Sarkari Nyayabele Angadi Song Recording ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದ ಹಾಡುಗಳ ರೆಕಾರ್ಡಿಂಗ್.
ʼನ್ಯಾಯಬೆಲೆ ಅಂಗಡಿʼ ತೆರೆಯುತ್ತಿದ್ದಾರಂತೆ ರಾಗಿಣಿ!
ರಾಗಿಣಿ ದ್ವಿವೇದಿ ಹೊಸಚಿತ್ರಕ್ಕೆ ಟೈಟಲ್ ಫಿಕ್ಸ್…
ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ರಾಗಿಣಿ ತಯಾರಿ
ಗ್ರಾಮೀಣ ಮಹಿಳೆಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ತುಪ್ಪದ ಹುಡುಗಿ
ಸಾಂಗ್ ರೆಕಾರ್ಡಿಂಗ್ ಮೂಲಕ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಕೆಲಸ ಆರಂಭ

ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು ತೆರೆಗೆ ಬರಲು ತಯಾರಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದ ನಟಿ ರಾಗಿಣಿ ದ್ವಿವೇದಿ, ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈಗಾಗಲೇ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಬಹುತೇಕ ಸ್ಕ್ರಿಪ್ಟ್ ಕಾರ್ಯಗಳು ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸಿನೆಮಾದ ಟೈಟಲ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಚಿತ್ರತಂಡ, ಹಾಡುಗಳ ಧ್ವನಿಮುದ್ರಣ ಆರಂಭಿಸುವ ಮೂಲಕ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಪ್ರೊಡಕ್ಷನ್ ಕಾರ್ಯಗಳಿಗೆ ಚಾಲನೆ ನೀಡಿದೆ.

ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ನಡೆದ ಸಮಾರಂಭದಲ್ಲಿ, ಸಂಗೀತ ನಿರ್ದೇಶಕ ಅನಂತ್ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಹಾಡುಗಳ ಮುದ್ರಣ ಕಾರ್ಯವನ್ನು ಅರಂಭಿಸಲಾಯಿತು. ಈ ವೇಳೆ ಚಿತ್ರದ ನಾಯಕ ನಟಿ ರಾಗಿಣಿ ದ್ವಿವೇದಿ, ʼಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘʼದ ಅಧ್ಯಕ್ಷ ಟಿ. ಕೃಷ್ಣಪ್ಪ, ನಟಿ ಗೀತಪ್ರಿಯ, ನಿರ್ಮಾಪಕಿಯರಾದ ತೇಜು ಮೂರ್ತಿ, ಎಸ್. ಪದ್ಮಾವತಿ ಚಂದ್ರಶೇಖರ್, ಹಿರಿಯ ನಿರ್ಮಾಪಕರಾದ ಭಾ. ಮ. ಹರೀಶ್, ಭಾ. ಮ. ಗಿರೀಶ್, ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ, ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ನಿರ್ದೇಶಕ ಸಾತ್ವಿಕ್ ಪವನ್ ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮತ್ತು ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದರು.

ಇದೇ ವೇಳೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ʼಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನವಾದ ಕಥೆ ಮತ್ತು ಪಾತ್ರ ಈ ಸಿನೆಮಾದಲ್ಲಿದೆ. ಇಡೀ ಚಿತ್ರದ ಕಥೆ ನನ್ನ ಪಾತ್ರದ ಸುತ್ತ ನಡೆಯುತ್ತದೆ. ಇಂದಿನ ಸಮಾಜದಲ್ಲಿ ಆಹಾರ ವಿತರಣೆಯಲ್ಲೂ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಸಿನೆಮಾದಲ್ಲಿ ಹೇಳಲಾಗುತ್ತಿದೆ. ನಮಗೆ ಗೊತ್ತಿಲ್ಲದ ಶಾಕಿಂಗ್ ಎನಿಸುವಂಥ ಅನೇಕ ವಿಷಯಗಳು ಈ ಸಿನೆಮಾದಲ್ಲಿದೆ. ನನಗೂ ಕೂಡ ಈ ಸಿನೆಮಾದ ಕಥೆ ಮತ್ತು ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ನನ್ನ ಸಿನೆಮಾ ಕೆರಿಯರ್‌ನಲ್ಲಿ ನಿಜವಾಗಿಯೂ ಇದೊಂದು ವಿಭಿನ್ನ ಸಿನೆಮಾವಾಗಲಿದೆ ಎಂಬ ನಂಬಿಕೆಯಿದೆʼ ಎಂದರು.

ʼಜಯಶಂಕರ ಟಾಕೀಸ್ʼ ಬ್ಯಾನರಿನಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರವನ್ನು ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ʼತಾಯವ್ವʼ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ್ ಪವನ ಕುಮಾರ್ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ.

ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸಾತ್ವಿಕ್ ಪವನ ಕುಮಾರ್, ʼಇದೊಂದು ನೈಜ ವಿಷಯವನ್ನು ಆಧರಿಸಿದ ಚಿತ್ರ. ನಮ್ಮ ನಡುವೆಯಿರುವ ʼಸರ್ಕಾರಿ ನ್ಯಾಯಬೆಲೆ ಅಂಗಡಿʼಗಳಲ್ಲಿ ನಡೆಯುವ ನೈಜ ವಿಷಯಗಳೇ ಈ ಚಿತ್ರದ ಕಥಾಹಂದರ. ಇದನ್ನು ಒಂದಷ್ಟು ಕುತೂಹಲಭರಿತವಾಗಿ ಈ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ರಾಗಿಣಿ ದ್ವಿವೇದಿ ಅವರಿಗೆ ಇಲ್ಲೊಂದು ಹೊಸಥರದ ಪಾತ್ರವಿದೆ. ʼಸರ್ಕಾರಿ ನ್ಯಾಯಬೆಲೆ ಅಂಗಡಿʼಯನ್ನು ನಡೆಸುವ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಅವರಿಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆʼ ಎಂದು ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ಸಣ್ಣ ಎಳೆಯನ್ನು ಬಿಟ್ಟುಕೊಟ್ಟರು.

ಸದ್ಯ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ನಟಿ ರಾಗಿಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು ಉಳಿದಂತೆ ಅನೇಕ ಹಿರಿಯ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಮಾರ್ಚ್ ತಿಂಗಳಿನಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ. ಅಂದಹಾಗೆ, ಇದೇ ವರ್ಷದ ಮಧ್ಯ ಭಾಗದಲ್ಲಿ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರವನ್ನು ಥಿಯೇಟರಿಗೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
——