Karnataka Press Club Council organised Vishwa Kannada Habba festival in Singapore. ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ನಿಂದ ಆಯೋಜನೆಯಲ್ಲಿ ಸೆ.28ರಂದು ಸಿಂಗಾಪೂರ್‍ನಲ್ಲಿ ವಿಶ್ವ ಕನ್ನಡ ಹಬ್ಬ

ಸಿಂಗಾಪೂರ್‍ನಲ್ಲಿ ವಿಶ್ವ ಕನ್ನಡ ಹಬ್ಬ

ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ನಿಂದ ಸೆ.28ರಂದು ಆಯೋಜನೆ

ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ ಸಂಸ್ಥೆಯು ಕನ್ನಡವನ್ನು ವಿದೇಶದಲ್ಲೂ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಕಳೆದ ವರ್ಷ ದುಬೈನಲ್ಲಿ ವಿಶ್ವ ಕನ್ನಡ ಹಬ್ಬವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಪ್ರೇರೀತರಾಗಿರುವ ಕೌನ್ಸಿಲ್, ಸೆಪ್ಟೆಂಬರ್‍ 28ರಂದು ಎರಡನೇ ವಿಶ್ವ ಕನ್ನಡ ಹಬ್ಬವನ್ನು ಸಿಂಗಾಪೂರ್‍ನಲ್ಲಿ ಆಯೋಜಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡುವುದಕ್ಕಾಗಿ ಇತ್ತೀಚೆಗೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ನ ಅಧ್ಯಕ್ಷ ಡಾ. ಶಿವಕುಮಾರ್‍ ನಾಗರ ನವಿಲೆ, ಮಹರ್ಷಿ ಡಾ. ಆನಂದ್ ಗುರೂಜಿ, ಉತ್ಸವದ ರಾಯಭಾರಿ ವಸಿಷ್ಠ ಸಿಂಹ, 2ನೇ ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ್‍, ಸಾಂಸ್ಕೃತಿಕ ಅಧ್ಯಕ್ಷರಾದ ನಟಿ ರೂಪಿಕಾ ಮುಂತಾದವರು ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಹೊರನಾಡ ಕನ್ನಡಿಗರನ್ನು ಬೆಸೆಯುವ ಸಲುವಾಗಿ ಪ್ರತೀ ವರ್ಷ ಒಂದೊಂದು ದೇಶದಲ್ಲಿ ಈ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಈ ವರ್ಷ ಸಿಂಗಾಪೂರ್‍ನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ನಗರದ ಕಲಾವಿದರಲ್ಲದೆ ರಾಜ್ಯದ ಮೂಲೆಮೂಲೆಯಲ್ಲಿರುವ ಜಾನಪದ ಕಲಾವಿದರನ್ನು ಹೆಕ್ಕಿ ಅಲ್ಲಿಗೆ ಕರೆದೊಯ್ಯಲಾಗುತ್ತಿದೆ. ಹಾಗೆಯೇ, ಈ ಬಾರಿಯೂ ಸಾಧನೆ ಮಾಡಿದ ಇಬ್ಬರಿಗೆ ವಿಶ್ವಮಾನವ ಮತ್ತು ಒಂಬತ್ತು ಸಾಧಕರಿಗೆ ವಿಶ್ವಮಾನ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಹಬ್ಬದಲ್ಲಿ ರಾಜ್ಯ, ದೇಶ ಮತ್ತು ವಿದೇಶಗಳಲ್ಲಿ ನೆಲೆಸಿರುವ ನೂರಾರು ಕನ್ನಡಿಗರು ಭಾಗವಹಿಸುವುದರ ಜೊತೆಗೆ ಮುಖ್ಯ ಅತಿಥಿಯಾಗಿ ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಮತ್ತ ಗೀತಾ ಶಿವರಾಜಕುಮಾರ್‍ ‍ಭಾಗವಹಿಸಲಿದ್ದಾರೆ.

ಇಸ್ರೋ ವಿಜ್ಞಾನಿ ಎಸ್‍. ಕಿರಣ್‍ ಕುಮಾರ್‍ ಮತ್ತು ರಾಜ್ಯಸಭಾ ಸದಸ್ಯರಾದ ಸುಧಾ ಮೂರ್ತಿ (ಇನ್ಫೋಸಿಸ್‍ ಫೌಂಡೇಶನ್‍) ಅವರಿಗೆ 2024ನೇ ಸಾಲಿನ ವಿಶ್ವ ಮಾನವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಜೊತೆಗೆ ಪ್ರಸಾದ್‍ ಗುರುಜಿ, ನಟ ದೊಡ್ಡಣ್ಣ, ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕಿ ಮಂಗ್ಲಿ, ಜಾನಪದ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಮಿಕ್ಕಂಗತೆ ಬೇರೆ ವಿಭಾಗಗಳಲ್ಲಿ ಆಶಾ, ಪದ್ಮಾ ನಾಗರಾಜ್‍, ಹರೀಶ್ ಕುಮಾರ್‍ ಮತ್ತು ಉಮೇಶ್‍ ಕುಮಾರ್‍ ಅವರಿಗೆ ‘ವಿಶ್ವ ಮಾನ್ಯ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಈ ಕುರಿತು ಮಾತನಾಡಿದ ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ನ ಅಧ್ಯಕ್ಷ ಡಾ. ಶಿವಕುಮಾರ್‍ ನಾಗರ ನವಿಲೆ, ‘ಈ ಬಾರಿ ಸಿಂಗಾಪುರದಲ್ಲಿ ವಿಶ್ವ ಕನ್ನಡ ಹಬ್ಬವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಕನ್ನಡವನ್ನು ವಿದೇಶದಲ್ಲೂ ಬೆಳೆಸಬೇಕು ಎಂಬುದು ಈ ಹಬ್ಬದ ಉದ್ದೇಶವಾಗಿದೆ. ವಿದೇಶಗಳಲ್ಲಿ ಕನ್ನಡ ಉಳಿಸಿ, ಬೆಳೆಸುವ ಕನ್ನಡಿಗರಿಗೆ ಗೌರವ ಸಲ್ಲಿಸುವುದರ ಜೊತೆಗೆ, ಕನ್ನಡಿಗರಿಗೆ ವಿದೇಶದಲ್ಲಿ ಕೆಲಸ ಮತ್ತು ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸಂಸ್ಥೆಯಲ್ಲಿ ಹಲವು ಘಟಕಗಳಿದ್ದು, ಪರಿಸರ ಸಂರಕ್ಷಣೆ, ರಕ್ತದಾನ, ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಸಮಾರಂಭದಲ್ಲಿ ಹಾಜರಿದ್ದ ಹಲವು ಗಣ್ಯರು 2ನೇ ವಿಶ್ವ ಕನ್ನಡ ಹಬ್ಬದ ಕುರಿತು ಮಾತನಾಡಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor