Nanu Bhartiya five language movie started song recording. ಪಂಚಭಾಷೆಗಳಲ್ಲಿ ಬರುತ್ತಿದೆ “ನಾನು ಭಾರತೀಯ”
ಪಂಚಭಾಷೆಗಳಲ್ಲಿ ಬರುತ್ತಿದೆ “ನಾನು ಭಾರತೀಯ”
ಬಾಬು ಗಣೇಶ್ ನಿರ್ದೇಶನದಲ್ಲಿ ರಾಗಿಣಿ ದ್ವಿವೇದಿ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ ಆರಂಭ .
ಬಾಲ ವಿಘ್ನೇಶ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಬಾಬು ಗಣೇಶ್ ನಿರ್ದೇಶನ, ಸಂಗೀತ ನಿರ್ದೇಶನದ ಹಾಗೂ ರಾಗಿಣಿ ದ್ವಿವೇದಿ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ” ನಾನು ಭಾರತೀಯ ” ಚಿತ್ರದ ಹಾಡುಗಳ ಧ್ವನಿಮುದ್ರಣ ಇತ್ತೀಚಿಗೆ ಅರುಣ್ ಸ್ಟುಡಿಯೋದಲ್ಲಿ ಆರಂಭವಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಸುಂದರರಾಜ್, ಜಯಸಿಂಹ ಮುಸುರಿ ಮುಂತಾದ ಗಣ್ಯರು ಹಾಡುಗಳ ಧ್ವನಿಮುದ್ರಣ ಪೂಜಾ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಛಾಯಾಂಕ ಅವರು ಬರೆದಿರುವ ಹಾಗೂ ಸಚಿನ್, ಸ್ವಾತಿ ಹಾಡಿರುವ “ವಂದೇ ಮಾತರಂ” ಹಾಡಿನ ಮೂಲಕ ಚಾಲನೆ ನೀಡಲಾಯಿತು.

ಈವರೆಗೂ 12 ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಬಾಬು ಗಣೇಶ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ, ಸಂಗೀತ ನಿರ್ದೇಶನ, ನಿರ್ಮಾಣ, ನಿರ್ದೇಶನ, ನಟನೆ ಸೇರಿದಂತೆ ಹದಿನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡಿರುವುದು ವಿಶೇಷ. ಈ ಹಿಂದೆ ಕೂಡ ಬಾಬು ಗಣೇಶ್ ಅವರು “ನಡಿಗೈ” ತಮಿಳು ಚಿತ್ರದಲ್ಲೂ ಹದಿನಾಲ್ಕು ವಿಭಾಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಅದು ಕೂಡ ಗಿನ್ನಿಸ್ ಬುಕ್, ಲಿಮ್ಕಾ ಬುಕ್ ಹಾಗೂ ವಂಡರ್ ಬುಕ್ ಗಳಿಗೆ ದಾಖಲಾಗಿತ್ತು.
ಚಿತ್ರದ ಹೆಸರು ತಿಳಿಸುವಂತೆ ಇದೊಂದು ದೇಶಪ್ರೇಮದ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಈಗಾಗಲೇ ಚಿತ್ರಕ್ಕೆ ಶೇಕಡಾ 70 ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಶ್ರೀಲಂಕಾ, ಪಾಂಡಿಚೇರಿ, ಬೆಂಗಳೂರು, ಮೈಸೂರು ಹಾಗೂ ಕೊಡೈಕೆನಾಲ್ ನಲ್ಲಿ ಚಿತ್ರೀಕರಣವಾಗಿದೆ.
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಐದು ಹಾಡುಗಳಿದೆ. ರಾಹುಲ್, ರಮಾದೇವಿ ಹಾಗೂ ಅಂತೋಣಿ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ನಾದನ್ ಲೀ ಅವರು ಸಾಹಸ ಸಂಯೋಜಿಸುತ್ತಿರುವ ಆಕ್ಷನ್ ಸನ್ನಿವೇಶಗಳು ಎಲ್ಲರ ಗಮನ ಸೆಳೆಯಲಿದೆ. ಸಾಗರ್ ವಿನೋದ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ರಾಗಿಣಿ ದ್ವಿವೇದಿ, ರಿಶಿಕಾಂತ್, ಶ್ರೀಜಿತ್, ಬಾಬು ಗಣೇಶ್, ಮೆಹಾಲಿ, ಬಸಂತ್, ರವಿ, ನಮಿತ, ರಿಷಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಶೇಷಪಾತ್ರದಲ್ಲಿ ಗುರುಪ್ರಸಾದ್(ಪಿ ಯು ಎಸ್) ಹಾಗೂ ಟಿ.ರಾಜೇಂದರ್ ನಟಿಸುತ್ತಿದ್ದಾರೆ.