Manada Kannada trailer released by rocking star Yash. ರಾಕಿಂಗ್ ಸ್ಟಾರ್ ಯಶ್ ರಿಂದ ಮನದಕಡಲು ಚಿತ್ರದ ಟ್ರೇಲರ್ ಬಿಡುಗಡೆ

ಟ್ರೇಲರ್ ಬಿಡುಗಡೆ ಮಾಡಿ‌ “ಮನದ ಕಡಲಿ”ಗೆ ಮನತುಂಬಿ ಹಾರೈಸಿದ ರಾಕಿಂಗ್ ಸ್ಟಾರ್ ಯಶ್.. .

ಈ ಕೃಷ್ಣಪ್ಪ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಮಾರ್ಚ್ 28 ರಂದು ತೆರೆಗೆ* .

E.K. ಎಂಟರ್ ಟೈನರ್ಸ್ ಲಾಂಛನದಲ್ಲಿ ಈ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ “ಮುಂಗಾರು ಮಳೆ” ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಚಿತ್ರ “ಮನದ ಕಡಲು”.

ಇತ್ತೀಚೆಗೆ ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು. ಕಳೆದ ನಾಲ್ಕು ವರ್ಷಗಳಿಂದ ಯಶ್ ಅವರು ಯಾವುದೇ ಸಿನಿಮಾ ಸಮಾರಂಭಗಳಲ್ಲಿ ಪಾಲ್ಗೊಂಡಿರಲಿಲ್ಲ‌. ಬಹಳ ದಿನಗಳ ನಂತರ ಯಶ್ ಅವರು ಪಾಲ್ಗೊಂಡಿದ್ದ ಸಿನಿಮಾ ಸಮಾರಂಭವಿದು. ಲುಲು ಮಾಲ್ ನ ಹೊರಂಗಣದಲ್ಲಿ ನಡೆದ “ಮನದ ಕಡಲು” ಟ್ರೇಲರ್ ಸಮಾರಂಭಕ್ಕೆ ಯಶ್ ಅವರು ಬರುವುದನ್ನು ತಿಳಿದ ಅಭಿಮಾನಿಗಳು ಮನೆಮಂದಿ ಸಹಿತ ಮಧ್ಯಾಹ್ನದಿಂದಲೇ ಮಾಲ್ ಬಳಿ‌ ಜಮಾಯಿಸಿದ್ದರು.

ಕಣ್ಣು ಹಾಯಿಸಿದಷ್ಟು “ಜನರ ಕಡಲು” ಅಲ್ಲಿತ್ತು‌. ವರ್ಣರಂಜಿತ ಸಮಾರಂಭದಲ್ಲಿ ಟ್ರೇಲರ್ ಬಿಡುಗಡೆ ಮಾಡಿದ ಯಶ್, ನಂತರ ತಮ್ಮ ಅದ್ಭುತವಾದ ಮಾತುಗಳ ಮೂಲಕ ಚಿತ್ರತಂಡಕ್ಕೆ ಹಾರೈಸಿದರು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಾನು ಈ ಸಮಾರಂಭಕ್ಕೆ ಬರಲು ಮೊದಲ ಕಾರಣ‌ ನಿರ್ಮಾಪಕ ಈ ಕೃಷ್ಣಪ್ಪ ಅವರು ಎಂದು ಮಾತನಾಡಿದ ಯಶ್, ಕೃಷ್ಣಪ್ಪ ಅವರು ನನಗೆ “ಮೊಗ್ಗಿನ ಮನಸ್ಸು” ಚಿತ್ರದಲ್ಲಿ ನಟಿಸಲು ಅವಕಾಶ ನೀಡದೆ ಇದ್ದಿದ್ದರೆ ನಾನು ಇಂದು ನಾಯಕನಾಗುತ್ತಿರಲ್ಲಿಲ್ಲ. ನನ್ನ ಮೊದಲ ಚಿತ್ರದ ನಿರ್ಮಾಪಕರು ಅವರು. ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಹ ನಿರ್ಮಾಪಕ ಗಂಗಾಧರ್ ಹೀಗೆ ಇಲ್ಲಿರುವ ಬಹುತೇಕರು ನನ್ನ ಬೆಳವಣಿಗೆಗೆ ಶ್ರಮ ಪಟ್ಟಿದ್ದಾರೆ. “ಮನದ ಕಡಲು” ಟ್ರೇಲರ್ ಚೆನ್ನಾಗಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಕನ್ನಡದಲ್ಲಿ ಹೊಸ ಪ್ರತಿಭೆಗಳು ಬರಬೇಕು. ನಾವು ಯಾರಿಗೂ ಕಡಿಮೆ ಇಲ್ಲದಂತೆ ಬೆಳೆಯಬೇಕು. ಒಳ್ಳೆಯ ಚಿತ್ರಗಳನ್ನು ಕನ್ನಡಿಗರು ಎಂದಿಗೂ ಕೈ ಬಿಡುವುದಿಲ್ಲ ಎಂದರು.

ಕಳೆದ‌ ನಾಲ್ಕು ವರ್ಷಗಳಿಂದ ಯಾವುದೇ ಸಿನಿಮಾ ಸಮಾರಂಭಕ್ಕೆ ಹೋಗದ ಯಶ್ ಅವರು ನಮ್ಮ ಸಮಾರಂಭಕ್ಕೆ ಬಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ಬಹಳ ಖುಷಿಯಾಗಿದೆ. ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ಈ ಕೃಷ್ಣಪ್ಪ.

ಯಶ್ ಅವರ ಸ್ವಾಗತಕ್ಕೆ ವಿಶೇಷ ವಿಡಿಯೋ ತುಣುಕು ಸಿದ್ದಪಡಿಸಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರು ವೇದಿಕೆಯ ಮೇಲೂ ತಮ್ಮ ಪ್ರೀತಿ‌ ತುಂಬಿದ ಮಾತುಗಳಿಂದ ಯಶ್ ಅವರನ್ನು ಆತ್ಮೀಯವಾಗಿ‌ ಸ್ವಾಗತಿಸಿ, ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು. “ಮನದ ಕಡಲು” ಈ ತಿಂಗಳ 28 ರಿಂದ “ಜನರ ಕಡಲಾ”ಗಲಿದೆ. ಎಲ್ಲರೂ ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಅಂತಲೂ ಯೋಗರಾಜ್ ಭಟ್ ಹೇಳಿದರು.

ನಾಯಕ ಸುಮುಖ, ನಾಯಕಿಯರಾದ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್‌,‌ ಸಹ ನಿರ್ಮಾಪಕ ಜಿ.ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮುಂತಾದ ಚಿತ್ರತಂಡದ ಸದಸ್ಯರು “ಮನದ ಕಡಲಿ” ಬಗ್ಗೆ ಮಾತನಾಡಿ, ಯಶ್ ಅವರಿಗೆ ವಿಶೇಷ ಧನ್ಯವಾದ ಹೇಳಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor