ಸುದೀಪ್ @25 ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಿದ ಗಣ್ಯರು
- ಸಮರ್ಥನಂ ಟ್ರಸ್ಟ್ ವತಿಯಿಂದ ಮೇ. 16ಕ್ಕೆ ಸುದೀಪ್ @25 ಅದ್ದೂರಿ ಕಾರ್ಯಕ್ರಮ
- ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಗಾಯನ, ನೃತ್ಯರೂಪಕ ಸೇರಿ ಹಲವು ಮನರಂಜನಾ ಕಾರ್ಯಕ್ರಮ
ಕನ್ನಡ ಸಿನಿಮಾರಂಗದಲ್ಲಿ ನಟ ‘ಕಿಚ್ಚ’ ಸುದೀಪ್ ಸುದೀರ್ಘ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆ ಸಾಧನೆಯನ್ನು ಗೌರವಿಸಲು ‘ಸಮರ್ಥನಂ ಅಂಗವಿಕಲರ ಸಂಸ್ಥೆ’ ಮುಂದಾಗಿದ್ದು, ಪೂರ್ವಭಾವಿಯಾಗಿ ‘ಸುದೀಪ್ 25’ ಕಾರ್ಯಕ್ರಮದ ಲೋಗೋ ಅನಾವರಣವನ್ನು ಮಂಗಳವಾರ ಮಾಡಲಾಯಿತು. ಎಂ.ಜಿ. ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ. ಜಿ.ಕೆ ಮಹಾಂತೇಶ್ ಮತ್ತು ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ ‘ಸುದೀಪ್ 25’ ಲಾಂಛನ ಬಿಡುಗಡೆಯಾಯಿತು.
ಬಳಿಕ ಮಾತನಾಡಿದ ಡಾ. ಮಹಾಂತೇಶ್, ಕಿಚ್ಚ ಸುದೀಪ್ ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅವರ ಆ ಸಾಧನೆಯ ಹಾದಿಯನ್ನು ಮೆಲುಕು ಹಾಕುವ ಉದ್ದೇಶದಿಂದ ಮತ್ತು ಟ್ರಸ್ಟ್‌ನ ಬೆಳವಣಿಗೆಯ ಹಿನ್ನೆಲೆಯಲ್ಲಿ ‘ಸುದೀಪ್ 25’ ವಿಶೇಷ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಮೇ 16ರಂದು ನಗರದ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಇದೀಗ ಲಾಂಛನ ಬಿಡುಗಡೆ ಮಾಡಿದ್ದೇವೆ ಎಂದರು.

ಸಮರ್ಥನಂ ಅಂಗವಿಕಲ ಸಂಸ್ಥೆ ಶುರುವಾಗಿ 24 ವರ್ಷಗಳೇ ಕಳೆದಿವೆ. ಅಂದಿನಿಂದಲೂ ಸಂಸ್ಥೆ ಜತೆಗೆ ಸೇವೆ ಮಾಡುತ್ತಿರುವ ಹಿರಿಯ ನಟ ಶಿವರಾಂ ಈ ವಿಶೇಷ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಅಂಗವಿಕಲರ ಮತ್ತು ಅಂಧರ ಶ್ರೇಯೋಭಿವೃದ್ಧಿಗಾಗಿಯೇ ಸಮರ್ಥನಂ ಟ್ರಸ್ಟ್ ಶುರುವಾಗಿದೆ. ಸಾಕಷ್ಟು ನಿಧಿ ಸಂಗ್ರಹಣಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ. ಎಸ್‌ಪಿಬಿ, ಯೇಸುದಾಸ್ ಸೇರಿ ಹಲವಾರು ಗಣ್ಯರು ಸಂಸ್ಥೆಗಾಗಿ ಸ್ಪಂದಿಸಿದ್ದಾರೆ. ಅದೇ ರೀತಿ ಈ ಸಲ ಸುದೀಪ್ ಅವರ 25 ವರ್ಷದ ಸಿನಿಯಾನವನ್ನೇ ಪ್ರಧಾನವಾಗಿಸಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಂಗೀತ ಸೇರಿ ನೃತ್ಯ ರೂಪಕಗಳೂ ಈ ಸಲದ ಹೈಲೈಟ್. ವಿಜಯ್ ಪ್ರಕಾಶ್ ಸೇರಿ ಹಲವು ಗಾಯಕರು ತಮ್ಮ ಕಂಠಸಿರಿ ಮೂಲಕ ವೇದಿಕೆ ಮೇಲಿರಲಿದ್ದಾರೆ. ಮೂರು ಗಂಟೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡುತ್ತಾರೆ.
ಇನ್ನುಳಿದಂತೆ ಲೋಗೊ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್. ಎ ಚಿನ್ನೇಗೌಡ, ಸಂಗೀತ ನಿರ್ದೇಶಕ ವಿ. ಮನೋಹರ್, ರಾಜ್ ಇವೆಂಟ್ಸ್‌ನ ಸಿದ್ದರಾಜು, ಸಿರಿ ಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ ಉಪಸ್ಥಿತರಿದ್ದರು.

ಸಮರ್ಥನಂ ಸಂಸ್ಥೆಯ ಬಗ್ಗೆ…
ಸಮರ್ಥನಂ ಅಂಗವಿಕಲರ ಸಂಸ್ಥೆಯು ಲಾಭದಾಯಕವಲ್ಲದ ಸೇವಾ ಸಂಸ್ಥೆಯಾಗಿ 1997ರಲ್ಲಿ ಸ್ಥಾಪಿತಗೊಂಡು ಬೆಂಗಳೂರು ನಗರ, ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ, ಹಲವು ರಾಜ್ಯ, ದೇಶ ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ವಿಕಲ ಚೇತನರ ಪುನರ್ವಸತಿ, ವಿಶೇಷ ಶಾಲೆ, ಶಿಕ್ಷಣ, ಊಟ, ವಸತಿ, ವಿವಿಧ ತರಬೇತಿ, ಕ್ರೀಡೆ, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿದ್ದು, ಅವರ ಜೀವನಕ್ಕೆ ಬೇಕಾದ ಉದ್ಯೋಗ, ಸಾಧನೆಗೆ ಅಭೂತಪೂರ್ವ ಕಾಣಿಕೆಯನ್ನು ನೀಡಿದ್ದು, ಸಂಸ್ಥೆಯ ಅಡಿಯಲ್ಲಿ ಭಾರತ ಅಂಧರ ಕ್ರಿಕೆಟ್ ಮಂಡಳಿ ಸಹ ನಡೆಸುತ್ತಿದೆ. ಸುಮಾರು 5000 ವಿದ್ಯಾರ್ಥಿಗಳು ಸಂಸ್ಥೆಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ವಿಕಲಚೇತನರ ಉನ್ನತಿಗೆ ಸಹಾಯವಾದ ಸಂಸ್ಥೆಯಾಗಿದೆ.