Click movie Shooting Completed. ಇಂಜಿನಿಯರ್ ಶಶಿಕಿರಣ್ ಮೊದಲ ಸಿನಿಮಾ “ಕ್ಲಿಕ್” ರವಿಬಸ್ರೂರ್ ಪುತ್ರನ ಪರಿಪೂರ್ಣ ಚಿತ್ರ!
ಇಂಜಿನಿಯರ್ ಶಶಿಕಿರಣ್ ಮೊದಲ ಸಿನಿಮಾ ಕ್ಲಿಕ್ ರವಿಬಸ್ರೂರ್ ಪುತ್ರನ ಪರಿಪೂರ್ಣ ಚಿತ್ರ!
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು ಕ್ಲಿಕ್ ಸಿನಿಮಾ ಮೂಲಕ ಪರಿಪೂರ್ಣವಾಗಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಗಿರ್ಮಿಟ್ ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದ ಪವನ್, ಕ್ಲಿಕ್ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.
ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ತಮ್ಮದೇ ಶರಣ್ಯ ಫಿಲ್ಮಂಸ್ ನಡಿ ಕ್ಲಿಕ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಪವನ್ ಜೊತೆ ಮತ್ತೊಬ್ಬ ಯುವ ನಟ ಕಾರ್ತಿಕ್ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನಾ ಶಶಿ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ನಮ್ಮಲ್ಲಿ ಹೆಚ್ಚಿನ ಪಾಲು ಪೋಷಕರು ಮಕ್ಕಳು ಡಾಕ್ಟರ್-ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ಎರಡು ವಲಯದ ಹೊರತಾಗಿ ನಮ್ಮ ಮುಂದೆ ತುಂಬಾ ಆಯ್ಕೆಗಳಿವೆ. ಮಕ್ಕಳ ಇಚ್ಛೆಗೆ ತಕ್ಕಂತೆ ಓದಲು, ಆಯ್ಕೆ ಮಾಡಲು ಬಿಡಬೇಕು ಎಂಬ ಶಿಕ್ಷಣದ ಕಥೆ ಸುತ್ತ ಕ್ಲಿಕ್ ಸಿನಿಮಾ ಸಾಗುತ್ತದೆ. ಈ ಚಿತ್ರಕ್ಕೆ ಯುವ ನಿರ್ದೇಶಕ ಶಶಿಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಮೂಲತಃ ಬೆಂಗಳೂರಿನವರಾದ ಶಶಿಕಿರಣ್, ಐಟಿ ಉದ್ಯೋಗಿ. ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಆಸಕ್ತಿ ಇದ್ದರೂ, ಮನೆಯವರ ಸಲಹೆಯ ಮೇರೆಗೆ ಇಂಜಿನಿಯರಿಂಗ್ ಮುಗಿಸಿ, ಕೆಲಸಕ್ಕೆ ಸೇರಿಕೊಂಡರು. ಆದರೂ ಶಶಿಗೆ ಸಿನಿಮಾ ಕಡೆಯೇ ಮನಸ್ಸು ಸೆಳೆಯುತ್ತಿತ್ತು. ಹೀಗಾಗಿ ಕೆಲಸದ ಜತೆ ಜತೆಗೆ ಸಿನಿಮಾದತ್ತ ಮುಖ ಮಾಡಿದರು ಶಶಿಕಿರಣ್.
“ಮೊದಲಿಗೆ ಫಿಲಂ ಮೇಕಿಂಗ್ ಬಗ್ಗೆ ತಿಳಿದುಕೊಳ್ಳಬೇಕು ಅಂತ ಶುರು ಮಾಡಿದ ಸಿನಿಮಾವಿದು. ಆದರೆ ತುಂಬಾ ದೊಡ್ಡ ಮಟ್ಟದಲ್ಲಿ ನನ್ನ ಕನಸು ಈಡೇರಿದ ಖುಷಿಯಲ್ಲಿದ್ದೇನೆ. ತುಂಬಾ ಸಿನಿಮಾ ನೋಡಿ ಪಾಠ ಕಲಿತಿದ್ದೀನಿ. ಒಳ್ಳೆ ಅನುಭವ ಕೊಟ್ಟಿದೆ. ಈ ಚಿತ್ರದಲ್ಲಿ ಸಾಕಷ್ಟು ಹೊಸತನವಿದೆ. ರವಿ ಬಸ್ರೂರು ಅವರಿಗೆ ಕಥೆ ಹೇಳಲು ಹೋಗಿದ್ದೆ. ಒನ್ ಲೈನ್ ಕೇಳಿದ್ರು. ಪವನ್ ಜತೆಯೂ ಮಾತನಾಡಿದ್ವಿ. “ನನ್ ಮಗ ಅಂತ ತಗೋಬೇಡಿ… ಆಡಿಷನ್ ಮಾಡಿಯೇ ಸೆಲೆಕ್ಟ್ ಮಾಡಿ” ಅಂತ ಹೇಳಿದ್ದರು ರವಿ ಬಸ್ರೂರು.

ಆಡಿಷನ್ ಮೂಲಕ ಸೆಲೆಕ್ಟ್ ಆದ ನಂತರ ವರ್ಕ್ ಶಾಪ್ ಕೂಡಾ ಮಾಡಿದೆವು. ಪವನ್ ಅವರಿಗೆ ನಟನೆಯಲ್ಲಿ ಸೆಳೆಯುವ ಪವರ್ ಇದೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಹಂಬಲ ಪವನ್ ಅವರಿಗಿದೆ. ನಾನು ನಿರ್ಮಾಣ ಮಾಡಿದ್ದರೂ ಕಥೆ ಓಕೆ ಮಾಡುವುದರಿಂದ ಹಿಡಿದು ಆರ್ಟಿಸ್ಟ್ ಸೆಲೆಕ್ಷನ್, ಕಾಸ್ಟ್ಯೂಮ್, ಲೊಕೇಷನ್, ಎಡಿಟ್, ದಿ.ಐ, ಮ್ಯೂಸಿಕ್… ಎಲ್ಲದರಲ್ಲೂ ತೊಡಗಿಸಿಕೊಂಡು ಬಂದಿದ್ದೇನೆ. ಸಮಯ ತೆಗೆದುಕೊಂಡು, ಸಿನಿಮಾಕ್ಕೆ ಬೇಕಾದ ಎಲ್ಲವನ್ನೂ ಒದಗಿಸಿ ಕ್ವಾಲಿಟಿ ಕಾಪಾಡಿಕೊಂಡು ಕ್ಲಿಕ್ ಸಿನಿಮಾ ಮಾಡಿದ್ದೇನೆ” ಎನ್ನುತ್ತಾರೆ ನಿರ್ಮಾಪಕ ಶಶಿಕಿರಣ್.
ಬೆಂಗಳೂರು, ಬಿಡದಿ ರಾಮನಗರ ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕ್ಲಿಕ್ ಸಿನಿಮಾಗೆ ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ, ಜೀವನ್ ಗೌಡ ಛಾಯಾಗ್ರಹಣ, ವಿನಯ್ ಕುಮಾರ್ ಸಂಕಲನವಿದೆ.