Royal movie review. ರಾಯಲ್ ಚಿತ್ರ ವಿಮರ್ಶೆ ರಾಯಲ್ ಕನಸ್ಸುಗಳ ರಿಯಾಲಿಟಿ.
ಚಿತ್ರ ವಿಮರ್ಶೆ
Rating – 3/5
ಚಿತ್ರ : ರಾಯಲ್
ನಿರ್ದೇಶಕ : ದಿನಕರ್ ತೂಗುದೀಪ
ನಿರ್ಮಾಪಕ : ಜಯಣ್ಣ, ಬೋಗಣ್ಣ
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಸಂಖೇತ್ MYS
ಸಂಕಲನ : ಕೆ.ಎಂ. ಪ್ರಕಾಶ್
ತಾರಾಗಣ : ವಿರಾಟ್, ಸಂಜನ ಆನಂದ್, ರಂಗಾಯಣ ರಘು, ಅಚ್ಯುತ್, ಛಾಯಾಸಿಂಗ್, ರಘು ಮುಖರ್ಜಿ. ಗೋಪಾಲ್ ಕೃಷ್ಣ ದೇಶಪಾಂಡೆ, ರವಿಭಟ್, ಪ್ರಮೋದ್ ಶೆಟ್ಟಿ, ಅಭಿಲಾಷ್, ಮತ್ತು ಮುಂತಾದವರು.
ರಾಯಲ್ ಚಿತ್ರ ರಾಯಲ್ಲಾಗಿ ನಿರ್ಮಾಣ ಮಾಡಲಾಗಿದೆ ಎನ್ನಬಹುದು. ಜಯಣ್ಣ ಫಿಲಮ್ಸ್ ಸಂಸ್ಥೆಯ ಮೂಲಕ ಜಯಣ್ಣ, ಬೋಗಣ್ಣ ರವರ ನಿರ್ಮಾಣದಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ.
ದಿನಕರ್ ತೂಗೂದೀಪ್ ಒಬ್ಬ ದೊಡ್ಡ ಸ್ಟಾರ್ ನಟನಿಗೆ ಕೊಡುವಂತ ಜಾಗವನ್ನು ಚಿತ್ರದ ಕಥೆಯಲ್ಲಿ ನಟ ವಿರಾಟ್ ಗೆ ನೀಡಿದ್ದಾರೆ. ಎಲ್ಲೋ ಒಂದುಕಡೆ ಪುನೀತ್ ರಾಜಕುಮಾರ್ ರವರ ಅರಸು ಚಿತ್ರದ ನಾಯಕನ ಪಾತ್ರದ ಛಾಯೆ ಅಲ್ಲಿ ಕಾಣಿಸುತ್ತದೆ. ಫೈಟಿಂಗ್ ದೃಶ್ಯಗಳಂತು ದರ್ಶನ್, ವಿನೋದ್, ಶ್ರೀ ಮುರುಳಿ ಯವರ ಚಿತ್ರಗಳಲ್ಲಿ ನೀಡುವಷ್ಟು ಜೋರಾಗಿ ಬಿಲ್ಡಪ್ ಗಳನ್ನು ನೀಡಿದ್ದಾರೆ. ಆದರೆ ಅದನ್ನು ಪ್ರೇಕ್ಷಕನಿಗೆ ಅರಗಿಸಿ ಕೊಳ್ಳುವುದು ಕಷ್ಟವಾಗುತ್ತದೆ. ಪ್ರೇಕ್ಷಕನಿಗಷ್ಟೇ ಅಲ್ಲ ರಾಯಲ್ ಚಿತ್ರದ ನಾಯಕ ನಟ ವಿರಾಟ್ ಗೂ ಕೂಡ ನಿಭಾಯಿಸುವುದು ಕಷ್ಟವಾಗಿದೆ. ಏಕೆಂದರೆ ವಿರಾಟ್ ಇನ್ನೂ ಬೆಳೆಯುತ್ತಿರುವ ನಟ ಕಿಸ್ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ಉದಯೋನ್ಮುಖ ನಟ. ಆತ ಇಷ್ಟು ದೊಡ್ಡ ಪಾತ್ರಗಳನ್ನು ನಿಭಾಯಸಲು ಇನ್ನು ಪಕ್ವವಾಗಬೇಕಿದೆ.
