Yellige payana Yavudo Dhari movie review. “ಎಲ್ಲಿಗೆ ಪಯಾಣ ಯಾವುದೋ ದಾರಿ” ಚಿತ್ರ ವಿಮರ್ಶೆ ಮಸಣಕೋ , ವಿರಾಜಪೇಟೆಗೋ
ಚಿತ್ರ: ಎಲ್ಲಿಗೆ ಪಯಣ ಯಾವುದೋ ದಾರಿ
ಚಿತ್ರ ವಿಮರ್ಶೆ
ರೇಟಿಂಗ್ – 3/5
ನಿರ್ಮಾಪಕರು : ಜತೀನ್ ಪಟೇಲ್
ನಿರ್ದೇಶಕರು : ಕಿರಣ್ ಎಸ್. ಸೂರ್ಯ
ಸಂಗೀತ ಸಂಯೋಜನೆ : ಪ್ರಣವ್ ರಾವ್
ಛಾಯಾಗ್ರಹಣ : ಸತ್ಯರಾಮ್
ಸಂಕಲನ : ಗಣೇಶ್ ನಿರ್ಚಲ್
ನೃತ್ಯ ಸಂಯೋಜನೆ – ಜೂವನ್ ಹಳ್ಳಿಕಾರ್
ಕಲಾವಿದರು – ಅಭಿಮನ್ಯು ಕಾಶಿನಾಥ್, ಸ್ಪೂರ್ತಿ ಉಡಿಮನೆ, ರಾಜು ಬಲವಾಡಿ, ಶೋಬನ್, ಪ್ರದೀಪ್ ಕುಮಾರ್ HY. , ಅಯಾನ್ಕ್ ಮುಂತಾದವರು
ಎಲ್ಲಿಗೆ ಪಯಾಣ ಯಾವುದೋ ದಾರಿ, ಮಸಣಕೋ , ವಿರಾಜಪೇಟೆಗೋ

ತನ್ನ ಪ್ರೀತಿಯ ಹುಡುಗಿಯ ಬೇಟಿಗೆ ಹೊರಟ ಅಮರ್ ಪ್ರೇಮಿ,
ದಾರಿ ಉದ್ದಕ್ಕೂ ಅಪರಿಚಿತ ಆಗುಂತಕರ ಜೊತೆ ಸಹ ಪಯಣ, ಕಾಡಿನುದ್ದಕೂ
ಒಬ್ಬೊಬ್ಬರೇ ಡ್ರಾಪ್ ಕೇಳಿಕೊಂಡು ಕಾರು ಹತ್ತುವ ಅನಾಮಿಕರು.
ಇಲ್ಲಿ ಕಥಾನಾಯಕ ಅಮರ್ (ಅಭಿಮನ್ಯು ಕಾಶಿನಾಥ್) ತನ್ನ ಕುಂಚಗಳಿಂದ ಚಿತ್ರಗಳಿಗೆ ಬಣ್ಣಗಳಿಂದ ಜೀವ ತುಂಬುವವನು. ಕಾರಿಗೆ ಹತ್ತುವವರಲ್ಲಿ ಒಬ್ಬ ಮನೆಗಳಿಗೆ ಬಣ್ಣ ಹೊಡೆಯುವವನು, ಮತ್ತೊಬ್ಬ ಸುಂದರ ಹುಡುಗಿಯರ ಬಣ್ಣ ಬಣ್ಣದ ಫೋಟೋ ತೆಗೆಯುವವನು, ಮತ್ತೊಬ್ಬಳು ಪೋಲೀಸ್ ಅಧಿಕಾರಿಯ ಕಲರ್ ಫುಲ್ ಗ್ಲಾಮರ್ ಮಗಳು. ಮತ್ತೊಬ್ಬ ರೋಗಿಗಳಲ್ಲದವರಿಗೂ ಸೂಜಿ ಚುಚ್ಚುವ ಸದ್ಗುಣವಂತ
ಒಬ್ಬೊಬ್ಬರದ್ದು ಒಂದೊಂದು ಹೊಸ ಕಥೆ, ಹೊಸ ಪರಿಚಯ.
ಇಷ್ಟೂ ಜನ ಒಂದಲ್ಲ ಒಂದು ಕಾರಣಕ್ಕೆ ವಿರಾಜಪೇಟೆ ತಲುಪಬೇಕು.

ಇದರ ಮಧ್ಯೆ ದಾರಿ ಸವೆಯಲು ಮತ್ತು ಸವಿಯಲು ಕಥಾನಾಯಕನ ಪ್ರೀತಿ ಕಥೆಯ ಫ್ಲಾಷ್ ಬ್ಯಾಕ್, ಆಗಾಗ ಬಂದು ಹೋಗುತ್ತದೆ.
ಕಥಾ ಸಾರಂಶ – ಬೆಟ್ಟದ ಮೇಲೊಂದು ಒಂಟಿ ಮನೆಯಲ್ಲೊಬ್ಬ ಸುಂದರ ಅಬಲೆ.
ಊರ ಕಾಮುಕ ನಾಯಿಗಳಿಗೆ ಅವಳ ಸುಂದರ ದೇಹದ ಮೇಲೆ ಕಾಮದ ಕೊಳೆ,
ಅವನು ಬೆತ್ತಲೆ ಹೆಣ್ಣುಗಳ ಚಿತ್ರ ಬರೆಯುವ ನಾಯಕ,
ಇವಳು ಬೆತ್ತಲೆ ಚಿತ್ರಕ್ಕೆ ಬೆತ್ತಲೆಯಾಗುವ ನಾಯಕಿ
ಇದು ಇಬ್ಬರಿಗೂ ಅನಿವಾರ್ಯ , ಅನಾವಶ್ಯಕ.
ಅಮಾಯಕ ಹೆಣ್ಣುಮಗಳಿಗೆ ಸೂಳೆಯ ಪಟ್ಟ
ಸೈಕೋ ಕಿಲ್ಲರ್ ಹತ್ತಿಸುತ್ತಾನೆ ಎಲ್ಲರಿಗೂ ಚಟ್ಟ. ಸೈಕೊ ಕಿಲ್ಲರ್ ಒಬ್ಬ ಸರಣಿ ಕೊಲೆಗಳ ಮಾಡಿ ತಪ್ಪಸಿಕೊಳ್ಳುತ್ತಾನೆ ಅವನ ಬೆನ್ನ ಹಿಂದೆ ಪೋಲೀಸರು ಬೀಳುತ್ತಾರೆ. ಆ ಸೈಕೊ ಕಿಲ್ಲರ್ ಗೂ ಚಿತ್ರದ ನಾಯಕ, ನಾಯಕಿಗೂ ಏನು ಸಂಭಂದ ಎನ್ನುವುದೇ ಸಸ್ಪೆನ್ಸ್.

ನಿಜಕ್ಕೂ ಇದೊಂದು ಹೊಸ ತರದ ಕಥೆ,
ನಿರ್ದೇಶಕ ಕಿರಣ್ ಸೂರ್ಯ ಕಥೆ ಎಣೆದಿರುವ ಜಾಣ್ಮೆಯನ್ನು ಮೆಚ್ಚಬೇಕು. ಇದೊಂದು ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಟ್ರಾವಲ್ ಸಿನಿಮಾ. ಎಲ್ಲೂ ಬೋರಾಗದಂತೆ ಕಥೆ ಹೇಳಿಕೊಂಡು ಹೋಗಿದ್ದಾರೆ. ಮೊದಲರ್ಧ ಭಾಗದ ಚಿತ್ರ ಗೊತ್ತಾಗದಂತೆ ಮುಗಿದು ಹೋಗುತ್ತದೆ. ಧ್ವಿತಿಯಾರ್ಧ ಭಾಗವೂ ಕುತುಹಲ, ಸಸ್ಪೆನ್ಸ್ ಕಾಯ್ದಿರಿಸಿಕೊಂಡಿದೆ. ಚಿತ್ರದ ಕ್ಲೈಮ್ಯಾಕ್ಸ್ ನಿರ್ದೇಶಕ ಎದುರಿಸಿರುವ ಸವಾಲುಗಳು ತೆರೆಯ ಮೇಲೆ ಕಾಣುತ್ತದೆ.

ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಶೈಲಿಯಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ, ಹಲವಾರು ತಂತ್ರಜ್ಞರನ್ನು, ಕಲಾವಿದರನ್ನು ಹುಟ್ಟುಹಾಕಿದ ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ರವರ ಪುತ್ರ ಅಭಿಮನ್ಯು ಕೆಲವು ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಎಲ್ಲಿಗೆ ಪಯಣ, ಯಾವುದೋ ದಾರಿ ಚಿತ್ರದಲ್ಲಿನ ಅಭಿನಯದಲ್ಲಿ ಪ್ರಭುದ್ದತೆ ಕಾಣುತ್ತದೆ. ಅವರ ಹಿಂದಿನ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ಮತ್ತು ಅಭಿನಯ ಎರಡು ಚನ್ನಾಗಿ ಮೂಡಿ ಬಂದಿದೆ. ಅಭಿಮನ್ಯು ಚಿತ್ರರಂಗದ ಚಕ್ರವ್ಯೂಹದಲ್ಲಿ ಗೆಲುವು ಸಾಧಿಸಬೇಕಿದೆ ಅದಕ್ಕೆ ಪ್ರೇಕ್ಷಕ ಪ್ರಭುಗಳ ಆಶೀರ್ವಾದ ಬೇಕಿದೆ.

ಚಿತ್ರದ ನಾಯಕಿಯ ಪಾತ್ರದಲ್ಲಿ ಸ್ಪೂರ್ತಿ ಉಡಿಮನೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಜೀವ ಹಿಂಡುವ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.
ಅಭಿಮನ್ಯು ಕಾಶಿನಾಥ್, ಸ್ಪೂರ್ತಿ ಉಡಿಮನೆ, ರಾಜು ಬಲವಾಡಿ, ಶೋಬನ್, ಪ್ರದೀಪ್ ಕುಮಾರ್ HY. , ಅಯಾನ್ಕ್ ಮುಂತಾದ ಕಲಾವಿದರು ಅವರವರ ಪಾತ್ರಗಳನ್ನು ಸರಿಯಾಗಿ ನಿಭಾಯಿಸಿದ್ದಾರೆ.
ನಿರ್ಮಾಪಕ ಜತ್ತಿನ್ ಪಾಟಿಲ್ ಒಂದು ಒಳ್ಳೆಯ ಚಿತ್ರವನ್ನು ನಿರ್ಮಿಸಿದ್ದಾರೆ, ಅವರು ಚಿತ್ರ ತಂಡದ ಮೇಲೆ ನಂಬಿಕೆಯಿಟ್ಟು ಹಣ ಹಾಕಿದ್ದಕ್ಕೂ ಸಾರ್ಥಕವಾಗಿದೆ. ಇನ್ನು ಪ್ರೇಕ್ಷಕರು ಚಿತ್ರವನ್ನು ನೋಡಿ ಗೆಲ್ಲಿಸಬೇಕಿದೆ.

ಚಿತ್ರದ ಕಥೆಯ ಓಟಕ್ಕೆ ಬರೋಬ್ಬರಿ ಸಾಥ್ ನೀಡಿರುವುದು ಹಿನ್ನೆಲೆ ಸಂಗೀತ, ಸಂಗೀತದ ಜವಾಬ್ದಾರಿಯನ್ನು ಪ್ರಣವ್ ರಾವ್ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಾಗೆಯೇ ಈ ಚಿತ್ರಕಥೆಗೆ ದೃಶ್ಯಕಾವ್ಯವನ್ನು ಕಟ್ಟಿ ಕೊಟ್ಟಿರುವುದು ಛಾಯಾಗ್ರಾಹಕ ಸತ್ಯರಾಮ್. ಸುಂದರ ಪ್ರಕೃತಿಯ ಪರಿಸರದ ಸೊಬಗನ್ನು ಪ್ರೇಕ್ಷಕರು ಕಣ್ಣ್ತುಂಬಿಕೊಳ್ಳುವಂತೆ ಸೆರೆ ಹಿಡಿದಿದ್ದಾರೆ. ಈ ಚಿತ್ರದ ಗೆಲುವಿನಲ್ಲಿ ಛಾಯಾಗ್ರಹಣ ಮತ್ತು ಸಂಗೀತದ ಬಹು ಪಾಲಿದೆ ಎನ್ನಬಹುದು.
ಕಾಣೆಯಾದ ಪೋಲೀಸ್ ಅಧಿಕಾರಿಯ ಮಗಳು ಏನಾದಳು, ಪೋಲೀಸರ ಬಲೆಗೆ ಬಿದ್ದನಾ ಸೈಕೊ ಕಿಲ್ಲರ್, ಬೆಟ್ಟದ ಮೇಲಿನ ಸುಂದರಿ ಏನಾದಳು, ಕಾಮುಕರ ಅಟ್ಟಹಾಸಕ್ಕೆ ಬಲಿಯಾದಳಾ, ಅವಳ ಅಮರ ಪ್ರೇಮಿ ಏನಾದ, ಕಾರಿನಲ್ಲಿ ವಿರಾಜಪೇಟೆಗೆ ಹೊರಟವರು ಏನಾದರು, ಇಬ್ಬರು ಪ್ರಾಮಾಣಿಕ ಪ್ರೇಮಿಗಳು ಏನಾದರು, ಬಣ್ಬದ ಕುಂಚಗಳಲ್ಲಿ ಅರಳಿದ ಬೆತ್ತಲೆ ಚಿತ್ರಗಳು ಏನಾದವು ಹೀಗೆ ಹಲವಾರು ಅಚ್ಚರಿಯ ಕುತೂಹಲಕ್ಕೆ ಪ್ರೇಕ್ಷಕರು ಚಿತ್ರ ನೋಡಲೇ ಬೇಕು.

ಸಿನಿಮಾ ಅಂದ ಮೇಲೆ ಒಂದಷ್ಟು ಸಣ್ಣ ಪುಟ್ಟ ತಪ್ಪುಗಳು, ಕೊರತೆಗಳು ಕಾಣುವುದು ಸಹಜ. ಇದರಲ್ಲೂ ಅಂಥಹ ಸಣ್ಣಪುಟ್ಟ ತಪ್ಪುಗಳು ಕಾಣುತ್ತದೆ,
ಆದರೂ ಇದೊಂದು ಅಚ್ಚುಕಟ್ಟಾದ ಯಾವುದೇ ಅಸಹ್ಯ ದೃಶ್ಯಗಳಿಲ್ಲದ ಶುದ್ಧ ಮನರಂಜನಾ ಚಿತ್ರ. ನಮ್ಮ ಸುತ್ತಾ ಹೀಗೂ ನಡೆಯಬಹುದು ಎಂದು ಎಚ್ಚರಿಕೆಯ ಘಂಟೆಯನ್ನು ಬಾರಿಸಿರುವ ಚಿತ್ರ,
ಪಕ್ಕಾ ಪೈಸಾ ವಸೂಲ್ ಚಿತ್ರ ಎನ್ನಬಹುದು.