Royal movie review ರಾಯಲ್ ಚಿತ್ರ ವಿಮರ್ಶೆ. ರಾಯಲ್ ಕನಸ್ಸುಗಳ ರಿಯಾಲಿಟಿ
ಚಿತ್ರ ವಿಮರ್ಶೆ
Rating – 3/5
ಚಿತ್ರ : ರಾಯಲ್
ನಿರ್ದೇಶಕ : ದಿನಕರ್ ತೂಗುದೀಪ
ನಿರ್ಮಾಪಕ : ಜಯಣ್ಣ, ಬೋಗಣ್ಣ
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಸಂಖೇತ್ MYS
ಸಂಕಲನ : ಕೆ.ಎಂ. ಪ್ರಕಾಶ್
ತಾರಾಗಣ : ವಿರಾಟ್, ಸಂಜನ ಆನಂದ್, ರಂಗಾಯಣ ರಘು, ಅಚ್ಯುತ್, ಛಾಯಾಸಿಂಗ್, ರಘು ಮುಖರ್ಜಿ. ಮುಂತಾದವರು.
ರಾಯಲ್ ಚಿತ್ರ ರಾಯಲ್ಲಾಗಿ ನಿರ್ಮಾಣ ಮಾಡಲಾಗಿದೆ ಎನ್ನಬಹುದು. ಜಯಣ್ಣ ಫಿಲಮ್ಸ್ ಸಂಸ್ಥೆಯ ಮೂಲಕ ಜಯಣ್ಣ, ಬೋಗಣ್ಣ ರವರ ನಿರ್ಮಾಣದಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ.
ದಿನಕರ್ ತೂಗೂದೀಪ್ ಒಬ್ಬ ದೊಡ್ಡ ಸ್ಟಾರ್ ನಟನಿಗೆ ಕೊಡುವಂತ ಜಾಗವನ್ನು ಚಿತ್ರದ ಕಥೆಯಲ್ಲಿ ನಟ ವಿರಾಟ್ ಗೆ ನೀಡಿದ್ದಾರೆ. ಎಲ್ಲೋ ಒಂದುಕಡೆ ಪುನೀತ್ ರಾಜಕುಮಾರ್ ರವರ ಅರಸು ಚಿತ್ರದ ನಾಯಕನ ಪಾತ್ರದ ಛಾಯೆ ಅಲ್ಲಿ ಕಾಣಿಸುತ್ತದೆ. ಫೈಟಿಂಗ್ ದೃಶ್ಯಗಳಂತು ದರ್ಶನ್, ವಿನೋದ್, ಶ್ರೀ ಮುರುಳಿ ಯವರ ಚಿತ್ರಗಳಲ್ಲಿ ನೀಡುವಷ್ಟು ಜೋರಾಗಿ ಬಿಲ್ಡಪ್ ಗಳನ್ನು ನೀಡಿದ್ದಾರೆ. ಆದರೆ ಅದನ್ನು ಪ್ರೇಕ್ಷಕನಿಗೆ ಅರಗಿಸಿ ಕೊಳ್ಳುವುದು ಕಷ್ಟವಾಗುತ್ತದೆ. ಪ್ರೇಕ್ಷಕನಿಗಷ್ಟೇ ಅಲ್ಲ ರಾಯಲ್ ಚಿತ್ರದದ ನಾಯಕ ನಟ ವಿರಾಟ್ ಗೂ ಕೂಡ ನಿಭಾಯಿಸುವುದು ಕಷ್ಟವಾಗಿದೆ. ಏಕೆಂದರೆ ವಿರಾಟ್ ಇನ್ನೂ ಬೆಳೆಯುತ್ತಿರುವ ನಟ ಕಿಸ್ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ಉದಯೋನ್ಮುಖ ನಟ. ಆತ ಇಷ್ಟು ದೊಡ್ಡ ಪಾತ್ರಗಳನ್ನು ನಿಭಾಯಸಲು ಇನ್ನು ಪಕ್ವವಾಗಬೇಕಿದೆ.
ಒಬ್ಬನೇ ಹತ್ತಾರು ಜನರನ್ನ ಹೊಡೆದುರುಳಿಸುವಷ್ಟು ಸದೃಡನಾಗಿಲ್ಲ. ಹಾಗೆಯೇ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ವನ್ನು ನಿಭಾಯಿಸಬಲ್ಲ ನಿಪುಣನೂ ಅಲ್ಲ. ಆತನೊಬ್ಬ ಇನ್ನೂ ಪ್ರೇಮದ ಅಮಲಿನಲ್ಲಿ ತೇಲಾಡುತ್ತ ಅದರ ಪರಿಮಳವನ್ನು ಪ್ರೇಕ್ಷಕರಿಗೆ ಉಣಬಡಿಸುವ ಧಾವಂತದಲ್ಲಿರುವ ಲವ್ವರ್ ಬಾಯ್.
ದಿನಕರ್ ರವರ ಕಥಾವಸ್ತು ಚನ್ನಾಗಿದೆ. ಇಂದು ಆಹಾರದ ಜೊತೆ ವಿಷವನ್ನು ಜನರಿಗೆ ಉಣ ಬಡಿಸುತ್ತಿರುವ ದೊಡ್ಡ ದೊಡ್ಡ ಸಂಸ್ಥೆಗಳ ಬಣ್ಣ ಬಯಲು ಮಾಡುವ ಪ್ರಯತ್ನ ಮಾಡಿದ್ದಾರೆ.
ಕಲಬೆರಕೆ ಆಹಾರದಿಂದ ಇಂದು ಜನರು ಕ್ಯಾನ್ಸರ್ ನಂತಹ ರೋಗಗಳಿಗೆ ತುತ್ತಾಗುತ್ತಿರುವುದು ಹಾಗೆ ಇನ್ನು ಆಟ ಆಡುವ ಹೆಣ್ಣುಮಕ್ಕಳು ವಯಸ್ಸಿಗೆ ಮುಂಚೆಯೇ ದೊಡ್ಡವರಾಗುತ್ತಿರುವುದು, ಇನ್ನು ಹಲವಾರು ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿರುವಿದನ್ನು ಚನ್ನಾಗಿ ಹೆಣೆದಿದ್ದಾರೆ. ಆದರೆ ಅದನ್ನು ಹೇಳಿಸುವ ಕಲಾವಿದರ ಆಯ್ಕೆಯಲ್ಲಿ ಎಡವಿದ್ದಾರೆ.
ನಿಜಕ್ಕೂ ಈ ಚಿತ್ರದ ಕಥೆ ತುಂಬಾ ಗಂಭಿರವಾದದ್ದು.
ಗೋವಾದ ಬೀಚಿನಲ್ಲಿ ಮೋಜಿಗಾಗಿ ಬಂದ ಒಂದಷ್ಟು ಹುಡುಗಿಯರ ಹಾಗೂ ಮದುವೆ ಆಗಿರುವ ಆಂಟಿಗಳ ಕಾಮದ ಹಪಾಹಪಿತನಕ್ಕೆ ಬುದ್ದಿಕಲಿಸುವ, ಅವರಿಂದ ಹಣ ವಸೂಲಿ ಮಾಡಿ ತಕ್ಕ ಪಾಠ ಕಲಿಸುವ ಮುಖಾಂತರ ಚಿತ್ರದ ನಾಯಕನ ಪರಿಚಯವಾಗುತ್ತದೆ.
ಇದೇ ಗುಂಪಿನಲ್ಲಿ ನಾಯಕಿ ಪರಿಚಯವಾದರೂ ಅವಳು ಇಂತಹ ವಿಚಾರಗಳಿಂದ ಹೊರ ಉಳಿದು ಪರಿಶುದ್ದ ಮನಸ್ಸಿನವಳಾಗಿರುತ್ತಾಳೆ.
ನಾಯಕ ಹೇಗಾದರೂ ಸರಿ ಹಣ ಮಾಡಬೇಕು ರಾಯಲ್ಲಾಗಿ ದೊಡ್ಡಬಂಗಲೆ, ಆಳುಕಾಳು, ಐಸಾರಾಮಿ ಹತ್ತಾರು ಕಾರುಗಳೊಂದಿಗೆ ಬದುಕಬೇಕು ಎನ್ನುವ ಆಸೆ ಚಿತ್ರದ ಮತ್ತೊಂದು ಮುಖ.