Purushottamana prasanga trailer Released by SHARAN ನಟ ಶರಣ್ ಅವರಿಂದ ಬಿಡುಗಡೆಯಾಯಿತು “ಪುರುಷೋತ್ತಮನ ಪ್ರಸಂಗ” ಚಿತ್ರದ ಟ್ರೇಲರ್
ನಟ ಶರಣ್ ಅವರಿಂದ ಬಿಡುಗಡೆಯಾಯಿತು “ಪುರುಷೋತ್ತಮನ ಪ್ರಸಂಗ” ಚಿತ್ರದ ಟ್ರೇಲರ್
ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣದಲ್ಲಿ ಖ್ಯಾತ ನಟ, ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಮೂಡಿಬಂದಿರುವ “ಪುರುಷೋತ್ತಮನ ಪ್ರಸಂಗ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಖ್ಯಾತ ನಟ ಶರಣ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

“ಪರುಷೋತ್ತಮನ ಪ್ರಸಂಗ” ಶೀರ್ಷಿಕೆಯೇ ಮನ ಮುಟ್ಟುವಂತಿದೆ ಎಂದು ಮಾತನಾಡಿದ ನಟ ಶರಣ್, ಪುರುಷೋತ್ತಮ ಎಂದರೆ ರಾಮ. ಆ ರಾಮನ ಹೆಸರಿನಲ್ಲಿ ಬರುತ್ತಿರುವ ಈ ಚಿತ್ರ ಖಂಡಿತವಾಗಿಯೂ ಗೆಲ್ಲುತ್ತದೆ. ಇನ್ನು ಟ್ರೇಲರ್ ನೋಡಿದಾಗ ಅಜಯ್ ಅವರು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಅನಿಸುವುದಿಲ್ಲ. ಅಷ್ಟು ಚೆನ್ನಾಗಿ ಅಜಯ್(ನಿರ್ಮಾಪಕ ರವಿಕುಮಾರ್ ಅವರ ಪುತ್ರ) ಅಭಿನಯಿಸಿದ್ದಾರೆ. ನಾನು ಟ್ರೇಲರ್ ಗೆ ಧ್ವನಿ ನೀಡಿದ್ದೇನೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ಎಂದರು.

ಇದೊಂದು ಉತ್ತಮ ಹಾಸ್ಯ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ನಮ್ಮ ತಂದೆ ದೇವದಾಸ್ ಕಾಪಿಕಾಡ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಮೊದಲ ಕನ್ನಡ ಚಿತ್ರವಿದು. ನಾನು ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ಅರ್ಜುನ್ ಕಾಪಿಕಾಡ್.
ನಾನು ಈ ಚಿತ್ರದಲ್ಲಿ ಪುರುಷೋತ್ತಮನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ದುಬೈಗೆ ಹೋಗಲು ಪುರುಷೋತ್ತಮ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಿದ್ದಾರೆ. ನನಗೆ ಮೊದಲಿನಿಂದಲೂ ರಂಗಭೂಮಿಯ ನಂಟು. ಟೊರಾಂಟೊ ಯೂನಿವರ್ಸಿಟಿಯಲ್ಲಿ ನಟನೆ ಕುರಿತು ಅಭ್ಯಾಸ ಮಾಡಿದ್ದೇನೆ. ನಾಯಕನಾಗಿ ಮೊದಲ ಚಿತ್ರ ಎಂದು ನಾಯಕ ಅಜಯ್ ತಿಳಿಸಿದರು.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶರಣ್ ಅವರಿಗೆ ಧನ್ಯವಾದ. ಪರಿಶುದ್ಧ ಮನೋರಂಜನೆಯ ಈ ಚಿತ್ರ ಮಾರ್ಚ್ ಒಂದರಂದು ತೆರೆಗೆ ಬರುತ್ತಿದೆ. ದುಬೈ, ಕತಾರ್ ನಲ್ಲೂ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು ಸಹ ನಿರ್ಮಾಪಕ ಶಂಶುದ್ದೀನ್. ನಿರ್ಮಾಪಕ ರವಿಕುಮಾರ್ ಹಾಗೂ ನಾಯಕಿ ರಿಷಿಕಾ ನಾಯ್ಕ್ ಚಿತ್ರದ ಕುರಿತು ಮಾತನಾಡಿದರು.