Mayanagari movie teaser Release Soon. ಮಾಯಾನಗರಿಯಲ್ಲಿ ಅನೀಶ್ ಸಂಚಾರ
ಮಾಯಾನಗರಿಯಲ್ಲಿ ಅನೀಶ್ ಸಂಚಾರ
ಸದ್ಯದಲ್ಲೇ ಟೀಸರ್ ರಿಲೀಸ್
ಅನೀಶ್ ನಟಿಸಿರುವ, ಶಂಕರ್ ಆರಾಧ್ಯ ನಿರ್ದೇಶನದ ಮಾಯಾನಗರಿ ಸಿನಿಮಾ ಬಿಡುಗಡೆಗೆ ಅಣಿಯಾಗಿದೆ. ಅದಕ್ಕೂ ಮುನ್ನ ಟೀಸರ್ ಮೂಲಕ ಸದ್ದು ಮಾಡಲು ಸಜ್ಜಾಗಿದೆ ಚಿತ್ರತಂಡ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ಚಿತ್ರತಂಡ, ಯು/ಎ ಅರ್ಹತಾ ಪತ್ರ ಪಡೆದುಕೊಂಡಿದೆ.
ಸಿನಿಮಾ ನಿರ್ದೇಶನದ ಕನಸು ಹೊತ್ತು ಬರುವ ಯುವ ಪ್ರತಿಭೆಯ ಪಾತ್ರದಲ್ಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ಕಾಮಿಡಿ, ಲವ್, ಆಕ್ಷನ್, ಸೆಂಟಿಮೆಂಟ್ ಕಥಾಹಂದರವಿರುವ ಈ ಚಿತ್ರದಲ್ಲಿ ಮತ್ತೊಂದು ವಿಶೇಷತೆ ಇದೆ. ಅದನ್ನು ಟ್ರೇಲರ್ ಬಿಡುಗಡೆ ವೇಳೆ ಅನಾವರಣ ಮಾಡುವ ಯೋಜನೆ ನಿರ್ದೇಶಕರಿಗಿದೆ.

ಇನ್ನು ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳಿದ್ದು, ಅದನ್ನು ಹಂತ ಹಂತವಾಗಿ ಪರಿಚಯಿಸುವ ಆಲೋಚನೆ ಶಂಕರ್ ಆರಾಧ್ಯರದ್ದು. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಶಂಕರ್ ಆರಾಧ್ಯ. ಇದರ ಜತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಶ್ವೇತಾ ಶಂಕರ್ ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ತಾಂತ್ರಿಕವಾಗಿಯೂ ಈ ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಮೋರ್ ಈ ಚಿತ್ರದಲ್ಲಿ ವಿಭಿನ್ನವಾಗಿ ಫೈಟ್ ಕಂಪೋಸ್ ಮಾಡಿದ್ದಾರೆ. ಮದನ್ – ಹರಿಣಿ ಹಾಗೂ ಮುರಳಿ ನೃತ್ಯ ನಿರ್ದೇಶನ, ವಿಜಯ್ ಎಂ ಕುಮಾರ್ ಸಂಕಲನ, ಶ್ರೀನಿವಾಸ್ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.

ಅನೀಶ್ ಜೋಡಿಯಾಗಿ ಶ್ರಾವ್ಯ ರಾವ್ ಹಾಗೂ ತೇಜು ನಟಿಸಿದ್ದಾರೆ. ಹಿರಿಯ ನಟ, ನಿರ್ದೇಶಕ ದ್ವಾರಕೀಶ್, ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಚಂದ್ರಶೇಖರ್, ಚಿಕ್ಕಣ್ಣ ಹಾಗೂ ನಿಹಾರಿಕಾ ಮೊದಲಾದವರು ಚಿತ್ರದ ತಾರಬಳಗದಲ್ಲಿದ್ದಾರೆ.