Surya and Bobby Deol acted “Kangua” movie press meet in Bangalore. ಬೆಂಗಳೂರಿನಲ್ಲಿ ಸೂರ್ಯ ಅಭಿನಯದ ‘ಕಂಗುವ’ ಪ್ರಚಾರ, ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ನವೆಂಬರ್ 14 ರಂದು ಅದ್ದೂರಿ ಬಿಡುಗಡೆ .
ಬೆಂಗಳೂರಿನಲ್ಲಿ ಸೂರ್ಯ ಅಭಿನಯದ ‘ಕಂಗುವ’ ಪ್ರಚಾರ
ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ನವೆಂಬರ್ 14 ರಂದು ಅದ್ದೂರಿ ಬಿಡುಗಡೆ .

ಶಿವ ಅವರ ನಿರ್ದೇಶನದಲ್ಲಿ ಸೂರ್ಯ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ‘ಕಂಗುವ’ ಚಿತ್ರ ನವೆಂಬರ್ 14 ರಂದು ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಸುಮಾರು 6000 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರ, ಕರ್ನಾಟಕದಲ್ಲಿ ಹೆಸರಾಂತ ಕೆವಿಎನ್ ಸಂಸ್ಥೆ ಮೂಲಕ ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಪ್ರಚಾರಕ್ಕಾಗಿ ನಟ ಸೂರ್ಯ ಬೆಂಗಳೂರಿಗೆ ಆಗಮಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಸೂರ್ಯ ಹಾಗೂ ಕೆವಿಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಮಾತನಾಡಿದರು.

ಬಹು ನಿರೀಕ್ಷಿತ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರವು ಬಹಳ ದೊಡ್ಡ ಮಟ್ಟದಲ್ಲಿ ಮೂಡಿಬಂದಿದೆ. ಈ ಚಿತ್ರವು ಪ್ರೇಕ್ಷಕರನ್ನು ಬೇರೆ ಪ್ರಪಂಚಕ್ಕೇ ಕರೆದುಕೊಂಡು ಹೋಗುತ್ತದೆ. ಸೂರ್ಯ ಬಹಳ ಅದ್ಭುತವಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಚಿತ್ರದ ದೊಡ್ಡ ಬ್ಲಾಕ್‌ಬಸ್ಟರ್ ಆಗುತ್ತದೆ ಎಂಬ ನಂಬಿಕೆ ಇದೆ. ಇಡೀ ಚಿತ್ರತಂಡ ಕಳೆದ ಎರಡೂವರೆ ವರ್ಷಗಳಿಂದ ಈ ಚಿತ್ರವನ್ನು ರೂಪಿಸಿದೆ.

ನಿರ್ಮಾಪಕ ಜ್ಞಾನವೇಲ್ ರಾಜ, ನಿರ್ದೇಶಕ ಶಿವ ಇಂದು ಬರುವುದಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ, ಚಿತ್ರದ ಕೆಲಸಗಳಲ್ಲಿ ಅವರೆಲ್ಲರೂ ತೊಡಗಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಅದ್ಭುತವಾದ ಚಿತ್ರವೊಂದನ್ನು ಕೊಡಬೇಕು ಎಂದು ಅವರೆಲ್ಲರೂ ಶ್ರಮ ಹಾಕುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಚಿತ್ರ ಇದು. ಇಡೀ ದೇಶ ಮತ್ತು ಹೊರದೇಶಗಳಲ್ಲೂ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ ಎಂದು ಕೆವಿಎನ್ ಪ್ರೊಡಕ್ಷನ್ಸ್ ನ ವೆಂಕಟ್ ತಿಳಿಸಿದರು.

ನಾನು ಬೆಂಗಳೂರಿಗೆ ಬರದೆ ಬಹಳ ದಿನಗಳಾಗಿದ್ದವು ಎಂದು ಮಾತು ಆರಂಭಿಸಿದ ನಟ ಸೂರ್ಯ, ‘ಕಂಗುವ’ ಚಿತ್ರವು ಇದೇ ನವೆಂಬರ್ 14 ರಂದು ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ನಾವು ಈ ಚಿತ್ರವನ್ನು ಬಹಳ ಪ್ರೀತಿಯಿಂದ ಮಾಡಿದ್ದೇವೆ. ಈ ಚಿತ್ರ ಬರೀ ಹಣ ಮತ್ತು ಶ್ರಮದಿಂದ ಆಗಿಲ್ಲ. ನಮ್ಮ ನಿರ್ದೇಶಕ ಶಿವ ಅವರಿಂದ ಮೊದಲುಗೊಂಡು, ಎಲ್ಲಾ ತಂತ್ರಜ್ಞರು ಮತ್ತು ಕಲಾವಿದರು ಈ ಚಿತ್ರವನ್ನು ಪ್ರೀತಿಯಿಂದ ಮಾಡಿದ್ದೇವೆ. ಪ್ರೇಕ್ಷಕರು ಯಾವತ್ತೂ ನಮಗೆ ಪ್ರೀತಿ ಮತ್ತು ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ಅವರಿಗೊಂದು ಒಳ್ಳೆಯ ಚಿತ್ರ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ನಾನು ಚಿತ್ರರಂಗಕ್ಕೆ ಬಂದು 27 ವರ್ಷಗಳಾಗಿವೆ. ಆದರೆ, ಪ್ರತಿ ಚಿತ್ರ ಸಹ ಒಂದು ಸವಾಲು. ಪ್ರತಿ ಚಿತ್ರದಲ್ಲೂ ವಿಭಿನ್ನವಾದುದನ್ನು ಕೊಡಬೇಕು. ಇದೆಲ್ಲವೂ ಸಾಧ್ಯವಾಗಿದ್ದು ರಾಜಮೌಳಿ ಅವರಿಂದ ‘ಬಾಹುಬಲಿ’ ಚಿತ್ರದಿಂದ ಪ್ಯಾನ್ ಇಂಡಿಯಾ ಪರಿಕಲ್ಪನೆ ಶುರುವಾಯಿತು. ‘ಕೆಜಿಎಫ್’ ಮತ್ತು ‘ಕಾಂತಾರ’ ಚಿತ್ರಗಳು ಅದನ್ನು ಇನ್ನಷ್ಟು ವಿಸ್ತರಿಸಿದವು. ಚಿತ್ರ ತಯಾರಕರು ಮಹತ್ವಾಕಾಂಕ್ಷಿಗಳಾಗಿದ್ದರೆ, ಧೈರ್ಯವಂತರಾಗಿದ್ದರೆ ಮತ್ತು ಎಲ್ಲಕ್ಕಿಂತ ಒಂದೊಳ್ಳೆಯ ಚಿತ್ರವನ್ನು ಕೊಟ್ಟರೆ, ದೇಶದ ಉದ್ಧಗಲ್ಲಕ್ಕೂ ಜನ ಪ್ರೋತ್ಸಾಹಿಸುತ್ತಾರೆ ಎಂಬುದು ಅರ್ಥವಾಗಿದೆ.

ಅದೇ ಉದ್ದೇಶದಿಂದ ‘ಕಂಗುವ’ ಚಿತ್ರವನ್ನು ನಾವು ಮಾಡಿದ್ದೇವೆ. ಈ ಹಿಂದೆ ನಾವು ಮಾಡದೇ ಇರುವಂತಹ ಒಂದು ಚಿತ್ರವನ್ನು ನಾವು ಈ ಚಿತ್ರದ ಮೂಲಕ ಮಾಡಿದ್ದೇವೆ. ಎರಡೂವರೆ ವರ್ಷಗಳ ಈ ಪಯಣ ಬಹಳ ಅದ್ಭುತವಾಗಿತ್ತು. ಒಬ್ಬ ಮನುಷ್ಯನಿಂದ ತೇರು ಎಳೆಯುವುದಕ್ಕೆ ಸಾಧ್ಯವಿಲ್ಲ ಎಂಬ ಗಾದೆಯೊಂದು ತಮಿಳಿನಲ್ಲಿದೆ. ಅದೇ ರೀತಿ, ಇಂಥದ್ದೊಂದು ಚಿತ್ರ ನನ್ನೊಬ್ಬನಿಂದ ಸಾಧ್ಯವಿಲ್ಲ.

ಈ ಚಿತ್ರದಲ್ಲಿ ಹಲವರ ಶ್ರಮವಿದೆ. ಕೆವಿಎನ್ ಪ್ರೊಡಕ್ಷನ್ಸ್ ನ ವೆಂಕಟ್ ಅವರು ಕರ್ನಾಟಕದಲ್ಲಿ ನಮ್ಮ ಬೆಂಬಲವಾಗಿ ನಿಂತಿದ್ದಾರೆ. ‘ಕಂಗುವ’ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ನಮ್ಮ ಛಾಯಾಗ್ರಾಹಕ ವೆಟ್ರಿ, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಎಲ್ಲರೂ ಚಿತ್ರ ಅದ್ಭುತವಾಗಿ ಮೂಡಿಬರುವುದಕ್ಕೆ ಕಾರಣವಾಗಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಲೈಟ್‍ಗಳನ್ನೇ ಬಳಸದೆ ನೈಜವಾಗಿ ಚಿತ್ರೀಕರಿಸಲಾಗಿದೆ. ಈ ತರಹದ ಪ್ರಪಂಚವನ್ನು ನಾವು ಈ ಹಿಂದೆ ನೋಡಿರುವುದಕ್ಕೆ ಸಾಧ್ಯವಿಲ್ಲ. ಈ ಚಿತ್ರವು ನಮ್ಮನ್ನು 700 ವರ್ಷಗಳ ಹಿಂದಕ್ಕೆ ಕರೆದೊಯ್ಯಲಿದೆ. ಎರಡೂವರೆ ಗಂಟೆಗಳ ಕಾಲ ಅದ್ಭುತ ಪ್ರಪಂಚದಲ್ಲಿ ಪ್ರೇಕ್ಷಕರು ಇರಲಿದ್ದಾರೆ. ‘ಕಂಗುವ’ ಒಂದು ಅದ್ಭುತ ಅನುಭವವಾಗಲಿದೆ. ಈ ಚಿತ್ರ 3ಡಿ ಮತ್ತು 4ಡಿ ವರ್ಷನ್‍ಗಳಲ್ಲೂ ಪ್ರದರ್ಶನವಾಗಲಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಈ ಚಿತ್ರಕ್ಕೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಸೂರ್ಯ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಬಾಬಿ ಡಿಯೋಲ್ , ದಿಶಾ ಪಟಾನಿ , ನಟರಾಜನ್ ಸುಬ್ರಮಣ್ಯಂ , ಯೋಗಿ ಬಾಬು , ರೆಡಿನ್ ಕಿಂಗ್ಸ್ಲಿ , ಕೋವೈ ಸರಳಾ , ಆನಂದರಾಜ್, ಕೆ.ಎಸ್ ರವಿಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.