Ricchi song release on soon ರಿಚ್ಚಿಯ ಮತ್ತೊಂದು ಹಾಡು ಬಿಡುಗಡೆಗೆ ಸಿದ್ಧ
*ಜುಲೈ ಮೊದಲವಾರದಲ್ಲಿ ಬರಲಿದೆ “ರಿಚ್ಚಿ”ಯ ಮತ್ತೊಂದು ಹಾಡು.*
ಮಾರುತಿ ಮೂವೀ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ರಿಚ್ಚಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ ಹಾಡುಗಳ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ “ರಿಚ್ಚಿ” ಚಿತ್ರಕ್ಕಾಗಿ ಕುನಾಲ್ ಗಾಂಜಾವಾಲ ಅವರು ಬಹಳ ವರ್ಷಗಳ ನಂತರ ಹಾಡಿರುವ ಹಾಡೊಂದು ಬಿಡುಗಡೆಯಾಗಿ, ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗ ಚಿತ್ರದ ಮತ್ತೊಂದು ಹಾಡು ಜುಲೈ ಮೊದಲವಾರದಲ್ಲಿ ಬಿಡುಗಡೆಯಾಗಲಿದೆ. ವಿನೋದ್ ಅವರು ಈ ಹಾಡನ್ನು ಬರೆದಿದ್ದು, ಹೆಸರಾಂತ ಗಾಯಕಿ ಅಂಕಿತ ಕುಂಡು ಹಾಡಿದ್ದಾರೆ. ಅಗಸ್ತ್ಯ ಸಂತೋಷ್ ಸಂಗೀತ ನೀಡಿದ್ಧಾರೆ. A2 music ಮೂಲಕ ಈ ಹಾಡು ಬಿಡುಗಡೆಯಾಗಲಿದೆ.
“ರಿಚ್ಚಿ” ಇದು ಸಿನಿಮಾ ಹೆಸರು ಮಾತ್ರವಲ್ಲ. ನಿರ್ದೇಶಕ ಹಾಗೂ ನಾಯಕನ ಹೆಸರು ಕೂಡ. ಹೌದು ತಮ್ಮ ಹೆಸರನ್ನೇ ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ ರಿಚ್ಚಿ. ಚಿತ್ರದ ನಿರ್ಮಾಪಕರೂ ಇವರೆ. ರಾಕೇಶ್ ರಾವ್ ಹಾಗೂ ವೆಂಕಟಾಚಲಯ್ಯ “ರಿಚ್ಚಿ” ಚಿತ್ರದ ಸಹ ನಿರ್ಮಾಪಕರು. ಅಣಜಿ ನಾಗರಾಜ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.
ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ “ರಿಚ್ಚಿ” ನಿರ್ಮಾಣವಾಗಿದೆ. ಅಗಸ್ತ್ಯ ಸಂತೋಷ್ ಅವರು ಸಂಗೀತ ನೀಡಿರುವ ನಾಲ್ಕು ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ. ಸೋನು ನಿಗಮ್, ಕುನಾಲ್ ಗಾಂಜಾವಾಲ ಹಾಗೂ ಅಂಕಿತ ಕುಂಡು ಹಾಡುಗಳನ್ನು ಹಾಡಿದ್ದಾರೆ. ಗೌಸ್ ಫಿರ್, ಆನಂದ್ ಹಾಗೂ ವಿನೋದ್ ಹಾಡುಗಳನ್ನು ಬರೆದಿದ್ದಾರೆ. ಹಿಂದಿ ಭಾಷೆಯಲ್ಲಿ ಈ ಚಿತ್ರದ ಹಾಡುಗಳನ್ನು ಜಾವೇದ್ ಅಲಿ, ಪಲಾಕ್ ಮುಚ್ಚಲ್ ಹಾಗೂ ಕುನಾಲ್ ಗಾಂಜಾವಾಲ ಹಾಡಿದ್ದಾರೆ.
ಅಜಿತ್ ಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿಪ್ರಕಾಶ್, ಧನಂಜಯ ಹಾಗೂ ಭೂಷಣ್ ನೃತ್ಯ ನಿರ್ದೇಶನ ಹಾಗೂ ವಿಕ್ರಮ್ ಮೋರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
“ರಿಚ್ಚಿ” ಅವರಿಗೆ ನಾಯಕಿಯಾಗಿ “ಕನ್ನಡತಿ” ಧಾರಾವಾಹಿ ಖ್ಯಾತಿಯ ರಮೋಲ ಅಭಿನಯಿಸಿದ್ದಾರೆ. ಮನೋಜ್, ಮಿಮಿಕ್ರಿ ಗೋಪಿ, “ಮಜಾಭಾರತ” ಚಂದ್ರಪ್ರಭ, “ಕಾಮಿಡಿ ಕಿಲಾಡಿಗಳು” ರಾಘವೇಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ.