Power star dharege Doddavanu movie Pooja. “ಪವರ್ ಸ್ಟಾರ್ ಧರೆಗೆ ದೊಡ್ಡವನು” ಅಭಿಮಾನಿಯ ಕಥೆಗೆ ಚಾಲನೆ.

“ಪವರ್ ಸ್ಟಾರ್ ಧರೆಗೆ ದೊಡ್ಡವನು” ಅಭಿಮಾನಿಯ ಕಥೆಗೆ ಚಾಲನೆ.

ನೇತ್ರದಾನ.. ಮಹಾದಾನ… ಎನ್ನುವ ಕಥೆ ಹಿನ್ನೆಲೆಯಲ್ಲಿ ಸಾಗುವ ಚಿತ್ರ.

ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಯ ಸ್ಪೂರ್ತಿದಾಯಕ ವಿಚಾರವೂ ಕಥೆಯ ರೂಪಕವಾಗಿ ಚಿತ್ರೀಕರಣಗೊಳ್ಳಲು ಸಿದ್ಧವಾಗಿರುವಂತಹ ಚಿತ್ರವೇ
“ಪವರ್ ಸ್ಟಾರ್ ಧರೆಗೆ ದೊಡ್ಡವನು”. ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿತು. ಈ ಶುಭ ಸಂದರ್ಭದಲ್ಲಿ ನಿರ್ದೇಶಕ ಶಶಾಂಕ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದ್ದು, ಹಿರಿಯ ನಟ ಸುಚೇಂದ್ರ ಪ್ರಸಾದ್ , ವಿತರಕ ರಮೇಶ್ ಬಾಬು ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭವನ್ನು ಕೋರಿದರು.

ಇದೊಂದು ಸ್ಪೂರ್ತಿದಾಯಕ ಕಥೆಯಾಗಿದ್ದು , ನಿರ್ದೇಶಕ ಸೂರ್ಯ ಮಾತನಾಡುತ್ತಾ ನಾನು ಸುಮಾರು 15 ಚಿತ್ರಗಳಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ಪೂರ್ಣ ಪ್ರಮಾಣದ ನಿರ್ದೇಶನದ ಚಿತ್ರ. ನಾನು ಈ ಹಿಂದೆ 2014ರಲ್ಲಿ ನಟ ಯಶ್ ರವರಿಗೆ ಮಾಡಿದಂತಹ ಕಥೆ. ಆಗಲೇ 50 ಲಕ್ಷ ಖರ್ಚು ಮಾಡಿ ಗ್ರಾಫಿಕ್ಸ್ ಮೂಲಕ ಟೀಸರ್ ಮಾಡಿದ್ವಿ , ಆದರೆ ಬೇರೆ ಬೇರೆ ಕಾರಣಗಳಿಂದ ಚಿತ್ರ ಆರಂಭಗೊಳ್ಳಲಿಲ್ಲ. ಆ ಕಥೆಯನ್ನು ಇಟ್ಟುಕೊಂಡು ಒಂದಷ್ಟು ಬದಲಾವಣೆ ಜೊತೆಗೆ ಈಗ ಚಿತ್ರವನ್ನು ಆರಂಭಿಸಿದ್ದೇವೆ. ಈ ಪವರ್ ಸ್ಟಾರ್ ಧರೆಗೆ ದೊಡ್ಡವನು ಎಂಬ ಟೈಟಲ್ ಇಟ್ಟಾಗ ಫಿಲಂ ಚೇಂಬರ್ ನಿಂದ ಕರೆ ಬಂದಿತ್ತು,

ಚಿತ್ರದ ಸಾರಾಂಶ ಕೊಡಿ ಈ ಟೈಟಲ್ ಬಳಸಿಕೊಳ್ಳುವುದಕ್ಕೆ ಎಂದಿದ್ದರು , ಅದರಂತೆ ನಾವು ಅವರು ಕೇಳಿದ್ದನ್ನ ಕೊಟ್ಟಿದ್ದೇವೆ. ಒಪ್ಪಿಗೆ ಸೂಚಿಸಿ ಅನುಮತಿ ನೀಡಿದ್ದಾರೆ. ಆಗಲೇ ನನಗೆ ಅನಿಸಿತ್ತು ಈ ಚಿತ್ರ ಬೇರೆದೇ ರೂಪ ಪಡೆಯುತ್ತೆ ಅಂತ. ಈ ಚಿತ್ರದ ಒನ್ ಲೈನ್ ಸ್ಟೋರಿ ಹೇಳುವುದಾದರೆ ಕಣ್ಣಿಲ್ಲದ ಮಗುವಿಗೆ ದೃಷ್ಟಿ ಬಂದಾಗ ಆಕೆಯ ಆಸೆ ನೆರವೇರಿಸಿಕೊಳ್ಳಲು ಮುಂದಾಗುವಂತಹ ಕಥಾನಕ ಒಳಗೊಂಡಿರುವ ಅಭಿಮಾನದ ಚಿತ್ರ ಇದಾಗಲಿದೆ. ಈ ಚಿತ್ರದಲ್ಲಿ ಶಿಲ್ಪಿಯ ಪಾತ್ರ ಬಹಳ ಮಹತ್ವವಾದದ್ದು , ಹಾಗಾಗಿ ಒಂದು ಶಿಲೆ ಕೆತ್ತನೆ ವಿಚಾರವಾಗಿ ಅಯೋಧ್ಯೆಯ ಬಾಲರಾಮನ ವಿಗ್ರಹ ಕೆತ್ತಿದಂತಹ ಮೈಸೂರಿನ ಶಿಲ್ಪಿ ಯೋಗಿರಾಜ್ ರವರನ್ನು ಭೇಟಿ ಮಾಡುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ವಿಚಾರವಾಗಿ ನೀಡುತ್ತೇನೆ. ಹಾಗೆ ಒಂದಷ್ಟು ವಿಶೇಷ ವ್ಯಕ್ತಿಗಳನ್ನು ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಬರುತ್ತಾರೆ ಎನ್ನುತ್ತಾ , ಈ ಚಿತ್ರದಲ್ಲಿ ವಿಶೇಷ ತಂತ್ರಜ್ಞಾನದ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪರದೆಯ ಮೇಲೆ ಕಾಣಲಿದ್ದಾರೆ.

“ಪವರ್ ಸ್ಟಾರ್ ಧರೆಗೆ ದೊಡ್ಡವನು” ಎಂಬ ಟೈಟಲ್ ಅಭಿಮಾನಿಗಳ ಹೃದಯ ಗೆಲ್ಲುವಂತಹ ಸಾರಾಂಶ ಬೆಸೆದುಕೊಂಡಿದೆ. ಈಗಾಗಲೇ ಈ ಚಿತ್ರದ (ಏ ಐ) ಗ್ರಾಫಿಕ್ಸ್ ತಂತ್ರಜ್ಞಾನದ ಕೆಲಸ ಬಹುತೇಕ ಪೂರ್ಣಗೊಂಡಿದ್ದು , ಮಾತಿನ ಭಾಗ ಹಾಗೂ ಹಾಡಿನ ಭಾಗ ಚಿತ್ರೀಕರಣ ಮಾಡಬೇಕಿದೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ನಮ್ಮ ಚಿತ್ರ ಬಿಡುಗಡೆ ದಿನಾಂಕವನ್ನು ಮುಹೂರ್ತದ ದಿನದಂದೆ ಘೋಷಣೆ ಮಾಡುತಿದ್ದು, ಈ ಚಿತ್ರ ಅಕ್ಟೋಬರ್ 29 2025ರಂದು ಬಿಡುಗಡೆ ಮಾಡುತ್ತೇವೆ. ನಿಮ್ಮೆಲ್ಲರ ಪ್ರೀತಿ ,ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.

ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿ ಖ್ಯಾತಿ ಪಡೆದಂತ ಪುಟಾಣಿ ಜ್ಞಾನ ಗುರುರಾಜ್ ಮಾತನಾಡುತ್ತ ನನಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂದರೆ ತುಂಬಾ ಇಷ್ಟ. ಈ ಚಿತ್ರದಲ್ಲಿ ಆಕ್ಟ್ ಮಾಡುವುದಕ್ಕೆ ಖುಷಿ ಇದೆ ಎಂದಳು. ಈ ಚಿತ್ರದಲ್ಲಿ ಕಣ್ಣಿಲ್ಲದ ಮಗುವಿಗೆ ದೃಷ್ಟಿ ಬಂದಾಗ ಏನೆಲ್ಲಾ ಎದುರಿಸುತ್ತೆ ಹಾಗೂ ತನ್ನ ಅಭಿಮಾನವನ್ನು ಯಾವ ರೀತಿ ತೋರ್ಪಡಿಸುತ್ತೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಿದ್ದಳಂತೆ. ಇನ್ನು ಯುವ ರಂಗಭೂಮಿ ಪ್ರತಿಭೆ ಪಾಳ್ಯ ಸಿದ್ದಿ ವಿಲಾಸ್ ಶಿಲ್ಪಿಯ ಪಾತ್ರ ನಿರ್ವಹಿಸುತ್ತಿದ್ದಾರಂತೆ. ಅನುಭವಿ ಹಿರಿಯ ನಟ ಸುಚೇಂದ್ರ ಪ್ರಸಾದ್ ಹಾಗೂ ಯುವ ಪ್ರತಿಭೆಗಳು ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಜಯ್ ಭಾಸ್ಕರ್ ಛಾಯಾಗ್ರಾಹಣ ಮಾಡ್ತಿದ್ದು ,
ಭದ್ರಾವತಿ ಮೂಲದ ಪ್ರತಿಭೆ
ಅನುಶ್ರೀ ಶ್ರೀಧರ್ ಮೂರ್ತಿ ಸಂಗೀತ ನೀಡುತ್ತಿದ್ದಾರೆ.

ರಂಗಭೂಮಿಯ ಅನುಭವ ಹೊಂದಿದ್ದು , ನಾಟಕಗಳಲ್ಲಿ ನಟನೆ , ಸಂಗೀತ ಮಾಡಿರುವ ಈ ಪ್ರತಿಭೆ ಮೊದಲ ಬಾರಿಗೆ ಈ ಚಿತ್ರದ ಐದು ಹಾಡುಗಳಿಗೆ ಸಂಗೀತದ ಜೊತೆಗೆ ಹಿನ್ನೆಲೆ ಸಂಗೀತವನ್ನು ಒದಗಿಸುತ್ತಿದ್ದಾರೆ. ಇನ್ನು ವಿಶೇಷವಾಗಿ ಈ ಚಿತ್ರಕ್ಕೆ ವಿಶ್ ಯು ಎಫೆಕ್ಟ್ಸ್ ಅನ್ನ ನೀಡುತ್ತಿದ್ದಾರೆ ಸಿದ್ದೇಶ್ ಹಿರೇಮಠ. ಈಗಾಗಲೇ ಪ್ರೊಮೋ , ಸಣ್ಣ ಸಣ್ಣ ತುಣುಕುಗಳ ಮೂಲಕ ತಮ್ಮ ಕೆಲಸವನ್ನು ಆರಂಭಿಸಿದ್ದು, ಹೊಸ ತಂತ್ರಜ್ಞಾನದ ಚಮತ್ಕಾರವನ್ನು ತೆರೆಯ ಮೇಲೆ ತೋರಿಸಲಿದ್ದಾರಂತೆ. ಇನ್ನು ಈ ಚಿತ್ರಕ್ಕೆ ದಾವಣಗೆರೆ ಮೂಲದ ಪ್ರದೀಪ್ ಮಂಜುನಾಥ್ ಕಾರ್ಯಕಾರಿ ನಿರ್ಮಾಪಕರಾಗಿದ್ದು , ಈಗಾಗಲೇ ಇವರು ಹಲವಾರು ಚಿತ್ರಗಳನ್ನು ವಿತರಣೆ ಮಾಡಿದ ಅನುಭವವನ್ನು ಹೊಂದಿದ್ದಾರೆ.
ಈಗಾಗಲೇ ತಂಡ ಬಹಳಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡು ಮುಂದೆ ಸಾಗಿದ್ದು , ಅಪ್ಪು ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆಯ ಜೊತೆಗೆ ಖುಷಿಯನ್ನು ನೀಡಲು ಸಿದ್ಧವಾಗಿದ್ದು , ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಲಿದೆಯಂತೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor