Nenapina Haadiyali Onti Payana Album Song Release

“ನೆನಪಿನ ಹಾದಿಯಲಿ ಒಂಟಿ ಪಯಣ” ಆಲ್ಬಂ ಸಾಂಗ್ ಬಿಡುಗಡೆ

ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ಮೂಲಕ ಈ ಹಿಂದೆ ಸಂಚಾರಿ ವಿಜಯ್ ಅಭಿನಯದ “6 ನೇ ಮೈಲಿ” ಹಾಗೂ ಪ್ರಸ್ತುತ ವಸಿಷ್ಠ ಸಿಂಹ ಅಭಿನಯದ “ತಲ್ವಾರ್ ಪೇಟೆ” ಚಿತ್ರಗಳ ನಿರ್ಮಾಪಕ ಡಾ||ಶೈಲೇಶ್ ಕುಮಾರ್ ಅವರು ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರ ಮೊದಲ ಹಜ್ಜೆಯಾಗಿ “ನೆನಪಿನ ಹಾದಿಯಲ್ಲಿ ಒಂಟಿ ಪಯಣ” ಎಂಬ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ.

ಡಾ||ಶಶಿಕಲಾ ಪುಟ್ಟಸ್ವಾಮಿ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಟ ಪ್ರವೀಣ್ ತೇಜ್ ಹಾಗೂ ನಟಿ ಯಶಾ ಶಿವಕುಮಾರ್ ಅಭಿನಯಿಸಿದ್ದಾರೆ. ಸಾಯಿ ಶ್ರೀಕಿರಣ್ ಸಂಗೀತ ನೀಡಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಈ ಹಾಡಿಗಿದೆ.

ಇತ್ತೀಚೆಗೆ “ನೆನಪಿನ ಹಾದಿಯಲ್ಲಿ ಒಂಟಿ ಪಯಣ” ಆಲ್ಬಂ ಸಾಂಗ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಖ್ಯಾತ ಹಾಕಿ ಆಟಗಾರ ಧನರಾಜ್ ಪಿಳ್ಳೈ, ಡಾ||ವಿ.ನಾಗೇಂದ್ರ ಪ್ರಸಾದ್, ಲಕ್ಕಣ್ಣ ಅವರು ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನಿರ್ಮಾಪಕ ಡಾ||ಶೈಲೇಶ್ ಕುಮಾರ್ ಮಾತನಾಡಿ, ಹಾಡು ಚೆನ್ನಾಗಿದೆ. ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದೇವೆ. ಆ ಮೂಲಕ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಹೊಸಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.

ಸಂಗೀತ ನಿರ್ದೇಶಕ ಸಾಯಿ ಶ್ರೀಕಿರಣ್ ಅವರಿಂದ ಈ ತಂಡದ ಪರಿಚಯವಾಯಿತು. ಶಶಿಕಲಾ ಅವರು ಬರೆದಿರುವ ಈ ಹಾಡು ಸುಂದರವಾಗಿದೆ. ಅಷ್ಟೇ ಚೆನ್ನಾಗಿ ನಿರ್ದೇಶನ ಕೂಡ ಮಾಡಿದ್ದಾರೆ. ಇಡೀ ತಂಡದ ಪರಿಶ್ರಮದಿಂದ ಹಾಡು ಚೆನ್ನಾಗಿ ಬಂದಿದೆ ಎಂದು ನಟ ಪ್ರವೀಣ್ ತೇಜ್ ಹೇಳಿದರು.

ಇದು ನನ್ನ ಮೊದಲ ಆಲ್ಬಂ ಸಾಂಗ್. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು ನಟಿ ಯಶಾ ಶಿವಕುಮಾರ್.

ಹಾಡು ಬರೆದು ನಿರ್ದೇಶಿಸಿರುವ ಡಾ||ಶಶಿಕಲಾ ಪುಟ್ಟಸ್ವಾಮಿ , ಛಾಯಾಗ್ರಾಹಕ ಚಂದ್ರಶೇಖರ್ ಹಾಗೂ ಸಂಗೀತ ನಿರ್ದೇಶಕ ಸಾಯಿ ಶ್ರೀಕಿರಣ್ ಹಾಡಿನ ಬಗ್ಗೆ ಮಾತನಾಡಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor