Paru Parvati movie review. “ಪಾರು ಪಾರ್ವತಿ” ಚಿತ್ರ ವಿಮರ್ಶೆ.
ಚಿತ್ರ ವಿಮರ್ಶೆ
Rating – 3/5.
ಚಿತ್ರ: ಪಾರುಪಾರ್ವತಿ
ನಿರ್ಮಾಣ: ಪ್ರೇಮ್‍ನಾಥ್
ನಿರ್ದೇಶನ: ರೋಹಿತ್ ಕೀರ್ತಿ
ಸಂಗೀತ : ಹರಿ
ಛಾಯಾಗ್ರಹಣ : ಅಭಿನ್ ರಾಜೇಶ್
ಸಂಕಲನ :
ತಾರಾಗಣ: ದೀಪಿಕಾ ದಾಸ್, ಪೂನಂ ಸರ್ನಾಯಕ್, ಫವಾಜ್ ಅಶ್ರಫ್, ‘ಸಿದ್ಲಿಂಗು’ ಶ್ರೀಧರ್ ಮುಂತಾದವರು
ಹಲವು ತಿರುವುಗಳ, ಕೆಲವು ಸಂಭಂದಗಳ, ಮಾನವೀಯ ಒಳ, ಹೊರ ಅರ್ಥಗಳ, ಗಮ್ಯ ಪಯಣ.

ಇಲ್ಲಿ ಎರಡು ವಯೋಮಾನದ, ಎರಡು ಪಾತ್ರಗಳ, ವಿಭಿನ್ನ ಆಸೆಗಳೊಂದಿಗಿನ, ಬೇರೆಯದೇ ಬಯಕೆಗಳ ಪಾತ್ರವನ್ನು ನಿರ್ದೇಶಕರು ಎಣೆದಿದ್ದಾರೆ.
ಆಗತಾನೆ ಸೀನಿಯರ್ ಸಿಟಿಜನ್ ಲೋಕಕ್ಕೆ ಕಾಲಿಟ್ಟ ಪಾರ್ವತಿಗೆ ಉತ್ತರಖಾಂಡದಲ್ಲಿರುವ ತನ್ನ ಪತಿ ರಾಯನೊಂದಿಗೆ ತಮ್ಮ 50ನೇ ಮದುವೆ ವಾರ್ಷಿಕೊತ್ಸವವನ್ನು ಆಚರಿಸಿಕೊಳ್ಳಬೇಕೆಂಬ ಬಯಕೆ.
ಆದರೆ, ಅದು ಹೇಗೆ ಬೆಂಗಳೂರಿನಿಂದ ಅಲ್ಲಿಗೆ ಹೇಗೆ ಹೋಗಬೇಕು, ಏನು ಮಾಡಬೇಕು ಎಂಬುದು ತಿಳಿಯದ ವಿಷಯ. ಆಗ ಈಕೆಗೆ ಜೊತೆಯಾಗುವುದೇ ಮತ್ತೊಂದು ಪಾತ್ರ
ಬ್ಲಾಗರ್ ಆಗಿ ಜಾಲತಾಣದಲ್ಲಿ ದೊಡ್ಡ ಹೆಸರು ಮಾಡಿರುವ ಯುವ ಯುವತಿ ಪಾಯಲ್.
ಈಕೆ ಉತ್ತರ ಖಾಂಡಾಗೆ ಹಿರಿಯರಾದ ಪಾರ್ವತಿಯನ್ನು ಅವರ ಗಮ್ಯ ಮುಟ್ಟಿಸಲು ಸಾಥ್ ನೀಡುತ್ತಾಳೆ.
ಇವರೊಂದಿಗೆ ಮತ್ತೊಬ್ಬ ಸೇರಿಕೊಳ್ಳುತ್ತಾನೆ. ಈ ಪ್ರಯಾಣದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದೇ ‘ಪಾರುಪಾರ್ವತಿ’ ಚಿತ್ರದ ಕಥೆ.

‘ಪಾರುಪಾರ್ವತಿ’ ಒಂದು ಸಾಹಸಭರಿತ, ರೋಮಾಂಚಕ ಪ್ರಯಾಣದ ಚಿತ್ರ ಬೆಂಗಳೂರಿನಲ್ಲಿ ಶುರುವಾಗಿ ಉತ್ತರಾಖಾಂಡದ ವರೆಗೂ ಪಯಣಿಸಿ, ಕೊನೆಗೆ ಪುನಃ ಬೆಂಗಳೂರಿನಲ್ಲೇ ಅಂತ್ಯವಾಗುತ್ತದೆ.
ಇಲ್ಲಿ ಎರಡು ವಿಭಿನ್ನ ಕಥೆಯ ಪ್ರಮುಖ ಪಾತ್ರಗಳಿವೆ. ಒಂದು ಪಾರ್ವತಿಯದ್ದಾದರೆ, ಇನ್ನೊಂದು ಪಾಯಲ್‍ದು.
ಇಬ್ಬರಿಗೂ ಅವರದ್ದೇ ಆದ ಬೇರೆ ಬೇರೆಯ ಸಮಸ್ಯೆಗಳಿವೆ, ಅವರದ್ದೇ ಆದ ನೋವುಗಳಿವೆ.
ಜೀವನದಲ್ಲಿ ಮಾಗಿ ಸೋತ ಹಿರಿಯ ಜೀವ ಹಾಗೂ ಆಗ ತಾನೆ ಬದುಕಿನ ಮಜಲಿಗೆ ತೆರೆದಿಕೊಳ್ಳಬೇಕಿದ್ದ ಹುಡುಗಿ ತನ್ನ ತಪ್ಪಿನಿಂದ ಎಡವಿದ ನೋವಿನಿಂದ ಆಚೆ ಬರುವುದಕ್ಕೆ ಪ್ರಯಾಣದ ಮೊರೆ ಹೋಗುತ್ತಾರೆ.
ಈ ಪ್ರಯಾಣದಲ್ಲಿ ಇಬ್ಬರಿಗೂ ಹೊಸ ಬೆಳಕು ಮೂಡುತ್ತದೆ. ಜೀವನವೆಂದರೆ ಏನು ಎಂಬುದನ್ನು ಈ ಪಯಣದ ಮೂಲಕ ಪಾಠ ಕಲಿಯುತ್ತಾರೆ.

ಇತ್ತೀಚೆಗೆ ಹೆಣ್ಣುಮಕ್ಕಳು ಏಕಾಂಗಿಯಾಗಿ ಖುಷಿ, ನೆಮ್ಮದಿಯನ್ನು ಹುಡುಕಿಕೊಂಡು ಪಯಣಿಸುವುದು ಹೆಚ್ಚಾಗುತ್ತಿದೆ.
ಮೇಲ್ನೋಟಕ್ಕೆ ‘ಪಾರುಪಾರ್ವತಿ’ ಒಂದು ಪ್ರವಾಸದ ಮತ್ತು ಪ್ರಯಾಣದ ಕಥೆ ಅಂತನಿಸಿದರೂ, ಕಥೆಯೊಳಗೆ ಸಾಕಷ್ಟು ಮನ ಮುಟ್ಡುವ ವಿಷಯಗಳಿವೆ.
ಪ್ರಯಾಣದ ಉದ್ದಕ್ಕೂ ಸುಂದರ ದೃಶ್ಯಗಳನ್ನು ಸೆರೆಹಿಡುದು ಪ್ರೇಕ್ಷಕರ ಮುಂದಿಟ್ಟಿದ್ದಾರೆ ಛಾಯಾಗ್ರಾಹಕ ಅಭಿನ್ ರಾಜೇಶ್.
ಒಂದು ಪ್ರವಾಸವೆಂದರೆ ಅದು ಒಂದೇ ರೀತಿಯಾಗಿರುವುದಿಲ್ಲ. ಕೆಲವೊಮ್ಮೆ ಅಡ್ವೆಂಚರ್ ಆಗಿರುತ್ತದೆ. ಕೆಲವೊಮ್ಮೆ ನೀರಸವಾಗಿ ಪಯಣದ ದಾರಿ ಸಾಗುತ್ತದೆ.
‘ಪಾರುಪಾರ್ವತಿ’ ಸಹ ಹಾಗೆಯೇ ಇದೆ. ಕೆಲವೊಮ್ಮೆ ಚಿತ್ರದಲ್ಲಿ ಅನಿರೀಕ್ಷಿತ ತಿರುವುಗಳು ಬಂದು ರೋಚಕವೆನಿಸಿದರೆ, ಇನ್ನೂ ಕೆಲವೊಮ್ಮೆ ನೀರಸವೆನಿಸುತ್ತದೆ. ಚಿತ್ರವನ್ನು ಇನ್ನಷ್ಟು ಟ್ರಿಮ್ ಮಾಡಿ, ಒಂದಿಷ್ಟು ಅನಾವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, ಪ್ರಯಾಣ ಮತ್ತಷ್ಟು ಜಾಲಿಯಾಗಿರುತ್ತಿತ್ತು.

ಮನ ಮುಟ್ಟುವ ಹೃದಯ ತಟ್ಟುವ ಕಥೆಯ ಚಿತ್ರ. ಅದೆಷ್ಟೋ ಜೀವಗಳು ತಮ್ಮ ಬದುಕಿನ ನೋವುಗಳನ್ನು ಹೇಳಿಕೊಳ್ಳಲಾಗದೆ, ಒಳಗೇ ಅದುಮಿಟ್ಟುಕೊಂಡು, ಉಸಿರುಗಟ್ಟಿ ಬದುಕುತ್ತಿರುವ ಜನರು, ತಮ್ಮನ್ನು ತಾವೇ ಈ ಚಿತ್ರದಲ್ಲಿ ನೋಡಿಕೊಳ್ಳಬಹುದಾದ, ಬದುಕಿನ ಪಾಠವನ್ನು ಅರಿಯಬಹುದಾದ ಚಿತ್ರ ಇದಾಗಿದೆ ಎನ್ನಬಹುದು.
ಚಿತ್ರದ ಕಥೆಯ ಓಟದ ಏರಿಳಿತಗಳ ಪಯಣಕ್ಕೆ ಸಂಗೀತ ಸಂಯೋಜಕ ಹರಿ ಇಂದನವಾಗಿದ್ದಾರೆ.
ಚಿತ್ರದಲ್ಲಿ ಒಂಬತ್ತು ಸಣ್ಣ ಸಣ್ಣ ಹಾಡುಗಳಿದ್ದು, ಪ್ರಯಾಣ ಮತ್ತಷ್ಟು ಮುದ ನೀಡುತ್ತದೆ.

ಪೂನಂ ಸರ್ನಾಯಕ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಆದರೆ, ಭಾಷೆ ಗೊತ್ತಿಲ್ಲದ ಅವರನ್ನು ಸಹಿಸಿಕೊಳ್ಳ ಬೇಕಾಗುತ್ತದೆ. ನಿರ್ದೇಶಕರು ಕನ್ನಡದವರಿಂದಲೇ ಈ ಪಾತ್ರ ಮಾಡಿಸಿದ್ದರೆ ಆ ಪಾತ್ರಕ್ಕೆ ಮತ್ತಷ್ಟು ನ್ಯಾಯ ಸಿಗುತಿತ್ತು. ಇವರಿಗೆ ನಮ್ಮ ಸುಧಾರಾಣಿ ಧ್ವನಿ ನೀಡಿದ್ದಾರೆ. ಎಷ್ಟೋ ಕಡೆ ಲಿಪ್ ಸಿಂಕ್ ಆಗಿಲ್ಲ. ಕೆಲವು ಕಡೆ ಭಾವನೆಗಳೇ ಗೊತ್ತಾಗುವುದಿಲ್ಲ.
ಈ ಪಾತ್ರ ಇಳಿವಯಸ್ಸಿನ ಹರೆಯದವರ ಮನಸ್ಸಿನ ದುಗುಡಗಳ ಭಾವನಾತ್ಮಕವನ್ನು ಮನ ಮುಟ್ಟುವಂತೆ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ವಿಫಲಬಾಗಿದ್ದಾರೆ ಎನ್ನಬಹುದು.
ಹಾಗೆಯೇ ಫವಾಜ್ ಅಶ್ರಫ್ ಪಾತ್ರವನ್ನೂ ಕನ್ನಡದವರಿಂದಲೇ ಮಾಡಿಸಬಹುದಿತ್ತು.
ಇನ್ನು, ದೀಪಿಕಾ ದಾಸ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತೆರೆಯ ಮೇಲೆ ಲವಲವಿಕೆಯೊಂದಿಗೆ ಕಾಣಿಸಿದ್ದಾರೆ.

ಇಲ್ಲಿ ಕಾರು ಕೂಡ ಒಂದು ಪಾತ್ರವಾಗಿದೆ.
ನಿರ್ಮಾಪಕರಾದ ಪ್ರೇಮ್ ನಾಥ್ ಚಿತ್ರಕ್ಕೆ ಹಾಣ ಹೂಡಿ ಒಂದು ಒಳ್ಳೆಯ ಚಿತ್ರವನ್ನು ನೀಡಲು ಶ್ರಮಿಸಿದ್ದಾರೆ. ಪ್ರೇಕ್ಷಕರು ಅವರ ಈ ಪ್ರಯತ್ನಕ್ಕೆ ಕೈ ಹಿಡಿಯ ಬೇಕಷ್ಟೇ…
ಕನಸ್ಸು ಮತ್ತು ಮನಸ್ಸು ಎರಡನ್ನು ಸರಿ ಹೊಂದಿಸಿ ಬದುಕಿನ ಆಸೆಗಳ ಗಮ್ಯವನ್ನು ಮುಟ್ಟುವ ಸಲುವಾಗಿ ಪರಿತಪಿಸುವ ಪ್ರೇಕ್ಷಕರು
‘ಪಾರುಪಾರ್ವತಿ’ ಚಿತ್ರವನ್ನು ನೋಡಬಹುದು.