Naa kolike Ranga movie release on Nov.10th.ಮಾಸ್ಟರ್ ಆನಂದ್ ಅಭಿನಯದ” ನಾ ಕೋಳಿಕ್ಕೆ ರಂಗ” ನವೆಂಬರ್10ಕ್ಕೆ ರಿಲೀಸ್.

ನಾ ಕೋಳಿಕ್ಕೆ ರಂಗ ನವೆಂಬರ್10ಕ್ಕೆ ರಿಲೀಸ್: ಇದು ಮಾಸ್ಟರ್ ಆನಂದ್ ಚಿತ್ರ

‘ ನಾನು‌ ಕೋ ಕೋ ಕೋಳಿಕ್ಕೆ ರಂಗ…’ ಬಹುಶಃ ಈ ಹಾಡನ್ನು ಕೇಳದವರೇ ಇಲ್ಲ. ಈ ಹಾಡು ಇಂದಿಗೂ ಎವರ್ ಗ್ರೀನ್. ಇಷ್ಟಕ್ಕೂ ಈ ಹಾಡಿನ ಬಗ್ಗೆ ಹೇಳೋಕೆ ಕಾರಣ ‘ ನಾ ಕೋಳಿಕ್ಕೆ‌ರಂಗ’ ಸಿನಿಮಾ.

ಹೌದು, ಮಾಸ್ಟರ್ ಆನಂದ್ ಈ ಸಿನಿಮಾದ ಹೀರೋ. ಇದೊಂದು ಹಳ್ಳಿ ಕಥೆ. ಸಿನಿಮಾದ ಶೀರ್ಷಿಕೆ ಹೇಳುವಂತೆ, ಕೋಳಿ ಹಾಗು ರಂಗನ ಕಥೆ. ಅದೊಂದು ಅಪರೂಪದ‌ ಭಾವ ಸಂಗಮ. ಈ ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 10 ರಂದು ರಿಲೀಸ್ ಆಗುತ್ತಿದೆ.

ತಮ್ಮ ಸಿನಿಮಾ ಬಗ್ಗೆ ಮಾತಿಗಿಳಿದ ನಾಯಕ ಮಾಸ್ಟರ್ ಆನಂದ್, ‘ಕೊರೊನಾ ಮೊದಲು ಚಿತ್ರ ಶುರುವಾಗಿತ್ತು. ಆ ನಂತರ ಸಮಸ್ಯೆ ಎದುರಾಯ್ತು. ಈಗ ಸಿನಿಮಾ ಪ್ರೇಕ್ಷಕರ ಎದುರು ಬರಲು ರೆಡಿಯಾಗಿದೆ. ಚಿತ್ರದಲ್ಲೊಂದು ಹಾಡಿದೆ. ‘ ಮರೆಯೋದುಂಟೆ ಮೈಸೂರ ದೊರೆಯ’ ಈ ಹಾಡು ಹೈಲೆಟ್. ಮೈಸೂರು ದಸರಾ ಮತ್ತು‌ ಮಹಾರಾಜರ ಬಗ್ಗೆ ವಿಷಯವಿದೆ. ಹಾಗಾಗಿ ದಸರಾ ವೇಳೆ ರಿಲೀಸ್ ಮಾಡುವ ಉದ್ದೇಶ ಇತ್ತು. ನವೆಂಬರ್ 10 ರಂದು ಬಿಡುಗಡೆ ಆಗಲಿದೆ ಎಂದರು.

ಇಲ್ಲಿ ಕೋಳಿ ರಂಗ ಮತ್ತು ಅಮ್ಮನ ಕಥೆ ಇದೆ. ಮಂಡ್ಯ ಭಾಗದಲ್ಲೇ ಶೇ. 90 ರಷ್ಟು ಚಿತ್ರೀಕರಣ ಮಾಡಿದ್ದೇವೆ. ಅಲ್ಲಿನ ಸಂತೆ ಕಸಲಗೆರೆ ಎಂಬ ಊರಲ್ಲಿ ಶೂಟಿಂಗ್ ಆಗಿದ್ದು ವಿಶೇಷ. ಮಂಡ್ಯ ಮೈಸೂರು ಸೊಗಡಿನ ಭಾಷೆ ಇದೆ.

ಇನ್ನು‌ ಭವ್ಯಾ ಮೇಡಮ್ ಅವರು ತಾಯಿ ಪಾತ್ರ ಮಾಡಿದ್ದಾರೆ. ಅವರು ಹಿರಿಯ ಕಲಾವಿದರು. ನನ್ನ ತಾಯಿ ಪಾತ್ರ ಮಾಡಲು ಒಪ್ಪಿದ್ದೇ ಖುಷಿ. ಇದೊಂದು ರೀತಿ ಟ್ರಯಂಗಲ್ ಸ್ಟೋರಿ. ಹಾಗಂತ ಲವ್ ಸ್ಟೋರಿ ಅಲ್ಲ, ಕೋಳಿ ರಂಗ ಮತ್ತು ಅಮ್ಮನ ವಾತ್ಸಲ್ಯದ ಕಥೆ ಇದೆ. ಕೋಳಿ ಮತ್ತು ಅಮ್ಮನ ಮೇಲೆ ರಂಗನಿಗೆ ಪ್ರೀತಿ. ಘಟನೆ ಒಂದರಲ್ಲಿ ರಂಗನಿಗೆ ಈ ಎರಡರಲ್ಲಿ ಯಾವುದು ಮುಖ್ಯ ಆಗುತ್ತೆ ಅನ್ನೋದು ಸಸ್ಪೆನ್ಸ್.

ಇಲ್ಲಿ ಮನರಂಜನೆ ಜಾಸ್ತಿ ಇದೆ. ರಾಜೇಶ್ವರಿ ಅವರು ನಾಯಕಿಯಾಗಿ ಚೆನ್ನಾಗಿ ನಟಿಸಿದ್ದಾರೆ. ಹಳ್ಳಿ ಪ್ರಭಾವಿ ವ್ಯಕ್ತಿ ಮೇಲೆ ದ್ವೇಷ ಬರಲು ನಾಯಕಿ ಕಾರಣ. ಊರು ಬಿಡೋಕು‌ ನಾಯಕಿ ಕಾರಣ ಆಗುತ್ತಾಳೆ. ಕಾಮಿಡಿ ಕಿಲಾಡಿ ತಂಡ ಕೂಡ ನಟಿಸಿದೆ. ಉಳಿದಂತೆ ಹಾಸ್ಯ ಸನ್ನಿವೇಶದಲ್ಲಿ ಸ್ವತಂತ್ರ ನೀಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಕೂಡ ಸಿನಿಮಾಗೆ ಯಾವ ಕೊರತೆ ಇಲ್ಲದಂತೆ ಮಾಡಿದ್ದಾರೆ. ರಾಜು ಎಮ್ಮಿಗನೂರು ಸಂಗೀತ ಇದೆ. ಇದೇ ಮೊದಲ ಸಲ ಅಪ್ಪು ಅವರು ನನ್ನ ಸಿನಿಮಾದ ಇಂಟ್ರಡಕ್ಷನ್ ಸಾಂಗ್ ಹಾಡಿದ್ದಾರೆ. ಅದು ಮರೆಯದ ಅನುಭವ ಎಂದರು ಮಾಸ್ಟರ್ ಆನಂದ್.

ನಿರ್ದೇಶಕ ಗೊರವಾಲೆ ಮಹೇಶ್ ಮಾತನಾಡಿ, ಇದು ನನ್ನ ಮೊದಲ ಚಿತ್ರ. ಮೌಢ್ಯಗಳ ಕುರಿತು ಕಥೆ ಸಾಗಲಿದೆ. ಹರಕೆಗೆ ಬಲಿ ಬಗ್ಗೆಯ ಹಳ್ಳಿ ಕಥೆ ಇದೆ. ಒಂದೊಳ್ಳೆಯ ವಿಷಯ ಈ ಮೂಲಕ ಹೇಳ ಹೊರಟಿದ್ದೇನೆ. ಮಾಸ್ಟರ್ ಆನಂದ್ ಅದ್ಭುತವಾಗಿ ನಟಿಸಿದ್ದಾರೆ. ಭವ್ಯಾ ಮೇಡಮ್ ತಾಯಿ ಪಾತ್ರದ ಮೂಲಕ ಭಾವುಕತೆ ಹೆಚ್ಚಿಸುತ್ತಾರೆ. ಇಡೀ ಚಿತ್ರ ನಗಿಸುತ್ತಲೇ ಭಾವುಕತೆಗೆ ದೂಡುತ್ತದೆ ಎಂದರು ಗೊರವಾಲೆ ಮಹೇಶ್.

ಹಿರಿಯ ಕಲಾವಿದೆ ಭವ್ಯಾ ಮಾತನಾಡಿ, ಒಂದು ಭಾವನಾತ್ಮಕ ವಿಷಯದ ಸುತ್ತ ಕಥೆ ಸಾಗಲಿದೆ. ಹಳ್ಳಿ ಜನರ ಭಾವನೆಗಳು, ತುಡಿತ ಹೇಗೆಲ್ಲಾ ಇರುತ್ತೆ ಎಂಬುದು ಇಲ್ಲಿ ಹೈಲೆಟ್. ಕೋಳಿ ಮತ್ತು ಮಗನ ಸುತ್ತ ನಡೆಯುವ ಕಥೆ ಎಲ್ಲರಿಗೂ ಇಷ್ಟ ಆಗುತ್ತೆ ಎಂದರು ಭವ್ಯಾ.

ನಿರ್ಮಾಪಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಕೋಳಿ ಮತ್ತು ಹೀರೋ ನಡುವಿನ ಭಾವನಾತ್ಮಕ ಕಥೆ ಇಲ್ಲಿದೆ. ಮಗಳು ರಾಜೇಶ್ವರಿ ನಾಯಕಿಯಾಗಿದ್ದಾರೆ. ಹೊಸ ಬಗೆಯ ಕಥೆ ಇಲ್ಲಿದೆ. ಮನರಂಜನಾ ಅಂಶಗಳು ಹೆಚ್ಚಾಗಿವೆ. ನಿಮ್ಮೆಲ್ಲರ ಬೆಂಬಲ ಇರಲಿ ಎಂದರು ಸೋಮಶೇಖರ್.

ನಾಯಕಿ ರಾಜೇಶ್ವರಿ ಅವರಿಗೆ ಇದು ಮೊದಲ ಚಿತ್ರ. ಮೊದಲ ಸಲ ಕ್ಯಾಮೆರಾ ಮುಂದೆ ನಿಂತಾಗ ಭಯ ಆಯ್ತು. ಆನಂದ್ ಸರ್ ಧೈರ್ಯ ತುಂಬಿ ನಟಿಸಲು ಉತ್ಸಾಹ ತುಂಬಿದರು. ಭವ್ಯಾ ಮೇಡಂ ಜೊತೆ ನಟಿಸಿದ್ದು ಮರೆಯದ ಅನುಭವ ಅಂದರು.

ಸಂಕಲನಕಾರ ವಿಶ್ವ ಅವರಿಗೆ ಈ ಚಿತ್ರ ವಿಶೇಷ. ಕಾರಣ, ಇಲ್ಲಿ ಮೈಸೂರು ಮಹಾರಾಜರ ಹಾಡು ಜನರನ್ನು ತಲುಪುತ್ತೆ ಎಂಬುದು. ಆ ಹಾಡಿನ ಮೂಲಕ ರಾಜರ ಬಗ್ಗೆ ಹೇಳಲು ಸಾಧ್ಯವಾಗಿದೆ ಎಂದರು.

ಚಿತ್ರಕ್ಕೆ ಧನಪಾಲ್ ಮತ್ತು ಬೆಟ್ಟೇಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ,ಇತರರು ನಟಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor