Kora movie song apdets. “ಕೋರ”ನ ಹಾಡಿಗೆ ಮಿಲಿಯನ್ ಗಟ್ಟಳೆ ಮೆಚ್ಚುಗೆ
. ಹಾಡಿನಲ್ಲೇ ಮೋಡಿ ಮಾಡಿದ “ಕೋರ”
ಸುನಾಮಿ ಕಿಟ್ಟಿ ಅಭಿನಯದ, ಪಿ.ಮೂರ್ತಿ ನಿರ್ಮಾಣ ಹಾಗೂ ಒರಟ ಶ್ರೀ ನಿರ್ದೇಶನದ ಈ ಚಿತ್ರ ಜನವರಿಯಲ್ಲಿ ತೆರೆಗೆ
ರತ್ನಮ್ಮ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ “ಕೋರ” ಚಿತ್ರದ “ಒಪ್ಪಿಕೊಂಡಳು” ಹಾಡು ಇತ್ತೀಚಿಗೆ ಬಿಡುಗಡೆಯಾಗಿ, ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಹಾಡು ಗೆದ್ದಿರುವ ಖುಷಿಯನ್ನು ಹಂಚಿಕೊಳ್ಳಲು ಹಾಗೂ ಚಿತ್ರದ ಬಿಡುಗಡೆ ವಿಷಯ ತಿಳಿಸಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಕೋರ” ಚಿತ್ರಕ್ಕಾಗಿ ರೇವಣ್ಣ ನಾಯಕ್ ಬರೆದು, ಹೇಮಂತ್ ಕುಮಾರ್ ಸಂಗೀತ ನೀಡಿರುವ “ಒಪ್ಪಿಕೊಂಡಳು” ಹಾಡು ಇತ್ತೀಚಿಗೆ ರಬಕವಿಯಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. “ಕೋರ” ಬುಡಕಟ್ಟು ಜನಾಂಗದ ಹೆಸರು.ಸುನಾಮಿ ಕಿಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ನಿರ್ದೇಶಕ ಒರಟ ಶ್ರೀ ಸೇರಿದಂತೆ ತಂತ್ರಜ್ಞರು ನಮ್ಮ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ.

ಏಕೆಂದರೆ ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ನಡೆದಿರುವುದು ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ. ಆ ಸ್ಥಳಗಳಲ್ಲಿ ಅನುಕೂಲತೆ ಕಡಿಮೆ. ಅಂತಹ ಸ್ಥಳಗಳಲ್ಲೂ ಯಾವುದೇ ಅಡೆತಡೆ ಇಲ್ಲದೆ ಚಿತ್ರೀಕರಣವಾಗಲು ತಂಡದ ಸಹಕಾರವೇ ಕಾರಣ. ಇನ್ನು ಚಿತ್ರವನ್ನು ಜನವರಿ ಮೊದಲವಾರದಲ್ಲಿ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ. ಈಗಾಗಾಲೇ ಚಿತ್ರದ ತೆಲುಗು, ತಮಿಳು ರಿಮೇಕ್ ರೈಟ್ಸ್ ಕೂಡ ಮಾರಾಟವಾಗಿದೆ ಎಂದು ನಿರ್ಮಾಪಕ ಪಿ.ಮೂರ್ತಿ ತಿಳಿಸಿದರು.

ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ನಮ್ಮ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಅವರು ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರವಿದು. ಸುನಾಮಿ ಕಿಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚರಿಶ್ಮಾ “ಕೋರ” ಚಿತ್ರದ ನಾಯಕಿ. ನಿರ್ಮಾಪಕ ಪಿ. ಮೂರ್ತಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಒರಟ ಶ್ರೀ.

ನನ್ನನ್ನು ನಾಯಕನನ್ನಾಗಿ ಮಾಡಿದ ಪಿ.ಮೂರ್ತಿ ಅವರಿಗೆ ಹಾಗೂ ನನಗೆ ಅಭಿನಯ ಹೇಳಿಕೊಟ್ಟು ಚಿತ್ರದಲ್ಲಿ ನಟಿಸಲು ಸಿದ್ದತೆ ಮಾಡಿಸಿದ ನಿರ್ದೇಶಕ ಶ್ರೀ ಅವರಿಗೆ ಧನ್ಯವಾದ. ನಮ್ಮ ತಂಡದ ಶ್ರಮದಿಂದ “ಕೋರ” ಒಂದೊಳ್ಳೆ ಚಿತ್ರವಾಗಿ ನಿಮ್ಮ ಮುಂದೆ ಬರುತ್ತಿದೆ ನೋಡಿ ಹಾರೈಸಿ ಎಂದು ನಾಯಕ ಸುನಾಮಿ ಕಿಟ್ಟಿ ತಿಳಿಸಿದರು.

ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ನಟರಾದ ಎಂ.ಕೆ.ಮಠ, ಯತಿರಾಜ್, ಗಣೇಶ್ ರಾವ್, ನಟಿ ಸೌಜನ್ಯ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ರೇವಣ್ಣ ನಾಯಕ್, ಸಂಕಲನಕಾರ ಕೆ.ಗಿರೀಶ್ ಕುಮಾರ್ ಹಾಗೂ ತೆಲುಗು ವಿತರಕ ಬಾಲಾಜಿ “ಕೋರ” ಚಿತ್ರದ ಕುರಿತು ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ನಟ ಒರಟ ಪ್ರಶಾಂತ್ ಚಿತ್ರತಂಡಕ್ಕೆ ಶುಭ ಕೋರಿದರು.