ಕಂಠೀರವ ಸ್ಟುಡಿಯೋದಲ್ಲಿ ರಾಘವೇಂದ್ರ ರಾಜಕುಮಾರ್ ಜೊತೆ ಪ್ರೀತಿ ರಾಜಿ
ರಾಘವೇಂದ್ರ ರಾಜಕುಮಾರ್ ಅಭಿನಯದ ರಾಜಿ ಚಿತ್ರಕ್ಕೆ ಮಹಿಳಾ ನಿರ್ದೇಶಕಿ ಪ್ರೀತಿ ಎಸ್ ಬಾಬು ಆಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ಮೈಸೂರಿನ ಮೂಲದ ಬಸವರಾಜ್ ನಿರ್ಮಾಪಕರಾಗಿ ಚಿತ್ರಕ್ಕೆ ಹಣ ಹೂಡಿದ್ದಾರೆ.
ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ರೋರಿಂಗ್ ಸ್ಟಾರ್ ಶ್ರೀಮುರುಳಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ರಾಜಿ ಚಿತ್ರಕ್ಕೆ ಚಾಲನೆ ನೀಡಿದರೆ, ನಾಯಕಿ ಹರ್ಷಿಕಾ ಪೂಣ್ಣಚ್ಛ ಕ್ಯಾಮೆರಾ ಚಾಲನೆ ಮಾಡಿದರು.

ಕನ್ನಡ ಹಲವಾರು ಚಿತ್ರಗಳಲ್ಲಿ ಸಹ ಕಲಾವಿದೆಯಾಗಿ ಅಭಿನಯಿಸಿರುವ ಪ್ರೀತಿ ಎಸ್ ಬಾಬು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುವ ನಿರ್ದೇಶಕಿಯರ ಸಾಲಿಗೆ ಪ್ರೀತಿ ಎಸ್ ಬಾಬು ಸೇರ್ಪಡೆಯಾಗಿದ್ದಾರೆ. ಬಸವರಾಜ್ ಎಸ್ ಮೈಸೂರು ಅವರೊಂದಿಗೆ ಸೇರಿ ನಿರ್ಮಾಣವನ್ನು ಮಾಡುತ್ತಿರುವ ಪ್ರೀತಿ ಎಸ್ ಬಾಬು ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಮಡದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ದೇಶಕಿ ಪ್ರೀತಿಯವರು ಗಂಡ – ಹೆಂಡತಿ ಸುಂದರ ಒಪ್ಪಂದದ ಬಗ್ಗೆ ರಾಘಣ್ಣನವರ ಬಳಿ ಕಥೆ ಹೇಳಿದಾಗ, ಮೆಚ್ಚುಗೆ ಸೂಚಿಸಿ ನಟಿಸಲು ಒಪ್ಪಿದ್ದಾರೆ. ಈ ಚಿತ್ರ ಆರಂಭವಾಗಲು ಮುಖ್ಯ ಕಾರಣ ನಮ್ಮ ಚಿತ್ರದ ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಯಾರು ನಿರೀಕ್ಷಿಸದ ಕಥೆ ನಮ್ಮ ಚಿತ್ರದಲ್ಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಪ್ರೀತಿ ಎಸ್ ಬಾಬು.

ನನ್ನ ತಮ್ಮನ ನಿಧನದ ನಂತರ ನಾನು ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಅವನು ಇದಿದ್ದರೆ, ಅವನೇ ಬಂದು ಕ್ಲಾಪ್ ಮಾಡಬೇಕಿತ್ತು. ಆದರೆ ವಿಧಿಬರಹವೇ ಬೇರೆ. ಹೆಣ್ಣುಮಗಳೊಬ್ಬಳು ನಿರ್ದೇಶನ ಮಾಡುತ್ತಿರುವುದು ಖುಷಿಯ ವಿಚಾರ. ಗಂಡ-ಹೆಂಡತಿ ನಡುವಿನ ಸುಂದರ ಒಪ್ಪಂದವೇ “ರಾಜಿ”. ಇನ್ನೊಂದು ಅರ್ಥ ಕೂಡ ಇದೆ. ರಾ ಅಂದರೆ ರಾಘವೇಂದ್ರ, ಜಿ ಅಂದರೆ ಜೀವಿತಾ ಎಂದು. ನನ್ನ ಪಾತ್ರ ಚೆನ್ನಾಗಿದೆ. ಈ ಸಿನಿಮಾದಿಂದ ನನಗೆ ಒಳ್ಳೆಯ ಹೆಸರು ಅಥವಾ ಪ್ರಶಸ್ತಿ ಬಂದರೆ, ನನ್ನ ಮೂರು ಹೆಣ್ಣುಮಕ್ಕಳಿಗೆ ಅರ್ಪಿಸುತ್ತೇನೆ. ಆ ಮೂವರು ಯಾರೆಂದರೆ, ನನ್ನ ತಮ್ಮನ ಹೆಂಡತಿ ಅಶ್ವಿನಿ, ಅವರ ಮಕ್ಕಳಾದ ದೃತಿ ಹಾಗೂ ವಂದಿತ. ಇನ್ನು ಮುಂದೆ ಅವರೇ ನನ್ನ ಹೆಣ್ಣುಮಕ್ಕಳು ಎಂದು ಭಾವುಕರಾದರು ರಾಘಣ್ಣ.
ವಸುಮತಿ ಉಡುಪ ಅವರ ಕಥೆಯನ್ನು ಆಧರಿಸಿ ಈ ಕಥೆಗೆ ಚಿತ್ರಕಥೆಯನ್ನು ಹರೀಶ್ ಬರೆಯುತ್ತಿದ್ದಾರೆ. ಖ್ಯಾತ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರು ಐದು ಕವನಗಳನ್ನು ಈ ಚಿತ್ರಕ್ಕಾಗಿ ಬರೆದಿದ್ದಾರೆ ಸಂಗೀತ ನಿರ್ದೇಶಕನಾಗಿ ಉಪಾಸನ ಮೋಹನ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಛಾಯಾಗ್ರಹಕರಾಗಿ ಪಿ.ವಿ.ಆರ್ ಸ್ವಾಮಿ ಹಾಗೂ ಸಂಕಲನಕಾರರಾಗಿ ನಾಗೇಶ್ ಚಿತ್ರ ತಂಡದಲ್ಲಿದ್ದಾರೆ. ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರತಾಪ್ ಸಿಂಹ, ಕಾರ್ತಿಕ್ ಹಾಗೂ ಚಂದನ “ರಾಜಿ” ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.