ಒಬ್ಬನೇ ಹತ್ತಾರು ಜನರನ್ನ ಹೊಡೆದುರುಳಿಸುವಷ್ಟು ಸದೃಡನಾಗಿಲ್ಲ. ಹಾಗೆಯೇ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ವನ್ನು ನಿಭಾಯಿಸಬಲ್ಲ ನಿಪುಣನೂ ಅಲ್ಲ. ಆತನೊಬ್ಬ ಇನ್ನೂ ಪ್ರೇಮದ ಅಮಲಿನಲ್ಲಿ ತೇಲಾಡುತ್ತ ಅದರ ಪರಿಮಳವನ್ನು ಪ್ರೇಕ್ಷಕರಿಗೆ ಉಣಬಡಿಸುವ ಧಾವಂತದಲ್ಲಿರುವ ಲವ್ವರ್ ಬಾಯ್. ಆದರೂ ವಿರಾಟ್ ತಮ್ಮ ಅಭಿನಯದ ವಿರಾಟಪರ್ವ ವನ್ನು ಪ್ರೇಕ್ಷಕರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ದಿನಕರ್ ರವರ ಕಥಾವಸ್ತು ಚನ್ನಾಗಿದೆ. ಇಂದು ಆಹಾರದ ಜೊತೆ ವಿಷವನ್ನು ಜನರಿಗೆ ಉಣ ಬಡಿಸುತ್ತಿರುವ ದೊಡ್ಡ ದೊಡ್ಡ ಸಂಸ್ಥೆಗಳ ಬಣ್ಣ ಬಯಲು ಮಾಡುವ ಪ್ರಯತ್ನ ಮಾಡಿದ್ದಾರೆ.
ಕಲಬೆರಕೆ ಆಹಾರದಿಂದ ಇಂದು ಜನರು ಕ್ಯಾನ್ಸರ್ ನಂತಹ ರೋಗಗಳಿಗೆ ತುತ್ತಾಗುತ್ತಿರುವುದು ಹಾಗೆ ಇನ್ನು ಆಟ ಆಡುವ ಹೆಣ್ಣುಮಕ್ಕಳು ವಯಸ್ಸಿಗೆ ಮುಂಚೆಯೇ ದೊಡ್ಡವರಾಗುತ್ತಿರುವುದು, ಇನ್ನು ಹಲವಾರು ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿರುವಿದನ್ನು ಚನ್ನಾಗಿ ಹೆಣೆದಿದ್ದಾರೆ. ನಿಜಕ್ಕೂ ಈ ಚಿತ್ರದ ಕಥೆ ತುಂಬಾ ಗಂಭಿರವಾದದ್ದು.
ಗೋವಾದ ಬೀಚಿನಲ್ಲಿ ಮೋಜಿಗಾಗಿ ಬಂದ ಒಂದಷ್ಟು ಹುಡುಗಿಯರ ಹಾಗೂ ಮದುವೆ ಆಗಿರುವ ಆಂಟಿಗಳ ಕಾಮದ ಹಪಾಹಪಿತನಕ್ಕೆ ಬುದ್ದಿಕಲಿಸುವ, ಅವರಿಂದ ಹಣ ವಸೂಲಿ ಮಾಡಿ ತಕ್ಕ ಪಾಠ ಕಲಿಸುವ ಮುಖಾಂತರ ಚಿತ್ರದ ನಾಯಕನ ಪರಿಚಯವಾಗುತ್ತದೆ.
ಇದೇ ಗುಂಪಿನಲ್ಲಿ ನಾಯಕಿ ಪರಿಚಯವಾದರೂ ಅವಳು ಇಂತಹ ವಿಚಾರಗಳಿಂದ ಹೊರ ಉಳಿದು ಪರಿಶುದ್ದ ಮನಸ್ಸಿನವಳಾಗಿರುತ್ತಾಳೆ.
ನಾಯಕ ಹೇಗಾದರೂ ಸರಿ ಹಣ ಮಾಡಬೇಕು ರಾಯಲ್ಲಾಗಿ ದೊಡ್ಡಬಂಗಲೆ, ಆಳುಕಾಳು, ಐಸಾರಾಮಿ ಹತ್ತಾರು ಕಾರುಗಳೊಂದಿಗೆ ಬದುಕಬೇಕು ಎನ್ನುವ ಆಸೆ ಚಿತ್ರದ ಮತ್ತೊಂದು ಮುಖ.
ಇಂಟರ್ವೆಲ್ ನಂತರ ನಾಯಕ ಅಂದು ಕೊಂಡಂತ ಎಲ್ಲಾ ಸೌಕರ್ಯ, ಐಶ್ವರ್ಯ ಸಿಗುತ್ತದೆ. ಅದು ಹೇಗೆ ಎನ್ನುವುದೇ ಚಿತ್ರದ ಹೈಲೈಟ್ ಮತ್ತು ಟ್ವಿಸ್ಟ್.
ಈ ಚಿತ್ರದ ನಿಜವಾದ ನಾಯಕಿ ಛಾಯಾಸಿಂಗ್ ಏಕೆಂದರೆ ಆಕೆಯ ಪಾತ್ರವೇ ಅಂತದ್ದು ಆಕೆಗೆ ಸಾಮಾಜಿಕ ಕಾಳಜಿ, ಜನಸಾಮಾನ್ಯರ ಆರೋಗ್ಯದ ಬಗ್ಗೆ ಜವಾಬ್ದಾರಿ, ಅನಾಥ ಮಗುವೊಂದೊಕ್ಕೆ ತನ್ನ ಅಮೂಲ್ಯವಾದ ತಾಯ್ತನವನ್ನು ಧಾರೆ ಎರೆಯುವ ಮಮತೆ, ಗಂಡನಾದರೂ ಸರಿ ಸಮಾಜಕ್ಕೆ ದ್ರೋಹ ಬಗೆದರೆ ಧಿಕ್ಕರಿಸಿ ದೂರವಿರುವ ಬದ್ದತೆ, ಒಬ್ಬ ಗಂಡಿನ ಬೆನ್ನ ಹಿಂದೆ ನಿಂತು ಅವನ ಅಷ್ಟು ಒಳ್ಳೆಯ ಕಾರ್ಯಗಳಿಗೆ ತನು,ಮನ,ಧನವನ್ನು ಪ್ರಾಮಾಣಿಕವಾಗಿ ಧಾರೆ ಎರೆಯುವ ತ್ಯಾಗ ಮನೋಭಾವ ಈ ಎಲ್ಲ ಗುಣಗಳಿಂದಾಗಿ ಈ ಚಿತ್ರದ ಪ್ರಧಾನ ಪಾತ್ರ ಛಾಯಾಸಿಂಗ್ ಎನ್ನುವುದರಲ್ಲಿ ಎರಡು ಮಾತಿಲ್ಲ.
ಛಾಯಾಸಿಂಗ್ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಅಚ್ಯತ್ ಕೂಡ ಚಿತ್ರದಲ್ಲಿ ಒಬ್ಬ ಬಿಸಿನೆಸ್ ಮ್ಯಾನ್ ಆಗಿ, ಹಣವೇ ಮುಖ್ಯ ಸಮಾಜದ ಗೊಡವೆ ನನಗೇಕೆ ಎಂದು ಬದುಕುವ ನಂತರ ನಿಜವಾದ ವಾಸ್ತವತೆಯನ್ನು ಅರಿತು ತನ್ನನ್ನು ತಾನು ತಿದ್ದಿಕೊಳ್ಳುವ, ತನ್ನಿಂದ ದೂರವಾದವರ ಅರಸಿ ಪರಿತಪಿಸುವ ಪಾತ್ರದಲ್ಲಿ ಜೀವಿಸಿದ್ದಾರೆ.
ರಘು ಮುಖರ್ಜಿ ಒಂದು ಕಾಲದಲ್ಲಿ ನಾಯಕನಾಗಿ ಹೆಸರು ಮಾಡಿದವರು. ಈ ಚಿತ್ರದಲ್ಲಿ ಖಳ ನಾಯಕನಾಗಿ ಅಬ್ಬರಿಸಿದ್ದಾರೆ. ಆ ನೀಳ ನಿಲುವು, ಆ ಆಕರ್ಷಕ ಮೈಕಟ್ಟು, ಮುಖದಲ್ಲಿನ ಸೌಮ್ಯತೆ, ಅವರಲ್ಲಿನ ಲವ್ವರ್ ಬಾಯ್ ಛಾಯೆ ಇನ್ನೂ ಹಾಗೇ ಇದೆ ಹಾಗಿದ್ದಲ್ಲಿ ಪ್ರೇಕ್ಷಕ ಅವರನ್ನು ಖಳ ನಟನಾಗಿ ಹೇಗೆ ಒಪ್ಪಿಕೊಳ್ಳುತ್ತಾನೆ ಎನ್ನುವುದೇ ಸಮಸ್ಯೆ. ರಘು ಮುಖರ್ಜಿ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ ಆದರೂ ಒಪ್ಪಿಕೊಳ್ಳಲು ಕಷ್ಟ.
ಸಂಜನಾ ಆನಂದ್ ಇಂದಿನ ಕಾಲಘಟ್ಟದಲ್ಲಿ ದ್ಯೇಯಗಳನ್ನಿಟ್ಟು ಕೊಂಡಿರುವ ನ್ಯಾಯಬದ್ದವಾಗಿ ಜೀವಿಸುವ ಪಾತ್ರದಲ್ಲಿ ಚನ್ನಾಗಿ ಅಭಿನಯಿಸಿದ್ದಾರೆ. ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಇವರ ಮದ್ಯೆ ಪ್ರೀತಿ ಪ್ರೇಮ ಅರಳೋದೆ ಇಲ್ಲ, ಈಡೀ ಸಿನಿಮಾ ಹಾವು ಮುಂಗಸಿಯಂತೆ ಬುಸುಗುಡುತ್ತಲೇ ಇರುತ್ತಾರೆ.
ರರಂಗಾಯಣ ರಘು ಲಾಯರ್ ಪಾತ್ರದಲ್ಲಿ, ರವಿಭಟ್ ನಾಯಕಿಯ ತಂದೆಯಾಗಿ, ಗೋಪಾಲ್ ಕೃಷ್ಟ ದೇಶಪಾಂಡೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ, ಪ್ರಮೋದ್ ಶೆಟ್ಟಿ ಗೋವಾ ಪೋಲಿಸ್ ಇನ್ಸ್ಪೆಕ್ಟರ್ ಆಗಿ ಹಾಗೂ ಅಭಿಲಾಷ್ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಚರಣ್ ರಾಜ್ ಸಂಗೀತ ಚಿತ್ರಕ್ಕೆ ಪೂರಕವಾಗಿ ಸಾಥ್ ನೀಡಿದೆ. ಒಂದೆರಡು ಹಾಡುಗಳು ಗಮನ ಸೆಳೆಯತ್ತದೆ. ಹಾಗೆ ಸಂಕೇತ್ ರವರ ಛಾಯಾಗ್ರಹಣ ಕಲರ್ ಫುಲ್ ಆಗಿ ಕಣ್ಣಿಗೆ ಹಾಗೂ ಮನಸ್ಸಿಗೆ ಹಿತ ನೀಡುತ್ತದೆ.
ರವಿವರ್ಮ, ನವಕಾಂತ್ ಸಿಂಗ್ ಸಾಹಸ, ವಿ. ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತ ಸಾಹಿತ್ಯ, ಜಾನಿ ಮಾಸ್ಟರ್, ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಯೋಗಿ ಜಿ. ರಾಜ್ ವಸ್ತಾಲಂಕಾರ, ಮೋಹನ್ ಬಿ.ಕೆರೆ ಯವರ ಕಲಾ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ಮೆರಗು ತಂದಿದೆ.
ಒಟ್ಟಾರೆ ಇದೊಂದು ಮನರಂಜನಾತ್ಮಕವಾದ, ಒಂದಷ್ಟು ಸಮಾಜಕ್ಕೆ ಸಂದೇಶಗಳನ್ನು ನೀಡುವಂತಹ, ಪಕ್ಕಾ ಕಮರ್ಷಿಯಲ್ ಚಿತ್ರ ಎನ್ನಬಹುದು.
ಪ್ರೇಕ್ಷಕ ಚಿತ್ರಮಂದಿರದಲ್ಲಿ ರಾಯಲ್ಲಾಗಿ ಕುಳಿತು ತಾನು ಕೊಟ್ಟ ಹಣಕ್ಕೆ ಮನರಂಜನೆಯನ್ನು ವಸೂಲಿ ಮಾಡಬಹುದಾದಂತಹ ಚಿತ್ರ ರಾಯಲ್.