Koti movie ready to Release on June 14th. ಕೋಟಿಯಲ್ಲಿ ಮಿಂಚಲು ನವ ಪ್ರತಿಭೆಗಳು ರೆಡಿ.

ಕೋಟಿಯಲ್ಲಿ ಮಿಂಚಲು ನವಪ್ರತಿಭೆಗಳು ರೆಡಿ

ಬರುವ ಶುಕ್ರವಾರ ಬಿಡುಗಡೆಗೆ ಸಿದ್ಧವಿರುವ ‘ಕೋಟಿ’ ಸಿನಿಮಾ ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ.

‘ಕೋಟಿ’ ಚಿತ್ರದ ಇನ್ನೊಂದು ವಿಶೇಷತೆ ಇಬ್ಬರು ಹೊಸ ಪ್ರತಿಭೆಗಳು. ‘ಕೋಟಿ’ಯಲ್ಲಿ ಧನಂಜಯ್‌‌ಗೆ ತಾಯಿಯಾಗಿ ತಾರಾ ಅಭಿನಯಿಸಿದ್ದರೆ, ತಮ್ಮ – ತಂಗಿಯಾಗಿ ಪೃಥ್ವಿ ಶಾಮನೂರು ಮತ್ತು ತನುಜಾ ವೆಂಕಟೇಶ್ ಅಭಿನಯಿಸಿದ್ದಾರೆ. ಇತ್ತಿಚೆಗೆ ನಡೆದ ಚಿತ್ರದ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಡಾಲಿ ಧನಂಜಯ್ ಮತ್ತು ತಾರಾ ಅವರು ಈ ಹೊಸ ಪ್ರತಿಭೆಗಳ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉದಯೋನ್ಮುಖ ‌ನಟ‌ ‘ಪೃಥ್ವಿ ಶಾಮನೂರು’ ಈಗಾಗಲೇ ಹರಿಪ್ರಸಾದ್ ಜಯಣ್ಣ ನಿರ್ದೇಶನದ ‘ಪದವಿ ಪೂರ್ವ’ದ ಮುಖಾಂತರ ತಮ್ಮ ಸಿನಿಮಾ ಪಯಣವನ್ನು ಆರಂಭಿಸಿದ್ದಾರೆ.‌ ಕೋಟಿ‌‌ ಸಿನಿಮಾದಲ್ಲಿ‌ ಇವರ ಪಾತ್ರ ‘ನಚ್ಚಿ’, ಕೋಟಿಯ ಪ್ರೀತಿಯ ತಮ್ಮ. ಯಾರಿಗೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಇವನು ಅಕ್ಕ ಅಣ್ಣಂದಿರ ಕಾಡಿಸುತ್ತ ನಗಿಸುತ್ತ ಮನೆಗೊಂದು ಕಳೆ ತರುವ ತುಂಟ.‌‌ ಹಾಗೆಯೆ ಕೋಟಿಯ ತಂಗಿ ‘ಮಹತಿ’ಯ ಪಾತ್ರದಲ್ಲಿ‌ ರಂಗಭೂಮಿ ಹಿನ್ನೆಲೆಯ ತನುಜಾ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಇವರಿಗೆ ಇದು ಚೊಚ್ಚಲ ಸಿನಿಮಾ.

ಕೋಟಿ ಚಿತ್ರದ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಪೃಥ್ವಿ ಶಾಮನೂರು “‌ನಚ್ಚಿ ಒಂದು ಸಣ್ಣ ಪಾತ್ರವಾದರೂ ತುಂಬಾ ಇಂಪ್ಯಾಕ್ಟ್ ಇರುವ ಪಾತ್ರ. ಇಷ್ಟು ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದಕ್ಕೆ‌ ತುಂಬಾ ಖುಷಿ ಇದೆ” ಎಂದರು.

ಕೋಟಿಯ ತಂಗಿಯ ಪಾತ್ರ‌ ಮಾಡಿರುವ ತನುಜಾ ವೆಂಕಟೇಶ್ “ನಾನು ಕೋಟಿಯ‌ ತಂಗಿ ‘ಮಹತಿ’ಯಾಗಿ ಅಭಿನಯಿಸಿದೀನಿ. ಒಂದು‌ ಇಂಪಾರ್ಟೆಂಟ್ ಪಾತ್ರ. ಧನಂಜಯ್ ಅಣ್ಣ, ತಾರಮ್ಮ ಮತ್ತು ಪೃಥ್ವಿ ಅವರ ಜತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಒಂದು ಕುಟುಂಬದ ಜತೆ‌ ಇದ್ದಂತೆ ಅನಿಸಿತು” ಎಂದು ಸಂತಸ ಹಂಚಿಕೊಂಡರು.

ಕೋಟಿ ಚಿತ್ರದ ನಿರ್ದೇಶಕ ಪರಮ್ “ಈಗಾಗಲೇ ಹೀರೋ ಆಗಿ ‘ಪದವಿ ಪೂರ್ವ’ ಚಿತ್ರದಲ್ಲಿ ನಟಿಸಿರುವ ಪೃಥ್ವಿ ಶಾಮನೂರು ‘ನಚ್ಚಿ’ ಪಾತ್ರವನ್ನು ಇಷ್ಟಪಟ್ಟು ಒಪ್ಪಿ ನಟಿಸಿದ್ದಾರೆ. ಅವರ ಅಭಿನಯದ ಎರಡು ದೃಶ್ಯಗಳನಂತೂ ನೀವು ತುಂಬಾ ಇಷ್ಟ ಪಡುತ್ತೀರಿ. ‘ಮಹತಿ’ಯ ಪಾತ್ರ‌ ಮಾಡಿರುವ ತನುಜಾ ಅವರ ಮೊದಲ ಸಿನಿಮಾ ಇದು. ಅವರ ಅಭಿನಯದಲ್ಲಿ ತುಂಬಾ ಲೈಫ್ ಇದೆ. ಪ್ರತಿಭಾವಂತ ನಟಿ” ಎಂದರು.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor