Swechha movie trailer and audio released. ಸ್ವೇಚ್ಛಾ ಟ್ರೈಲರ್ ಆಡಿಯೋ ಬಿಡುಗಡೆಪ್ರೀತಿ-ಬಾಂಧವ್ಯದ ಕಥೆಗಳ ಸಂಗಮ
ಸ್ವೇಚ್ಛಾ ಟ್ರೈಲರ್ ಆಡಿಯೋ ಬಿಡುಗಡೆ
ಪ್ರೀತಿ-ಬಾಂಧವ್ಯದ ಕಥೆಗಳ ಸಂಗಮ
ಎರಡು ಕಥೆಗಳನ್ನು ಪ್ಯಾರಲಲ್ ಆಗಿ ಹೇಳಲು ಪ್ರಯತ್ನಿಸಿರುವ ನಿರ್ದೇಶಕ ಸುರೇಶ್ ರಾಜು ಅವರು ಆ ಕಥೆಗಳಲ್ಲಿ ಬರೋ ಐದು ಪಾತ್ರಗಳು, ಅವರವರ ಸ್ವೇಚ್ಚೆಗೋಸ್ಕರ ಯಾವ ರೀತಿ ಹೋರಾಟ ನಡೆಸುತ್ತವೆ ಎಂಬುದನ್ನು ‘ಸ್ವೇಚ್ಛಾ’ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ.

ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್ ಅಡಿ ಸ್ಟಾರ್ ಮಸ್ತಾನ್ ಹಾಗೂ ಕೆ.ಆರ್. ಮುರಹರಿ ರೆಡ್ಡಿ ಅವರ ನಿರ್ಮಾಣದ ಸ್ವೇಚ್ಛಾ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಎರಡು ಹಾಡುಗಳ ಪ್ರದರ್ಶನ ಇತ್ತೀಚೆಗೆ ನೆರವೇರಿತು, ಅನ್ವಿಶ್ ಹಾಗೂ ಪವಿತ್ರಾ ನಾಯಕ್ ಚಿತ್ರದ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಸ್ವೇಚ್ಛಾ ನವರಸಗಳನ್ನೂ ಒಳಗೊಂಡ ಪ್ರೇಮಕಥೆಯಾಗಿದ್ದು, 90ರ ದಶಕದ ಹಾಗೂ ಈಗಿನ ಕಾಲಘಟ್ಟದ ಕಥೆಗಳನ್ನು ಪ್ಯಾರಲಲ್ ಆಗಿ ಹೇಳುತ್ತಾ ಸಾಗುತ್ತದೆ.

ಕೂಲಿ ಕೆಲಸ ಮಾಡುವ ಹುಡುಗನೊಬ್ಬನ ಪ್ರೀತಿ ಎಷ್ಟರಮಟ್ಟಿಗೆ ಗಾಢವಾಗಿರುತ್ತದೆ. ಮುಂದೆ ಅದು ಯಾವೆಲ್ಲ ಆಯಾಮಗಳನ್ನು ಪಡೆದುಕೊಳ್ಳುತ್ತದೆ ಎಂದು ಒಂದು ಕಥೆಯಲ್ಲಿ ಹೇಳಲು ಪ್ರಯತ್ನಿಸಿದರೆ, ಮತ್ತೊಂದರಲ್ಲಿ ತಾಯಿ ಮಗಳ ಬಾಂಧವ್ಯದ ಕಥೆಯನ್ನು ನಿರೂಪಿಸಿದ್ದಾರೆ. ಕಷ್ಟದಲ್ಲಿ ಆಸರೆಯಾದ ತಾಯಿಗೆ ಮಗಳ ಪ್ರೀತಿಯೇ ಸಿರಿತನವಾದರೆ, ಆ ಪುಟ್ಟ ಮಗಳು ಸ್ವೇಚ್ಛಾ, ತನ್ನ ತಾಯಿಗೋಸ್ಕರ ಏನೇನೆಲ್ಲ ಮಾಡುತ್ತಾಳೆ ಎಂಬುದನ್ನು ಮನಕಲಕುವ ಕಥೆಯೊಂದಿಗೆ ಭಾವನಾತ್ಮಕವಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ಚಿತ್ರದ 5 ಹಾಡುಗಳಿಗೆ ಲೋಕಿ ತವಸ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಅನುರಾಮ್ ಹಾಗೂ ಚೇತನ್ ನಾಯಕ್ ದನಿಯಾಗಿದ್ದಾರೆ, ಕರ್ನಾಟಕದ ಗಡಿಯ ರಾಯಚೂರು, ಬೂರ್ದಿಪಾಡು, ಶ್ರೀರಂಗಪಟ್ಟಣ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ವೇದಿಕೆಯಲ್ಲಿ ನಿರ್ಮಾಪಕ ಮುರಹರಿ ರೆಡ್ಡಿ ಮಾತನಾಡಿ ಚಿತ್ರರಂಗ ನನಗೆ ಹೊಸದು. ಚಿತ್ರಕ್ಕಾಗಿ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞರೂ ಸಹ ಕಷ್ಟಪಟ್ಟಿದ್ದಾರೆ. ಎಂದರು. ಮತ್ತೊಬ್ಬ ನಿರ್ಮಾಪಕ ಸ್ಟಾರ್ ಮಸ್ತಾನ್ ಮಾತನಾಡಿ ನಾನು ತೆಲುಗಲ್ಲಿ ಹಲವು ಸಿನಿಮಾ ವಿತರಣೆ ಮಾಡಿದ್ದೇನೆ, ಶಿವಣ್ಣ ಅವರ ಕಿಲ್ಲಿಂಗ್ ವೀರಪ್ಪನ್ ತೆಲುಗಲ್ಲಿ ನಾನೇ ರಿಲೀಸ್ ಮಾಡಿದ್ದೆ ಎಂದರು.

ನಿರ್ದೇಶಕ ಸುರೇಶ್ ರಾಜು ಮಾತನಾಡಿ ಪ್ರತಿಯೊಬ್ಬರೂ ಅವರವರ ಸ್ವೇಚ್ಚೆಗಾಗಿ ಹೇಗೆಲ್ಲ ಹೋರಾಡುತ್ತಾರೆ ಅನ್ನೋದನ್ನು ಈ ಕಥೆಯಲ್ಲಿ ಹೇಳಿದ್ದೇವೆ, ಅನ್ವಿಶ್ ಮತ್ತು ಪವಿತ್ರ ನಾಯಕ್ ಚಿತ್ರದ ಪ್ರೇಮಕಥೆಯ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ಕೆ.ಆರ್. ಮುರಹರಿ ರೆಡ್ಡಿ ಅವರಿಲ್ಲಿ ನಾಯಕಿಯ ತಂದೆಯಾಗಿ ನಟಿಸಿದ್ದಾರೆ. ಇನ್ನೊಂದು ಕಥೆಯಲ್ಲಿ ನಟಿ ಸ್ಪಂದನ ಮತ್ತು ಶ್ರೀಲಕ್ಷ್ಮಿ ತಾಯಿ, ಮಗಳಾಗಿ ಭಾವನಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜನವರಿ ಅಂತ್ಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಹೇಳಿದರು, ನಾಯಕ ಅನ್ವಿಶ್ ಮಾತನಾಡಿ ಜಲ್ಲಿಕಟ್ಟು, ಯತಾರ್ಥ ನಂತರ ಇದು ನನ್ನ ಮೂರನೇ ಚಿತ್ರ, ನಾನಿಲ್ಲಿ ಕೂಲಿ ಕೆಲಸ ಮಾಡೋ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ, ದೊಡ್ಡ ಮನೆತನದ ಹುಡುಗಿಯನ್ನು ನಾನು ಇಷ್ಟಪಟ್ಟಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ ಎಂದರು.

ತಾಯಿಯ ಪಾತ್ರ ನಿರ್ವಹಿಸಿರುವ ಸ್ಪಂದನಾ ಮಾತನಾಡಿ ನಿಜವಾದ ಸ್ಲಂನಲ್ಲೇ ಹೋಗಿ ಶೂಟ್ ಮಾಡಿದ್ದೇವೆ, ನನ್ನ ಮನಸಿಗೆ ಹತ್ತಿರವಾದ, ನನಗೆ ತುಂಬಾ ಕನೆಕ್ಟ್ ಆದಂಥ ಪಾತ್ರಗಳಲ್ಲಿ ಇದೂ ಒಂದು ಎಂದು ಹೇಳಿದರು, ಮಗಳಾಗಿ ನಟಿಸಿರುವ ಶ್ರೀಲಕ್ಷ್ಮಿ ಮಾತನಾಡಿ ಅಮ್ಮನ ಮಾತನ್ನು ತಪ್ಪದೆ ಪಾಲಿಸುವ ಹುಡುಗಿ ಸ್ವೇಚ್ಛಾ ಆಗಿ ನಟಿಸಿದ್ದೇನೆ ಎಂದರು. ಶ್ರೀಲಕ್ಷ್ಮಿ ಈಗಾಗಲೇ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದು, ಇವರದೇ ಸಾರಥ್ಯದಲ್ಲಿ ಈ ಚಿತ್ರದ ಮೊದಲ ಹಂತದ ಶೂಟಿಂಗ್ ನಡೆದಿದೆ,

ಸುರೇಶ್ ರೆಡ್ಡಿ ಅವರು ರಚಿಸಿದ ಕಥೆಗೆ ಸುರೇಶ್‌ರಾಜು ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ, ಸ್ಟಾರ್ ಮಸ್ತಾನ್ ಮತ್ತು ಕೆ.ಆರ್. ಮುರಹರಿ ರೆಡ್ಡಿ ಅವರ ನಿರ್ಮಾಣದ ಈ ಚಿತ್ರಕ್ಕೆ ಎಸ್. ಸತೀಶ್ ಅವರ ಛಾಯಾಗ್ರಹಣವಿದೆ, ಈಗಾಗಲೇ ಸ್ವೇಚ್ಛಾ ಚಿತ್ರದ ಎರಡು ಹಾಡುಗಳು ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದ್ದು ಕೇಳುಗರ ಮನ ಗೆದ್ದಿವೆ.