UI Movie Review “ಯುಐ” ಚಿತ್ರದ ವಿಮರ್ಶೆ.
ಚಿತ್ರ – ಯುಐ
ನಿರ್ಮಾಣ ಸಂಸ್ಥೆ – ಲಹರಿ ಫಿಲಂ
ನಿರ್ಮಾಪಕರು – ಮನೋಹರ್ ನಾಯ್ಡು, ಕೆ.ಪಿ. ಶ್ರೀಕಾಂತ್
ನಿರ್ದೇಶನ – ಉಪೇಂದ್ರ ರಾವ್
ಛಾಯಾಗ್ರಹಣ – ಹೆಚ್.ಸಿ. ವೇಣು
ಸಂಗೀತ – ಅಜನೀಶ್ ಲೋಕನಾಥ್
ಸಂಕಲನ – ವಿಜಯ್ ರಾಜ್ ಬಿ.ಜಿ.
Rating – 3.5/5
ಕಲಾವಿದರು – ಉಪೇಂದ್ರ, ದೊಡ್ಡಣ್ಣ, ಸಾಧುಕೋಕಿಲ, ಗುರುಪ್ರಸಾದ್, ಅಚ್ಯುತ್ ಕುಮಾರ್, ರವಿ ಶಂಕರ್, ಕಾಕ್ರೋಚ್ ಸುಧಿ, ನಿಧಿ ಸುಬ್ಬಯ್ಯ, ರೇಷ್ಮನಾಣಯ್ಯ, ನೀತು ವನಜಾಕ್ಷಿ, ಮುರಳಿ ಶರ್ಮಾ ಮುಂತಾದವರು
ಏನೆಂದು ನಾ.. ಹೇಳಲಿ
ಮಾನವನಾಸೆಗೆ ಕೊನೆ ಎಲ್ಲಿ
ಕಾಣೋದೆಲ್ಲಾ ಬೇಕು ಅನ್ನೋ ಹಠದಲ್ಲಿ
ಏನನ್ನು ಬಾಳಿಸನು ಜಗದಲ್ಲಿ
ಡಾ,, ರಾಜಕುಮಾರ್ ರವರ ಗಿರಿಕನ್ಯೆ ಚಿತ್ರದಲ್ಲಿ ನಲವತ್ತೈದು ವರ್ಷಗಳ ಹಿಂದೇನೆ ಹೇಳಿದ್ದಾರೆ.
ಹೌದು, ಮನುಷ್ಯ ಭೂಮಿಗೆ ಬಂದಾಗ ದೇವರ ಆಜ್ಞೆಯನ್ನು ಮೀರಿ ಯಾವಾಗ ಹಣ್ಣನ್ನು ತಿಂದನೋ, ಅಂದಿನಿಂದ ಇಂದಿನ ವರೆಗೂ ತನ್ನ ಆಸೆ, ತೆವಲಿಗೆ ಪ್ರಕೃತಿಯನ್ನು ನಾಶಮಾಡಿ ಆರ್ಭಟಿಸಿದ್ದಾನೆ, ಹಾಗೆಯೇ
ಜಾತಿ, ಧರ್ಮಗಳ ಸಂಕೋಲೆಯಲ್ಲಿ ಸಮಾಜವನ್ನು ಬಂಧಿಯಾಗಿಸಿ. ನಾನು, ನಾನು ಅಂತ ದ್ವೇಷ ಅಸೂಯೆಯ, ಕಾಮದ ಬಾಣಲೆಯಲ್ಲಿ ಬಿದ್ದು ಸುಟ್ಟು ಕರಕಲಾಗಿರುವ ಕಥೆಯ ಕನ್ನಡಿಯೇ “ಯುಐ” ಚಿತ್ರ.

ಉಪ್ಪಿ ಚಿತ್ರ ಅಂದರೆ ಅದೊಂದು ಕಬ್ಬಣದ ಕಡಲೆ ಇದ್ದಂತೆ ಅಷ್ಟು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಪ್ರೇಕ್ಷಕನನ್ನು ಗೋಜಲಿಗೆ ಸಿಲುಕಿಸಿ ತಲೆಯಲ್ಲಿನ ಮಿದುಳನ್ನು ಕಲಸಿ ಒಗ್ಗರಣೆ ಹಾಕುವ ಚಾಳಿ ಮತ್ತು ಚಾಕಚಕ್ಯತೆ ಉಪ್ಪಿಗೆ ಬಿಟ್ರೆ ಬೇರೆಯವ್ರಿಗೆ ಸಾಧ್ಯವಿಲ್ಲ ಎನ್ನುವುದನ್ನು ಈ ಚಿತ್ರದಲ್ಲೂ ತೋರಿಸಿದ್ದಾರೆ.
9 ವರ್ಷಗಳ ನಂತರ ನಿರ್ದೇಶಕನ ಕ್ಯಾಪ್ ತಲೆ ಗೇರಿಸಿಕೊಂಡಿರುವ ಉಪೇಂದ್ರ ತಮ್ಮದೇ ರೀತಿಯಲ್ಲಿ ಸಮಾಜಕ್ಜೆ ಎಚ್ಚರಿಕೆಯನ್ನು ನೀಡಿದ್ದಾರೆ.
2035ಕ್ಕೆ ಪ್ರಪಂಚ ಮತ್ತು ಜನರ ಸ್ಥಿತಿಗತಿಗಳು ಹೇಗಿರುತ್ತವೆ ಎನ್ನುವುದನ್ನು ತೆರೆ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಉಪೇಂದ್ರ ರವರ ನಿರ್ದೇಶನದ ಚಿತ್ರಕ್ಕೆ ಬಹುತೇಕ ದೊಡ್ಡ ದೊಡ್ಡ ನಿರ್ದೇಶಕರುಗಳು ವೀಕ್ಷಣೆ ಮಾಡಲು ಕಾಯುತ್ತಿರುತ್ತಾರೆ.
ಅವರ ಸಿನಿಮಾಗಳಲ್ಲಿ ತಲೆಗೆ ಕೆಲಸ ಕೊಡುವ ಒಂದಷ್ಟು ಹುಳಗಳನ್ನು ಬಿಟ್ಟಿರುತ್ತಾರೆ. ಅವುಗಳನ್ನು ಬೇರ್ಪಡಿಸಿ ಅದರೊಳಗಿನ ಹೂರಣ ಏನು ಎಂದು ಅರಿಯುವುದೇ ಬೇರೆ,ಬೇರೆ ನಿರ್ದೇಶಕರುಗಳಿಗೆ ಹಾಗೂ ಪ್ರೇಕ್ಷಕರಿಗೆ ಒಂದು ದೊಡ್ಡ ಸವಾಲು.
ಉಪ್ಪಿ ಯಾವುದನ್ನು ಅಷ್ಟು ಸುಲಭವಾಗಿ ಅರ್ಥವಾಗುವಂತೆ ಮಾತಾಡುವುದಿಲ್ಲ , ಹಾಗೇಯೇ ಅವರು ಸಿನಿಮಾ ಕೂಡ ಮಾಡುವುದಿಲ್ಲ.

ಮನುಷ್ಯ ಭೂಮಿಗೆ ಬಂದಾಗ ದೇವರ ಆಜ್ಞೆಯನ್ನು ಮೀರಿ ಯಾವಾಗ ಹಣ್ಣನ್ನು ತಿಂದನೋ, ಅಂದಿನಿಂದ ಇಂದಿನ ವರೆಗೂ ಪ್ರಕೃತಿಯನ್ನು ತಂದು ತೇಗುತ್ತಿದ್ದಾನೆ, ಅವನ ಆಸೆ ಬುರುಕತನಕ್ಕೆ ಸಿಲುಕಿದ ಪ್ರಕೃತಿಮಾತೆ ತನ್ನೊಡಲನ್ನು ಬರಿದಾಗಿಸಿಕೊಂಡಿದ್ದಾಳೆ, ಮನುಷ್ಯನ ಬಲತ್ಕಾರಕ್ಕೆ ಸಿಕ್ಕ ಅವಳು ಕಲಿಯುಗಕ್ಕೂ ಮತ್ತು ಸತ್ಯಯುಗಕ್ಕೂ ಕೊಂಡಿಯಾಗಿದ್ದಾಳೆ, ಅವಳೀಗ ಸಿಡಿದೇಳಬೇಕಿದೆ, ಕಲಿಯುಗಕ್ಕೆ ತಿಲಾಂಜಲಿಯಿಟ್ಟು. ಸತ್ಯಯುಗಕ್ಕೆ ನಾಂದಿ ಹಾಡಬೇಕಿದೆ. ಅದಕ್ಕಾಗಿ ಅಲ್ಲೊಂದು ಆಸ್ಪೋಟವಾಗಬೇಕಿದೆ. ಅದು ಮನುಷ್ಯ ಕಟ್ಟಿಕೊಂಡ ಪ್ರಪಂಚದ ಅಂತ್ಯ ಮತ್ತು ಮನುಷ್ಯನ ಮಿದುಳಿನೊಳಗಿರುವ ಗೊಂದಲಗಳ ಗೋಜಲುಗಳನ್ನು ನಾಶಗೊಳಿಸಬೇಕಿದೆ. ಆ ದಿನಗಳು ಬಹಳ ಹತ್ತಿರದಲ್ಲಿದೆ ಎನ್ನುವುದನ್ನು ಉಪೇಂದ್ರ ಬಹಳ ಮಾರ್ಮಿಕವಾಗಿ, ಹೇಳಿದ್ದಾರೆ. ಅದನ್ನೇ ಒಂದಷ್ಠು ಗೊಂದಲಮಯವಾಗಿ ನೀವೇ ಹುಡುಕಿಕೊಳ್ಳಿ ಎನ್ನುವುದನ್ನು ಪ್ರೇಕ್ಷಕನ ಮಿದುಳಿಗೆ ಕೆಲಸ ಕೊಟ್ಟಿದ್ದಾರೆ.

ಇಂತಹ ಚಿತ್ರಗಳನ್ನು ಸೃಷ್ಟಿಸಲು ಮತ್ತು ಅರಗಿಸಿಕೊಳ್ಳಲು ಉಪೇಂದ್ರ ರವರಿಗಲ್ಲದೇ ಮತ್ಯಾರಿಗೂ ಸಾಧ್ಯವಿಲ್ಲ.
ಯುಐ ಚಿತ್ರದ ಆರಂಭದಲ್ಲೇ ಉಪ್ಪಿ ಒಂದು ಬಾಂಬ್ ಹಾಕಿದ್ದಾರೆ ಅದು ಬ್ಲಾಸ್ಟ್ ಆಗುತ್ತೋ ಅಥವಾ ಠುಸ್ಸಾಗುತ್ತೋ ಅನ್ನುವ ಗೊಂದಲದಲ್ಲೇ ಚಿತ್ರ ಪ್ರಾರಂಭವಾಗುತ್ತದೆ.
ನೀವು ಬುದ್ದಿವಂತರಾದರೇ ಈಗಲೇ ಚಿತ್ರಮಂದಿರದಿಂದ ಆಚೆ ಹೋಗಿ,
ನೀವು ದಡ್ಡರಾಗಿದ್ದರೆ ಕೂತು ಸಿನಿಮಾ ನೋಡಿ ಎನ್ನುವ ಬಾಂಬ್ ಕ್ಷಣ ಕಾಲ ಪ್ರೇಕ್ಷಕನಿಗೆ ಗೊಂದಲ ಮೂಡಿಸುತ್ತದೆ.
ಉಪ್ಪಿ ದ್ವಿಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಸತ್ಯನ ಪಾತ್ರದಲ್ಲಿ ಸಮಾಜದ ಒಳ್ಳೆಯದನ್ನು ಬಿಂಬಿಸುವಲ್ಲಿ, ತಮ್ಮ ತಮ್ಮ ನ್ಯೂನ್ಯತೆಗಳಿಂದ ಮಾನಸಿಕವಾಗಿ, ಬ್ರೈನ್ ಮ್ಯಾಪಿಂಗ್ ನಿಂದ ಹೊರ ಬರುವಲ್ಲಿ ಬಹಳ ಶ್ರಮಿಸಿದ್ದಾರೆ.

ಹಾಗೆಯೇ
ಕಲ್ಕಿ ಅವತಾರದಲ್ಲಿ ಕುದುರೆ ಏರಿ ಎಲ್ಲರಿಗೂ ಅವರವರ ಮಿದುಳಿನಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ.
ಅರ್ಥವಾಗದವರು ತಲೆ ಚಚ್ಚಿಕೊಂಡು, ಗೊಂದಲಕ್ಕೀಡಾದರೆ. ಅರ್ಥವಾದವರು ಅವರವರ ಭಾವಕ್ಕೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಿದ್ದಾರೆ.
ಇಲ್ಲಿ ಬೇರೆ ಪಾತ್ರಗಳಿಗೆ ಪ್ರಾಮುಖ್ಯತೆಯೂ ಇಲ್ಲ, ಮಾತುಗಳು ಇಲ್ಲ ಎನ್ನಬಹುದು.

ದೊಡ್ಡಣ್ಣ, ಸಾಧುಕೋಕಿಲ, ಗುರುಪ್ರಸಾದ್, ಅಚ್ಯುತ್ ಕುಮಾರ್, ರವಿ ಶಂಕರ್, ಕಾಕ್ರೋಚ್ ಸುಧಿ, ನಿಧಿ ಸುಬ್ಬಯ್ಯ, ರೇಷ್ಮನಾಣಯ್ಯ, ನೀತು ವನಜಾಕ್ಷಿ, ಮುರಳಿ ಶರ್ಮಾ ಮುಂತಾದವರು ತಾರಾಗಣ ಚಿತ್ರವನ್ನು ಶ್ರೀಮಂತಗೊಳಿಸಿದೆ.
ಲಹರಿ ಸಂಸ್ಥೆ ಮೊದಲ ಬಾರಿಗೆ ಇಷ್ಟು ದೊಡ್ಡ ಬಜೆಟ್ ನ ಸಿನಿಮಾ ಮಾಡುವುದರ ಜೊತೆಗೆ ನಿರ್ಮಾಪಕರಾಗಿ ಮನೋಹರ್ ನಾಯ್ಡು, ಹಾಗೂ ಕೆ.ಪಿ. ಶ್ರೀಕಾಂತ್ ಐದು ಭಾಷೆಗಳಲ್ಲಿ ಚಿತ್ರವನ್ನು ತೆರೆಗೆ ತಂದಿದ್ದಾರೆ.
ಚಿತ್ರದ ಬೆನ್ನೆಲುಬು ಅಜನೀಶ್ ಲೋಕನಾಥ್ ರವರ ಹಿನ್ನೆಲೆ ಸಂಗೀತ ಎನ್ನಬಹುದು.
ಹಿರಿಯ ಛಾಯಾಗ್ರಾಹಕ ಹೆಚ್.ಸಿ. ವೇಣು ಉಪ್ಪಿಯ ಮಿದುಳಿನ ಗೊಂದಲಗಳಿಗೆ ಒಳ್ಳೆಯ ಚೌಕಟ್ಟನ್ನು ತೆರೆಯ ಮೇಲೆ ಮೂಡಿಸಿದ್ದಾರೆ.
ಅದ್ದೂರಿ ಸೆಟ್ ಗಳು, ಸೀಜಿ ದೃಶ್ಯಗಳು ಮನ ಸೆಳೆಯುತ್ತದೆ.
ಚಿತ್ರದ ಕೊನೆಯಲ್ಲಿ 2035ಕ್ಕೆ ಪ್ರಪಂಚ ಏನಾಗುತ್ತದೆ ಎಂಬುದನ್ನು ಬಹಳ ಮಾರ್ಮಿಕವಾಗಿ ಆತಂಕ ಹುಟ್ಟಿಸಿದ್ದಾರೆ.