Kuri kayonu movie title launchd. ಶಾಸಕ ಭೈರತಿ ಬಸವರಾಜ್ ಶಿಶ್ಯಈಗ ಕುರಿ ಕಾಯೋನು..

ಶಾಸಕ ಭೈರತಿ ಬಸವರಾಜ್ ಶಿಷ್ಯ
ಈಗ ಕುರಿ ಕಾಯೋನು..

 ಕಳೆದ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ಕಲಾವಿದ, ಸಹಾಯಕ ನಿರ್ದೇಶಕನಾಗಿ ತೊಡಗಿಕೊಂಡಿರುವ ಮಹೇಶ್(ಓಂ) ಈಗ ಸ್ವತಂತ್ರ ನಿರ್ದೇಶಕನಾಗುತ್ತಿದ್ದಾರೆ. ಜೊತೆಗೆ ಹೀರೋ ಕೂಡ  ಆಗುತ್ತಿದ್ದಾರೆ. ಅವರ ನಟನೆ ಹಾಗೂ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಅನಿವಾಸಿ ಕನ್ನಡಿಗರಾದ ರಾಜೇಶ್, ಪ್ರಿಯಾ ಅವರು  ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 

ಸಮಾರಂಭದಲ್ಲಿ ಶಾಸಕ ಭೈರತಿ ಬಸವರಾಜ್ ಅವರು ‘ಕುರಿ ಕಾಯೋನು’ ಚಿತ್ರದ ಟೈಟಲ್ ಲಾಂಚ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಎಂಟು ಜನ ಮುತ್ತೈದೆಯರಿಗೆ ಶಾಸಕರಿಂದ ಭಾಗಿನ ವಿತರಿಸಲಾಯಿತು.


ನಂತರ ಮಾತನಾಡಿದ ಶಾಸಕರು, ಸ್ನೇಹಿತ ಮಹೇಶ್ ಬಹಳ ವರ್ಷಗಳಿಂದ ಚಿತ್ರರಂಗದಲ್ಲಿದ್ದಾನೆ. ಈಗ ನಿರ್ದೇಶಕನಾಗಬೇಕೆಂದು ಹೊರಟಿದ್ದಾನೆ. ರಾಜ್ಯದ ಜನತೆ ಅವನಿಗೆ ಸಹಕಾರ ನೀಡಬೇಕು. ನನಗೆ ಆರೋಗ್ಯ ಸರಿ ಇಲ್ಲದಿದ್ರೂ ಈ ಯುವಕರಿಗೆ ಸ್ಪೂರ್ತಿ ನೀಡಲೆಂದು ಇಲ್ಲಿಗೆ ಬಂದಿದ್ದೇನೆ ಎಂದರು.
ವಿದೇಶದಲ್ಲಿ ಹಲವಾರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ನಿರ್ಮಾಪಕಿ, ಮಿಸಸ್ ಇಂಡಿಯಾ ಯೂನಿವರ್ಸ್ ವಿನ್ನರ್ ಆಗಿರುವ ಪ್ರಿಯಾ ರಾಜೇಶ್ ಮಾತನಾಡಿ ನಾವು ಮಹೇಶ್ ರನ್ನು 29 ವರ್ಷಗಳಿಂದ ನೋಡುತ್ತಿದ್ದೇವೆ. ತುಂಬಾ ಸ್ಟ್ರಗಲ್ ಮಾಡಿದ್ದಾರೆ. ಶ್ರೀಕೃಷ್ಣ, ಏಸು ಇವರೆಲ್ಲ ಕುರಿಗಾಹಿಗಳೇ ಆಗಿದ್ದರು. ಅದೇ ಕುರಿ ಕಾಯೋನ ಚಿತ್ರವನ್ನು ಮಹೇಶ್ ಮಾಡುತ್ತಿದ್ದಾರೆ. ಅವರಿಗೆ ನನ್ನ ಹಾಗೂ ರಾಜೇಶ್ ಇಬ್ಬರದೂ ಪೂರ್ತಿ ಸಪೋರ್ಟ್ ಅವರಿಗಿದೆ ಎಂದರು.


ಕೋ-ಪ್ರೊಡ್ಯೂಸರ್ ದೀಪು ಮಾತನಾಡಿ ಇದು ಎರಡನೇ ಚಿತ್ರ. 4 ತಿಂಗಳ ಹಿಂದೆ ಮಹೇಶ್ ಈ ಸಬ್ಜೆಕ್ಟ್ ಹೇಳಿದ್ದರು. ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾದ್ದಲ್ಲ. ಚಿತ್ರ ನೋಡೋವಾಗ ಅದು ಅರ್ಥವಾಗುತ್ತೆ ಎಂದರು.

  ‌ನಿರ್ದೇಶಕ, ನಾಯಕ ಮಹೇಶ್(ಓಂ) ಮಾತನಾಡುತ್ತ ಚಿಕ್ಕವನಿದ್ದಾಗ ಅಪ್ಪನ ಜೇಬಿನಿಂದ ಹಣ ಕದ್ದು ಸಿನಿಮಾ ನೋಡ್ತಿದ್ದೆ. ಓಂ ಸಿನಿಮಾದಿಂದ ಶಿವಣ್ಣ, ಸುದೀಪ್, ಪುನೀತ್, ವಿಜಯ್, ಇವರ ಜೊತೆಗೆಲ್ಲ ಕೆಲಸ ಮಾಡಿದ್ದೇನೆ.

ನಡುವೆ ಲೋನ್ ರಿಕವರಿ ಏಜೆಂಟಾಗಿಯೂ ಕೆಲಸ ಮಾಡಿದ್ದೇನೆ. ಮರಳು, ಜಲ್ಲಿ ಎತ್ತಿದ್ದೇನೆ. ಈಗ ಮೇಸ್ತ್ರಿ ಆಗಬೇಕೆಂದು ಹೊರಟಿದ್ದೇನೆ. ನಾನು ನಾಯಕನಾಗುತ್ತೇನೆ ಅಂದಾಗ ಕೆಲವರು ಹಾಸ್ಯ ಮಾಡಿದರು. ಸ್ನೇಹಿತರೆಲ್ಲ ನನಗೆ ಸಹಕಾರ ನೀಡಿದರು. ಈಗ ನಿಮ್ಮೆಲ್ಲರ ಆಶೀರ್ವಾದ ನಂಗೆ ಬೇಕಿದೆ.


‘ಕುರಿ ಕಾಯೋನು’ ಕಥೆಯ ಬಗ್ಗೆ ಹೇಳಬೇಕೆಂದರೆ, ನಾಯಕ ಮುಗ್ಧ, ಆತನಿಗೆ ತನ್ನ ಕುರಿಗಳನ್ನು ಬಿಟ್ಟರೆ ಹೊರಗಿನ ಪ್ರಪಂಚವೇ ಗೊತ್ತಿರಲ್ಲ , ಕುರಿಯನ್ನು ಜೀವದಂತೆ ಪ್ರೀತಿಸುತ್ತಾನೆ. ಆ ಕುರಿಯನ್ನು ಯಾರೋ ಕೆಣಕಿದಾಗ ಆತ ಕೆರಳುತ್ತಾನೆ. ತನ್ನ ಕುರಿ ಕಳೆದುಹೋದಾಗ ವಿಚಲಿತನಾಗುತ್ತಾನೆ. ಗಣೇಶ ಹಬ್ಬಕ್ಕೆ ಮುಹೂರ್ತ ಮಾಡಿ, ಕೋಲಾರ, ಅಂತರಗಂಗೆ, ಮಲೆ ಮಾದೇಶ್ವರ ಬೆಟ್ಟ ಇತರೆಡೆ ಚಿತ್ರೀಕರಿಸುವ ಯೋಜನೆಯಿದೆ. ಚಿತ್ರದಲ್ಲಿ ಕೆ.ಆರ್.ಪುರ ಕ್ಷೇತ್ರದ ಸಾಕಷ್ಟು ಕಲಾವಿದರಿಗೆ ಅವಕಾಶ ನೀಡುತ್ತಿದ್ದೇವೆ. ಮುಖ್ಯವಾಗಿ ಚಿತ್ರದ ಕಥೆಗೆ ಟ್ವಿಸ್ಟ್ ನೀಡುವ ಸಿಎಂ ಪಾತ್ರವಿದ್ದು, ಅದನ್ನು ನಮ್ಮ ಶಾಸಕರಾದ ಭೈರತಿ ಬಸವರಾಜಣ್ಣ ಅವರಿಂದಲೇ ಮಾಡಿಸುವ ಯೋಜನೆಯಿದೆ ಎಂದು ಹೇಳಿದರು.
ನಿರ್ಮಾಪಕರಾದ ರಾಜೇಶ್, ಹಿರಿಯ ನಟ ಕೋಟೆ ಪ್ರಭಾಕರ್, ವೀಣಾ ಮಹೇಶ್ ಚಿತ್ರದ ಕುರಿತು ಮಾತನಾಡಿದರು. ಕುರಿ ಕಾಯೋನು ಚಿತ್ರದಲ್ಲಿ 4 ಹಾಡುಗಳಿದ್ದು ರಾಘವೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor