UI movie free release event ಉಪ್ಪಿ ನಿರ್ದೇಶನದ, ಅಭಿನಯದ ಬಹು ನಿರೀಕ್ಷಿತ “UI” ಚಿತ್ರದ ಪ್ರೀ ರಿಲೀಸ್ ಇವೆಂಟ್ .

ಚಂದನವನದ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು ಬಹು ನಿರೀಕ್ಷಿತ “UI” ಚಿತ್ರದ ಪ್ರೀ ರಿಲೀಸ್ ಇವೆಂಟ್ .

ವರ್ಣರಂಜಿತ ಸಮಾರಂಭದಲ್ಲಿ ಶಿವರಾಜಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಭಾಗಿ .

ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ, ಒಂಭತ್ತು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ, ಪ್ರಿಯಾಂಕಾ ಉಪೇಂದ್ರ, ನಿರ್ಮಾಪಕರಾದ ಉದಯ್ ಕೆ ಮೆಹ್ತಾ, ರಮೇಶ್ ರೆಡ್ಡಿ, ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ಜಗದೀಶ್, ನಿರ್ದೇಶಕರಾದ ಪವನ್ ಒಡೆಯರ್, ಡಾ||ಸೂರಿ, ವೀರೇಶ ಚಿತ್ರಮಂದಿರದ ಕುಶಾಲ್ ಮುಂತಾದ ಗಣ್ಯರು ಪ್ರೀ ರಿಲೀಸ್ ಇವೆಂಟ್ ನಲ್ಲಿ ಭಾಗಿಯಾಗಿ “UI” ಗೆ ಶುಭ ಕೋರಿದರು.

ನಾನು “ಶ್” ಚಿತ್ರದ ಪ್ರೀಮಿಯರ್ ಶೋ ಅನ್ನು ಪಲ್ಲವಿ ಚಿತ್ರಮಂದಿರದಲ್ಲಿ ನೋಡಿದ್ದೆ. ಆನಂತರ “ಓಂ” ಚಿತ್ರದ ಚಿತ್ರೀಕರಣ ಸಮಯದಲ್ಲಿ ಉಪೇಂದ್ರ ಅವರ ಕಾರ್ಯವೈಖರಿ ನೋಡಿ, ನೀವು ಭಾರತ ಚಿತ್ರರಂಗದ ಮಹಾನ್ ನಿರ್ದೇಶಕರಲ್ಲೊಬ್ಬರಾಗುತ್ತಾರೆ ಎಂದು ಹೇಳಿದ್ದೆ. ಆಗಿನಿಂದಲೂ ನನಗೆ ಉಪೇಂದ್ರ ಅವರ ಕಂಡರೆ ವಿಶೇಷ ಪ್ರೀತಿ. ನಾನು ಕೂಡ “UI” ಚಿತ್ರವನ್ನು ನೋಡುವ ಕಾತುರದಲ್ಲಿದ್ದೇನೆ ಎಂದು ಶಿವರಾಜಕುಮಾರ್ ತಿಳಿಸಿದರು.

ನಾವು ಉಪೇಂದ್ರ ಅವರ ನಿರ್ದೇಶನಕ್ಕೆ ಅಭಿಮಾನಿಗಳು. ಅವರ ಚಿತ್ರಗಳನ್ನು ನೋಡಿ ಬೆಳೆದವರು ನಾವು. ಒಂಭತ್ತು ವರ್ಷಗಳ ನಂತರ ಉಪೇಂದ್ರ ಅವರು ನಿರ್ದೇಶಿಸಿರುವ ಈ ಚಿತ್ರವನ್ನು ನೋಡಲು ಕಾಯುತ್ತಿರುವುದಾಗಿ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಹೇಳಿದರು.

ಇಂದು ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಲು ಬಂದಿರುವ ಶಿವಣ್ಣ, ವಿಜಯ್, ಧನಂಜಯ್ ಸೇರಿದಂತೆ ಎಲ್ಲಾ ಗಣ್ಯರಿಗೆ ಧನ್ಯವಾದ ಎಂದು ಮಾತನಾಡಿದ ನಾಯಕ ಹಾಗೂ ನಿರ್ದೇಶಕ ಉಪೇಂದ್ರ, ಈ ಚಿತ್ರ ಆರಂಭವಾಗಲು ಕಾರಣ ಕೆ.ಪಿ.ಶ್ರೀಕಾಂತ್. ಐವತ್ತು ವರ್ಷಗಳ ಇತಿಹಾಸವಿರುವ ಲಹರಿ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡಿದ್ದು, ಮನೋಹರನ್ ಹಾಗೂ ಶ್ರೀಕಾಂತ್ ಅವರು ನಿರ್ಮಾಪಕರಾಗಿದ್ದಾರೆ.

ನವೀನ್, ಲಹರಿ ವೇಲು, ನಾಗೇಂದ್ರ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಇದು ನನ್ನೊಬ್ಬನ ಚಿತ್ರವಲ್ಲ. ನನ್ನ ತಂಡದ ಚಿತ್ರ. ಈ ಚಿತ್ರ ಉತ್ತಮವಾಗಿ ಮೂಡಿಬರಲು ಇವರೆಲ್ಲರ ಸಹಕಾರವೇ ಕಾರಣ. ಈ ಸಮಯದಲ್ಲಿ ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಇದೇ ಡಿಸೆಂಬರ್ 20ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಎಂದರು.

ಇಂದು ಆಗಮಿಸಿರುವ ಎಲ್ಲಾ ಗಣ್ಯರಿಗೂ ಹಾಗೂ ಚಿತ್ರತಂಡದವರಿಗೆ ಧನ್ಯವಾದ. ಇದೇ ಇಪ್ಪತ್ತರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ “UI” ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಆಲ್ ಮೋಸ್ಟ್ ಫುಲ್ ಆಗಿದೆ. ಆರಂಭದಲ್ಲೇ ನಮ್ಮ ಚಿತ್ರಕ್ಕೆ ಸಿಗುತ್ತಿರುವ ಬೆಂಬಲಕ್ಕೆ ಮನ ತುಂಬಿ ಬಂದಿದೆ ಎಂದರು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ಸಹ ನಿರ್ಮಾಪಕ ನವೀನ್.

ಚಿತ್ರದ ನಾಯಕಿ ರೀಷ್ಮಾ ನಾಣಯ್ಯ, ಕಲಾವಿದರಾದ ರವಿಶಂಕರ್, ಕಾಕ್ರೋಜ್ ಸುಧೀ, ನಿಧಿ ಸುಬ್ಬಯ್ಯ, ನೀತು, ಕಾರ್ಯಕಾರಿ ನಿರ್ಮಪಕ ಲಹರಿ ವೇಲು ಹಾಗೂ ವಿತರರಕರಾದ ಕೆ.ವಿ.ಎನ್ ಸಂಸ್ಥೆಯ ಸುಪ್ರೀತ್ ಮುಂತಾದವರು “UI” ಕುರಿತು ಮಾತನಾಡಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor