ಹಳೇ ಎಲೆಕೆರೆ ಬಸವೇಶ್ವರ ದೇವಾಲಯಕ್ಕೆಸಿಎಂ ಪುತ್ರಿ ಅರುಣಾದೇವಿ ಭೇಟಿ, ವಿಶೇಷ ಪೂಜೆ
ಪಾಂಡವಪುರ: ತಾಲ್ಲೂಕಿನ ಹಳೇ ಎಲೆಕೆರೆ ಗ್ರಾಮದಲ್ಲಿರುವ ಪುರಾತನ ಬಸವೇಶ್ವರ ಮತ್ತು ಈಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಗುರುವಾರ ಬೆಳಿಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಆಗಿರುವ ಅರುಣಾದೇವಿ ಅವರ ಪುತ್ರಿಯನ್ನು ಮಾಜಿ ಸಚಿವೆ ರಾಣಿ ಸತೀಶ್ ಅವರ ಮೊಮ್ಮಗನಿಗೆ ಇತ್ತೀಚೆಗೆ ವಿವಾಹ ಮಾಡಿಕೊಡಲಾಗಿತ್ತು. ಹಳೇ ಎಲೆಕೆರೆ ಗ್ರಾಮದ ಬಸವೇಶ್ವರ ಮತ್ತು ಈಶ್ವರ ದೇವರುಗಳು ರಾಣಿ ಸತೀಶ್ ಅವರ ಮನೆದೇವರಾಗಿದ್ದ ಕಾರಣ ಅರುಣಾದೇವಿ ಹಾಗೂ ರಾಣಿ ಸತೀಶ್ ಕುಟುಂಬದವರು ಇಂದು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ವೀರಶೈವ ಮಹಾಸಭಾ ಮಂಡ್ಯ ಜಿಲ್ಲಾ ನಿರ್ದೇಶಕ ಮಂಡಿಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್ ಅವರು ಸಿಎಂ ಪುತ್ರಿ ಅರುಣಾದೇವಿ ಕುಟುಂಬದವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅನಿತಾ ಶಿವಕುಮಾರ್, ಯೋಗೇಂದ್ರ, ರಾಜಸ್ವ ನಿರೀಕ್ಷಕ ಶಂಕರ್, ಅರ್ಚಕ ಯೋಗೇಶ್ ಇನ್ನಿತರರು ಇದ್ದರು.