Kedaranatha Kuri form movie review. ಕೇದಾರನಾಥ ಕುರಿ ಫಾರಂ ಚಿತ್ರ ವಿಮರ್ಶೆ. “ಕುರಿ ಕಾಯೋ ಕರಿ ಸುಬ್ಬನ ಪಲ್ಲಂಗದ ಸುತ್ತಾ ಕೇದಾರನಾಥನ ಕುರಿ ಫಾರಂ”
ಚಿತ್ರ ಕೇದಾರನಾಥ ಕುರಿ ಫಾರಂ
ನಿರ್ಮಾಪಕರು : ಕೆ.ಎಂ. ನಟರಾಜ್
ನಿರ್ದೇಶನ: ಸೀನು ಸಾಗರ್
ಸಂಗೀತ – ಸನ್ನಿ
ಛಾಯಾಗ್ರಹಣ – ರಾಜೇಶ್ ತಿಲಕ್
ಸಂಭಾಷಣೆ – ರಾಜೇಶ್ ಸಾಲುಂಡಿ
ತಾರಾಗಣ: ಮಡೇನೂರು ಮನು , ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ ಮುಂತಾದವರು.
ಅದೊಂದು ಹಳ್ಳಿ ಅಲ್ಲೊಂದು ಕುರಿ ಸಾಕಾಣೆಯ ಫಾರಂ
ಈ ಫಾರಂನ ಉಸ್ತುವಾರಿ ಹೊತ್ತವನು ಮಂಜು. ಈತನಿಗೆ ಮೂರು ಜನ ಸ್ನೇಹಿತರು. ಈ ನಾಲ್ಕು ಜನ ಆ ಊರಿನ ಅಬ್ಬೆಪಾರಿ ಪೋಲಿಗಳು, ಕಾಮುಕರು, ಹಲವು ಚಟಗಳ ದಾಸರು. ಸಿನಿಮಾ ಪ್ರಾರಂಭದಲ್ಲಿ ಇವರ ಎಲ್ಲಾ ಕಲ್ಯಾಣ ಗುಣಗಳನ್ನು ನಿರ್ದೇಶಕರು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಕಥಾನಾಯಕ ಮಂಜುಗೆ ಹೆಸರಿಗೆ ಕುರಿ ಫಾರಂ ಕಾಯುವ ಕೆಲಸವಿದ್ದರು, ಅವನ ಸ್ನೇಹಿತರು ಇವನು ಆ ಊರಿನ ದಂಡ ಪಿಂಡಗಳು. ಹೀಗಿರುವಾಗ ಬೆಂಗಳೂರಿನಿಂದ ನಶೆ ಏರಿಸುವ ಮಾಲೋಂದನ್ನು ಇವರ ಮತ್ತೊಬ್ಬ ಗೆಳೆಯ ತಂದು ಕೊಡುತ್ತಾನೆ. ಕುರಿ ಫಾರಂ ಕಾಯುವ ಮಂಜು ಸಿಗರೇಟಿನಂತ ಮಾದಕ ವಸ್ತುವನ್ನು ಸೇವಿಸಿ ಅದರ ಘಾಟಿನಿಂದ ಜ್ಞಾನ ತಪ್ಪುತ್ತಾನೆ. ಉಳಿದ ಮೂವರು ಸತ್ತು ಹೊದನೆಂದು ತಿಳಿದು ಕುರಿ ಫಾರಂನಲ್ಲಿ ಮಲಗಿಸಿ ಓಡಿ ಹೋಗುತ್ತಾರೆ. ಮತ್ತೆ ಆ ನಶೆಯಿಂದ ಮಂಜು ಎದ್ದಾಗ ಚಿತ್ರ ಮುಗಿಯುತ್ತದೆ.

ಇದರ ಮದ್ಯೆ ಕೇದಾರನಾಥನ ಕುರಿ ಫಾರಂನಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತವೆ ಎನ್ನುವುದು ಸೋಜಿಗ ಮತ್ತು ಕೌತುಕದ ಜೊತೆಗೆ ಕೆಲವೊಮ್ಮೆ ಅಸಹ್ಯವೂ ಆಗುತ್ತದೆ.
ಕುರಿ ಫಾರಂಗೆ ಒಂದು ಕುಟುಂಬದ ಆಗಮನವಾಗುತ್ತದೆ. ಗಂಡ, ಹೆಂಡತಿ ಮತ್ತು ಮದುವೆ ವಯಸ್ಸಿಗೆ ಬಂದ ಮಗಳು. ಈ ಮೂವರನ್ನು ಕುರಿಗಳ ಯಜಮಾನ ಕರೆತಂದು ಮಂಜುವಿನ ಸುಪರ್ದಿಗೆ ವಹಿಸುತ್ತಾನೆ ಹಾಗೆಯೇ ಯಾರು ದಿಕ್ಕಿಲ್ಲದ ಮಂಜುಗೆ ನಿತ್ಯ ಊಟ ಹಾಕುವ ಜವಾಬ್ದಾರಿ ಆ ಕುಟುಂಬದವರ ಪಾಲಾಗುತ್ತದೆ.

ಆ ಕುಟುಂಬದ ಯಜಮಾನ ಸಾಮಾನ್ ಸಣ್ಣಪ್ಪನಾಗಿ ಟೆನ್ನಿಸ್ ಕೃಷ್ಣ ಕುಡುಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇವರ ಮಗಳು ವಾಸಂತಿಯಾಗಿ ನಟಿ ಶಿವಾನಿ ಅಭಿನಯಿಸಿದ್ದಾರೆ. ಹೆಣ್ಣು ಭಾಕತನದ ಮಂಜು ವಾಸಂತಿಯನ್ನು ಪಡೆಯಲು ಬಹಳ ಸರ್ಕಸ್ ಮಾಡಬೇಕಾಗುತ್ತದೆ. ಅವಳ ಮೇಲೆ ಕಾಮೋದ್ರೇಕವೋ ಪ್ರೇಮೋದ್ರೇಕವೋ ಗೊತ್ತಾಗೋದೆ ಇಲ್ಲ. ಹುಡುಗಿಯರನ್ಙು ಸುಲಭವಾಗಿ ಪಳಗಿಸಿ ತನ್ನ ಕಾಮದ ಕೆಡ್ಡಾಗೆ ಬೀಳಿಸುವವನಿಗೆ ಅದೇಕೋ ವಾಸಂತಿಯ ಮೇಲೆ ತನ್ನ ಮೋಹದ ಬಲೆ ಬೀಸಿದರು ಅಷ್ಟು ಸುಲಭವಾಗಿ ಬೀಳುವ ಹುಡುಗಿ ಅವಳಲ್ಲ
ಬಹಳ ಕಟುವಾಗಿ, ನೇರವಾಗಿ ಸಿಡುಕುವ ಹುಡುಗಿ ಶೀಲವಂತಳು ಹಾಗೂ ಗುಣವಂತಳು.

ಇಲ್ಲಿ ಪ್ರೀತಿಸುವ ಪರಿ ಮಾಮೂಲಿಯಾಗಿಲ್ಲ , ಎಲ್ಲಾ ಕುಲ್ಲಂ ಕುಲ್ಲಾ, ಸಂಭಾಷಣೆಗಳಿಗೆ ಇತಿ ಮಿತಿಯಿಲ್ಲ. ನಿರ್ದೇಶಕರು ನಿರ್ಭೀತಿಯಿಂದ ಸಿನಿಮಾವನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ.
ನಾಯಕಿಯ ತಾಯಿಗೂ ಹಾಗೂ ಕುರಿ ಫಾರಂನ ಮಾಲೀಕ ಕೇದಾರನಾಥ ನಿಗೂ ಅನೈತಿಕ ಸಂಭಂದ,
ನಡುರಾತ್ರಿಯ ಕಾಮ ಕೇಕೆಯ ಸದ್ದಿಗೆ ಕಿವಿ ಕೊಟ್ಟ ಅಮಾಯಕನ ಸಣ್ಣಪ್ಪನ ದಾರುಣ ಹತ್ಯೆ ನಡೆದು ಹೋಗುತ್ತದೆ.
ನಂತರ ಯಾರ ಹತ್ಯೆ, ಯಾರು ಮಾಡುತ್ತಾರೆ, ಹೇಗೆ ಮಾಡುತ್ತಾರೆ ಚಿತ್ರದಲ್ಲಿ ಏನೆಲ್ಲಾ ಟ್ವಿಸ್ಟ್ ಗಳಿವೆ, ಯಾರೆಲ್ಲಾ ಯಾರಿಗೆ ಸ್ಕೆಚ್ ಹಾಕುತ್ತಾರೆ, ಎಷ್ಟೆಲ್ಲಾ ಕೊಲೆಗಳು ನಡೆಯುತ್ತವೆ, ಯಾರು ಯಾರಿಗೆ, ಯಾರಿಗಾಗಿ ಸುಫಾರಿ ಕೊಡುತ್ತಾರೆ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಲು ಪ್ರೇಕ್ಷಕರು ಚಿತ್ರವನ್ನು ನೋಡಬೇಕಾಗುತ್ತದೆ.
ಈ ಎಲ್ಲಾ ಗೊಂದಲದ ಕೆಸರಿನ ಮಡುವಿನಲ್ಲಿ ಮನ ಮುಟ್ಟುವ ವಿಷಯ ವೆಂದರೆ ಅದು ಅಪ್ಪ ಮಗಳ ಭಾಂದವ್ಯ.
ಹೌದು ಮನರಂಜನೆಗೆ ನಿರ್ದೇಶಕರು ತಮ್ಮದೇ ರೀತಿಯ ವ್ಯಾಖ್ಯಾನ ಗಳ ಫಾರ್ಮುಲಗಳನ್ನು ತೆರೆಯ ಮೇಲೆ ಹರಿ ಬಿಟ್ಟರು ಅಪ್ಪಾ ಮಗಳ ಸೆಂಟಿಮೆಂಟ್ ಪ್ರೇಕ್ಷಕರ ಮನ ಸೆಳೆಯುತ್ತದೆ.
ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಕ್ಕೆ ಬಾರದ , ಕೆಲಸವಿಲ್ಲದ ಪೋಲಿಗಳ ಹಾಗೂ ತೆರೆ ಮರೆಯಲ್ಲಿ ನಡೆಯುವ ಅಕ್ರಮ ಸಂಬಂಧಗಳ ಕಥೆಯನ್ನು ನಿರ್ದೇಶಕ ಸೀನು ಸಾಗರ್ ನೈಜವಾಗಿ ತೆರೆಗೆ ಇಳಿಸಿದ್ದಾರೆ.
ಚಿತ್ರದಲ್ಲಿ ಮಡೆನೂರು ಮನು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಕುರಿ ಫಾರಂನ ಮಾಲೀಕನಾಗಿ ಹಾಗೂ ಪಲ್ಲಂಗ ಪ್ರಹಾರಕ್ಕೆ ದ್ರಾಕ್ಷಿ ಮೊರೆ ಹೋಗುವ ಪಾತ್ರದಲ್ಲಿ ಕರಿಸುಬ್ಬು ಯಶಸ್ವಿಯಾಗಿದ್ದಾರೆ. ಇನ್ನೂ ಹಿರಿಯ ನಟ ಟೆನ್ನಿಸ್ ಕೃಷ್ಣ ನಾಯಕಿಯ ತಂದೆಯಾಗಿ ತುಂಬಾ ದಿನಗಳ ನಂತರ ಬಣ್ಣ ಹಚ್ಚಿದ್ದಾರೆ.
ಒಟ್ಟಿನಲ್ಲಿ ಒಂದು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಹಲವು ವಿಷಯಗಳನ್ನು ಕಣ್ಣು ತುಂಬಿಕೊಳ್ಳ ಬಹುದು.
ಸಿನಿಮಾದ ಕೊನೆಯ ದೃಶ್ಯವಂತು ಯಾರು ಊಹಿಸಲಾಗದಂತೆ ನಿರ್ದೇಶಕರು ಸೃಷ್ಠಿಸಿದ್ದಾರೆ.
ಇದೊಂದು ಫಿಲ್ಟರ್ ಇಲ್ಲದ ಪ್ರೇಮ , ಕಾಮ, ಸ್ನೇಹಗಳ ನಡುವೆ ನಡೆಯುವ ಸುಫಾರಿ ಕೊಲೆಗಳ ಚಿತ್ರ. ಇದರಲ್ಲಿ ತರಲೆ, ಮೋಜು, ಮಸ್ತಿ, ಕೊಲೆ, ಸಸ್ಪೆನ್ಸ್, ಹೆಣ್ಣಿನ ನೋವು, ಹೆಣ್ಣಿನೊಂದಿಗೆ ಹಾದರ, ಹೆಣ್ಣಿನ ಕ್ರೌರ್ಯಗಳ ಜೊತೆಗೆ ಮನರಂಜನೆ ಎಲ್ಲವೂ ಇದೆ. ಯಾವುದೇ ಸಿನಿಮಾಗಳಾಗಲಿ ಪ್ರೇಕ್ಷಕ ಪ್ರಭುಗಳು ಕೈ ಹಿಡಿಯಬೇಕಷ್ಟೇ.