R. Chandru produced Father movie start at April 27th. ಆರ್. ಚಂದ್ರು ನಿರ್ಮಾಣದ ಫಾದರ್ ಚಿತ್ರಕ್ಕೆ ಏಪ್ರಿಲ್ 27 ರಂದು ಅದ್ದೂರಿ ಮುಹೂರ್ತ.
ಆರ್ ಸಿ ಸ್ಟುಡಿಯೋ – ಮೂಲಕ 6 ಪ್ಯಾನ್ ಇಂಡಿಯಾ ಸಿನಿಮಾಗಳು ನಿರ್ಮಾಣವಾಗುತ್ತಿದ್ದು ಅವುಗಳಲ್ಲಿ ಫಾದರ್ ಚಿತ್ರ ಏಪ್ರಿಲ್ 27ಕ್ಕೆ ಸೆಟ್ಟೇರಲಿದೆ.
ಆರ್.ಚಂದ್ರು. ಸೌತ್ ಇಂಡಿಯಾ ಚಿತ್ರರಂಗಕ್ಕೆ ಚಿರಪರಿಚಿತವಾಗಿದ್ದ ಹೆಸರಿದು. ಸಿನಿಮಾ ಪ್ರೀತಿ, ಶ್ರದ್ಧೆ ಮತ್ತು ಶ್ರಮ ಈ ಮೂರು ಆರ್. ಚಂದ್ರು ಅವರ ಗೆಲುವಿನ ಮೂಲಮಂತ್ರ. ಈಗ ಆರ್.ಚಂದ್ರು ಅಂದರೆ ಭಾರತೀಯ ಚಿತ್ರರಂಗಕ್ಕೂ ಗೊತ್ತು. ಅಷ್ಟು ಎತ್ತರಕ್ಕೆ ಬೆಳೆದು ನಿಂತ ಅಪ್ಪಟ ಸಿನಿಮಾ ಪ್ರೇಮಿ. ಹೌದು, ಆರ್.ಚಂದ್ರು
ಸಾಮಾನ್ಯ ರೈತರೊಬ್ಬರ ಮಗ. ಕಲರ್ ಫುಲ್ ಜಗತ್ತಿನಲ್ಲಿ ಈ ಮಟ್ಟಕ್ಕೆ ಬೆಳೆದಿದ್ದು ನಿಜಕ್ಕೂ ಹೆಗ್ಗಳಿಕೆ. ಒಬ್ಬ ನಿರ್ದೇಶಕನಾಗಿ ಯಶಸ್ವಿಯಾಗೋದು ಈ ಕಾಲಘಟ್ಟದಲ್ಲಿ ನಿಜಕ್ಕೂ ಕಷ್ಟ. ಸಿನಿಮಾ ಪ್ರೇಕ್ಷಕರಿಗೆ ರುಚಿಸುವ, ಕಾಡುವ, ಅಳಿಸುವ, ನಗಿಸುವ ಮತ್ತು ಟ್ರೆಂಡಿ ಸಿನಿಮಾಗಳನ್ನೇ ಕೊಡುವ ಮೂಲಕ ಯಶಸ್ವಿ ನಿರ್ದೇಶಕ ಎನಿಸಿಕೊಂಡವರು. ಇದಿಷ್ಟೇ ಆಗಿದ್ದರೆ ಹೆಗ್ಗಳಿಕೆ ಅನಿಸುತ್ತಿರಲಿಲ್ಲ. ಅವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ನಿರ್ಮಾಣಕ್ಕೂ ಇಳಿದು ಅಲ್ಲೂ ಗೆಲುವಿನ ನಗೆ ಬೀರಿದವರು.

ಇದು ಹೆಮ್ಮೆ ಅಲ್ಲದೆ ಇನ್ನೇನು.
ಶ್ರೀ ಸಿದ್ದೇಶ್ವರ ಮೂವೀಸ್ ಬ್ಯಾನರ್ ಮೂಲಕ ಐದು ಯಶಸ್ವಿ ಸಿನಿಮಾಗಳ ನಿರ್ಮಾಣ ಮಾಡಿದ್ದು ಇದೇ ಆರ್.ಚಂದ್ರು. ಇದು ಸುಲಭವಲ್ಲ. ಆರ್.ಚಂದ್ರು ಅವರ ಕನಸು ದೊಡ್ಡದು. ಅವರು ಕಂಡ ಕನಸಿಗೆ ಅವರೇ ಬಣ್ಣ ಹಚ್ಚಿದರು. ಅದನ್ನು ಪ್ರೇಕ್ಷಕರು ತಮ್ಮ ಕಲರ್ ಫುಲ್ ಕಣ್ಣಿಂದ ಮೆಚ್ಚಿಕೊಂಡು ಇನ್ನಷ್ಟು ರಂಗಾಗಿಸಿದರು.

ಹೌದು, ಆರ್.ಚಂದ್ರು ನಿರ್ಮಾಣ ಮಾಡುವಷ್ಟರ ಮಟ್ಟಕ್ಕೆ ಬೆಳೆದಿದ್ದು ದೊಡ್ಡ ಸಾಧನೆ. ಶ್ರೀ ಸಿದ್ದೇಶ್ವರ ಮೂವೀಸ್ ಬ್ಯಾನರ್ ಹುಟ್ಟುಹಾಕಿ ಕನಸು ಸಾಕಾರಗೊಳಿಸುವ ಕಾರ್ಯಕ್ಕೆ ಮುಂದಾದರು. ಅವರ ಕನಸು ಎಂದಿಗೂ ಮರೆಯದಷ್ಟು ನನಸಾಯಿತು. ಅವರ ಕೆಲಸ ಹೆಸರಾಯಿತು. ಸಿನಿಮಾ ಉಸಿರಾಯಿತು. ಕಾಯಕ ನಿರಂತರವಾಯಿತು. ದೊಡ್ಡ ಯಶಸ್ಸು ಕಂಡರೂ ಸರಳ ವ್ಯಕ್ತಿತ್ವ. ಈಗ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಾಗಿದೆ. ಸಿನಿಮಾ ತಪಸ್ವಿ ಚಂದ್ರು ನಿರಂತರ ಸಿನಿಮಾ ಕಾಯಕಕ್ಕೆ ಸಜ್ಜಾಗಿದ್ದಾರೆ.

ಸಿನಿಮಾ ಅನ್ನೋದಕ್ಕೆ ದೊಡ್ಡ ಶಕ್ತಿ ಇದೆ. ಅಳು-ನಗುವಿನ ಸಂಕೇತವಿದ್ದರೂ ಅಲ್ಲೆಲ್ಲೋ ಒಂದು ಕಡೆ ಆಪ್ತವೆನಿಸೋ ಅಂಶಗಳು ನೋಡುಗರನ್ನು ಬಿಗಿದಪ್ಪುತ್ತವೆ. ಈ ಫಾದರ್ ಸಿನಿಮಾ ಕೂಡ ಎದೆ ಭಾರವೆನಿಸುವ ಚಿತ್ರ. ಮನಸ್ಸಿಗೆ ಖುಷಿ ಕೊಡುವ, ಕಣ್ಣಲ್ಲಿ ಆನಂದಭಾಷ್ಪ ತರುವ ಮತ್ತೆ ಮತ್ತೆ ಕಾಡುವ, ಏನೋ ಕಳೆದುಕೊಂಡ ಸಂಕಟ, ಇನ್ನೇನ್ನನ್ನೋ ಪಡೆಯಬೇಕೆಂಬ ಹಂಬಲ, ಮತ್ತೇನೋ ಉಳಿಸಿಕೊಳ್ಳಬೇಕೆಂಬ ಹಠ ಇವೆಲ್ಲದರ ಸಮ್ಮಿಶ್ರಣವೇ ಫಾದರ್.
ಇಲ್ಲಿ ನೋವಿದೆ, ನಲವಿದೆ. ಬಾಂಧವ್ಯದ ಹೂರಣವಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಾಸ್ತವದ ತಿರುಳಿದೆ. ಪ್ರತಿಯೊಬ್ಬರ ಮನಸ್ಸಿಗೂ ನಾಟುವ ಅಂಶವಿದೆ. ಕಣ್ಣಿಗೆ ಕಟ್ಟುವ ಚಿತ್ರಣವೂ ಇರಲಿದೆ. ಫಾದರ್ ಪ್ರತಿಯೊಬ್ಬರ ಮನಸ್ಸನ್ನು ಹಗುರಾಗಿಸೋ ಚಿತ್ರವಾದರೂ, ಏನೋ ಒಂದು ಮಿಸ್ ಆಯ್ತು ಅನ್ನೋ ಭಾವನೆಯ ಚಿತ್ರ ಇದಾಗಲಿದೆ.

ಆರ್.ಸಿ. ಸ್ಟುಡಿಯೋದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರುವುದರಿಂದ ಸ್ಟುಡಿಯೋ ಮುಖ್ಯಸ್ಥ ಆರ್.ಚಂದ್ರ ಒಂದೊಳ್ಳೆಯ ಕಂಟೆಂಟ್ ಆಯ್ಕೆ ಮಾಡಿಕೊಂಡಿದ್ದಾರೆ. ಹೌದು, ಜಗತ್ತಿನಲ್ಲಿ ಅಪ್ಪನ ಸ್ಥಾನ ತುಂಬೋಕೆ ಯಾರಿಂದಲೂ ಸಾಧ್ಯವಿಲ್ಲ. ಅಪ್ಪ ಅನ್ನೋದು ಆಕಾಶಕ್ಕಿಂತಲೂ ಮಿಗಿಲು. ಅಪ್ಪನ ಬಿಸಿಯುಸಿರು, ಅಪ್ಪನ ಅಪ್ಪುಗೆ, ಅಪ್ಪನ ನೋವು, ಅಪ್ಪನ ಬೆವರು, ಅಪ್ಪನ ಕಾತರ, ಆತುರ, ಚಡಪಡಿಕೆ, ಆಸೆ, ಜವಾಬ್ದಾರಿ ಇತ್ಯಾದಿಗಳ ರೂಪವೇ ಈ ಫಾದರ್ ಅಂತಂದುಕೊಂಡರೂ ಅದಕ್ಕಿಂತಲೂ ಮಿಗಿಲಾಗಿದ್ದು ಈ ಫಾದರ್ ಒಳಗಿದೆ. ಇದು ಎಲ್ಲರಿಗೂ ಇಷ್ಟವಾಗುವ ಚಿತ್ರವಾಗುತ್ತೆ ಎಂಬ ಭರವಸೆ ಆರ್ ಸಿ ಸ್ಟುಡಿಯೋದ್ದು.
ಇನ್ನು ಚಂದ್ರು ಕಂಟೆಂಟ್‌ಗೆ ಬೆಲೆ ಕೊಡ್ತಾರೆ. ಆ ಕಾರಣಕ್ಕೆ ಬಿಗ್ ಬಜೆಟ್ ಆಗಿದ್ದರೂ, ನಿರ್ದೇಶಕ ರಾಜ ಮೋಹನ್ ಎಂಬುವವರನ್ನುಕನ್ನಡಕ್ಕೆ ಕರೆದು ಅವಕಾಶ ಕೊಡುತ್ತಿದ್ದಾರೆ. ಆ ನಿರ್ದೇಶಕನಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಅವಕಾಶ ಕೊಟ್ಟ ಚಂದ್ರು ಕೂಡ ಸಿನಿಮಾದ ಗಾಡ್ ಫಾದರ್ ಇದ್ದಂತೆ. ಈ ಮಾತು ಅತಿಶಯೋಕ್ತಿಯಲ್ಲ. ಅದೇನೆ ಇರಲಿ, ಆರ್.ಸಿ.ಸ್ಟುಡಿಯೋ ಇಟ್ಟಿರುವ ಮಹತ್ತರ ಹೆಜ್ಜೆಗೆ ಎಲ್ಲರ ಮೆಚ್ಚುಗೆ ಇರಲಿ. ಇದು ಗ್ಲೋಬಲಿ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂಬ ಆಶಯ ನಮ್ಮದು.
.