Rakha new Kannada movie shooting started. “ರಾಖಾ” ಚಿತ್ರಕ್ಕೆ ಸಚಿವ ತಂಗಡಗಿ ಚಾಲನೆಕುಟುಂಬದ ಗೌರವ ಉಳಿಸಿದ ಮಗನ ಕಥೆ

“ರಾಖಾ” ಚಿತ್ರಕ್ಕೆ ಸಚಿವ ತಂಗಡಗಿ ಚಾಲನೆ
ಕುಟುಂಬದ ಗೌರವ ಉಳಿಸಿದ ಮಗನ ಕಥೆ

ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ, ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಬಹಳ‌ ದಿನಗಳ ನಂತರ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. 

ಯುವನಟ ಕ್ರಾಂತಿ ಕಥೆ ಬರೆದು, ನಾಯಕನಾಗಿ ಅಭಿನಯಿಸುತ್ತಿರುವ ರಾಖಾ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಾ ಮೂವೀಸ್ ಮೂಲಕ ಡಾ.ಕೆ.ಬಿ. ನಾಗೂರ್(ಬಾಬು) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ರಾಖಾ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

ರಾಖಾ ಚಿತ್ರದ ಮುಹೂರ್ತ ದೃಶ್ಯಕ್ಕೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ಕ್ಲಾಪ್ ಮಾಡಿದರೆ, ಶ್ರೀಮತಿ ಸರೋಜನಿ ರೇವಣಸಿದ್ದಪ್ಪ ಕ್ಯಾಮೆರಾ ಚಾಲನೆ ಮಾಡಿದರು. ಫಸ್ಟ್ ಶಾಟ್ ಗೆ ಡಾ.ವಿ. ನಾಗೇಂದ್ರಪ್ರಸಾದ್ ಆಕ್ಷನ್ ಕಟ್ ಹೇಳಿದರು.
ನಂತರ ಮಾಧ್ಯಮದ ಜೊತೆ‌ ಮಾತನಾಡಿದ ನಿರ್ಮಾಪಕ ಡಾ.ನಾಗೂರ್, ನಾವು ಬಿಜಾಪುರದವರು. ಶ್ರೀ ಸಿದ್ದೇಶ್ವರ ಸ್ವಾಮಿ ಅನುಯಾಯಿಗಳು. ಕ್ರಾಂತಿ ಅವರ ಶ್ರೀಮಂತ ಚಿತ್ರವನ್ನು ನೋಡಿದಾಗ ಅವರ ಅಭಿನಯ ಇಷ್ಟವಾಗಿತ್ತು. ಬಿಜಾಪುರದವರೆಲ್ಲ ಸೇರಿ ಈ ಚಿತ್ರ ನಿರ್ಮಿಸಲು ಮುಂದಾಗಿದ್ದೇವೆ. ತಂದೆ ಮಕ್ಕಳ ಸಂಬಂಧದ ಸುತ್ತ ನಡೆಯುವ ಕೌಟುಂಬಿಕ ಕಥೆ ಚಿತ್ರದಕ್ಕಿದೆ. ಈಗ ಫ್ಯಾಮಿಲಿ ರಿಲೇಶನ್ ತುಂಬಾ ಕೆಟ್ಟು ಹೋಗಿದೆ. ಒಂದಷ್ಟು ಜನ ಒಳ್ಳೇದನ್ನು ಕಲಿಯಲೆಂದು ಈ ಸಿನಿಮಾ ಮಾಡ್ತಿದ್ದೇವೆ ಎಂದರು.

 ನಿರ್ದೇಶಕ ಸಾಯಿಕೃಷ್ಣ ಮಾತನಾಡಿ,  ಈ ಸಿನಿಮಾಗೆ ಡೈಲಾಗ್ ಬರೆಸಲೆಂದು ನನ್ನ ಬಳಿ ಬಂದವರು ನಂತರ ನೀವೇ ಡೈರೆಕ್ಷನ್ ಮಾಡಿ ಅಂದರು, ನಿರ್ಮಾಪಕ ಡಾ.ನಾಗೂರು ಅವರು ಲಾಭ ನಷ್ಟಗಳ ಚಿಂತೆ ಮಾಡದೆ ಸದಭಿರುಚಿಯ ಚಿತ್ರ ನೀಡಬೇಕೆಂಬ  ಉದ್ದೇಶ ಇಟ್ಟುಕೊಂಡು ಈ ಸಿನಿಮಾ ಮಾಡ್ತಿದಾರೆ. ತಂದೆ ಮಕ್ಕಳ ನಡುವೆ ನಡೆಯುವ ಕಥೆಯಿದು. ಅಪ್ಪ ಮಕ್ಕಳನ್ನು ಹೇಗೆಲ್ಲಾ  ಪೋಷಣೆ ಮಾಡ್ತಾರೆ, ಆದರೆ, ಅದೇ ಮಕ್ಕಳು ತಮ್ಮ ಪೋಷಕರನ್ನು ಹೇಗೆ ನೋಡಿಕೊಳ್ತಾರೆ ಅನ್ನೋದು ಚಿತ್ರದ ಕಂಟೆಂಟ್. ಚಿತ್ರದಲ್ಲಿ  4 ಹಾಡು, 4 ಸಾಹಸ ದೃಶ್ಯಗಳಿವೆ. ಬಿಜಾಪುರದಲ್ಲಿ 20 ದಿನಗಳ ಕಾಲ ಚಿತ್ರೀಕರಿಸಿ,  ನಂತರ ಬೆಂಗಳೂರಲ್ಲಿ ಶೂಟಿಂಗ್ ಮುಂದುವರೆಸುತ್ತೇವೆ. ಬೆಂಗಳೂರಿನಲ್ಲಿ ನಡೆಯುವ ಕಥೆ ಇದಾಗಿದ್ದು, ಒಂದು ಪಾತ್ರವಷ್ಟೇ ಬಿಜಾಪುರದಿಂದ ಬರುತ್ತೆ. ಒಟ್ಟು 40 ದಿನಗಳ ಚಿತ್ರೀಕರಣದ ಶೆಡ್ಯೂಲ್ ಹಾಕಿಕೊಂಡಿದ್ದೇವೆ. ಅಲ್ಲದೆ ಹಾಡೊಂದಕ್ಕೆ ಸೆಟ್ ಹಾಕುವ ಪ್ಲಾನ್ ಇದೆ ಎಂದರು.

ನಾಯಕ ಕ್ರಾಂತಿ ಮಾತನಾಡಿ ಈ ಹಿಂದೆ ಶ್ರೀಮಂತ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದೆ. ರಾಖಾ ಅಂದರೆ ಬ್ರೈಟ್ ನೆಸ್. ಅದು ನಾಯಕನ ಹೆಸರೂ ಹೌದು.

ಊರಲ್ಲಿ ರಾಖಾನ ತಂದೆ ತಾಯಿಗೆ ಸ್ಥಳೀಯ ಎಂಎಲ್ಎ ಯಿಂದ ಅವಮಾನ ಆಗಿರುತ್ತೆ. ನಾಯಕ ತನ್ನ ಬುದ್ದಿವಂತಿಕೆ ಬಳಸಿ, ರಕ್ತಪಾತವಿಲ್ಲದೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂದು ಚಿತ್ರದಲ್ಲಿ ಹೇಳಲಾಗುತ್ತಿದೆ. ಹಿರಿಯನಟ ಮಂಜುನಾಥ ಹೆಗ್ಡೆ ಹಾಗೂ ಹರಿಣಿ ಅವರು ತಂದೆ, ತಾಯಿಯ ಪಾತ್ರ ಮಾಡುತ್ತಿದ್ದಾರೆ ಎಂದರು.
ನಟಿ ಅಮೃತಾ ನಾಯಕಿಯ ಪಾತ್ರ ನಿರ್ವಹಿಸುತ್ತಿದ್ದು, ತನ್ನ ಪಾತ್ರದ ಕುರಿತಂತೆ ವಿವರಿಸುತ್ತ ನಾನು ಯಾರಿಗೂ ಕೇರ್ ಮಾಡದ ಹುಡುಗಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ, ನಾಯಕಿಯಾಗಿ ಇದು ಮೂರನೇ ಚಿತ್ರ ಎಂದರು. ನಂತರ ಛಾಯಾಗ್ರಾಹಕ ಆರ್.ಡಿ. ನಾಗಾರ್ಜುನ, ಕಾಮಿಡಿ ಪಾತ್ರ ಮಾಡುತ್ತಿರುವ ರಾಜು ತಾಳೀಕೋಟೆ, ಸಚ್ಚಿದಾನಂದ ಪೂಜಾರಿ ಮಾತನಾಡಿದರು. ಎಂ.ಎಸ್.ತ್ಯಾಗರಾಜ್ ಅವರ ಸಂಗೀತ, ಮಾಸ್ ಮಾದ, ಟೈಗರ್ ಶಿವು ಅವರ ಸಾಹಸ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor