Martin Movie Review. ಮಾರ್ಟಿನ್ ಚಿತ್ರ ವಿಮರ್ಶೆ
ಚಿತ್ರ: ಮಾರ್ಟಿನ್
ಚಿತ್ರ ವಿಮರ್ಶೆ
ರೇಟಿಂಗ್ – 3.5/5
ನಿರ್ಮಾಪಕರು : ಉದಯ್ ಮೆಹೆತಾ
ನಿರ್ದೇಶಕರು : ಎ.ಪಿ. ಅರ್ಜುನ್
ಸಂಗೀತ : ಮಣಿ ಶರ್ಮಾ, ರವಿ ಬಸ್ರೂರು.
ಛಾಯಾಗ್ರಹಣ : ಸತ್ಯ ಹೆಗಡೆ
ತಾರಾಗಣ: ಗಿರಿಜಾ ಲೋಕೇಶ್, ಧೃವ ಸರ್ಜಾ, ಅಚ್ಯುತ್, ಮಾಳವಿಕ, ಸುಕೃತವಾಘ್ಲೆ, ಚಿಕ್ಕಣ್ಣ, ವೈಭವಿ ಶಾಂಡಿಲ್ಯ, ಅನ್ವೇಷಿಜೈನ್, ನಿಕಿತಿನ್ ಡೀರ್ ಮುಂತಾದವರು

ಮಾರ್ಟಿನ್ ಚಿತ್ರ ವಿಮರ್ಶೆ
ಇಂತಹ ಚಿತ್ರಕ್ಕೆ ಹಣ ಹೂಡುವ ನಿರ್ಮಾಪಕನ ಬಗ್ಗೆ ಮೊದಲು ಮಾತಾಡಬೇಕು. ನಿಜ ಮಾರ್ಟಿನ್ ಎಂಬ ಹೆಚ್ಚುಗಾರಿಕೆಯ ಚಿತ್ರಕ್ಕೆ ಹಣವನ್ನು ಸೈಕ್ಲೋನ್ ತರ ಹರಿಸಿರುವ ನಿರ್ಮಾಪಕನಿಗೆ ನಿಜಕ್ಕೂ ಒಂದು ಸೆಲ್ಯೂಟ್ ಹೊಡಿಬೇಕು. ಕನ್ನಡದ ನಿರ್ಮಾಪಕರು ಯಾವ ಭಾಷೆಯ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ಹಾಲಿವುಡ್ ಬಾಲಿವುಡ್ ಚಿತ್ರಗಳಿಗೂ ಸೆಡ್ಡು ಹೊಡೆಯುವಂತೆ ನಿರ್ಮಾಣಕ್ಕೆ ಉದಯ್ ಮೆಹೆತಾ ಹಣ ಹರಿಸಿದ್ದಾರೆ. ಇಂತಹ ಒಬ್ಬ ಎದೆಗಾರಿಕೆಯ ನಿರ್ಮಾಪಕನನ್ನು ಉಳಿಸಿಕೊಳ್ಳಲು ಪ್ರೇಕ್ಷಕರು, ಚಿತ್ರ ಪ್ರೇಮಿಗಳು ಮಾರ್ಟಿನ್ ಸಿನಿಮಾ ನೋಡಲೇ ಬೇಕು, ನೋಡಿ ಕೈ ಹಿಡಿಯಬೇಕು.
ಇಂತಹ ನಿರ್ಮಾಪಕರು ಉಳಿಯಬೇಕು.

ಇನ್ನು ಚಿತ್ರದ ಬಗ್ಗೆ ಹೇಳಬೇಕೆಂದರೆ ಮಾರ್ಟಿನ್ ಯಾರು ಅನ್ನೋದೆ ಮೊದಲರ್ಧ ಭಾಗದ ಗೊಂದಲದಲ್ಲಿ ಪ್ರೇಕ್ಷಕ ಸಿಲುಕುತ್ತಾನೆ.
ಇದು ನಮಗಷ್ಟೇ ಅಲ್ಲ, ಚಿತ್ರದಲ್ಲಿರುವ ನಾಯಕ ನಟ…? ನಿಗೂ ಇದೇ ಗೊಂದಲ ಸಿಕ್ಕ ಸಿಕ್ಕವರನ್ನೆಲ್ಲಾ ಎಲ್ಲಾ ಭಾಷೆಗಳಲ್ಲಿ ನಾನ್ಯಾರು…? ನಾನ್ಯಾರು..? ಅಂತ ಕೇಳುತ್ತಾನೆ. ಅವನ ಪರಿಸ್ಥಿತಿಗೆ ಪ್ರೇಕ್ಷಕ ಪರ ಪರ ಅಂತ ತಲೆ ಕೆರೆದುಕೊಳ್ಳುತ್ತಾನೆ.
ಮೊದಲರ್ಧ ಒಂದಷ್ಟು ಕುತೂಹಲ ಮತ್ತು ಗೊಂದಲಗಳಲ್ಲಿ, ಒಂದಷ್ಟು ಬಿಲ್ಡಪ್ ಗಳಲ್ಲಿ ಚಿತ್ರ ಮುಗಿಯುವುದು ಗೊತ್ತಾಗುವುದಿಲ್ಲ. ಎರಡನೇ ಅರ್ಧ ಹೊತ್ತಾಗುವುದೇ ಇಲ್ಲ ಅನ್ನಿಸುತ್ತದೆ. ಸಿನಿಮಾ ಶುರುವಾದ 20 ನಿಮಿಷ ಅದ್ದೂರಿಯಾಗಿ ಬಂದಿದೆ ಅರ್ಜುನ್ ನಿರ್ದೇಶನ ಹಾಗೇ ಆ 20 ನಿಮಿಷದಲ್ಲಿ ಚಿತ್ರದ ಕಥೆ ಗೊತ್ತಾಗಿ ಬಿಡುತ್ತದೆ.
ಇಲ್ಲಿ ಚಿತ್ರಕ್ಕೆ ಕಥೆ ಬರೆದ ಅರ್ಜುನ್ ಸರ್ಜಾ ರವರು ಎಡೆವಿದರಾ..? ಅಥವಾ ಕಥೆಯನ್ನು ನಿರ್ವಹಿಸುವುದರಲ್ಲಿ A.P. ಅರ್ಜುನ್ ತಡವಿದರಾ..? ಗೊತ್ತಿಲ್ಲ.
ಚಿತ್ರದಲ್ಲಿ ಅದ್ದೂರಿ ಸೆಟ್ಗಳು, ಹೈ ಬಜೆಟ್ ಲೊಕೇಷನ್ಗಳು, ಹೈಷಾರಾಮಿ ಹಡಗುಗಳು, ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು ಅಬ್ಬಬ್ಬಾ ಕಣ್ಣಿಗೆ ಹಬ್ಬ, ಹಬ್ಬದೂಟ ಎನ್ನಬಹುದು ಆದರೆ ಊಟಕ್ಕೆ ಉಪ್ಪಿಗಿಂತ (ಕಥೆ) ರುಚಿ ಬೇರೆ ಇಲ್ಲ ಅನ್ನೋದು ಯಾರು ಮರೆತರೋ ಗೊತ್ತಿಲ್ಲ.

ಇನ್ನು ಧೃವಸರ್ಜಾ ರವರ ಅಭಿನಯದ ಬಗ್ಗೆ ಹೇಳುವುದಾದರೆ ಮೊದಲ ಅರ್ಧದ ಚಿತ್ರದಲ್ಲಿ ಅವರ ಬಾಡಿಯ ಮ್ಯಾನರಿಸಮ್ ನಲ್ಲಿ ಬಾಡಿಯ ಬಾಡು ಎದ್ದು ಕಾಣುತ್ತದೆ, ಕಣ್ಣಿನ ನೀರೊಳಗೆ ಆಕ್ರೋಶದ ಬೆಂಕಿ ಕಿಡಿ ಕಾರುತ್ತಲೇ ಇರುತ್ತದೆ. ಪಾಕಿಸ್ತಾನದ ಪೋಲೀಸ್ ಅಧಿಕಾರಿಗಳ ಎದೆಯಲ್ಲಿ ಭಯ ಹುಟ್ಟಿಸುವ ಆ ಲುಕ್ಕು, ಆ ನಡಿಗೆ, ಆ ಧ್ವನಿ ನಿಜಕ್ಕೂ ಸೂಪರ್ ಅದನ್ನೇ ಇಡೀ ಚಿತ್ರದ ಕೊನೆಯವರೆಗೂ ನಿರ್ದೇಶಕರು ತೆಗೆದು ಕೊಂಡು ಹೋಗಿದ್ದರೆ ಚನ್ನಾಗಿರುತ್ತಿತ್ತು. ಧೃವರವರ ಈ ಹೊಸ ಗೆಟಪ್ ಗಮನಾರ್ಹವಾದದ್ದು, ಅದಕ್ಕಾಗಿ ವರ್ಷಗಳನ್ನು ಸವೆಸಿದ್ದಾರೆ, ದೇಹವನ್ನು ದಂಡಿಸಿದ್ದಾರೆ ಆದರೆ ಆಗಾಗ ಅರ್ಜುನ್ ಮತ್ತು ಮಾರ್ಟಿನ್ ಮದ್ಯೆ ಪಾತ್ರ ನಿರ್ವಹಣೆ ಗೊಂದಲ ಮಯವಾಗಿದೆ. ಧೃವಸರ್ಜಾ ತಮ್ಮ ಮಾಮೂಲಿ ಅಭಿನಯದ ಶೈಲಿಯಿಂದ ಕೆಲವು ಕಡೆ ಹೊರ ಬರಲು ಆಗಿಲ್ಲ. ಅವರ ಹಿಂದಿನ ಚಿತ್ರದ ಅಭಿನಯದ ನೆರಳು ಅಲ್ಲಲ್ಲಿ ಬಂದು ಹೋಗುವುದರಿಂದ ಈ ಮಾರ್ಟಿನ್ ಪಾತ್ರದ ಹೊಸ ಇಮೇಜಿಗೆ ಧಕ್ಕೆಯಾದಂತಾಗುತ್ತದೆ.
ಅದು ಬಿಟ್ಟರೆ ಮಾರ್ಟಿನ್ ಪಾತ್ರವನ್ನು ಚನ್ನಾಗಿ ನಿರ್ವಹಿಸಿದ್ದಾರೆ ಎನ್ನಬಹುದು.

ಚಿತ್ರದ ಎರಡೆರಡು ಪಾತ್ರಗಳಲ್ಲಿ ಬೇರೆಯದೇ ಶೇಡ್ ನಲ್ಲಿ ಧೃವಸರ್ಜಾ ಕಾಣಿಸಿಕೊಂಡರೆ, ಇನ್ನುಳಿದ ಪಾತ್ರಗಳು ಅವರವರ ಪಾತ್ರಗಳಿಗೆ ನಿರ್ದೇಶಕರು ಹೇಳಿದಂತೆ ಸರಿಯಾಗಿ ಅಭಿನಯಿಸಿದ್ದಾರೆ.
ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ,
ನಾಯಕಿಯ ತಂದೆ ಸೈನ್ಯದಲ್ಲಿ ಹೋರಾಡಿ ಮಡಿದ ಸ್ಥಳದಲ್ಲಿ ಬಂದು ಭಾರತದ ಬಾವುಟ ಹಾರಿಸಬೇಕೆಂಬುದು ನಾಯಕಿಯ ಆಸೆ, ಹಾಗೇ ಪ್ರತೀ ವರ್ಷ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಒಳಗೆ ಗಡಿ ದಾಟಿ ಭಾವುಟ ಹಾರಿಸುವ ನಾಯಕ. ಈ ಹಂತದಲ್ಲೇ ಇಬ್ಬರ ಪರಿಚಯವಾಗುತ್ತದೆ, ನಂತರ ಪ್ರೀತಿ ಪ್ರೇಮಾಂಕುರವಾಗುತ್ತದೆ.
ಎಲ್ಲಾ ಸಿನಿಮಾಗಳ ರೀತಿ ನಾಯಕ ಅಂದ ಮೇಲೆ ಒಬ್ಬ ನಾಯಕಿ ಇರಲೇ ಬೇಕಲ್ಲ ಆ ಸ್ಥಾನವನ್ನು ವೈಭವಿ ಶಾಂಡಿಲ್ಯ ತುಂಬಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಗಿರಿಜಾ ಲೋಕೇಶ್, ಅಚ್ಯುತ್, ಮಾಳವಿಕ, ಚಿಕ್ಕಣ್ಣ, ಸುಕೃತವಾಘ್ಲೆ ಇವರೆಲ್ಲ ತೆರೆಯ ಮೇಲೆ ಯಾವಾಗ ಬರುತ್ತಾರೋ, ಯಾವಾಗ ಹೋಗುತ್ತಾರೋ ಗೊತ್ತಾಗೋದೆ ಇಲ್ಲ.
