ಎರಡು ಧರ್ಮಗಳ ಪ್ರೇಮ ಯುದ್ದ
’ಲವ್ ವಾರ್’ ಚಿತ್ರದ ಹೆಸರೇ ಹೇಳುವಂತೆ ಎರಡು ಧರ್ಮಗಳ ಪ್ರೇಮ ಯುದ್ದ ನಡೆಯುವುದು ಎಲ್ಲಿ? ಆತ ಇಸ್ಲಾಂ ಧರ್ಮದವನು. ಆಕೆಯು ಹಿಂದೂ ಆಗಿರುತ್ತಾಳೆ. ಹೀಗೆ ಧರ್ಮಗಳ ನಡುವಿನ ಸನ್ನಿವೇಶಗಳು, ಪ್ರೇಮಿಗಳ ಕಿತ್ತಾಟ, ಕುಟುಂಬದ ಜೊತೆಗಿನ ಸಂಘರ್ಷ, ಇವೆಲ್ಲವು ಕತೆಯಲ್ಲಿ ಮುಖ್ಯವಾಗಿರುತ್ತದೆ. ’ಸರ್ಕಾರ್’ ನಿರ್ದೇಶನ ಮಾಡಿರುವ ಎಸ್.ಮಂಜುಪ್ರೀತಮ್ ರಚನೆ,ಚಿತ್ರಕತೆ ಬರೆದು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಎಸ್‌ಕೆಎಫ್ ಬ್ಯಾನರ್ ಅಡಿಯಲ್ಲಿ ಇಮ್ರಾನ್ ಆರಿಫ್ ಪಾಶಾ ಐದು ಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಸಾಹಿಲ್‌ಖಾನ್ ನಾಯಕನಾಗಿ ಮೊದಲ ಚಿತ್ರ. ಮರಾಠಿ ಧಾರವಾಹಿಗಳಲ್ಲಿ ಕಾಣಸಿಕೊಂಡಿದ್ದ ಬಾಂಬೆ ಮೂಲದ ಪಾಯಲ್ ನಾಯಕಿ. ಪಾತ್ರದ ಸಲುವಾಗಿ ಕನ್ನಡ ಕಲಿತುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ತಾರಗಣದಲ್ಲಿ ರವಿಶಂಕರ್, ಸಾಧುಕೋಕಿಲ ಇವರೊಂದಿಗೆ ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಭಾಷೆಯಿಂದ ಒಬ್ಬ ಕಲಾವಿದರು ನಟಿಸುತ್ತಿದ್ದಾರೆ. ಸಂಗೀತ ಸಂಯೋಜಕ ಕಾರ್ತಿಕ್‌ವೆಂಕಟೇಶ್ ಈಗ ಆರೋನ್ ಕಾರ್ತಿಕ್ ಎಂದು ನಾಮಕರಣ ಮಾಡಿಕೊಂಡಿದ್ದು, ನಾಲ್ಕು ಹಾಡುಗಳಿಗೆ ರಾಗ ಹೊಸೆಯುತ್ತಿದ್ದಾರೆ. ಛಾಯಾಗ್ರಹಣ ಆಶುಮೋಹನ್‌ಕುಮಾರ್, ಸಂಕಲನ ನಾಗರಾಜ.ಜಿ.ಹಾರಸೂರ್, ಸಂಭಾಷಣೆ ಚಂದ್ರು, ಸಾಹಸ ಡಾ.ಥ್ರಿಲ್ಲರ್‌ಮಂಜು, ನೃತ್ಯ ಕರಿಯಾನಂದ ಅವರದಾಗಿದೆ. ಚಿತ್ರದುರ್ಗ, ಚಿಕ್ಕಮಗಳೂರು, ಮಡಕೇರಿ, ಗೋವ ಮತ್ತು ಮಹಾರಾಷ್ಟ್ರ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಗುರುವಾರದಂದು ಸಿನಿಮಾದ ಪೂಜಾ ಕಾರ್ಯಕ್ರಮ ಮತ್ತು ಪೋಸ್ಟರ್ ಅನಾವರಣ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಿರ್ಮಾಪಕರ ಹುಟ್ಟುಹಬ್ಬದ ಪ್ರಯುಕ್ತ ಕೇಕ್‌ನ್ನು ಕಟ್ ಮಾಡಿ ವಿತರಣೆ ಮಾಡಿದರು.