Rama movie poster released. “ರಾಮ” ಚಿತ್ರದ ಪೋಸ್ಟರ್ ಸಾಲುಮರದ ತಿಮ್ಮಕ್ಕ ಬಿಡುಗಡೆ ಮಾಡಿದರು.
” ರಾಮ” ಚಿತ್ರದ ಪೋಸ್ಟರ್
ಸಾಲುಮರದ ತಿಮ್ಮಕ್ಕ ಬಿಡುಗಡೆ
ಕಾಡು, ಕಾಡಿನ ಪರಿಸರ, ಸಂಪತ್ತನ್ನು ಉಳಿಸುವ ಕಾನ್ಸೆಪ್ಟ್ ಇಟ್ಟುಕೊಂಡು ಅನೇಕ ಚಲನಚಿತ್ರಗಳು ನಿರ್ಮಾಣವಾಗಿವೆ.

ಕಾಡಿನ ಹಿನ್ನೆಲೆಯಲ್ಲಿ ಮಕ್ಕಳ ಸಾಹಸದ ಕಥೆಯೊಂದನ್ನು ಹೇಳುವ ಚಿತ್ರವೊಂದು ಇದೀಗ ತಯಾರಾಗಿದೆ. ಆ ಚಿತ್ರದ ಹೆಸರು ” ರಾಮ ” ವೆಸ್ಲಿ ಬ್ರೌನ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಪೋಸ್ಟರ್ ಇತ್ತೀಚೆಗೆ ರಿಲೀಸಾಗಿದೆ. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ರಾಮ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ,
ಪರಿಸರ ಹಾಗೂ ಅದರ ಉಳಿವು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಸಿನಿಮಾ ನಿರ್ಮಾಣ ಮಾಡಿದ್ದೀರಿ ಚಿತ್ರತಂಡಕ್ಕೆ, ನಿರ್ದೇಶಕ, ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಕಾಡು ಮತ್ತು ಪರಿಸರ ಉಳಿಸುವ ಸಂದೇಶ ಹೇಳುವ ಉತ್ತಮ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಮರಗಳನ್ನು ಕಡಿಯಲು ಬಂದವರನ್ನು ಶಾಲೆಯ ಮಕ್ಕಳು ತಡೆಯುವ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ದೇಶಕರು ಈ ಚಿತ್ರವನ್ನು ನಿರೂಪಿಸಿದ್ದಾರೆ.
ನಿಕ್ಕಿನಾಶ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿಶ್ಚಲ್ ಬಿ.ಎಂ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸುಷ್ಮಾ ವೆಸ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಸಹ ನಿರ್ಮಾಪಕರಾಗಿ ನೆ.ಲ.ಮಹೇಶ್-ನೇವಿ ಮಂಜು-ವೆಸ್ಲಿ ಬ್ರೌನ್ ಕೈಜೋಡಿಸಿದ್ದಾರೆ.

ವೆಸ್ಲಿ ಬ್ರೌನ್ ಅವರ ಕಥೆ, ಚಿತ್ರಕಥೆ, ನಿರ್ದೇಶನ, ಛಾಯಾಗ್ರಹಣ ಹಾಗೂ ಸಂಕಲನ ಈ ಚಿತ್ರಕ್ಕಿದ್ದು, ಡಾ. ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ನವೀನ್ ಕೃಷ್ಣ ಅವರ ಸಂಭಾಷಣೆ, ಅಭಿಲಾಷ್ ಲಾಕ್ರಾ-ಜುವೆಲ್ ದುಬಾ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು,
ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ. ಮರಗಳು ಮತ್ತು ಅದರ ಬೇರುಗಳು ಮಾತನಾಡಿಕೊಳ್ಳುವುದನ್ನು ವಿನೂತನ ಗ್ರಾಫಿಕ್ಸ್ ಬಳಸಿ ತಯಾರಿಸಲಾಗಿದೆ.

ಚಿತ್ರದ ಪ್ರಮುಖ ತಾರಾಗಣದಲ್ಲಿ ಮಾಸ್ಟರ್ ದನಾಶ, ಮಾಸ್ಟರ್ ವಿಹಾನ್, ಬೇಬಿ ಶರೋನ್, ಬೇಬಿ ಸುಧೀಕ್ಷಾ, ಮಾಸ್ಟರ್ ಅಭಿನವ್, ಮಾಸ್ಟರ್ ಶಾ ಅಬ್ದುಲ್ ಅಜೀಜ್, ಮಾಸ್ಟರ್ ದರ್ಶ ಮತ್ತಿತರಿದ್ದಾರೆ.ವಿಶೇಷ ಪಾತ್ರದಲ್ಲಿ ನೆಲ ನರೇಂದ್ರಬಾಬು, ದೇವಿ ಮಂಜು, ಭಾವನಾ ಚಂದ್ರಶೇಖರ್, ರೋಹಿಣಿ ಅಭಿನಯಿಸಿದ್ದಾರೆ.