ಧೃವಸರ್ಜಾ ಮಾರ್ಟಿನ್ ಚಿತ್ರಕ್ಕಾಗಿ ಮೂರುವರೆ ವರ್ಷಗಳಷ್ಟು ಕಾಲ ಮೀಸಲಿಟ್ಟು ಶ್ರಮಿಸಿದ್ದಾರೆ,
13 ಭಾಷೆಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಈ ಎಲ್ಲಾ ವಿಷಯಗಳಿಂದ ಸಹಜವಾಗಿ ಪ್ರೇಕ್ಷಕರಲ್ಲಿ ನಿರೀಕ್ಷೆಗಳು ಹೆಚ್ಚಾಗಿರುತ್ತದೆ. ಮಾರ್ಟಿನ್ ಚಿತ್ರವನ್ನು ಇನ್ನೂ ಚನ್ನಾಗಿ ಮಾಡಬಹುದಿತ್ತು. ನಿರ್ಮಾಪಕರ ಹಣ ನೀರಿನಂತೆ ಹರಿದಿದೆ. ನಿರ್ದೇಶಕರ ಜ್ಞಾನ ಇನ್ನೊಂದಿಷ್ಟು ಹರಿಯಬೇಕಿತ್ತು .ಮಾರ್ಟಿನ್ ಚಿತ್ರವನ್ನು ಇನ್ನೂ ಚನ್ನಾಗಿ ಮಾಡಬಹುದಿತ್ತು. ನಿರ್ಮಾಪಕರ ಹಣ ನೀರಿನಂತೆ ಹರಿದಿದೆ. ನಿರ್ದೇಶಕರ ಜ್ಞಾನ ಇನ್ನೊಂದಿಷ್ಟು ಹರಿಯಬೇಕಿತ್ತು
ಇದೊಂದು ಅಂತರ್ದೇಶಗಳ ಮೆಡಿಸಿನ್ ಮಾಫಿಯಾ ಕಥೆಯಾದಾರಿತ ಚಿತ್ರ. ಖಳ ನಟನಾಗಿ ಮಾರ್ಟಿನ್ ಜೊತೆಗೆ ನಿಕಿತಿನ್ ಡೀರ್ ತೆರೆ ಮೇಲೆ ಅಭಿನಯಿಸಿದ್ದಾರೆ. ಮಾರ್ಟಿನ್ ಅಬ್ಬರಕ್ಕೆ ಸಪ್ಪೆಯಾಗಿ ಕಾಣುತ್ತದೆ ಆ ಪಾತ್ರ. ನಾಯಕನ ಸಮಾ ಸಮಾ ಖಳನಾಯಕನ ಪಾತ್ರವೂ ಇರ ಬೇಕಾಗುತ್ತದೆ. ಆ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಆ ಎಲ್ಲಾ ಆಯಾಮಗಳಲ್ಲೂ ಮಾರ್ಟಿನ್ ಒಬ್ಬನೇ ನಿಭಾಯಿಸಲು ಹೋಗಿ ತಾನ್ಯಾರು, ನಾನ್ಯಾರು ಅಂತ ಬಡ ಬಡಿಸುವಂತಾಗಿದೆ.

ಕಥಾ ಸಾರಾಂಶ :
ಚಿತ್ರದ ನಾಯಕ ಹಡಗಿನ ಕಸ್ಟಂಸ್ ಅಧಿಕಾರಿ, ಸಾವಿರಾರು ಕೋಟಿಯ ವಿದೇಶದಲ್ಲಿ ಬ್ಯಾನ್ ಆದ ಔಷದಿಗಳನ್ನು ತಂದು ಭಾರತದಲ್ಲಿ ಮಾರುವ ಖಳನಟನ ಅಷ್ಟೂ ಮಾಲ್ ಸೀಸ್ ಮಾಡಿದ ನಂತರ ಅದನ್ನು ವಾಪಸ್ ಪಡೆಯುವ ಸರ್ಕಸ್ ಚಿತ್ರದುದ್ದಕ್ಕೂ ಸಾಗುತ್ತದೆ.
ಇಲ್ಲಿ ಒಬ್ಬನೇ ನಟ ಎರಡು ಪಾತ್ರಗಳು. ಇವರು ಟ್ವಿನ್ಸ್ ಅಲ್ಲ, ಒಂದೇ ತಾಯಿಯ ಮಕ್ಕಳಲ್ಲ, ಚಿಕ್ಕ ವಯಸ್ಸಿನಲ್ಲಿ ರೈಲ್ವೇ ಸ್ಟೇಷನ್ ನಲ್ಲಿ ಕಳೆದು ಹೋದವರು ಅಲ್ಲ ಆದರೂ ಇಬ್ಬರೂ ಒಂದೇ ರೂಪ ಎರಡು ಗುಣ,
ಈ ಡೈಲಾಗ್ ಸಿನಿಮಾದಲ್ಲೂ ಇದೆ.
ಇಲ್ಲಿ ಪಾಕಿಸ್ತಾನಕ್ಕೆ ಹೋಗಿ ಬರೋದು ಕಲಾಸಿ ಪಾಳ್ಯಕ್ಕೆ ಹೋಗಿ ಬರುವಷ್ಟು ಸುಲಭ.
ಗಿರಿಜಾ ಲೋಕೇಶ್, ಅಚ್ಯುತ್, ಮಾಳವಿಕ, ಚಿಕ್ಕಣ್ಣ, ಸುಕೃತವಾಘ್ಲೆ

ಸತ್ಯ ಹೆಗಡೆಯ ಕ್ಯಾಮರಾ ಕೆಲಸ ಸಿನಿಮದುದ್ದಕ್ಕೂ ಕಣ್ಣಿಗೆ ಅದ್ದೂರಿತನವನ್ನು ಉಣ ಬಡಿಸುತ್ತದೆ. ಅಲ್ಲಲ್ಲಿ ಕೆ.ಜಿ.ಎಫ್. ನೆರಳು, ಕತ್ತಲೆ ಬೆಳಕಿನ ಆಟ ಕಾಣಿಸುತ್ತದೆಯಾದರೂ ಇಲ್ಲಿ ತನ್ನದೇ ಆದ ಛಾಪನ್ನು ಸತ್ಯ ಹೆಗಡೆ ಉಳಿಸಿಕೊಂಡಿದ್ದಾರೆ.
ಮಾರ್ಟಿನ್ ಚಿತ್ರಕ್ಕೆ ಮೂಲ ಆಧಾರ ಸ್ಥಂಭ ಛಾಯಾಗ್ರಹಣ ಹಾಗೂ ಸಂಗೀತ.
ರವಿ ಬಸ್ರೂರ್ ರವರ ಹಿನ್ನೆಲೆ ಸಂಗೀತ ಜೋರಾಗೆ ಸದ್ದು ಮಾಡಿದೆ. ಕೆ.ಜಿ.ಎಫ್. ಚಿತ್ರಕ್ಕೆ ಮ್ಯೂಸಿಕ್ ಬಾರಿಸಿದ್ದ ರವಿ ಬಸ್ರೂರ್ ಈ ಚಿತ್ರದಲ್ಲೂ ತಮ್ಮ ಕೆಲಸದ ಝಲಕನ್ನು ತೋರಿಸಿದ್ದಾರೆ. ಚಿತ್ರದ ಪ್ರತೀ ದೃಶ್ಯದಲ್ಲೂ ಸತ್ಯ ಹೆಗಡೆ ಹಾಗೂ ರವಿ ಬಸ್ರೂರ್ ಎದ್ದು ಕಾಣಿಸುತ್ತಾರೆ.
ಸಿನಿಮಾದಲ್ಲಿ ಚೇಸಿಂಗ್ ಸೀನ್ಗಂತು ಸಖತ್ತಾಗೆ ಖರ್ಚು ಮಾಡಿದ್ದಾರೆ, ಯಾವ ಗೇಮಿಗೂ ಕಡಿಮೆ ಇಲ್ಲದಂತೆ ಕೆಲವು ದೃಶ್ಯಗಳನ್ನು ನಿರ್ಮಾಣ ಮಾಡಲಾಗಿದೆ.
ಫೈಟಿಂಗ್ ಕೂಡ ಬಹಳ ಜೋರಾಗಿದೆ ಫೈಟ್ ಮಾಸ್ಟರ್ ರವಿವರ್ಮ ಧೃವರವರಿಂದ ಪೈಟ್ ಚನ್ನಾಗಿ ಮಾಡಿಸಿದ್ದಾರೆ. ಅದರಲ್ಲೂ ಪಾಕಿಸ್ಥಾನದ ಜೈಲಿನಲ್ಲಿ ಹೊರ ದೇಶಗಳ ಖೈದಿಗಳೊಂದಿಗೆ ಹೋರಾಡುವ ಮಾರ್ಟಿನ್ ಖದರ್ ಜೋರಾಗಿದೆ.
ಒಟ್ಟಿನಲ್ಲಿ ಇದೊಂದು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾದ ಪ್ಯಾನ್ ಇಂಡಿಯಾ ಸಿನಿಮಾ, ಅಷ್ಟೇ ಅಲ್ಲದೇ ಕನ್ನಡದ ನೆಲದಲ್ಲಿ ನಿರ್ಮಾಣವಾದ ಚಿತ್ರ,
ಕನ್ನಡದ ಸಿನಿಮಾ ಎಂದರೆ ಹೊರ ರಾಜ್ಯದವರೂ ಕುತೂಹಲ ದಿಂದ ನಮ್ಮ ಚಿತ್ರೋದ್ಯಮದ ಕಡೆ ತಿರುಗಿ ನೋಡುತ್ತಾರೆ. ಆ ಸಾಲಿನಲ್ಲಿ ಮಾರ್ಟಿನ್ ಮುಂದುವರೆಯಲಿ, ಮೊದಲೇ ಹೇಳಿದಂತೆ ಕನ್ನಡದ ನಿರ್ಮಾಪಕ ಗೆಲ್ಲಬೇಕು ಎನ್ನುವ ಆಶಯ ನಮ್ಮದು.

ಧೃವಸರ್ಜಾ ಮೊದಲಬಾರಿಗೆ ದ್ವಿಪಾತ್ರದ ಅಭಿನಯ, ಉದಯ್ ಮಹೆತಾ ಸಿನಿ ಪಯಣದಲ್ಲಿ ನಿರ್ಮಾಣವಾದ ಮೊದಲ ಭಾರಿ ಬಜೆಟ್ ಚಿತ್ರ, A.P. ಅರ್ಜುನ್ ನಿರ್ದೇಶನದ ಮೊದಲ ದೊಡ್ಡ ಚಿತ್ರ, ಅರ್ಜುನ್ ಸರ್ಜಾರವರ ಕಥೆ, ಚಿತ್ರದ ಸೆಟ್ಟು, ಲೊಕೇಷನ್ ಹಾಗೆ ಸಿನಿಮಾದಲ್ಲಿ ಈ ಮಾರ್ಟಿನ್ ಯಾರು, ಅವನ ಸುತ್ತಾ ಏನೆಲ್ಲಾ ಡ್ರಾಮ ನಡೆಯುತ್ತದೆ, ಜೊತೆಗೆ ಮೆಡಿಸಿನ್ ಮಾಫಿಯಾ ಜನರ ಮೇಲೆ ಏನೆಲ್ಲಾ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿಯಲು ಪ್ರೇಕ್ಷಕರು ಮಾರ್ಟಿನ್ ನೋಡಲೇಬೇಕಾಗುತ್ತದೆ.
ಬೇರೆ ಭಾಷೆಗಳ ಚಿತ್ರಗಳಿಗೆ ರಾತ್ರೋ ರಾತ್ರಿ ಸಾವಿರಾರು ರೂಪಾಯಿಗಳನ್ನು ನೀಡಿ ಟಿಕೆಟ್ ಪಡೆದು ಸಿನಿಮಾ ನೋಡಿ ಹೊರ ಬಂದು ಕ್ಯಾಕರಿಸುವ ಬದಲು ನಮ್ಮದೇ ಭಾಷೆಯ, ನಮ್ಮದೇ ಕಲಾವಿದರ ಸಿನಿಮಾ ನೋಡಿ, ಪ್ರೀತಿಯಿಂದ ಬೆನ್ತಟ್ಟಬಹುದು.
ಪ್ರೇಕ್ಷಕ ಮಾರ್ಟಿನ್ ಚಿತ್ರಕ್ಕೆ ತಾನು ಕೊಟ್ಟ ಹಣಕ್ಕೇನು ಮೊಸ ಆಗೋದಿಲ್ಲ.
ಈ ವರ್ಷದ ಭಾರಿ ದೊಡ್ಡ ಬಜೆಟ್ ಚಿತ್ರ ಮಾರ್ಟಿನ್ ಎನ್ನಬಹುದು.