್ಕೆ ಏರಿ, ಬಾನಗಲ ವಿಸ್ತರಿಸಿದ್ದ ದೊಡ್ಮನೆ ಹುಡುಗ ಪ್ರೀತಿಯ ಅಪ್ಪು ಇನ್ನಿಲ್ಲ ಎನ್ನುವ ಆ ಕರಾಳಾ ಸುದ್ದಿ ಎಲ್ಲರ ಎದೆಯಲ್ಲಿ ಬೆಂಕಿ ಸುರಿದಂತಾಗಿತ್ತು.

ಸಾವಿನ ಸುದ್ದಿ ಕೇಳುತ್ತಿದ್ದಂತೆ ತಮ್ಮ ಅಭಿಮಾನದ ರಾಜಕುಮಾರನನ್ನು ನೋಡಲು ಅತಂಕದ ಧಾವಂತದಲ್ಲಿ ಓಡಿಬಂದ ಲಕ್ಷಾಂತರ ಜನರ ಆಕ್ರಂದನ ಮುಗಿಲು ಮುಟ್ಟಿದರು ವಿಧಿಯ ಅಟ್ಟಹಾಸದ ಮುಂದೆ ಏನು ಮಾಡದಂತ ನಿಷ್ಕ್ರಿಯ ಸ್ಥಿತಿಯಾಗಿತ್ತು.
ತಮ್ಮ ಮನೆ ಮತ್ತು ಮನದ ರಾಜರತ್ನನ ಅಗಲಿಕೆಯ ನೋವಿನಲ್ಲಿ ಯಾವುದೇ ಅವಘಡಗಳಿಗೆ ದಾರಿ ಮಾಡಿಕೊಡದೆ ನಾಡಿನ ಮರ್ಯಾದೆ ಕಾಪಾಡಿದ ಪುನೀತ್ ರವರ ಗುಣವಂತ ಅಭಿಮಾನಿಗಳನ್ನು ನಿಜಕ್ಕೂ ಮೆಚ್ಚಲೇ ಬೇಕು.

ಅದರ ಜೊತೆ ಜೊತೆಯಲ್ಲೇ ಈ ರಾಜ್ಯದ ಮುಖ್ಯಮಂತ್ರಿಯಾದ ಎಸ್. ಆರ್. ಬೊಮ್ಮಾಯಿ ಅವರು ತಾನೊಬ್ಬ ಮುಖ್ಯಮಂತ್ರಿಯ ಸ್ಥಾನದಲ್ಲಿದ್ದೇನೆ, ಒಂದು ದೊಡ್ಡ ಅಧಿಕಾರದಲ್ಲಿದ್ದೇನೆ ಅನ್ನುವುದನ್ನೇ ಮರೆತು ಒಬ್ಬ ಸಾಧಾರಣ ವ್ಯಕ್ತಿಯಂತೆ, ರಾಜ್ ಕುಟುಂಬದ ಆತ್ಮೀಯ ಸದಸ್ಯನಾಗಿ, ಅಪ್ಪುವಿನ ಒಬ್ಬ ಅಭಿಮಾನಿಯಂತೆ ಇಡೀ ಕಾರ್ಯವನ್ನು ಯಾವುದೇ ವಿಘ್ನವಿಲ್ಲದಂತೆ ನೆರವೇರಿಸಿದ್ದು ಶ್ಲಾಘನೀಯ. ಹಾಗೂ ಪುನೀತ್ ಶವದ ಮುಂದೆ ಕುಳಿತು ಹಣೆಗೆ ಮುತ್ತಿಟ್ಟು ದುಃಖ ದಿಂದ ಕಣ್ಣೀರ ವಿದಾಯ ಹೇಳಿದರು.
ಈ ಸಮಯದಲ್ಲಿ ಏನಾದರೂ ಕಿಂಚಿತ್ತು ಅಭಾಸಗಳು ನಡೆದಿದ್ದರೆ ದುಃಖ ತಪ್ತ ಅಭಿಮಾನಿಗಳಿಂದ ಏನಾಗುತ್ತಿತ್ತೋ ಆ ದೇವರೇ ಬಲ್ಲ. ಅಂತಹ ಯಾವುದೇ ಅಹಿತಕರ ಘಟನೆ ನಡೆಯಲು ಆಸ್ಪದ ಕೊಡದೆ ತಾವೇ ಸ್ವತಃ ತಮ್ಮ ಸಹೋದ್ಯೋಗಿ ಮಂತ್ರಿಗಳು, ಅಧಿಕಾರಿಗಳ ಜೊತೆಗೆ ನಿಂತು ಮೂರು ದಿನ ತಮ್ಮ ಸರ್ಕಾರದ ಎಲ್ಲ ಕಾರ್ಯಗಳನ್ನು ಬದಿಗೊತ್ತಿ ಪುನೀತ್ ನಿರ್ಗಮದ ಕಾರ್ಯವನ್ನು ಪರಿಪೂರ್ಣಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಂತ್ರಿಗಳಾದ ಅಶ್ವತ್ ನಾರಾಯಣ್, ವಿ. ಸೋಮಣ್ಣ, ಆರ್. ಅಶೋಕ್, ಮುನಿರತ್ನ, ಗೋಪಾಲಯ್ಯ ಹಾಗೂ ಇನ್ನಿತರ ಅಧಿಕಾರಿ ವರ್ಗ ಮುಖ್ಯಮಂತ್ರಿ ಯವರ ಜೊತೆ ಕೈ ಜೋಡಿಸಿ ಈ ಕಾರ್ಯವನ್ನು ಸಾಕಾರಗೊಳಿಸಿದ್ದಾರೆ.
ಅದರಲ್ಲೂ ಪೋಲೀಸ್ ವ್ಯವಸ್ಥಯೂ ಕೂಡ ಬಹಳ ಅಚ್ಚುಕಟ್ಟಾದ ಕಾರ್ಯ ನಿರ್ವಹಿಸಿ ನಾಡಿಗೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದೆ ಎನ್ನಬಹುದು.
ಈ ಎಲ್ಲದರ ಜೊತೆಗೆ ಪುನೀತ್ ಮಗಳು ಧೃತಿ ನ್ಯಾಯಾರ್ಕ್ ನಿಂದ ಭಾರತಕ್ಕೆ ಬರಲು ಭಾರತದ ವಿದೇಶಾಂಗ ಮಂತ್ರಿಗಳನ್ನು ಫೋನಿನ ಮುಖಾಂತರ ಬೇಟಿಯಾಗಿ ಬೇಕಾದ ಎಲ್ಲಾ ಸಿದ್ದತೆಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಮಾಡಿದ್ದಾರೆ.
ಇದರಿಂದಾಗಿ ಅವರಿಗೆ ರಾಜ್ ಕುಟುಂಬದ ಮೇಲೆ ಇರುವ ಅಭಿಮಾನದ ಗೌರವ ತೋರಿಸುತ್ತದೆ ಹಾಗೂ ಮುಖ್ಯಮಂತ್ರಿಯ ಜವಾಬ್ದಾರಿಯನ್ನು ಸರಿಯಾಗಿ ನೀಗಿಸಬಲ್ಲೆ ಎನ್ನುವುದನ್ನು
ಖಾತರಿ ಪಡಿಸಿದ್ದಾರೆ.