Sambhvami yuge yuge movie review “ಸಂಭವಾಮಿ ಯುಗೇ ಯುಗೇ” ಚಿತ್ರ ವಿಮರ್ಶೆ.

“ಸಂಭವಾಮಿ ಯುಗೇ ಯುಗೇ” ಚಿತ್ರ ವಿಮರ್ಶೆ.
ಇದು ಶ್ರೀಕೃಷ್ಣ ಭೂಮಿ ಮೇಲೆ ಅಧರ್ಮ, ಅನೀತಿ ಹೆಚ್ಚಾದಾಗ ಅದನ್ನು ನಾಶಗೊಳಿಸಿ ಧರ್ಮವನ್ನು ಎತ್ತಿ ಹಿಡಿಯಲು ಮತ್ತೆ ಮತ್ತೆ ಜನ್ಮ ಎತ್ತಿ ಬರುತ್ತೇನೆ ಎನ್ನುವುದನ್ನು ಗೀತೆಯಲ್ಲಿ ಹೇಳಿದ್ದಾರೆ. ಆದರೆ ಈ ವಾರ ತೆರೆ ಕಂಡ ಚಿತ್ರ “ಸಂಭವಾಮಿ ಯುಗೇ ಯುಗೇ” ಚಿತ್ರಕ್ಕೂ ಇದಕ್ಕೂ ಯಾವುದೇ ಸಂಭಂದವಿಲ್ಲ.
ಅದೊಂದು ಗ್ರಾಮ, ಅಲ್ಲೊಬ್ಬ ಗ್ರಾಮ ಪಂಚಾಯತಿ ಅಧ್ಯಕ್ಷ ಅವನಿಗೆ ಊರಿನ ಮೇಲೆ ಉಸಾಬರಿ, ಕಾಳಜಿ ಜಾಸ್ತಿ ಎನ್ನುವುದಕ್ಕೆ  ಊರಿನ ಮನೆಗಳ ಮುಂದೆ ನೀರಿನ ಕೊಳಾಯಿ ಹಾಕಿಸಿದ್ದಾನೆ, ಹಾಲಿನ ಡೈರಿ ಮಾಡಿಸಿದ್ದಾನೆ ಎನ್ನುವ ಬಿಲ್ಡಪ್ ಡೈಲಾಗ್ ಗಳು ಕೇಳಿಬರುತ್ತದೆ. ಹಾಗೆ ವಿಲನ್ ಒಬ್ಬ ಹೇಳುತ್ತಾನೆ ಇದೆಲ್ಲಾ ಸರ್ಕಾರದಿಂದ ಜನರ ಹಣದಿಂದ ಮಾಡಿಸಿರೋದು ಅವನೇನು ಮನೆಯಿಂದ ತಂದಿದ್ದಾನ ಸುಮ್ಮನೆ ಜನರ ಮುಂದೆ ಬಿಲ್ಡಪ್ ಕೊಡುತ್ತಾನೆ ಎನ್ನುವ ಡೈಲಾಗ್ ನಿಂದ ಅವನ ಹೀರೋಯಿಸಂಗೆ ಪುಲಿಸ್ಟಾಪ್ ಇಟ್ಟಿದ್ದಾರೆ ನಿರ್ದೇಶಕರು.
ಅವನು ಊರಿನ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಊರ ಹೆಣ್ಣುಮಕ್ಕಳ ಎದೆಯಲ್ಲಿ ಅವಲಕ್ಕಿ ಕುಟ್ಟವುದರಲ್ಲೇ ನಿಪುಣ ಎನ್ನುವುದನ್ನು ನಿರ್ದೇಶಕ ಚೇತನ್ ಚಂದ್ರಶೇಖರ್ ನಿರೂಪಿಸಿದ್ದಾರೆ.  ಕಥೆ 80ರ ದಶಕದ ಹಳೆಯದ್ದು ಎನಿಸಿದರು, ನ್ಯಾಯಲಯದಲ್ಲಿ ಈ ಮೊಕದ್ದೊಮ್ಮೆಯನ್ನು 2023ಕ್ಕೆ ಮುಂದೂಡಲಾಗಿದೆ ಎನ್ನುವುದರ ಮೂಲಕ ಇದು ಈ ಕಾಲದ ಚಿತ್ರ ಎನ್ನುವುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡಿದ್ದಾರೆ.
ನಟ ಜೈಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಬಹಳ ಶ್ರಮ ವಹಿಸಿದ್ದಾರೆ ನಾಯಕಿ ಕೂಡ ಅಷ್ಟೇ ಪ್ರಯಾಸ ಪಟ್ಟಿದ್ದಾರೆ.
ಇನ್ನು ಈ ಊರಿಗೆ ವರ್ಗವಾಗಿ ಬರುವ ಕ್ಷಮಿಸಿ ಜಿಲ್ಲೆಗೆ ವರ್ಗವಾಗಿ ಬರುವ ಜಿಲ್ಲಾಧಿಕಾರಿ (ಪ್ರಮೋದ್ ಶೆಟ್ಟಿ) ಜಿಲ್ಲೆಯ ಸಮಸ್ಯೆಗಿಂತ ಊರಿನ ದೇವಾಲಯದಲ್ಲಿ ಅರ್ಚಕರು ನನಗಿಂತ ಮೊದಲು ನಾಯಕ ಗ್ರಾಮ ಪಂಚಾಯತಿ ಅಧ್ಯಕ್ಷನಿಗೆ ಗೌರವ ಕೊಟ್ಟರು ಎಂದು ರೇಗುವ ದೃಶ್ಯ ಸಂಪತ್ತಿಗೆ ಸವಾಲ್ ವಜ್ರಮುನಿಯವರ ಪಾತ್ರ ನೆನಪಿಗೆ ಬರುತ್ತೆ.
ಹೀಗೆ ನಾಯಕನಿಗೂ, ಡಿಸಿಗೂ ಬರುವ ದ್ವೇಷ, ಅಸೂಯೆಗಳ ಮದ್ಯೆ ಡಿಸಿ ಸಹೋದರಿ ನಾಯಕಿ (ನಿಶಾ ರಜಪೂತ್) ನಾಯಕನ ಹೃದಯದಲ್ಲಿ ಪ್ರೇಮದ ಹಚ್ಚೆ  ಹಾಕಿ ಬಿಟ್ಟಿರುತ್ತಾಳೆ, ಇದರ ನಡುವೆ ಊರಿನ ಎಂ.ಎಲ್.ಎ. ಹಾಗೂ ಅವನ ಚಿಲ್ಲರೆ ರೌಡಿ ಪಟಾಲಮ್ ಗಳ ದ್ವೇಷ ತೆವಳಿಕೆ ಮತ್ತು ನಾಯಕನ ತಂಗಿಯ ವಕೀಲ ಪ್ರೇಮಿಯ ಬಿಕ್ಕಳಿಕೆಯ ನಡುವೆ ಡಿಸಿ ಅಪಹರಣಕ್ಕೆ ಚಿತ್ರದ ಮೊದಲರ್ಧ ಮುಗಿದು ಹೋಗುತ್ತದೆ.
ದ್ವಿತೀಯಾರ್ಧದಲ್ಲಿ ಡಿಸಿ ಯನ್ನು ಅಪಹರಿಸಿದ್ದು ಯಾರು..?, ಆತ ಕೊಲೆಯಾದನಾ..?, ಅಪಹರಣ ಮತ್ತು ಕೊಲೆಯ ಕೇಸಿನಲ್ಲಿ ಸಿಲುಕಿಕೊಂಡ ನಾಯಕನನ್ನು ಹೇಗೆ ಉಳಿಸುತ್ತಾರೆ, ಎಲ್ಲಾ ಎಂ.ಎಲ್.ಎ ಪಟಾಲಮ್ ಅನ್ನು ನಾಯಕ ಹೇಗೆ ಒದ್ದು ಬುದ್ಧಿ ಕಲಿಸುತ್ತಾನೆ, ಬಿಕ್ಕಳಿಸುವ ಲಾಯರ್ ಹೇಗೆ ಕೋರ್ಟ್ ನಲ್ಲಿ ವಾದಿಸಿ ಗೆದ್ದು ನಾಯಕನ ತಂಗಿಯನ್ನು ಮದುವೆ ಆಗುತ್ತಾನೆ, ನಾಯಕಿ ತನ್ನ ಅಣ್ಣನನ್ನು ಕಳೆದುಕೊಂಡು ನಾಯಕನನ್ನು ಮತ್ತೆ ಸೇರುತ್ತಾಳಾ.?, ನಾಯಕ ತನಗೆ ಅಂಟಿದ ಕೊಲೆ ಅಪವಾದ ದಿಂದ ಹೇಗೆ ಹೊರಬಂದು ನಾಯಕಿಯನ್ನು ಪಡೆಯತ್ತಾನಾ..? ಎನ್ನುವುದನ್ನು ತಿಳಿಯಲು ಚಿತ್ರ ಮಂದಿರದಲ್ಲಿ ಸಿನಿಮಾ ನೋಡಬೇಕಾಗುತ್ತದೆ.
ಇನ್ನು ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ಅದರಲ್ಲೂ ಲೀಲಾಜಾಲವಾಗಿ ನಗುನಗುತ್ತಲೇ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ ಹಿರಿಯ ನಟಿ ಸುಧಾರಾಣಿ.

ಪ್ರಮೋದ್ ಶೆಟ್ಟಿ, ಸುಧಾರಾಣಿ, ವಿಕ್ಟರಿವಾಸು , ರಾಜೇಂದ್ರ ಕಾರಂತ್, ಅಶ್ವಿನ್ ಹಾಸನ್, ಮಧುರಗೌಡ,, ಅಶೋಕ್ ಕುಮಾರ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಅಶ್ವಿನ್ ಹಾಸನ್ ಸಿ.ಐ.ಡಿ ಅಧಿಕಾರಿಯಾಗಿ ಖಡಕ್ಕಾಗಿ ಕಾಣಿಸುತ್ತಾರೆ, ಅಷ್ಟೇ ಅಲ್ಲದೇ ಅಶ್ವಿನ್ ಅವರಿಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಸಫಲವಾಗಿದ್ದಾರೆ.

ನಿರ್ದೇಶಕ, ನಟ ವಿಕ್ಟರಿ ವಾಸು ಎಂ.ಎಲ್.ಎ. ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಪ್ರಮೋದ್ ಶೆಟ್ಟಿ ಡಿ.ಸಿ. ಪಾತ್ರದಲ್ಲಿ ಮಿಂಚಿದ್ದಾರೆ.

ಸಿನಿಮಾ ಹಳ್ಳಿಗಳಲ್ಲಿ ನಡೆಯುವ ರಾಜಕೀಯಗಳ ಜೊತೆಗೆ ನಿಜ ರಾಜಕೀಯವನ್ನು ನಿರ್ದೇಶಕರು ತೆರೆಗೆ ತರಲು ಕಷ್ಟ ಪಟ್ಟಿದ್ದಾರೆ. ಯಾವುದೇ ಮುಜುಗರ ತರುವ ದೃಶ್ಯಗಳಿಲ್ಲದೇ ಆರಾಮವಾಗಿ ಮನೆ ಮಂದಿ ಕೂತು ನೋಡಬಹುದಾದ ಚಿತ್ರ ಸಂಭವಾಮಿ ಯುಗೇ ಯುಗೇ

ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಪೂರನ್ ಶೆಟ್ಟಿಗಾರ್ ಸಂಗೀತ, ಫ್ರಾನ್ಸ್ ಕ್ಲಿನ್ ರಾಕಿ ಹಿನ್ನೆಲೆ ಸಂಗೀತ, ಗೀತಾ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿದೆ.
ನಿರ್ಮಾಪಕರಾದ ಶ್ರೀಮತಿ ಪ್ರತಿಭಾ ರವರು ಸಿನಿಮಾಗೆ ಚನ್ನಾಗಿ ಹಣ ಖರ್ಚು ಮಾಡಿದ್ದಾರೆ. ಒಳ್ಳೆಯ ಚಿತ್ರ ತೆಗೆಯಲು ಧಾರಾಳವಾಗಿ ಹಣ ಹಾಕುವ ಇಂತಹ ಒಳ್ಳೆಯ ನಿರ್ಮಾಪಕರಿಗೆ ಒಳ್ಳೆಯದಾಗ ಬೇಕು. ನಿರ್ಮಾಪಕರು ಗೆದ್ದರೆ ಒಂದಷ್ಟು ಸಿನಿಮಾಗಳು ಬರುತ್ತವೆ. ಖಂಡಿತವಾಗಿ ಪ್ರೇಕ್ಷಕರು ಸಿನಿಮಾ ನೋಡಿ ಚಿತ್ರತಂಡವನ್ನು ಹಾಗೂ ಚಿತ್ರ ರಂಗವನ್ನು ಕೈ ಹಿಡಿದು ಪ್ರೋತ್ಸಾಹಿಸುವುದು ಅನಿವಾರ್ಯ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor