“Sanju Weds Geetha 2” movie review. ಸಂಜು ವೆಡ್ಸ್ ಗೀತಾ 2 ಚಿತ್ರ ವಿಮರ್ಶೆ
ಚಿತ್ರ – ಸಂಜು ವೆಡ್ಸ್ ಗೀತಾ 2
ನಿರ್ಮಾಣ ಸಂಸ್ಥೆ – ಪವಿತ್ರ ಇಂಟರ್ನ್ಯಾಷನಲ್ ಮೂವಿ ಮೇಕರ್ಸ್
ನಿರ್ಮಾಪಕರು – ಛಲವಾದಿ ಕುಮಾರ್
ನಿರ್ದೇಶನ – ನಾಗಶೇಕರ್
ಛಾಯಾಗ್ರಹಣ – ಸತ್ಯ ಹೆಗಡೆ
ಸಂಗೀತ – ಶ್ರೀಧರ್ ಸಂಭ್ರಮ್
Rating – 3/5
ಕಲಾವಿದರು – ಶ್ರೀನಗರ ಕಿಟ್ಟಿ, ಸಾಧುಕೋಕಿಲ, ರಂಗಾಯಣ ರಘು, ತಬಲನಾಣಿ, ಚೇತನ್ ಚಂದ್ರ, ರಚಿತಾರಾಮ್, ರಾಗಿಣಿ, ಸಂಪತ್ ರಾಜ್, ಮುಂತಾದವರು.
2011ರಲ್ಲಿ ಚಿತ್ರ ಪ್ರೇಮಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಚಿತ್ರ ಸಂಜು ವೆಡ್ಸ್ ಗೀತಾ. ಅದೊಂದು ರೊಮ್ಯಾಂಟಿಕ್ ಟ್ರಾಜಿಡಿ ಮ್ಯೂಸಿಕಲ್ ಚಿತ್ರ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಜೊತೆಯಾಗಿ ಅಭಿನಯಿಸಿದಂತ ಚಿತ್ರ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ನಾಗಶೇಖರ್. ಆ ಸಿನಿಮಾದ ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿತ್ತು. ಇಂದಿಗೂ ಕೇಳುಗರ ಫೇವರೇಟ್ ಲಿಸ್ಟ್ ನಲ್ಲಿ ಈ ಚಿತ್ರದ ಹಾಡುಗಳು ರಾರಾಜಿಸುತ್ತಲೇ ಇವೆ.

ಆದರೆ ಈಗ 2025 ರಲ್ಲಿ 14 ವರ್ಷಗಳ ನಂತರ ಬಿಡುಗಡೆಯಾಗಿರುವ “ಸಂಜು ವೆಡ್ಸ್ ಗೀತಾ ಭಾಗ 2” ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳುಮಾಡಿದೆ. ಅದೇ ನಾಗಶೇಖರ್ ನಿರ್ದೇಶನ ಮಾಡಿದ್ದಾ..? ಈ ಚಿತ್ರ ಎಂದು ಅನುಮಾನ ಮೂಡುತ್ತದೆ.
ನಾಗಶೇಖರ್ ಕಥೆಯ ನಿರೂಪಣೆಯಲ್ಲಿ ಎಡವಿದರಾ..? ಅನ್ನಿಸುತ್ತದೆ. ಕನ್ನಡ ಚಿತ್ರಗಳ ಇತಿಹಾಸದಲ್ಲಿ ಹೆಸರಾಗುವಂತ ಚಿತ್ರಗಳನ್ನು ನೀಡಿದ ನಾಗಶೇಖರ್ ಯಾಕೆ ಹೀಗೆ ಎಡವಿದರು ಗೊತ್ತಿಲ್ಲ…?
ಸಿನಿಮಾ ಸ್ವಿಟ್ಜರ್ಲೆಂಡ್ ನ ಅದ್ಬುತ ಸ್ಥಳಗಳಲ್ಲಿ ಚಿತ್ರೀಕರೀಸಿದ್ದಾರೆ. ಒಂದೊಂದು ಫ್ರೇಮ್ ಬಹಳ ಅದ್ದೂರಿಯಾಗಿ ಮೂಡಿಬಂದಿದೆ. ನಿರ್ಮಾಪಕ ಛಲವಾಧಿ ಕುಮಾರ್ ರವರ ಹಣ ಶಿಡ್ಲಘಟ್ಟ ದಿಂದ ಸ್ವಿಟ್ಜರ್ಲೆಂಡ್ ವರೆಗೂ ನೀರಿನಂತೆ ಹರಿದಿರುವುದು ತೆರೆಯ ಮೇಲೆ ಕಾಣುತ್ತದೆ.
ಸತ್ಯ ಹೆಗಡೆಯ ಕ್ಯಾಮಾರದಲ್ಲಿ ಚಿತ್ರದ ಪ್ರತೀ ಫ್ರೇಮ್ ತುಂಬಾ ಚನ್ನಾಗಿ ರಿಚ್ಚಾಗಿ ಕಾಣುತ್ತದೆ.

ಹಿನ್ನೆಲೆ ಸಂಗೀತ, ಹಾಗೂ ಎರಡು ಹಾಡುಗಳು ಕೇಳುವಂತಿದೆ ಆದರೆ ಶ್ರೀಧರ್ ಸಂಭ್ರಮ್ ರವರ ಸಂಗೀತದಲ್ಲಿ ಇನ್ನೂ ಹಾಡುಗಳು ಚನ್ನಾಗಿ ಮೂಡಿ ಬಂದಿದ್ದರೆ ಚನ್ನಾಗಿರುತ್ತಿತ್ತು.
ಮೊದಲ ಸಂಜು ವೆಡ್ಸ್ ಗೀತಾ ಚಿತ್ರದ ಹಾಡುಗಳ ಸಮಕ್ಕೆ ಯಾವ ಹಾಡುಗಳು ಪೈಪೋಟಿಗೆ ಇಳಿದಿಲ್ಲ ಎನ್ನುವುದೇ ಬೇಸರದ ಸಂಗತಿ.
ಇನ್ನು ಇಲ್ಲಿ ನಾಯಕ ನಟನಾಗಿ ಶ್ರೀನಗರ ಕಿಟ್ಟಿ, ರಚಿತರಾಮ್ ನಾಯಕಿಯಾಗಿ ಚಿತ್ರದ ಪ್ರಮುಖ ಪಾತ್ರದಲ್ಲಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಇಬ್ಬರ ಜೋಡಿ ಚನ್ನಾಗಿ ಕಾಣುತ್ತದೆ. ಆದರೆ ಇಲ್ಲಿ ಪ್ರೀತಿ ಫೇಲಾಗಿದೆ, ಲವ್ ಸೆಂಟಿಮೆಂಟ್ ಹೈಲೈಟ್ ಆಗಿಲ್ಲ. ಸಿನಿಮಾದ ಕೊನೆಯ ದೃಶ್ಯ ಇನ್ನೂ ಚನ್ನಾಗಿ ಮೂಡಿ ಬರಬೇಕಿತ್ತು ಬೇಗ ಮುಗಿಸಿದರೇನೋ ಅನ್ನಿಸುತ್ತದೆ.

ಇದು ಸಂಜು ವೆಡ್ಸ್ ಗೀತಾ ಎನ್ನುವುದಕ್ಕಿಂತ
ಇಡ್ಲಿ ವೆಡ್ಸ್ ಸೀರೆ ಎನ್ನಬಹುದು.
ಸಿನಿಮಾದಲ್ಲಿ ಸೀರೆಯದೇ ಒಂದು ಪ್ರಮುಖ ಪಾತ್ರ ಇದೆ. ಇಲ್ಲಿ ನಾಯಕ, ನಾಯಕಿಯರ ಪ್ರೀತಿಗೆ ಕಾರಣವೇ ಸೀರೆ ಮತ್ತು ಇಡ್ಲಿ.
ಒಬ್ಬ ಕೋಟ್ಯಾಧಿಪತಿ ಶ್ರೀಮಂತನ ಮಗಳು ಗೀತ ಮಿಸ್ ಕರ್ನಾಟಕ ಸ್ಪರ್ಧೆಗೆ ಹೋಗುವಾಗ ಅಚಾನಕ್ಕಾಗಿ ರಸ್ತೆಯಲ್ಲಿ ಸೀರೆ ಮಾರುವ ನಾಯಕ ಸಂಜು ಸಿಗುತ್ತಾನೆ ಅಲ್ಲಿ ಮೊದಲಿಗೆ ನಾಯಕಿಗೆ ಸೀರೆ ಕೊಟ್ಟು ಸ್ಪರ್ಧೆಗೆ ಕಳಿಸುತ್ತಾನೆ. ಅದರಿಂದ ಗೆದ್ದ.? ನಾಯಕಿ ನಿತ್ಯ ಅವನನ್ನು ಹುಡುಕುವುದೇ ಕಾಯಕ ಆಗ ಅವರ ಮಧ್ಯೆ ಕೊಂಡಿಯಾಗುವುದೇ ಮತ್ತೊಂದು ವಸ್ತು ಇಡ್ಲಿ.
ನಾಯಕ ತಾನು ದುಡಿದ ಹಣದಲ್ಲಿ ಪ್ರತೀ ದಿನ ಬಡವರಿಗೆ ಎರಡು ಇಡ್ಲಿ ದಾನ ಮಾಡುತ್ತಾನೆ. ಇದರಿಂದ ಪ್ರೇರಿತಳಾದ ನಾಯಕಿ ನೂರಾರು ಜನಕ್ಕೆ ಇಡ್ಲಿ ದಾನ ಮಾಡುತ್ತಾಳೆ. ನಂತರ ನಾಯಕಿ ಇಡ್ಲಿಗೆ ಜೇನು, ಮತ್ತೊಂದರಲ್ಲಿ ವಿಷ ಬೆರೆಸಿ ಕೇಳುತ್ತಾಳೆ ನನ್ನ ಪ್ರೀತಿಸುವುದಾದರೆ, ಜೇನು ಬೆರೆತ ಇಡ್ಲಿ ತಿನ್ನಿಸು, ಇಲ್ಲದಿದ್ದರೆ ವಿಷ ಬೆರಸಿದ ಇಡ್ಲಿ ತಿನ್ನಿಸು ಅಂತ ಪ್ರೇಮ ನಿವೇದನೆಗೆ ಇಡ್ಲಿಯ ಮೊರೆ ಹೋಗುತ್ತಾಳೆ.
ಇಲ್ಲಿಂದ ಶುರವಾದ ಪ್ರೇಮ ಕಥೆ, ಬೀದಿಯಲ್ಲಿ ರೇಷ್ಮೆ ಸೀರೆ ಮಾರುವ.? ನಾಯಕ ಮುಂದೆ ಶಿಡ್ಲಘಟ್ಟ ಸೀರೆ ಎಂಬ ಹೆಸರಿನಲ್ಲಿ ವಿಶ್ವ ಮಟ್ಟದಲ್ಲಿ ಬ್ರಾಂಡ್ ಮಾಡುತ್ತಾನೆ. ಕೋಟ್ಯಾಧೀಶ್ವರ ಅಪ್ಪನ ಮಟ್ಟಕ್ಕೆ ಬೆಳೆಯಲು ಸಂಜು ಮತ್ತು ಗೀತ ರಾತ್ರಿ ಹಗಲು ದುಡಿದು ಶಿಡ್ಲಘಟ್ಟ ಸೀರೆ ಎಂಬ ಬ್ರಾಂಡ್ ಅನ್ನು ವಿಶ್ವ ಮಟ್ಟಕ್ಕೆ ಬೆಳೆಸುತ್ತಾರೆ. ಕಣ್ಣು ಮಿಟುಕಿಸುವುದರಲ್ಲಿ ಐಶಾರಾಮಿ ಬಂಗಲೆ, ಕಾರು ಜೀವನ ಎಲ್ಲಾ ಗಳಿಸಿಬಿಡುತ್ತಾರೆ. ವಿಷಯ ಚನ್ನಾಗಿದೆ.

ಸಂಜು, ಗೀತರ ಹತ್ತನೇ ವೆಡ್ಡಿಂಗ್ ಸಂಭ್ರಮದಲ್ಲಿ ಕಥೆ ಶುರುವಾಗುತ್ತದೆ ಮಿಕ್ಕಿದ್ದೆಲ್ಲಾ ನೆನಪುಗಳು. ಫ್ಲಾಷ್ ಬ್ಯಾಕ್ ನಲ್ಲಿ ಚಿತ್ರ ಸಾಗುತ್ತದೆ. ಕೆಲವೂಮ್ಮೆ ವಾಸ್ತವ ಯಾವುದು, ಫ್ಲಾಷ್ ಬ್ಯಾಕ್ ಯಾವುದು ಎನ್ನುವುದು ಗೊಂದಲ.
ಮಗಳಿಗೆ ಅನ್ನಕ್ಕೆ ವಿಷ ಇಟ್ಟು ಅಬಾರ್ಷನ್ ಮಾಡಿಸುವ ಅಪ್ಪನಾಗಿ ಸಂಪತ್ ರಾಜ್ ಕಥೆಯ ಖಳನಾಗಿ ಕಾಣಿಸಿಕೊಂಡಿದ್ದಾರೆ.
ರಂಗಾಯಣ ರಘು, ಸಾಧುಕೋಕಿಲ ರಂತಹ ಕಲಾವಿದರು ಚಿತ್ರದಲ್ಲಿದ್ದರು ಹಾಸ್ಯ ಅನ್ನೋದು ಮರೀಚಿಕೆಯಾಗಿದೆ. ರಂಗಾಯಣ ರಘು ಅಂತು ಒಂದೆರಡು ಸೀನಿಗೆ ಸೀಮಿತವಾಗಿದ್ದಾರೆ, ಸಾಧು ಹಾಸ್ಯಕ್ಕೆ ಜಾಗವಿಲ್ಲ, ಇನ್ನು ತಬಲನಾಣಿ ಶಿಡ್ಲಘಟ್ಟದ ಕುಡುಕನ ಪಾತ್ರದ. ಸೀರೆ ವ್ಯಾಪಾರಿಯಾಗಿ ನಟಿಸಿದ್ದಾರೆ. ಬಾಯಿ ಬಿಟ್ಟರೆ ತೆಲುಗಿನ ಮಾತುಗಳು ಹೊರ ಬರುತ್ತವೆ.
ಚೇತನ್ ಚಂದ್ರ ಡಾಕ್ಟರ್ ಆಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.

ತುಪ್ಪದ ಹುಡುಗಿ ರಾಗಿಣಿ ಮತ್ತೆ ತುಪ್ಪ ಸುರಿಸಲು ತೆರೆಮೇಲೆ ಗ್ಲಾಮರ್ ಆಗಿ ಕುಣಿದಿದ್ದಾರೆ.ಇದೇ ಇಂಟರ್ವೆಲ್ ಟ್ವಿಷ್ಟ್. ರಾಗಿಣಿಯನ್ನು ಕಣ್ತುಂಬಿಕೊಳ್ಳುವ ಪ್ರೇಕ್ಷಕ ತುಪ್ಪದಲ್ಲಿ ಜಾಮೂನು ಅದ್ದಿ ತಿಂದಂತಾಗುತ್ತಾನೆ. ರಾಗಿಣಿ ಒಂದೇ ಹಾಡಿಗೆ ಸೀಮಿತವಾದ ಅತಿಥಿಯಾಗಿ ಅಭಿನಯಿಸಿದ್ದಾರೆ.

ಪ್ರೇಕ್ಷಕನಿಗೆ ಕೊಟ್ಟ ಹಣಕ್ಕೇನು ಮೋಸವಿಲ್ಲ. ಸ್ವಿಜರ್ಲೆಂಡ್ ನಲ್ಲಿನ ಸುಂದರ ತಾಣಗಳನ್ನು ಸವಿಯಬಹುದು, ಎರಡು ಹಾಡುಗಳು, ರಾಗಿಣಿಯ ಡ್ಯಾನ್ಸ್, ವಿಧಿಯ ಕೈಗೆ ಸಿಕ್ಕ ಇಬ್ಬರು ಸಿರಿವಂತ ಪ್ರೇಮಿಗಳ ಒದ್ದಾಟವನ್ನು ನೋಡಬಹುದು. ಇಡ್ಲಿ ಜೊತೆ ಜೇನನ್ನು ಸವಿಯಬಹುದು, ರೇಷ್ಮೆ ಸೀರೆ ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ಕಾಣಬಹುದು.
2025ರ ಮೊದಲ ಸೂಪರ್ ಹಿಟ್ಚ್, ಬ್ಲಾಕ್ ಬಸ್ಟರ್ ಚಿತ್ರ ಇದಾಗಬೇಕಿತ್ತು ಎನ್ನುವುದು ನಮ್ಮ ನಿರೀಕ್ಷೆಯಾಗಿತ್ತು.

ಒಟ್ಟಿನಲ್ಲಿ ಈ ವರ್ಷದ ಅದ್ದೂರಿ ನಿರ್ಮಾಣದ ಚಿತ್ರ ಎನ್ನಬಹುದು. ಶಿಡ್ಲಘಟ್ಟದಿಂದ ಸ್ವಿಜರ್ಲೆಂಡ್ ವರೆಗೂ ನೀರಿನಂತೆ ನಿರ್ಮಾಪಕ ಹಣ ಹರಿಸಿದ್ದಾರೆ. ನಿರ್ಮಾಪಕ ಗೆಲ್ಲಬೇಕು, ಕನ್ನಡ ಚಿತ್ರರಂಗ ಉಳಿಯಬೇಕು ಎನ್ನುವುದು ನಮ್ಮ ಆಶಯ.