Krishnam Pranaya Saki movie review ಕೃಷ್ಣನ ಪ್ರಣಯಕ್ಕೆ ನೂರೆಂಟು ವಿಘ್ನ Rating – 3.5/5
ಚಿತ್ರ ವಿಮರ್ಶೆ
ಚಿತ್ರ – ಕೃಷ್ಣಂ ಪ್ರಣಯಸಖಿ
ನಿರ್ಮಾಣ ಸಂಸ್ಥೆ – ತ್ರಿಶೂಲ್ ಎಂಟರ್ಟೈನ್ಮೆಂಟ್ಸ್
ನಿರ್ಮಾಪಕರು, ಪ್ರಶಾಂತ್ ಜಿ. ರುದ್ರಪ್ಪ
ಸಂಗೀತ – ಅರ್ಜುನ್ ಜನ್ಯ
ಕಲಾವಿದರು – ಗೋಲ್ಡನ್ ಸ್ಟಾರ್ ಗಣೇಶ್, ಶ್ರೀನಿವಾಸಮೂರ್ತಿ, ರಾಮಕೃಷ್ಣ, ಶಶಿಕುಮಾರ್, ಶೃತಿ, ಸಾಧುಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್, ಗಿರಿ, ಮಾಳವಿಕ ನಾಯರ್, ಶರಣ್ಯಾ ಶೆಟ್ಟಿ, ಮುಂತಾದವರು.
ಛಾಯಾಗ್ರಹಣ – ವೆಂಕಟ್ ರಾಮ ಪ್ರಸಾದ್
ರೇಟಿಂಗ್- 3.5/5

ಕೃಷ್ಣನ ಪ್ರಣಯಕ್ಕೆ ನೂರೆಂಠು ವಿಘ್ನ
ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಆಕ್ಸಿಜನ್ ಸಿಕ್ಕಂತಾಗಿದೆ, ಜನ ಚಿತ್ರ ಮಂದಿರಗಳ ಕಡೆಗೆ ಮುಖ ಮಾಡಿದ್ದಾರೆ ಎನ್ನುವುದು ಖುಷಿಯ ವಿಚಾರ. ಕಳೆದ ವಾರದಿಂದ ಭೀಮಾ, ಗೌರಿ ಹಾಗೂ ಕೃಷ್ಣಂ ಪ್ರಣಯ ಸಖಿ ಚಿತ್ರಗಳು ಭಾರಿ ಬಜೆಟ್ ಮತ್ತು ನಿರೀಕ್ಷಿತ ಚಿತ್ರಗಳಾಗಿತ್ತು.
ಈ ಚಿತ್ರಗಳು ಬೇರೆ ಬೇರೆ ವರ್ಗದ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿಲ್ಲ ಎನ್ನಬಹುದು.

ಗಣೇಶ್ ಸಿನಿಮಾಗಳು ಯಾವಾಗಲೂ ಹಾಡುಗಳ ಹೊದ್ದಿಕೊಂಡೆ ಬರುತ್ತವೆ. ಈ ಚಿತ್ರದಲ್ಲೂ ಹಾಡುಗಳು ಪ್ರಮುಖ ಪಾತ್ರಗಳನ್ನು ವಹಿಸಿವೆ. ಚಿತ್ರ ಬಿಡುಗಡೆಗೂ ಮುಂಚೆ ಹಾಡುಗಳದ್ದೇ ಬಾರಿ ಸದ್ದಾಗಿದ್ದವು. ಅರ್ಜುನ್ ಜನ್ಯ ಮತ್ತೆ ಸೆಂಚುರಿ ಭಾರಿಸಿದ್ದಾರೆ, ಅವರ ಸಂಯೋಜನೆಯಲ್ಲಿ ಹಾಡುಗಳು ಕೇಳುಗರ ಮನ ಮುಟ್ಟಿವೆ ಸಾಮಾಜಿಕ ಜಾಲಗಳಲ್ಲಿ ಹರಿದಾಡುತ್ತಿವೆ. ನಿಜ ಹೇಳ ಬೇಕೆಂದರೆ ಈ ಚಿತ್ರದ ಯಶಸ್ಸಿನ ಪ್ರಮುಖ ಪಾಲು ಅರ್ಜುನ್ ಜನ್ಯರವರಿಗೆ ಸಲ್ಲುತ್ತದೆ.

ಎರಡನೆಯದು ಛಾಯಾಗ್ರಹಣ ಚಿತ್ರದ ಕಥೆಗೆ ಅಂದದ ಫ್ರೇಮ್ ಕೊಟ್ಟಿರೋರು ಛಾಯಾಗ್ರಾಹಕ ವೆಂಕಟ್ ರಾಮ ಪ್ರಸಾದ್. ಎಲ್ಲೂ ಕಣ್ಣಿಗೆ ಮನಸ್ಸಿಗೆ ಘಾಸಿಯಾಗದಂತೆ ಕ್ಯಾಮರಾ ಕೆಲಸ ಮಾಡಿ ಮುಗಿಸಿದ್ದಾರೆ.
ಹಾಗೇ ಮೂರನೆಯದು ಸಂಕಲನ ಅಂದರೆ ಎಡಿಟಿಂಗ್ ಕಾರ್ಯ ಕೂಡ ವಿಭಿನ್ನವಾಗಿದೆ, ಚಿತ್ರ ಕಥೆಯ ಓಟಕ್ಕೆ ಅನುಗುಣವಾಗಿ ದೃಶ್ಯ ಜೋಡಣೆ ಮಾಡಿದ್ದಾರೆ.
ಇನ್ನು ಗಣೇಶ್ ಬಗ್ಗೆ ಹೇಳುವುದಾದರೆ ಗಣೇಶ್ ಇರೋ ಕಡೆ ಕಾಮಿಡಿ, ಫನ್, ರೊಮ್ಯಾಂಟಿಕ್, ತುಂಟಾಟ, ಒಂದಷ್ಟು ಕಚಗುಳಿ ಇಡುವ ಡೈಲಾಗ್ ಗಳಿಗೆ ಕೊರತೆ ಇರೋದಿಲ್ಲ.
ಇಲ್ಲೂ ಕೂಡ ಗಣೇಶ್ ಲವಲವಿಕೆ ಯಿಂದ ತೆರೆಯ ಮೇಲೆ ರಾರಾಜಿಸಿದ್ದಾರೆ.

ಚಿತ್ರದ ನಾಯಕ ಒಬ್ಬ ದೊಡ್ಡ ಕುಟುಂಬದ ಪ್ರೀತಿಯ ಹುಡುಗ ಮತ್ತು ದೊಡ್ಡ ಮಟ್ಟದ ಆಸ್ತಿ, ವ್ಯವಹಾರದ ಜವಾಬ್ದಾರಿ ಹೊತ್ತ ಯುವಕ ಆದರೆ ವಯಸ್ಸು 30ಗಡಿ ದಾಟಿದ್ದರು ಇನ್ನೂ ಮದುವೆಯಾಗಿಲ್ಲ. ಇದಕ್ಕೆ ಎಡರು ತೊಡರುಗಳು ಮನೆಯವರ ಅತಿಯಾದ ಪ್ರೀತಿ ಮತ್ತು ಕಾಳಜಿ.
ಇಲ್ಲಿ ಯಾವುದೇ ಹುಡುಗಿ ಬಂದರು ಒಬ್ಬರಿಗೆ ಅದು ಸರಿ ಇಲ್ಲ ಇನ್ನೊಬ್ಬರಿಗೆ ಇದು ಸರಿ ಇಲ್ಲ ಹೀಗೆ ಎಲ್ಲಾ ಹೆಣ್ಣುಗಳು ರಿಜಕ್ಟ್ ಲಿಸ್ಟ್ ಸೇರಿರುತ್ತಾರೆ. ಈ ಎಲ್ಲ ಗೊಂದಲಗಳ ಹಾಸ್ಯದಲ್ಲಿ ಸಾಮಾಜಿಕ ಜವಾಬ್ದಾರಿ ಹೊತ್ತ ನಾಯಕಿ ಆಕಸ್ಮಿಕವಾಗಿ ಸಿಗುತ್ತಾಳೆ..

ಮೊದಲ ನೋಟಕ್ಕೆ ಕೃಷ್ಣನಿಗೆ ಪ್ರಣಯಳ ಮೇಲೆ ಮೋಹವಾಗುತ್ತದೆ, ಮೋಹ ಪ್ರೀತಿಗೆ ತಿರುಗುತ್ತದೆ.
ಅನಾಥಾಶ್ರಮ ನಡೆಸುವ ಸಾಧಾರಣ ಹುಡುಗಿ ಪ್ರಣಯಳಿಗೂ ಹಾಗೂ ಕೋಟ್ಯಾಧೀಶ್ವರ ಕೃಷ್ಣನಿಗೂ ಮದುವೆ ಆಗುತ್ತದಾ..? ಎನ್ನುವುದೇ ಚಿತ್ರದ ಮೂಲ ಕಥೆ. ಈ ಕಥೆಯನ್ನು ನಿರ್ದೇಶಕ ಶ್ರೀನಿವಾಸರಾಜು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಈಗಾಗಲೇ ದಂಡುಪಾಳ್ಯ ಚಿತ್ರಗಳ ಸೀರಿಸ್ ನಿರ್ದೇಶಕ ಅದರ ಕ್ರೈಮ್ ನಿಂದ ತಲೆ ತೊಳೆದುಕೊಳ್ಳಲು ಈ ಕೌಟುಂಬಿಕ ಪ್ರೇಮ ಕಥೆ ಮಾಡಿದ್ದಾರೆ ಎನ್ನಬಹುದು. ರಕ್ತ, ಕೊಲೆ, ಕ್ರೌರ್ಯಗಳ ನರಳಿಕೆಯನ್ನು ಪಕ್ಕಕ್ಕಿಟ್ಟು ಪ್ರೇಮದ ಅರಳಿಕೆಯನ್ನು ಅದರಿಂದಾಗುವ ಅಡ್ಡ ಪರಿಣಾಮಗಳನ್ನು ಹಾಸ್ಯಭರಿತವಾಗಿ ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ನಿರ್ದೇಶಕರ ಭಾಷಾ ಪ್ರೇಮವನ್ನು ರಂಗಾಯಣ ರಘುರವರ ಮುಖಾಂತರ ತೋರಿಸಿಕೊಂಡಿದ್ದಾರೆ. ನಾಯಕ ನಾಯಕಿಯನ್ನು ಒಲಿಸಿಕೊಳ್ಳಲು ಮಾಡಿರುವ ಕಸರತ್ತು ಈಗಾಗಲೇ ಹಲವಾರು ಚಿತ್ರಗಳಲ್ಲಿ ಬಂದಿದೆಯಾದರು ಇಲ್ಲಿ ಗಣಪ ಗೋಲ್ಡನ್ ನಗೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಿದ್ದಾನೆ ಎನ್ನುವುದು ವಿಶೇಷ.
ಇನ್ನು ನಿರ್ಮಾಪಕರು ತ್ರಿಶೂಲ್ ಎಂಟರ್ಟೈನ್ಮೆಂಟ್ಸ್ ಮೂಲಕ
ಪ್ರಶಾಂತ್ ಜಿ. ರುದ್ರಪ್ಪ ನವರು ಈ ಸಿನಿಮಾವನ್ನು ಒಳ್ಳೆಯ ಬಜೆಟ್ ನಲ್ಲಿ ನಿರ್ಮಿಸಿದ್ದಾರೆ.

ತುಂಬು ಕುಟುಂಬದ ಕಲರ್ ಫುಲ್ ಫ್ಯಾಮಿಲಿಯಲ್ಲಿ ಶ್ರೀನಿವಾಸಮೂರ್ತಿ, ರಾಮಕೃಷ್ಣ, ಶಶಿಕುಮಾರ್, ಶೃತಿ, ಸಾಧು ಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್, ಗಿರಿ, ಎಲ್ಲಾ ಹಿರಿಯ , ಕಿರಿಯ ನಟರೆಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ

ಇನ್ನೂ ನಾಯಕಿಯಾಗಿ ಮಾಳವಿಕ ನಾಯರ್ ಪ್ರೇಕ್ಷರ ಮನದಲ್ಲಿ ಉಳಿದುಕೊಳ್ಳುವಂತಹ ಪ್ರಯತ್ನ ಮಾಡಿದ್ದಾರೆ.
ಗಣೇಶ್ ಜೋಡಿಯಾಗಿ, ಪ್ರೇಯಸಿಯಾಗಿ ಎರಡೆರಡು ಬಾರಿ ಪ್ರೇಮಿಯಾಗಿ ಅಭಿನಯಿಸಿದ್ದಾರೆ. ಹಾಗೇ ಶರಣ್ಯ ಶೆಟ್ಟಿ ಕೂಡ ತಮ್ಮ ಅಭಿನಯದ ಮೂಲಕ ಸಿನಿ ಪ್ರಿಯರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಈಕೆ ತಂದೆ ಅವಿನಾಶ್ ರವರಿಗೆ ಅಂಗಡಿಯಿಂದ ಚಾಕ್ಲೇಟ್ ತಂದು ಕೊಡು ಎಂದು ಹಟ ಮಾಡುವ ಮಗುವಿನಂತೆ ಕೃಷ್ಣ ನನಗೆ ಬೇಕು ಎಂದು ಅಪ್ಪನ ಮುಂದೆ ರಚ್ಚೆ ಹಿಡಿಯುತ್ತಾಳೆ. ಇದರಿಂದ ಏನೇನು ಅವಗಡಗಳು ಆಗುತ್ತವೆ, ಕೃಷ್ಣನ ತಲೆ ಕೆಡುವಷ್ಟು ಪ್ರಣಯ ದುಭಾರಿಯಾಗುತ್ತದಾ, ಕೊನೆಗೆ ಕೃಷ್ಣ ಪ್ರಣಯಳೊಂದಿಗೆ ಸಖ್ಯ ಬೆಳೆಸುತ್ತಾನ, ಎನ್ನುವುದಕ್ಕೆ ಪ್ರೇಕ್ಷಕರು ಸಿನಿಮಾ ನೋಬಹುದು.

ಯಾವುದೇ ನಶೆ, ನಶೆಯ ಅಮಲಿನಲ್ಲಿ ರಕ್ತಪಾತ, ಸಮಾಜಘಾತುಕತನದ ಪರಮಾವಧಿಗಳು ಕೆಟ್ಟ ಸಂಭಾಷಣೆ ಗಳಿಲ್ಲದ ಒಂದು ನೀಟ್ ಸಂಭಾಷಣೆಯ ಚಿತ್ರ “ಕೃಷ್ಣಂ ಪ್ರಣಯ ಸಖಿ” ಎನ್ನಬಹುದು.
ಕೃಷ್ಣನ ಪ್ರಣಯಕ್ಕೆ
ನೂರೆಂಟು ವಿಘ್ನ