Satyam Teaser Release ಫ್ಯಾಮಿಲಿ ಥ್ರಿಲ್ಲರ್ “ಸತ್ಯಂ” ಟೀಸರ್ ಬಿಡುಗಡೆ.

ಫ್ಯಾಮಿಲಿ ಥ್ರಿಲ್ಲರ್ “ಸತ್ಯಂ” ಟೀಸರ್ ಬಿಡುಗಡೆ.

ತಾತ ಮೊಮ್ಮಗನ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ಅಶೋಕ್ ಕಡಬ ಅವರು ನಿರ್ದೇಶಿಸಿರುವ ಚಿತ್ರ “ಸತ್ಯಂ” ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಶ್ರೀ ಮಾತಾ ಕ್ರಿಯೇಶನ್ಸ್ ಮೂಲಕ ಮಾಂತೇಶ್ ವಿಕೆ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಆಧ್ಯಾತ್ಮಕ ಚಿಂತಕರಾದ ಜಂಬುನಾಥ್ ಸ್ವಾಮಿ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕ ಮಾಂತೇಶ್. ವಿ.ಕೆ. ಮಾತನಾಡುತ್ತಾ, ನಮ್ಮ ಸಂಸ್ಥೆಯ ಎರಡನೇ ಚಿತ್ರವಿದು. ಈ ಹಿಂದೆ ಮಹಾಮಹಿಮ ಲಡ್ಡು ಮುತ್ಯ ಎಂಬ ಚಿತ್ರ ನಿರ್ಮಿಸಿದ್ದೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬಂದಿದೆ. ನಾನೊಬ್ಬ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದರೂ ಸಿನಿಮಾ ಮೇಲೆ ತುಂಬಾ ಆಸಕ್ತಿ, ಪ್ರೀತಿಯಿದೆ. ನಮ್ಮ ಬ್ಯಾನರ್ ಮೂಲಕ ಸದಭಿರುಚಿಯ ಚಿತ್ರವನ್ನು ನೀಡುವುದು ನಮ್ಮ ಉದ್ದೇಶ. ಅಶೋಕ್ ಕಡಬ ಅವರು ಈ ಕಥೆ ತಂದಾಗ ವಿಶೇಷ ಅನಿಸಿತು. ಎರಡು ಕಾಲಘಟ್ಟಗಳಲ್ಲಿ ನಡೆಯೋ ಕಥೆಯಿದು. ಜಮೀನ್ದಾರ್ ಕುಟುಂಬದ ಎಳೆಯೊಂದಿಗೆ ಪ್ರಸ್ತುತ ಬದುಕಿನ ಕಥೆಯೂ ಬೆಸೆದುಕೊಂಡಿದೆ. ತಾತ ಮೊಮ್ಮಗನ ಕಥೆ ತುಂಬಾ ವಿಶೇಷವಾಗಿದೆ. ತಾತನಾಗಿ ಹಿರಿಯ ನಟ ಸುಮನ್ ಹಾಗೂ ಮೊಮ್ಮಗನಾಗಿ ಸಂತೋಷ್ ಅಭಿನಯಿಸಿದ್ದಾರೆ.

ನಾಯಕಿಯಾಗಿ ರಂಜಿನಿ ರಾಘವನ್ ಉತ್ತಮ ಅಭಿನಯ ನೀಡಿದ್ದಾರೆ. ಇದೊಂದು ಫ್ಯಾಮಿಲಿ ಕಂಟೆಂಟ್ , ಥ್ರಿಲ್ಲರ್ ಚಿತ್ರ. ವಿಶೇಷವಾಗಿ ಆನೇಕಲ್ ಬಾಲರಾಜ್ ಅವರನ್ನು ನೆನಪಿಸಿಕೊಳ್ಳಬೇಕು, ಈ ಕಥೆಯನ್ನು ಕೇಳಿದ ಅವರು ಇದೊಂದು ಒಳ್ಳೆಯ ಕಥೆ. ನನ್ನ ಬೆಂಬಲ ಸದಾ ಇದೆ ಎಂದಿದ್ದರು. ಅವರ ಆಶೀರ್ವಾದ ಇದ್ದೇ ಇರುತ್ತೆ. ಅವರ ಮಗ ಸಂತೋಷ ನಾಯಕನಾಗಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರದ ವಿತರಣೆ ಹಕ್ಕನ್ನು ನಿರ್ಮಾಪಕ ಕೆ.ಎ. ಸುರೇಶ್ ವಹಿಸಿಕೊಂಡಿದ್ದಾರೆ. ಸದ್ಯದಲ್ಲೆ ಟ್ರೈಲರ್ , ಹಾಡುಗಳು ಬಿಡುಗಡೆ ಮಾಡಿ, ಡಿಸೆಂಬರ್ ವೇಳೆಗೆ ತೆರೆಗೆ ತರುವ ಪ್ಲಾನ್ ಇದೆ ಎಂದು ಹೇಳಿದರು.
ನಿರ್ದೇಶಕ ಅಶೋಕ್ ಕಡಬ ಮಾತನಾಡುತ್ತಾ ಇದೊಂದು ಫ್ಯಾಮಿಲಿ ಎಂಟೈನರ್. ಪಂಜುರ್ಲಿ ದೈವ ಆರಾಧಿಸುವ ರಾಜಮನೆತನದ ಕುಟುಂಬದಲ್ಲಿ ಒಂದು ಕಳಂಕ ನಡೆದಿರುತ್ತದೆ ಅದರಿಂದ ಸಾವು ನೋವುಗಳು ಆಗಿದ್ದು, ಅದರಲ್ಲಿ ಒಂದು ವಂಶದ ಕುಡಿ ಸುಮಾರು 40 ವರ್ಷದ ನಂತರ ಭೂತ ಕೋಲದ ಪೂಜೆಗೆಂದು ಆ ಊರಿಗೆ ಬಂದಾಗ ನಡೆಯುವ ಕಥೆಯಿದು.

ಮೂರು ಶೇಡ್ ಗಳು ಇರುವ ಈ ಚಿತ್ರಕ್ಕೆ ದೊಡ್ಡ ಮಟ್ಟದ ಸೆಟ್ ಗಳನ್ನು ಹಾಕಿದ್ದೆವು. 2019ರಲ್ಲೇ ನಾವೀ ಕಥೆ ಮಾಡಿದ್ದೆವು, ಕಾಂತಾರ ಬರುವ ಮುಂಚೆಯೇ ಈ ಸಬ್ಜೆಕ್ಟ್ ರೆಡಿ ಇತ್ತು. ಈ ಚಿತ್ರದ ಟೀಸರ್ ನಲ್ಲಿ ಕಾಣುವ ಹುಲಿ ಉಗುರು ಒರಿಜಿನಲ್ ಅಲ್ಲ. ಕಾಸ್ಟ್ಯೂಮರ್ ಕೊಟ್ಟಿರುವ ಡುಪ್ಲಿಕೇಟ್ ಉಗುರು ಎಂದರು. ಹಾರರ್, ಸಸ್ಪೆನ್ಸ್ , ಲವ್ ಕಂಟೆಂಟ್ ಒಳಗೊಂಡ ಚಿತ್ರವನ್ನು ಕನ್ನಡ, ತೆಲುಗು ಭಾಷೆಯಲ್ಲಿ ಮಾಡಿದ್ದೇವೆ. ರವಿ ಬಸ್ರೂರು ಸಂಗೀತ ಅದ್ಭುತವಾಗಿ ಮ್ಯೂಸಿಕ್ ಮಾಡಿದ್ದಾರೆ.

ಸಿನಿಟೆಕ್ ಸೂರಿ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಕೆ. ವಿ. ರಾಜು ಅವರು ಒಂದಿಷ್ಟು ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅದನ್ನು ಕಿನ್ನಲ್ ರಾಜ್ ಪೂರ್ಣಗೊಳಿಸಿ, ಒಂದು ಹಾಡನ್ನೂ ಬರೆದಿದ್ದಾರೆ. ಆಡಿಯೋ ಹಕ್ಕನ್ನ A2 ಮ್ಯೂಸಿಕ್ ಉತ್ತಮ ಮೊತ್ತ ನೀಡಿ ಪಡದಿದೆ ಎಂದು ಮಾಹಿತಿ ನೀಡಿದರು.
ನಾಯಕ ಸಂತೋಷ್ ಬಾಲರಾಜ್ ಮಾತನಾಡುತ್ತ ನಾನು ಈ ಹಿಂದೆ ಮಾಡಿದ ಕೆಂಪ, ಕರಿಯ-2, ಗಣಪ ಸಿನಿಮಾಗಳೇ ಒಂದಾದರೆ, ಇದು ಆ ಮೂರಕ್ಕಿಂತ ಡಿಫ್ರೆಂಟ್ ಆಗಿ ಮೂಡಿ ಬಂದಿರುವ ಚಿತ್ರ. ನನ್ನ ಪಾತ್ರದ ಹೆಸರು ಸತ್ಯ, ನನ್ನ ತಂದೆ ಬದುಕಿದ್ದರೆ ತುಂಬಾ ಇಷ್ಟಪಡುತ್ತಿದ್ದರು. ಆರಂಭದಲ್ಲಿ ಈ ಕಥೆಯನ್ನು ಒಪ್ಪಿ ಇದೊಂದು ಉತ್ತಮ ಚಿತ್ರವಾಗಿ ಮೂಡಿಬರುತ್ತೆ ಅಂದಿದ್ದರು. ನನಗೆ ದರ್ಶನ್ ಅವರ ಸಪೋರ್ಟ್ ಕೂಡ ತುಂಬಾ ಇದೆ. ಬಹಳ ಗ್ಯಾಪ್ ಆಗಿತ್ತು, ಇನ್ನಷ್ಟು ವಿಭಿನ್ನ ಚಿತ್ರಗಳ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದರು.


ನಾಯಕಿ ರಂಜಿನಿ ರಾಘವನ್ ಮಾತನಾಡುತ್ತ ಸತ್ಯಂ ಟೀಸರ್ ಗಾಗಿ ನಾನು ತುಂಬಾ ಕಾದಿದ್ದೆ. ಅಚಾನಕ್ಕಾಗಿ ನಾನೀ ಚಿತ್ರತಂಡಕ್ಕೆ ಸೇರ್ಪಡೆಯಾದೆ. ನನ್ನ ಪಾತ್ರ ಚಿತ್ರದ ಕಥೆಗೆ ಟರ್ನಿಂಗ್ ಪಾಯಿಂಟ್ ಆಗಿದ್ದು , ಕಥೆಯ ಜೊತೆಗೇ ಸಾಗುತ್ತೆ. ಸಂತೋಷ್ ಅವರ ಸಪೋರ್ಟ್ ಚೆನ್ನಾಗಿತ್ತು, ಚಿತ್ರದ ಹಾಡುಗಳು ಚೆನ್ನಾಗಿ ಬಂದಿದೆ ಎಂದರು. ನಂತರ ಸಾಹಿತಿ ಹಾಗೂ ಸಂಭಾಷಣೆಕಾರ ಕಿನ್ನಲ್ ರಾಜ್ , ಛಾಯಾಗ್ರಹಕ ಸಿನಿಟೆಕ್ ಸೂರಿ, ಮೊದಲ ಬಾರಿಗೆ ಬೇರೆ ಬ್ಯಾನರ್ ಚಿತ್ರವನ್ನು ವಿತರಣೆ ಮಾಡುತ್ತಿರುವ ಕೆ.ಎ. ಸುರೇಶ್ ಚಿತ್ರದ ಕುರಿತಂತೆ ಮಾತನಾಡಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor