“#Kerebete” Movie 3rd. Song Released By Ashwini Punith Rajkumar. ಗೌರಿಶಂಕರ್ ‘ಕೆರೆಬೇಟೆ’ಗೆ ಅಶ್ವಿನಿ ಪುನೀತ್ ರಾಜಕುಮಾರ್ ಸಾಥ್

ಗೌರಿಶಂಕರ್ ‘ಕೆರೆಬೇಟೆ’ಗೆ ಅಶ್ವಿನಿ ಪುನೀತ್ ರಾಜಕುಮಾರ್ ಸಾಥ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಿಕ್ಕಾಪಟ್ಟೆ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ ಕೆರೆಬೇಟೆ. ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರಕ್ಕೆ ಈಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಸಿನಿಮಾದ ಮೂರನೇ ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ರಿಲೀಸ್ ಮಾಡುವ ಮೂಲಕ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.

ಈಗಾಗಲೇ ಸಿನಿಮಾದಿಂದ ಟೀಸರ್, ಟ್ರೈಲರ್ ಮತ್ತು ಎರಡು ಹಾಡುಗಳು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಸಿನಿಮಾ ತಂಡ 3ನೇ ಹಾಡನ್ನು ರಿಲೀಸ್ ಮಾಡುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

‘ಕಣ್ಣುಗಳೆ ಕಳೆದು ಹೋದಾಗ…’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. …. ಈ ಸುಂದರ ಹಾಡಿಗೆ…. ಸಿದ್ಧಾರ್ಥ ಬೆಳ್ಮಣ್ಣು ಧ್ವನಿ ನೀಡಿದ್ದು ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇತ್ತೀಚಿಗಷ್ಟೇ ಸಿನಿಮಾತಂಡ 2ನೇ ಹಾಡನ್ನು ಶಿವಮೊಗ್ಗದಲ್ಲಿ ಅದ್ದೂರಿಯಾಗಿ ರಿಲೀಸ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದರು. ಇದೀಗ ಸಿನಿಮಾ ತಂಡ ಚಿತ್ರದ ಪ್ಯಾತೋ ಸಾಂಗ್ ರಿಲೀಸ್ ಮಾಡಿದೆ. ಈ ಹಾಡಿಗೆ ಮನ ಸೋತ ಅಶ್ವಿನಿ ಪುನೀತ್ ರಾಜಕುಮಾರ್ ಸಂತಸ ವ್ಯಕ್ತಪಡಿಸಿದರು.

ಹಾಡು ರಿಲೀಸ್ ಮಾಡುವ ನೆಪದಲ್ಲಿ ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾ ತಂಡ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನ ಹಂಚಿಕೊಂಡರು.

ನಿರ್ದೇಶಕ ರಾಜ್ ಗುರು ಮಾತನಾಡಿ ನಿರ್ಮಾಪಕ ಅಶ್ವಿನಿ ಪುನೀತ್ ರಾಜಕುಮಾರ್ ಹಾಡನ್ನು ರಿಲೀಸ್ ಮಾಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ‘ದೊಡ್ಮನೆಗೂ ನನಗೂ ಒಂದು ಸಂಬಂಧವಿದೆ‌. ಅಪ್ಪು ಸರ್ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಮಣ್ಣಿನ ಕಥೆಗಳ ಬಗ್ಗೆ ತುಂಬಾ ಮಾತನಾಡುತ್ತಿದ್ವಿ. ಈ ರೀತಿಯ ಸಿನಿಮಾ ಅವರಿಗೆ ತುಂಬಾ ಇಷ್ಟ’ ಎಂದರು.

ನಾಯಕಿ ಬಿಂಧು ಶಿವರಾಮ್ ಮಾತನಾಡಿ, ‘ಮಲೆನಾಡಿನ ಭಾಷೆ ನನಗೆ ತುಂಬಾ ಕಷ್ಟವಾಯಿತು. ಇಡೀ ಸಿನಿಮಾ ತಂಡ ಮಲೆನಾಡಿನವರಾಗಿದ್ದರಿಂದ ಅದೇ ಭಾಷೆಯನ್ನು ಮಾತನಾಡುತ್ತಿದ್ದರು. ಹಾಗಾಗಿ ನನಗೂ ಅವರ ಜೊತೆ ಸೇರಿ ಮಲೆನಾಡಿನ ಭಾಷೆ ಮಾತನಾಡಲು ಸುಲಭವಾಯ್ತು. ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಗಟ್ಟಿಯಾಗಿದೆ’ ಎಂದರು.

ನಾಯಕ ಗೌರಿಶಂಕರ್ ಮಾತನಾಡಿ, ‘ಅಶ್ವಿನಿ ಮೇಡಮ್ ಸಿನಿಮಾದ ಟೀಸರ್, ಟ್ರೈಲರ್ ಹಾಡನ್ನು ನೋಡಿ ತುಂಬಾ ಇಷ್ಟಪಟ್ಟರು. ಈ ಸಿನಿಮಾ ನನಗೆ ಗೆಲ್ಲಲೇ ಬೇಕಾಗಿದೆ. ಏಕೆಂದರೆ ನಾನು ತುಂಬಾ ಸೋಲನ್ನು ಕಂಡಿದ್ದೇನೆ. ಸೋತು ಮನೆಯಲ್ಲಿ ಕೂರುವುದು ತುಂಬಾ ಕಷ್ಟ. ಸಿನಿಮಾ ಸಹವಾಸವೇ ಬೇಡ ಅಂತ ಇದ್ದೆ. ನಿರ್ದೇಶಕರು ಈ ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ. ತುಂಬಾ ಪ್ರಿಪರೇಷನ್ ಮಾಡಿದ್ದೇವೆ, ಗೆಲುವು ನನಗೆ ಅನಿವಾರ್ಯವಾಗಿದೆ’ ಎಂದರು

ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಇದೇ ಮಾರ್ಚ್ 15ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕೆರಬೇಟೆ ಸಿನಿಮಾ ಹೇಗಿರಲಿದೆ, ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor