Pan India movie “Baban shooting started. ಬಬನ್” ಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆ.
“ಬಬನ್” ಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆ
ಕೆಜಿಎಫ್, ಕಾಂತಾರ ಚಿತ್ರಗಳ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣದತ್ತ ಬಹುತೇಕ ನಿರ್ಮಾಪಕರು ಒಲವು ತೋರುತ್ತಿದ್ದಾರೆ. ಅಂಥದ್ದೇ ಹೊಸ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ. ಅದರ ಶೀರ್ಷಿಕೆ ಬಬನ್. ಚಿತ್ರದಲ್ಲಿ ಇದು ನಾಯಕನ ಹೆಸರು. ನೈಟ್ ಹುಡ್ ಪ್ರೊಡಕ್ಷನ್ಸ್ ಅಡಿ ಈ ಚಿತ್ರವನ್ನು ಮಾಲಾ ರಮೇಶ್ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ.
ನಾಗರಭಾವಿಯ ಶ್ರೀ ವೆಂಕಟೇಶ್ವರ ವಿನಾಯಕ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಆಷಾಢ ಕಳೆದ ನಂತರ ಆಗಸ್ಟ್ ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಕನ್ನಡ, ತೆಲುಗು ತಮಿಳು ಸೇರಿದಂತೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕುಶಾಲ್ ರಾಘವೇಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಚಿತ್ರದ ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ.
ಚೆನ್ನೈನ ಇಂಡಿಯನ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಭಿನಯ, ನಿರ್ದೇಶನ ಪಾಠ ಕಲಿತ ಕುಶಾಲ್, ಗಂಗೋತ್ರಿ, ಸಾಗುತ ದೂರ ಸೇರಿ ಹಲವಾರು ಕನ್ನಡ, ಹಿಂದಿ ಸೀರಿಯಲ್ ಗಳಲ್ಲಿ ಹಾಗೂ ಸಿನಿಮಾಗಳಲ್ಲೂ ಸಹ ಬಣ್ಣ ಹಚ್ಚಿದ್ದಾರೆ. ಇವರ ನಿರ್ದೇಶನದ ತಮಿಳು ಚಿತ್ರವಿನ್ನೂ ರಿಲೀಸಾಗಬೇಕಿದೆ. ತಮ್ಮ ಎರಡನೇ ಪ್ರಯತ್ನದಲ್ಲೇ ಪ್ಯಾನ್ ಇಂಡಿಯಾ ಬಬನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇನ್ನು ಈ ಚಿತ್ರದ ನಾಯಕಿಯಾಗಿ ರಾಧಾ ಭಗವತಿ ಕಾಣಿಸಿಕೊಳ್ಳುತ್ತಿದ್ದು, ಇವರೂ ಸಹ ರಾಮಾಚಾರಿ, ಅಮೃತಧಾರೆ ಸೀರಿಯಲ್ ಅಲ್ಲದೆ ವಸಂತ ಕಾಲದ ಹೂಗಳು ಚಿತ್ರದಲ್ಲಿ ನಟಿಸಿದ್ದಾರೆ.
ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ಬಬನ್ ಚಿತ್ರಕ್ಕೆ ವೀರೇಶ್ ಎನ್.ಟಿ.ಎ. ಅವರ ಕ್ಯಾಮೆರಾವರ್ಕ್, ಶಾಜಹಾನ್ ಅವರ ಸಂಗೀತ ಸಂಯೋಜನೆ ಹಾಗೂ ಚಂದನ್ ಅವರ ಸಂಕಲನವಿದೆ.