“Kere bete” movie successfully 50 days Completed. 50 ದಿನ ಪೂರೈಸಿದ ‘ಕೆರೆಬೇಟೆ’: ಈ ಸಂಭ್ರಮದಲ್ಲೂ ಬೇಸರ ಹೊರ ಹಾಕಿದ ಸಿನಿಮಾ ತಂಡ.
50 ದಿನ ಪೂರೈಸಿದ ‘ಕೆರೆಬೇಟೆ’: ಈ ಸಂಭ್ರಮದಲ್ಲೂ ಬೇಸರ ಹೊರ ಹಾಕಿದ ಸಿನಿಮಾ ತಂಡ
ಕಮರ್ಷಿಯಲಿ ಸಕ್ಸಸ್ ಕಂಡಿಲ್ಲ, ಜನರ ಮನ ಗೆದ್ದಿದೆ: 50 ದಿನದ ಸಂಭ್ರಮದಲ್ಲಿ ಕೆರೆಬೇಟೆ
ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕನ್ನಡ ಸಿನಿಮಾಗಳು ಹಿಟ್ ಆಗುತ್ತಿಲ್ಲ, ಚಿತ್ರಮಂದಿರಕ್ಕೆ ಜನ ಬರ್ತಾ ಇಲ್ಲ ಈ ಪರಿಸ್ಥಿತಿಯಲ್ಲೂ ಕರೆಬೇಟೆ 50 ದಿನ ಪೂರೈಸಿರುವುದು ಖುಷಿಯ ವಿಚಾರ.

ನಿರ್ದೇಶಕ ರಾಜಗುರು ಮತ್ತು ನಾಯಕ ಗೌರಿಶಂಕರ್ ತುಂಬಾ ಕಷ್ಟಪಟ್ಟು ಇಷ್ಟಪಟ್ಟು ಮಾಡಿದ ಸಿನಿಮಾ ಕೆರೆಬೇಟೆ. ಈ ಸಿನಿಮಾ ಭಾರಿ ನಿರೀಕ್ಷೆ ಮತ್ತು ಕುತೂಹಲದೊಂದಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿತ್ತು. ಕುತೂಹಲಕ್ಕೆ ತಕ್ಕಂತೆ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು ಆದರೆ ಯಾಕೋ ದೊಡ್ಡಮಟ್ಟದ ಸಕ್ಸಸ್ ಕಾಣಲಿಲ್ಲ. ಈ ಬೇಸರ ಕೂಡಾ ಸಿನಿಮಾ ತಂಡಕ್ಕಿದೆ. ಕಮರ್ಷಿಯಲಿ ದೊಡ್ಡಮಟ್ಟದ ಸಕ್ಸಸ್ ಆಗದಿದ್ದರೂ ಜನರ ಮನ ಗೆದ್ದಿರುವುದು ಸಿನಿಮಾ ತಂಡದ ಶ್ರಮಕ್ಕೆ ಸಿಕ್ಕ ಫಲವಾಗಿದೆ.

ಇದೇ ಖುಷಿಯಲ್ಲಿ ಸಿನಿಮಾ ತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಸಿನಿಮಾಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಮೊಮೆಂಟುಗಳನ್ನು ಕೊಡುವ ಮೂಲಕ ಸಿನಿಮಾತಂಡ 50 ದಿನ ಪೂರೈಸಿದ ಸಂಭ್ರಮವನ್ನು ಆಚರಿಸಿತು. ಕಿರೆಬೇಟೆಯಾ ಸಂಭ್ರಮಕ್ಕೆ ಖ್ಯಾತ ನಿರ್ದೇಶಕರಾದ ಶಶಾಂಕ್, ದಯಾಳ್ ಪದ್ಮನಾಭ ಮತ್ತು ನಿರ್ಮಾಪಕ ಉದಯ ಮೆಹ್ತ ನಟ ಪ್ರಥಮ್ ಸಾಕ್ಷಿಯಾದರು.
ಈ ವೇಳೆ ಮಾತನಾಡಿದ ನಾಯಕ ಗೌರಿ ಶಂಕರ್ ‘ಸಿನಿಮಾ ಕಮರ್ಷಿಯಲಿ ದೊಡ್ಡ ಮಟ್ಟಕ್ಕೆ ಹಿಟ್ಟಾಗಿಲ್ಲ, ಆದರೆ ಜನ ಒಳ್ಳೆಯ ರಿವ್ಯೂವ್ ಕೊಟ್ಟಿದ್ದಾರೆ. ಎಲ್ಲೇ ಹೋದರೂ ಕೆರೆಬೇಟೆ ಹೀರೋ ಅಂತ ಗುರುತಿಸುತ್ತಾರೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ 50 ದಿನಗಳು ಓಡಿದೆ.

ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಇದೆ. ಈ ಖುಷಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎನ್ನುವ ಕಾರಣಕ್ಕೆ ಐವತ್ತು ದಿನದ ಸಂಭ್ರಮವನ್ನು ಇಟ್ಟುಕೊಂಡಿದ್ದೇವೆ. ಕೆರೆಬೇಟೆ ಸಿನಿಮಾ ನನಗೆ ದೊಡ್ಡ ಕನಸಾಗಿತ್ತು. ಆದರೆ ಸಕ್ಸಸ್ ಆಗದೆ ಇರುವ ಬೇಸರ ಇದೆ. ಇನ್ಮುಂದೆ ಒಳ್ಳೆಯ ಕಥೆ ಬಂದರೆ ನಟಿಸುತ್ತೇನೆ ಅಷ್ಟೆ. ಆದರೆ ಪ್ರೊಡಕ್ಷನ್ ಸದ್ಯಕ್ಕೆ ಮಾಡಲ್ಲ’ ಎಂದು ಹೇಳಿದರು.
ನಿರ್ದೇಶಕ ರಾಜಗುರು ಮಾತನಾಡಿ ನನ್ನ ಕನಸನ್ನು ನನಸು ಮಾಡಿದ ಜನಮನ ಸಿನಿಮಾ ಸಂಸ್ಥೆಗೆ ಧನ್ಯವಾದಗಳು. ಈ ಸಿನಿಮಾಗೆ ದೊಡ್ಡ ದೊಡ್ಡ ಡೈರೆಕ್ಟರ್ಗಳು, ಹೀರೋ ಹಾಗೂ ಹೀರೋಯಿನ್ಸ್ ಸಪೋರ್ಟ್ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು’ ಎಂದರು.
ಇನ್ನು ನಾಯಕಿ ಬಿಂದು ಗೌಡ ಮಾತನಾಡಿ, ‘ಈ ಸಿನಿಮಾ ನೋಡಿದ ಎಲ್ಲರೂ ಒಳ್ಳೆಯ ರಿವ್ಯೂ ಕೊಟ್ಟಿದ್ದಾರೆ. ಆ ಖುಷಿ ಇದೆ. ಸಿನಿಮಾ ತಂಡಕ್ಕೆ ಧನ್ಯವಾದಗಳು ಎಂದರು. ಇನ್ನೂ ನಟಿ ಹರಣಿ ಮಾತನಾಡಿ ಧನ್ಯವಾದ ತಿಳಿಸಿದರು.

ಇನ್ನು ನಿರ್ದೇಶಕರಾದ ದಯಾಳ್ ಪದ್ಮನಾಭ್, ಶಶಾಂಕ್, ನಿರ್ಮಾಪಕ ಉದಯ್ ಮೆಹ್ತಾ ಸಿನಿಮಾರಂಗದಲ್ಲಿನ ತಮ್ಮ ಅನುಭವವನ್ನು ಬಿಚ್ಚಿಟ್ಟರು. ಸಿನಿಮಾ ಸಕ್ಸಸ್ ಆಗಿಲ್ಲ ಎನ್ನುವ ಬೇಸರದಲ್ಲಿದ್ದ ನಾಯಕ ಗೌರಿಶಂಕರಿಗೆ ಸಮಾಧಾನ ಮಾಡಿದರು. ಸಿನಿಮಾವನ್ನು ಜನ ಒಪ್ಪಿಕೊಂಡಿದ್ದಾರೆ, ಉತ್ತಮ ರಿವ್ಯೂ ಕೊಟ್ಟಿದ್ದಾರೆ ಇದಕ್ಕಿಂತ ಇನ್ನೇನು ಬೇಕು ಎಂದು ಹೇಳಿದರು. ನಟ ಪ್ರಥಮ್ ಕೂಡ ಮಾತನಾಡಿ 50 ದಿನದ ಸಂಭ್ರಮದಲ್ಲಿ ಬೇಸರದ ಮಾತುಗಳು ಬೇಡ ಎಂದು ಗೌರಿಶಂಕರಿಗೆ ಧೈರ್ಯ ತುಂಬಿದರು.

ಕೆರೆಬೇಟೆ ಸಿನಿಮಾ ಬಗ್ಗೆ ಹೇಳುವುದಾದರೆ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಮಾರ್ಚ್ 15ಕ್ಕೆ ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರುಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣ ಹಚ್ಚಿದರು.