Sanju movie review. ‘ವಿಧಿಯ ಸಂಚಿಗೆ ಸಿಲುಕಿದ ಸಂಜು”…ಸಂಜು ಚಿತ್ರ ವಿಮರ್ಶೆ.
ಸಂಜು ಚಿತ್ರ ವಿಮರ್ಶೆ
ರೇಟಿಂಗ್ – 3/5
ಚಿತ್ರ: ಸಂಜು
ನಿರ್ಮಾಪಕರು : ಸಂತೋಷ್ ಡಿ.ಎಂ.
ನಿರ್ದೇಶನ: ಯತಿರಾಜ್
ಸಂಗೀತ – ವಿಜಯ್ ಹರಿ
ಛಾಯಾಗ್ರಹಣ – ವಿದ್ಯಾ ನಾಗೇಶ್
ತಾರಾಗಣ: ಮನ್ವಿತ್, ಸಾತ್ವಿಕಾ, ಬಲ ರಾಜವಾಡಿ, ಯತಿರಾಜ್, ಕುರಿ ರಂಗ, ಸುಂದರಶ್ರೀ, ಸಂಗೀತ, ಅಪೂರ್ವ, ಬೌ ಬೌ ಜಯರಾಮ್, ಮಹಂತೇಶ್, ಪ್ರಕಾಶ್ ಶೆಣೈ, ಕಾತ್ಯಾಯಿನಿ ಮೊದಲಾದವರು ಅಭಿನಯಿಸಿದ್ದಾರೆ.

“ವಿಧಿಯ ಸಂಚಿಗೆ ಸಿಲುಕಿದ ಸಂಜು”
ಕಥೆ, ಪರಿಸರವೇ ಮುಖ್ಯಪಾತ್ರಗಳಾಗಿರುವ ಸಂಜು ಮಲೆನಾಡಿನ ಸಿರಿಯೊಳಗೆ ದೃಶ್ಯಗಳ ಪಯಣ ಸಾಗಿದಂತೆ ಭಾಸವಾಗುತ್ತದೆ.
ಇದು ನಿರ್ದೇಶಕರು ಮೊದಲೇ ಹೇಳಿರುವಂತೆ ಕೇವಲ ಇದೊಂದು ಪ್ರೇಮಕಥೆ ಅಲ್ಲ ಎಂದರು ಇದು ನಿಜಕ್ಕೂ ಒಂದು ಪ್ರೇಮ ಕಥೆ. ಇಲ್ಲಿ ಮರ ಸುತ್ತುವ, ಜಂಜಡದ ಪ್ರೇಮವಿಲ್ಲ.
ಇಲ್ಲಿ ಒಬ್ಬ ತಾಯಿಯ ಮಮತೆಯ ಪ್ರೇಮ ಹೃದಯ ಮುಟ್ಟುತ್ತದೆ. ಚಿತ್ರದ ಮುಖ್ಯ ಜೀವಾಳ ಎಂದರೆ ತಾಯಿಬೇರು ನಟಿ ಸಂಗೀತ ಒಬ್ಬ ತಾಯಿಯಾಗಿ ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಸೆಳೆಯುತ್ತಾರೆ.

ಒಬ್ಬ ತಾಯಿ ತನ್ನ ಮಗ ಪ್ರೇಮದ ಬಲೆಗೆ ಬಿದ್ದು ಹುಡುಗಿ ಆತನಿಗೆ ಕೈ ಕೊಟ್ಟಾಗ ಅವನು ಕುಡಿತದ ದಾಸನಾಗಿ ಬದುಕು ಹರಿದು ಹೋಗುವ ಸಮಯ ಬಂದಾಗ, ಆ ತಾಯಿ ತನ್ನ ಮಗನನ್ನು ಉಳಿಸಿಕೊಳ್ಳಲು ಏನು ಮಾಡಬಹುದು ಎಂದು ಚಿತ್ರದಲ್ಲಿ ಬಹಳ ಚನ್ನಾಗಿ ಬಿಂಬಿಸಲಾಗಿದೆ. ಮಗನನ್ನು ಮನೆಯಲ್ಲಿ ಕೂಡಿಹಾಕಿ ಅವನಿಗಾಗಿ ತಾನೇ ಕುಡುಕರ ಅಡ್ಡೆಗೆ ಕಾಲಿಟ್ಟು ಎಲ್ಲರ ಕೆಟ್ಟ ಮಾತುಗಳಿಗೆ ಕಿವಿಕೊಡದೆ ಮಗನಿಗಾಗಿ ಮದ್ಯವನ್ನು ತಂದುಕೊಡುವ ದೃಶ್ಯ ಮನ ಮುಟ್ಟುತ್ತದೆ. ಆ ಪಾತ್ರವನ್ನು ಸಂಗೀತ ಪ್ರೇಕ್ಷಕರ ಮನ ಕರಗುವಂತೆ ಅಭಿನಯಿಸಿದ್ದಾರೆ. ಈ ದೃಶ್ಯಗಳನ್ನು ಕಟ್ಟಿಕೊಟ್ಟ ನಿರ್ದೇಶಕರ ಜಾಣ್ಮೆಯನ್ನು ಮೆಚ್ಚಲೇ ಬೇಕು. ಪತ್ರಕರ್ತ ಯತಿರಾಜ್ ಆರು ಸಿನಿಮಾಗಳಿಗೆ ಆಕ್ಷನ್ ಕಟ್ಟ್ ಹೇಳಿದ್ದಾರೆ ಅವುಗಳಲ್ಲಿ “ಸಂಜು” ಚಿತ್ರ ಕೂಡ ಒಂದು.

ಮಲೆನಾಡಿನ ಪ್ರಕೃತಿಯೊಳಗೊಂದು ಒಂಟಿ ಬಸ್ ನಿಲ್ದಾಣ, ಬಸ್ಸಿಗಾಗಿ ಬರುವ ಇಬ್ಬರು ವ್ಯಕ್ತಿಗಳು. ಮನ್ವಿತ್ (ಸಂಜು) ಹಾಗೂ ಸಾತ್ವಿಕ (ಸರಸ್ಪತಿ) ಈ ಇಬ್ಬರು ಬೇರೆಯದೇ ಸಮಸ್ಯೆಗಳನ್ನು ಹೊತ್ತು ಬಂದರು ಅಂತಿಮವಾಗಿ ಇಬ್ಬರ ಸಮಸ್ಯೆಗಳಿಗೆ ಒಬ್ಬರಿಗೊಬ್ಬರು ಕಾರಣವಾಗಿರುತ್ತಾರೆ ಎನ್ನುವುದನ್ನು ನಿರ್ದೇಶಕರು ಚನ್ನಾಗಿ ನಿರೂಪಿಸಿದ್ದಾರೆ.
ಲೋ ನೋಡ್ರೋ ಹೊಸ ಹೀರೋ ಬಂದಿದ್ದಾನೆ ಎಂಥೆಂತ ಹೀರೋ ನೋಡಿಲ್ಲ ನಾವು ಎಂದು ಟಾಂಗ್ ಕೊಡುವ ಕೆಲವು ಕಿಡಿಗೇಡಿಗಳಿಗೆ ತನ್ನ ಹೀರೊಯಿಸಮ್ ತೋರಿಸುವ ನಾಯಕ ಸಂಜು ( ಮನ್ವಿತ್ ) ಬಹಳ ಕಷ್ಟ ಪಟ್ಟು ಅಭಿನಯಿಸಿದ್ದಾರೆ. ಆದರೆ ಪ್ರೇಕ್ಷಕರು ಸ್ವೀಕರಿಸಬೇಕಷ್ಟೆ.

ಇನ್ನು ಸರಸ್ಪತಿ ( ಸಾತ್ವಿಕ ) ಮೊದಲರ್ಧ ಮಾತೇ ಇಲ್ಲದೇ ಮೂಕಾಭಿನಯಕ್ಕೆ ನಿರ್ದೇಶಕರು ಸಮ್ಮತಿಸಿದ್ದಾರೆ. ಅಲ್ಲಲ್ಲಿ ಕೆಲವೇ ಡೈಲಾಗ್ ಗಳ ಮೂಲಕ ಸರಸ್ಪತಿ ನಾನು ಮೂಗಿ ಅಲ್ಲ, ಮೌನವ್ರತ ಮಾಡುತ್ತಿಲ್ಲ ಎಂದು ಹೇಳಿ ಚಿತ್ರದ ಎರಡನೇ ಹಂತದಲ್ಲಿ ಹಂತ ಹಂತವಾಗಿ ಪ್ರೇಕ್ಷಕರ ಮುಂದೆ ತಮ್ಮ ಕಥೆ ಬಿಚ್ಚಿಡುತ್ತಾರೆ. ಜನ ಅಯ್ಯೋ ಪಾಪ ಹೀಗಾಗಬಾರದು ಅಂದು ಕೊಳ್ಳುವಷ್ಟರಲ್ಲಿ ಎಲ್ಲಾ ಮುಗಿದು ಹೋಗಿರುತ್ತದೆ. ಸಿನಿಮಾ ಕೂಡ.
ಸಾತ್ವಿಕ ಸಹಜವಾಗಿ ನಿರ್ದೇಶಕರು ಹೇಳಿಕೊಟ್ಟಷ್ಟು ಮಾತ್ರ ಅಭಿನಯಿಸಿ ಪಾತ್ರಕ್ಕೆ ಕಳೆ ತುಂಬಿದ್ದಾರೆ.
ನಿರ್ದೇಶಕ ಯತಿರಾಜ್ ಎಂದಿನಂತೆ ಬಣ್ಣ ಹಚ್ಚಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಮಲೆನಾಡಿನ ಹೊಟೆಲ್ ಮಾಲೀಕರಾದ ಮಲೆಯಾಳದ ಕುಟ್ಟಿ ದಂಪತಿಗಳಾಗಿ ಯತಿರಾಜ್ ಹಾಗೂ ಅಪೂರ್ವ ಸಿಕ್ಕಾಪಟ್ಟೆ ಮಿಂಚಿದ್ದಾರೆ.

ಇಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ, ಚಿತ್ರ ಮಾನವೀಯತೆಗಳ ಸರಣಿಯೊಂದಿಗೆ ಕೂಡಿದೆ.
ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಯನ್ನು ಯತಿರಾಜ್ ನಿರ್ದೇಶನದ ಜೊತೆಗೆ ನಿಭಾಯಿಸಿದ್ದಾರೆ.
ಮಲೆನಾಡಿನ ಸೌಂದರ್ಯವನ್ನು ಛಾಯಾಗ್ರಾಹಕ ನಾಗೇಶ್ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ ವಿಜಯ ಹರಿ.
ಒಟ್ಟಿನಲ್ಲಿ ಒಂದು ಹೆಣ್ಣಿನ ಸುತ್ತಾ ತಿರುಗುವ ಅಮಾಯಕಥೆ, ದರ್ಪ ಹಾಗೂ ಅಸಹಾಯಕಥೆಯ ಸಂಜುವನ್ನು ಪ್ರೇಕ್ಷಕರು ನೋಡಲು ಯಾವುದೇ ಅಡ್ಡಿಯಿಲ್ಲ ಎನ್ನಹುದು. ಸಂಜು ಚಿತ್ರಕ್ಕೆ ಯಶಸ್ಸಾಗಲಿ ಎಂಬುದು ನಮ್ಮ ಆರೈಕೆ ಅಷ್ಟೆ.
.
.