“Sambhavami yuge yuhe” movie release on June 21st. ಈ ವಾರ ತೆರೆಗೆ ‘ಸಂಭವಾಮಿ ಯುಗೇ ಯುಗೇ ’
ಈ ವಾರ ತೆರೆಗೆ ‘ಸಂಭವಾಮಿ ಯುಗೇ ಯುಗೇ ’
ರಾಜಲಕ್ಷ್ಮೀ ಎಂಟರ್ ಟೈನ್ಮೆಂಟ್ ಸಂಸ್ಥೆಯಡಿ ಶ್ರೀಮತಿ ಪ್ರತಿಭಾ ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ, ಬರೆದು ನಿರ್ದೇಶನ ಮಾಡಿರುವ ‘ಸಂಭವಾಮಿ ಯುಗೇ ಯುಗೇ’ ಚಿತ್ರವು ಇದೇ ಶುಕ್ರವಾರ (ಜೂನ್ 21) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರಕ್ಕೆ ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದಕ್ಕೂ ಮುನ್ನ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಚೇತನ್ ಅವರಿಗೆ ಇದು ಮೊದಲ ಸ್ವತಂತ್ರ ಪ್ರಯತ್ನ.

ಇದೊಂದು ಗ್ರಾಮೀಣ ಸೊಗಡಿನ ಕಮರ್ಷಿಯಲ್ ಥ್ರಿಲ್ಲರ್ ಚಿತ್ರವಾಗಿದ್ದು, ಮಂಡ್ಯ, ಚೆನ್ನಪಟ್ಟಣ, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಈ ಹಿಂದೆ ‘1975’ ಎಂಬ ಚಿತ್ರದಲ್ಲಿ ನಟಿಸಿದ್ದ ಜಯ್ ಶೆಟ್ಟಿ, ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬಿಜಾಪುರ ಮೂಲದ ನಿಶಾ ರಜಪೂತ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ಹಳ್ಳಿ ಉಳಿಯುವುದು ಹೇಗೆ? ಎಂಬ ವಿಷಯಗಳು ‘ಸಂಭವಾಮಿ ಯುಗೇ ಯುಗೇ’ ಚಿತ್ರದ ಕಥಾವಸ್ತು.

‘ಯುವಕರು ಹಳ್ಳಿಯಲ್ಲೇ ನೆಲಸಬೇಕು ಮತ್ತು ಹಾಗೆ ನೆಲೆಸಬೇಕು ಎಂದರೆ ಹಳ್ಳಿಯಲ್ಲಿ ಒಂದಿಷ್ಟು ಕೆಲಸ ಆಗಬೇಕು ಎಂದು ನಾಯಕ ಮುಂದಾಗುತ್ತಾನೆ. ಈ ನಿಟ್ಟಿನಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆ. ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಹಲವು ಅಂಶಗಳು ಈ ಚಿತ್ರದಲ್ಲಿವೆ’ ಎನ್ನುತ್ತಾರೆ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ.

ಚಿತ್ರದ ಕುರಿತು ಮಾತನಾಡುವ ನಾಯಕ ನಟ ಜಯ್ ಶೆಟ್ಟಿ, ‘ಇದೊಂದು ಕೃಷಿ ಮತ್ತು ರೈತರ ಸಿನಿಮಾ. ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆ ಹಳ್ಳಿಯ ಪಂಚಾಯ್ತಿ ಅಧ್ಯಕ್ಷನಾಗುತ್ತಾನೆ. ಮುಂದೇನು ಎಂಬುದು ಚಿತ್ರದ ಕಥೆ. ನಾನು ಹೊಸಬನಾದರೂ ನನ್ನ ಮೇಲೆ ನಂಬಿಕೆ ಇಟ್ಟು, ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು’ ಎನ್ನುತ್ತಾರೆ.

‘ಸಂಭವಾಮಿ ಯುಗೇಯಗೇ’ ಚಿತ್ರದಲ್ಲಿ ಜಯ್ ಶೆಟ್ಟಿ ಮತ್ತು ನಿಶಾ ರಜಪೂತ್ ಜೊತೆಗೆ ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯ, ಅಶೋಕ್ ಕುಮಾರ್, ಮಧುರ ಗೌಡ, ಅಭಯ್ ಪುನೀತ್, ಬಲ ರಾಜವಾಡಿ, ಅಶ್ವಿನ್ ಹಾಸನ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪೂರಣ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ಪ್ರಾಂಕ್ರಿನ್ ರಾಖಿ ಅವರ ಹಿನ್ನೆಲೆ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ನರಸಿಂಹ ಅವರ ಸಾಹಸ ನಿರ್ದೇಶನ, ಗೀತಾ ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.