ಮದಗಜ – ಚಿತ್ರವಿಮರ್ಶೆ
ಚಿತ್ರ : ಮದಗಜ – Rating – 4/5 (**)
ನಿರ್ಮಾಪಕ : ಉಮಾಪತಿ ಶ್ರೀನಿವಾಸ ಗೌಡ
ನಿರ್ದೇಶಕ: ಎಸ್. ಮಹೇಶ್ ಕುಮಾರ್
ಸಂಗೀತ : ರವಿ ಬಸ್ರೂರು
ಛಾಯಾಗ್ರಹಣ : ನವೀನ್ ಕುಮಾರ್
ತಾರಾಗಣ : ಶ್ರೀಮುರಳಿ, ಆಶಿಕಾ ರಂಗನಾಥ್, ಜಗಪತಿ ಬಾಬು, ರಂಗಾಯಣ ರಘು, ಚಿಕ್ಕಣ್ಣ , ಶಿವರಾಜ್ ಕೆ.ಆರ್. ಪೇಟೆ, ದೇವಯಾನಿ, ಗರುಡಾ ರಾಮ್, ಧರ್ಮಣ್ಣ, ಅನಿಲ್ ಕುಮಾರ್ ಹಾಗೂ ಮುಂತಾದವರು…
ರೇಟಿಂಗ್ : 4/5
ವಿಮರ್ಶೆ :-
ಅದೆರಡು ಊರುಗಳ ನಡುವೆ ನೀರಿಗಾಗಿ ಹೋರಾಟ, ಇಲ್ಲಿ ನೀರಿಗಿಂತ ರಕ್ತವೇ ಹೆಚ್ಚು ಹರಿಯುತ್ತೆ. ರಾಜ್ಯ, ಕಿರೀಟ, ಸಿಂಹಾಸನ ಇಲ್ಲದಿದ್ದರು ಪ್ರತಿಷ್ಠೆ ಮತ್ತು ಅಹಂ ಗಳು ಮನಸು ಮನಸುಗಳ ನಡುವೆ ಯುದ್ದಗಳನ್ನು ಸೃಷ್ಟಿಸಿವೆ, ಮಾರಣ ಹೋಮಗಳನವನು ಹುಟ್ಟಿಹಾಕಿವೆ.
ಶಿವಗಡದಲ್ಲೊಬ್ಬ ಊರ ಜನರಿಗಾಗಿ ದುಷ್ಟರ ರಕ್ತ ಹರಿಸುವ ಭೈರವ ( ಜಗಪತಿ ಬಾಬು)
ರಾಜೇಂದ್ರಗಡ ದಲ್ಲೊಬ್ಬ ದುರುಳ ಶಿಷ್ಟರ ರಕ್ತ ಸುರಿಸುವ ಕೌರವ ( ಅನೀಲ್ ಕುಮಾರ್)
ಇವರಿಬ್ಬರೂ ದ್ವೇಷ, ಅಸೂಯೆ, ರಕ್ತಪಾತ, ಮಮತೆ, ವಾತ್ಸಲ್ಯ ಪ್ರೀತಿ ಪ್ರೇಮದ ಮದಗಜ ಕಥೆಗೆ ಮೂಲ ಬೇರುಗಳು.
ಶಿವಗಡದ ದೊರೆಗೆ ಗಂಡು ಮಗುವಿನ ಜನನದ ಸುದ್ದಿ ಕೇಳುತ್ತಿದ್ದಂತೆ ಮುಗಿ ಬೀಳುವ ರಕ್ಕಸರ ಮಚ್ಚು ಮಗುವಿನ ಎದೆ ಸೀಳುವ ಮುನ್ನ ದೊರೆಸಾನಿ ರತ್ನ (ದೇವಯಾನಿ) ಮಗುವನ್ನು ಕೋಲೆ ಬಸವ (ರಂಗಾಯಣ ರಘು) ಬಿಕ್ಷುಕನ ಮಡಿಲಿಗಿತ್ತು ಇದನ್ನು ಈ ರಕ್ಕಸರ ನೆರಳು ಬೀಳದಂತೆ ಕಾಪಾಡು ಎಂದು ಹೇಳಿ ಮಗು ನೀರು ಪಾಲಯ್ತು ಎಂದು ಗೋಳಿಡುತ್ತಾಳೆ.
ಕೊಲ್ಲಲು ಬಂದ ರಕ್ಕಸರು ದೊರೆಯ ವಂಶೋದ್ದಾರಕ ನೀರಲ್ಲಿ ಸತ್ತನೆಂಬ ಸುದ್ದಿ ಕೇಳಿ ಕತ್ತಲೆಯಲ್ಲಿ ಖುಷಿಯಿಂದ ಕಣ್ಮರೆಯಾಗುತ್ತಾರೆ.
ಇಲ್ಲಿ ನಿರ್ದೇಶಕ ಮಹೇಶ್ ತುಂಬಾ ಎಚ್ಚರಿಕೆಯಿಂದ ಕಥೆಯ ನಿರೂಪಣೆಯನ್ನು ನಿರ್ವಹಿಸಿದ್ದಾರೆ ಈ ದೃಶ್ಯ ರಾಜಕುಮಾರ್ ರವರ ಮಯೂರ, ರಾಜಮೌಳಿಯವರ
ಬಾಹುಬಲಿಯಂತೆ ಇದೆ ಅಂದುಕೊಳ್ಳುತ್ತಿದ್ದಂತೆ ಅದಕ್ಕೆ ಜಾಣ್ಮೆಯಿಂದ ಬೇರೆಯದೇ ತಿರುವು ನೀಡಿದ್ದಾರೆ.
ತಾಯಿ ಕರುಳು ಬಯಸುವುದೇ ಬೇರೆ
ಆದರೆ ಅಲ್ಲಿ ನಡೆಯೋದೆ ಬೇರೆ ಯಾವ ಕ್ರೌರ್ಯದ ನೆರಳಲ್ಲಿ ತನ್ನ ಮಗು ಬೆಳೆಯ ಬಾರದು ಎಂದು ಆಕೆ ಬಯಸುತ್ತಾಳೋ ಅದೇ ಮಗು ಕಾಶಿಯಲ್ಲಿನ ಹರಿಶ್ಚಂದ್ರಘಾಟ್ ನಲ್ಲಿ ಉರಿಯುವ ಚಿತೆಗಳಲ್ಲಿನ ಹೆಣಗಳ ಜೊತೆ ಜೊತೆಯಲ್ಲಿ ಬೆಳೆಯುತ್ತದೆ.
ದೊಡ್ಡವನಾದಂತೆ ಹೆಣ ಸುಡುವ ಮಾಫಿಯಗೆ ನಾಯಕನಾಗಿ ಬೆಂಕಿಯಂತೆ ಅಬ್ಬರಿಸುತ್ತಾನೆ, ಲ್ಯಾಂಡ್ ಡೀಲ್ ಸಾಮ್ರಾಜ್ಯಕ್ಕೆ ಅಧಿಪತಿಯಾಗಿ ಎದುರು ನಿಂತವರ ಕುತ್ತಿಗೆ ಸೀಳಿ ಬೇಟೆಯಾಡುತ್ತಾನೆ ಈ ಮದಗಜ.
ಪ್ರೀತಿಗೆ ಸೂರ್ಯನಂತೆ ತೇಜಸ್ಸು , ಕೋಪಕ್ಕೆ ಸಿಡಿದೇಳುವ ರೌದ್ರಕ್ಕೆ ಹೇಳಿ ಮಾಡಿಸಿದಂತೆ ಶ್ರೀ ಮುರುಳಿ ಪಾತ್ರವನ್ನು ಅನುಭವಿಸಿ ಅಭಿನಯಿಸಿದ್ದಾರೆ.
ಜಮೀನು ವಿವಾದಕ್ಕಾಗಿ ಮಾತೃಭೂಮಿಗೆ ಕಾಲಿಡುವ ನಾಯಕ ಸೂರ್ಯ (ಶ್ರೀ ಮುರುಳಿ) ಏನೆಲ್ಲಾ ಬವಣೆ ಪಡೆಯುತ್ತಾನೆ , ಯಾರೆಲ್ಲಾ ಎದುರಾಳಿಗಳನ್ನು ಸದೆ ಬಡಯುತ್ತಾನೆ, ಊರಿನ ದೊರೆಯ ಮಗು ಏನಾಗುತ್ತಾನೆ, ತಬ್ಬಲಿ ಮಗು ತಾಯಿಯ ಮಡಿಲ ಸೇರುತ್ತಾನಾ, ಎರಡು ಊರುಗಳ ನಡುವಿನ ನೀರು – ರಕ್ತಗಳ ಹರಿಯುವಿಕೆಗೆ ಶಾಶ್ವತ ಪರಿಹಾರ ನೀಡುತ್ತಾನಾ, ತಾನು ಪ್ರೀತಿಸಿದವಳ ಕೈ ಹಿಡಿಯುತ್ತಾನಾ ಈ ಹತ್ತು ಹಲವು ಪ್ರಶ್ನೆಗಳಿಗೆ ಮದಗಜ ಚಿತ್ರವನ್ನು ನೋಡಲೇ ಬೇಕು.
ಪೂರ್ತಿ ಸಿನಿಮಾ ಎಲ್ಲೂ ಯಾವುದೇ ಇರುಸು ಮುರುಸುಗಳಿಗೆ ಪ್ರೇಕ್ಷಕನನ್ನು ಒಳಪಡಿಸದೇ ನೋಡಿಸಿಕೊಂಡು ಹೋಗುತ್ತದೆ. ಎಲ್ಲೂ ಯಾವುದೇ ರೀತಿಯಲ್ಲಿ ಬೋರ್ ಹೊಡೆಸುವುದಿಲ್ಲ. ಪ್ರತೀ ಸೀನಿನಲ್ಲೂ ನಿರ್ದೇಶಕ ತಾಜಾ ತನವನ್ನು ಕಾಯ್ದು ಕೊಂಡಿದ್ದಾರೆ.
ಇದೊಂದು ಮಾಸ್ ಮತ್ತು ಕ್ಲಾಸ್ ಸಿನಿಮಾ. ತಾಯಿ ಜೊತೆ ಜೊತೆಗೆ ತಂದೆಯ ಸೆಂಟಿಮೆಂಟ್ ದೃಶ್ಯಗಳು ಪ್ರೇಕ್ಷಕನಿಗೆ ಹೆಮ್ಮೆ ಎನಿಸುತ್ತದೆ.
ನಿರ್ದೇಶಕನ ಜಾಣ್ಮೆ ತುಂಬಾ ಚನ್ನಾಗಿ ಚಿತ್ರದಲ್ಲಿ ಎದ್ದು ಕಾಣುತ್ತದೆ.
ಚಿತ್ರದಲ್ಲಿ ರವಿ ಬಸೂರು ಸಂಗೀತ ಚಿತ್ರದ ರುಚಿ ಹೆಚ್ಚಿಸಿದೆ. ನವೀನ್ ಕುಮಾರ್ ಛಾಯಗ್ರಹಣ ಚಿತ್ರದ ಕನ್ನಡಿಯಂತೆ ಬಿಂಬಿಸಿದ್ದಾರೆ.
ಇನ್ನು ಸಂಭಾಷಣೆ ಬರದಂಥ ಚಂದ್ರಮೌಳಿ ಪ್ರೇಕ್ಷಕರಿಂದ ಚಿತ್ರದುದ್ದಕ್ಕೂ ಚಪ್ಪಾಳೆ ಶಿಳ್ಳೆಗಳನ್ನು ಗಿಟ್ಟಿಸಿ ಕೊಂಡಿದ್ದಾರೆ.
ಶ್ರೀ ಮುರುಳಿ ಚಿತ್ರಕ್ಕೆ ಒಬ್ಬ ನಾಯಕನಾದರೆ ಜಗಪತಿ ಬಾಬು ಮತ್ತೊಬ್ಬ ನಾಯಕ ಎನ್ನ ಬಹುದು ಅಪ್ಪ ಮಗನ ಕಾಂಬಿನೇಷನ್ ತುಂಬಾ ಚನ್ನಾಗಿ ತೆರೆಯ ಮೇಲೆ ಮೂಡಿ ಬಂದಿದೆ. ಜಗಪತಿ ಬಾಬು ರವರು ತಮ್ಮ ಪಾತ್ರದ ಸ್ಕೊರಿಂಗ್ ಚನ್ನಾಗಿ ಬಾರಿಸಿದ್ದಾರೆ.
ಹಾಗೂ ತಾಯಿಯ ಪಾತ್ರದಲ್ಲಿ ದೇವಯಾನಿ ಕೂಡ ಬಹಳ ಸಹಜವಾಗಿ ಅಭಿನಯಿಸಿದ್ದಾರೆ ಹಾಗೂ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಾರೆ ತಾಯಿಯಾಗಿ ಹೊಸ ಮುಖ ಕನ್ನಡ ಪ್ರೇಕ್ಷಕನಿಗೆ ಖುಷಿ ಕೊಡುತ್ತದೆ.
ನಾಯಕಿ ನಟಿಯಾಗಿ ಆಶಿಕಾ ರಂಗನಾಥ್ ಬಹಳ ಸರಳವಾಗಿ, ಸಹಜವಾಗಿ ಅಭಿನಯಿಸಿ ಒಂದಷ್ಟು ಕಚಗುಳಿ ಇಟ್ಟಿದ್ದಾರೆ. ಮೊದಲ ಬಾರಿಗೆ ಹೊಲ, ಗದ್ದೆಯಲ್ಲಿ ಕೆಲಸ ಮಾಡುತ್ತಾ ನಾಯಕನ ಎದೆಯಲ್ಲಿ ಸದ್ದಿಲ್ಲದೇ ಪ್ರೇಮದ ನಾಟಿ ಮಾಡಿ ಎಲ್ಲರಿಗೂ ಇಷ್ಟವಾಗುವಂತೆ ಅಭಿನಯಿಸಿದ್ದಾರೆ.
ರಂಗಾಯಣ ರಘು ಪಾತ್ರಕ್ಕೆ ಜೀವ ತುಂಬಿ ಉತ್ತಮವಾಗಿ ಅಭಿನಯಿಸಿದ್ದಾರೆ.
ಇನ್ನೂ ಹಾಸ್ಯ ದೃಶ್ಯಗಳಲ್ಲಿ ಬರುವಂಥ ಚಿಕ್ಕಣ್ಣ , ಶಿವರಾಜ್. ಕೆ. ಆರ್ ಪೇಟೆ , ಧರ್ಮಣ್ಣ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.
ಖಳ ನಟರಾಗಿ ಅನಿಲ್ ಕುಮಾರ್ ಹಾಗೂ ಗರುಡ ರಾಮ್ ಖದರ್ ನ ಖಡಕ್ ಜೋರಾಗಿದೆ.
ಗರುಡ ರಾಮ್ ಒಂಟಿ ಕಣ್ಣಿನ ಖಳ ನಟನಾಗಿ ಗಮನ ಸೆಳೆಯುತ್ತಾರೆ.
ಅಯೋಗ್ಯ ಚಿತ್ರವನ್ನ ನಿರ್ದೇಶನ ಮಾಡಿದಂತಹ ಮಹೇಶ್ ಕುಮಾರ್ ಎಂಥಾ ಚಿತ್ರವೇ ಆಗಲಿ ಅಚ್ಚುಕಟ್ಟಾಗಿ ಮಾಡಬಲ್ಲೆ ಎಂದು ತೋರಿಸಿದ್ದಾರೆ.
ಚಿತ್ರದುದ್ದಕ್ಕೂ ಸಾಹಸ ದೃಶ್ಯಗಳು , ಸೆಂಟಿಮೆಂಟ್ ಸನ್ನಿವೇಶಗಳು , ಖಡಕ್ ಡೈಲಾಗ್ , ಪ್ರೀತಿ ಪ್ರೇಮವನ್ನು ನವಿರಾಗಿ ಎಷ್ಟು ಬೇಕೋ ಅಷ್ಟು ಪ್ರೇಕ್ಷಕರಿಗೆ ನೀಡಿದ್ದಾರೆ. ಅದರಲ್ಲೂ ತಾಯಿ ಮತ್ತು ತಂದೆಯ ಸೆಂಟಿಮೆಂಟ್ ದೃಶ್ಯಗಳನ್ನು ವಿಭಿನ್ನವಾಗಿಯೇ ತೆರೆಯ ಮೇಲೆ ತೋರಿಸಿದ್ದಾರೆ.
ಮದಗಜದ ಮೂಲ ರೂವಾರಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.
ಚಿತ್ರವನ್ನ ರಾಯಲ್ ಆಗಿ ನಿರ್ಮಿಸಿದ್ದಾರೆ. ಅದ್ದೂರು ಸೆಟ್ ಗಳು ಚಿತ್ರೀಕರಣದ ತಾಣಗಳು ಬಾರಿ ಕಲಾವಿದರ ದಂಡು ಹೀಗೆ ಚಿತ್ರವನ್ನು ಬಹಳವಾಗಿ ವೈಭವೀಕರಿಸಿದ್ದಾರೆ ನಿರ್ಮಾಪಕ ಉಮಾಪತಿ.
ಒಟ್ಟಾರೆ ಚಿತ್ರವನ್ನು ಮಾಸ್ ಹಾಗೂ ಕ್ಲಾಸ್ ಅಭಿಮಾನಿಗಳು ಚಿತ್ರ ಮಂದಿರದಲ್ಲಿ ಕೂತು ಎಂಜಾಯ್ ಮಾಡಬಹುದು. ಕೊಟ್ಟ ಕಾಸಿಗೆ ಬರಪೂರ ಮನರಂಜನೆ ಎನ್ನಬಹುದು.