Murga Son Of kanunu movie trailer released. ಮುರುಗ ಸನ್ ಆಫ್ ಕಾನೂನು ಚಿತ್ರದ ಟ್ರೇಲರ್ ಎಸ್.ಎ.ಚಿನ್ನೇಗೌಡ್ರು ರವರಿಂದ ಬಿಡುಗಡೆ.

ಮುರುಗ ಸನ್ ಆಫ್ ಕಾನೂನು

ಎಸ್.ಎ.ಚಿನ್ನೇಗೌಡ್ರು ಟ್ರೇಲರ್ ಬಿಡುಗಡೆ

ಕಿರುತೆರೆಯ ಮುರುಗ ಖ್ಯಾತಿಯ ನಟ ಮುನಿಕೃಷ್ಣ ನಾಯಕನಾಗಿ ನಟಿಸಿದ್ದ ಕೊಡೆಮುರುಗ ಚಿತ್ರ ಅದ್ಭುತ  ಯಶಸ್ಸು ಕಂಡಿತ್ತು. ಆ ಚಿತ್ರದ  ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ  ಮುನಿಕೃಷ್ಣ ಅವರೀಗ ತಮ್ಮ ಎರಡನೇ ಚಿತ್ರವನ್ನು ತೆರೆಗೆ ತರಲು ಹೊರಟಿದ್ದಾರೆ. ಆ ಚಿತ್ರದ ಹೆಸರು  ‘ಮುರುಗ ಸನ್ ಆಫ್ ಕಾನೂನು’.   ಚಿತ್ರದಲ್ಲಿ ಮುನಿಕೃಷ್ಣ ಅವರು ನಾಯಕನಾಗಿ ನಟಿಸುವ ಜೊತೆಗೆ ತಮ್ಮ ಎ.ಎಸ್.ಎ. ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣ ಕೂಡ ಮಾಡಿದ್ದಾರೆ.

 ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆ  ಕಾರ್ಯಕ್ರಮ ನಡೆಯಿತು‌. ಚಿತ್ರದ ಟ್ರೈಲರ್‌ನ್ನು ಹಿರಿಯ ನಟಿ ಪ್ರೇಮಾ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೆಗೌಡರು ಬಿಡುಗಡೆ ಮಾಡಿದರು. ಹೂವಿನ ಹಡಗಲಿ ಶಾಸಕ ಕೃಷ್ಣನಾಯಕ್ ಹಾಗೂ ಮಾಡೆಲ್ ಕಮ್ ನಟಿ ಮಿಸ್ ಎಡಿನ್ ರೋಸ್ ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದರು. ಅಂದ ಹಾಗೆ ಈ ಚಿತ್ರವನ್ನು ವಿಜಯ್ ಪ್ರವೀಣ್  ಅವರು  ನಿರ್ದೇಶನ ಮಾಡಿದ್ದಾರೆ. 
 ಜಾಗ ಕೇಳಿಕೊಂಡು ಊರಿಗೆ ಬರುವ ಖಳನಾಯಕ ನಂತರ ಇಡೀ ಊರನ್ನೇ ತನ್ನ ಕಬ್ಜ ಮಾಡಿಕೊಳ್ಳುತ್ತಾನೆ. ಮುರುಗನ ತಂದೆಯನ್ನೂ ಕೊಲೆ ಮಾಡಿಸುತ್ತಾನೆ. ನಂತರ ಎಲ್.ಎಲ್.ಬಿ.ಓದಿಕೊಂಡಿದ್ದ ಮುರುಗ ಹೇಗೆ ಕಾನೂನಾತ್ಮಕವಾಗಿ ತನ್ನ ಜಾಗದ ಜೊತೆಗೆ ಊರನ್ನೂ ಉಳಿಸಿಕೊಳ್ಳುತ್ತಾನೆ ಎಂಬುದೇ ಮುರುಗ ಸನ್ ಆಫ್ ಕಾನೂನು ಚಿತ್ರದ ಕಥಾಹಂದರ. ಆನೇಕಲ್, ಮಲ್ಪೆ, ಬೆಂಗಳೂರು ಸುತ್ತಮುತ್ತ 62 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ವೇದಿಕೆಯಲ್ಲಿ ನಿರ್ದೇಶಕ‌ ವಿಜಯ್ ಮಾತನಾಡಿ ನಾನು ಈವರೆಗೆ ತುಳು ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶಿಸಿದ್ದೇನೆ. ಇದು ನನ್ನ ನಿರ್ದೇಶನದ 5ನೇ ಚಿತ್ರ. ಈ ಚಿತ್ರವನ್ನು ನಿರ್ಮಾಪಕರು ಕಷ್ಟಪಟ್ಟು ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರಕ್ಕೆ ಪುನೀತ್ ರಾಜಕುಮಾರ ಅವರು ಟೈಟಲ್ ಲಾಂಚ್ ಮಾಡುವ ಮೂಲಕ ಚಾಲನೆ ನೀಡಿದ್ದರು. ಇದೊಂದು ಔಟ್ ಆಂಡ್ ಔಟ್ ಕಾಮಿಡಿ ಸಿನಿಮಾ’ ಎಂದು ಹೇಳಿದರು.


ನಂತರ ಚಿತ್ರದ ಬಗ್ಗೆ ಮಾಹಿತಿ ನೀಡಿದ ನಾಯಕ ಕಮ್ ನಿರ್ಮಾಪಕ ಮುನಿಕೃಷ್ಣ ‘ಇದು ನನ್ನ ಎರಡನೇ ಸಿನಿಮಾ. ಶೀರ್ಷಿಕೆ ಗೀತೆಯನ್ನು ಅಪ್ಪು ಸರ್ ಹಾಡಬೇಕಿತ್ತು. ಅವರು ಟೈಟಲ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು. 10 ದಿನ ಶೂಟ್ ಆದಮೇಲೆ ಸಿನಿಮಾ ನಿಂತುಹೋಗಿತ್ತು. ಪುನೀತ್ ಅವರು ಹರಸಿದ ಸಿನಿಮಾ ನಿಲ್ಲಬಾರದು ಎಂಬ ಉದ್ದೇಶದಿಂದ ಸ್ವಂತ ಮನೆ ಮಾರಿಕೊಂಡು, ಕಷ್ಟಪಟ್ಟು ಸಿನಿಮಾ ಮುಗಿಸಿದ್ದೇನೆ. ಸಿನಿಮಾ ತುಂಬಾ ಎಂಟರ್ ಟೈನಿಂಗ್ ಆಗಿ ಬಂದಿದ್ದು ಮುಂದಿನ ತಿಂಗಳು ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಚಿತ್ರದಲ್ಲಿ 3 ವಿಭಿನ್ನ ಫೈಟ್ ಸೀನ್ ಅಲ್ಲದೆ ಮೂರು ಜನ ನಾಯಕಿಯರಿದ್ದಾರೆ ಎಂದರು. ವೇದಿಕೆಯಲ್ಲಿ ನಟಿ ಪ್ರೇಮಾ ‘ಹೊಸ ತಂಡಕ್ಕೆ ಸಾಥ್ ನೀಡುವುದು ಸಂತಸ ಕೊಡುತ್ತದೆ. ಟ್ರೇಲರ್ ನೋಡಿ ತುಂಬಾ ಖುಷಿ ಆಯ್ತು. ಈ ಚಿತ್ರದಿಂದ ನಿರ್ಮಾಪಕರಿಗೆ 10 ಮನೆ ಕೊಳ್ಳುವ ಶಕ್ತಿ ಬರಲಿ’ ಎಂದು ಶುಭ ಹಾರೈಸಿದರು.

ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೆಗೌಡ ಮಾತನಾಡಿ, ‘ಅಪ್ಪು ಹಾರೈಸಿದ ಸಿನಿಮಾ ಆಗಿದ್ದರಿಂದ ನಿರ್ಮಾಪಕರು ಹಟದಿಂದ ಸಿನಿಮಾ ಮಾಡಿದ್ದಾರೆ. ಟ್ರೇಲರ್ ಚನ್ನಾಗಿದೆ. ತಂಡಕ್ಕೆ ಒಳ್ಳೆಯದಾಗಲಿ’ ಎಂದರು.
ನಾಯಕಿ ಮಮತಾ ರಾವುತ್ ಮಾತನಾಡಿ ‘ನಾನು ಮದುವೆಯಾದ 15 ದಿನಗಳಲ್ಲಿ ಈ ಚಿತ್ರದ ಆಫರ್ ಬಂತು. ತುಂಬಾ ವರ್ಷಗಳಿಂದ ಹಳ್ಳಿ ಹುಡುಗಿಯ ಪಾತ್ರ ಮಾಡುವ ಆಸೆ ಇತ್ತು. ಅದು ಈ ಚಿತ್ರದಿಂದ ಈಡೇರಿದೆ’ ಎಂದರು.

ಮತ್ತೋರ್ವ ನಾಯಕಿ ಕಿರಣ್ ಯೋಗೇಶ್ವರ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಇನ್ನು ಈ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೌರವ ವೆಂಕಟೇಶ್ ಮಾತನಾಡಿ ‘ನಾನಿಲ್ಲಿ ಶೇಕ್ ರಾಜ್ ಎಂಬ ಪಾತ್ರ ಮಾಡಿದ್ದು, ಮೊದಲಬಾರಿಗೆ ಗುರುಗಳಾದ ಥ್ರಿಲ್ಲರ್ ಮಂಜು ಅವರ ಜೊತೆ ಫೈಟ್ ಮಾಡಿದ್ದೇನೆ. ಇದರಲ್ಲಿ ಒಟ್ಟು ಮೂರು ಸಾಹಸಗಳಿವೆ’ ಎಂದರು. ಈ ಚಿತ್ರದಲ್ಲಿ ಖಳನಟನಾಗಿ ನಟಿಸಿರುವ ಧನ್‌ವೀರ್ ತನ್ನ ಪಾತ್ರದ ಕುರಿತು ಮಾತನಾಡಿದರು.


ಇವರೊಂದಿಗೆ ಶೋಭ ರಾಜ್, ಥ್ರಿಲ್ಲರ್ ಮಂಜು, ರಮೇಶ್ ಭಟ್, ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಮುಂತಾದವರು ತಾರಾಗಣದಲ್ಲಿ ಇದ್ದರೆ. ಕಾರ್ಯಕ್ರಮದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹಾಗೂ ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ್ ತಂಡಕ್ಕೆ ಶುಭಾಷಯ ತಿಳಿಸಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor