Karki movie review. ಕರ್ಕಿ ಚಿತ್ರದ ವಿಮರ್ಶೆ. ಶತಮಾನಗಳ ದಳ್ಳುರಿಯಲ್ಲಿ ಬೆಂದ ಜೀವಂತ ಕಥೆ
ಚಿತ್ರ: ಕರ್ಕಿ
ನಿರ್ಮಾಪಕರು : ಪ್ರಕಾಶ್ ಪಳನಿ
ನಿರ್ದೇಶನ: ಪವಿತ್ರನ್
ಸಂಗೀತ – ಅರ್ಜುನ್ ಜನ್ಯ
ಛಾಯಾಗ್ರಹಣ – ಹೃಷಿಕೇಶ
ಸಂಕಲನ – ಕ್ರೇಜ್ಹಿ ಮೈಂಡ್
ತಾರಾಗಣ: ಜಯಪ್ರಕಾಶ್, ಮೀನಾಕ್ಷಿ, ಸಾಧುಕೋಕಿಲ, ಬಲ ರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಮೊದಲಾದವರು ಅಭಿನಯಿಸಿದ್ದಾರೆ.
ಕರ್ಕಿ ಚಿತ್ರ ವಿಮರ್ಶೆ
ರೇಟಿಂಗ್ – 3.5/5
ಶತಮಾನಗಳ ದಳ್ಳುರಿಯಲ್ಲಿ
ಬೆಂದ ಜೀವಂತ ಕಥೆ
ಜನಾಂಗೀಯ ಮೇಲು ಕೀಳುಗಳ ದ್ವೇಶಗಳ ನಡುವೆ ಸಿಡಿದೆದ್ದ ಕಾಲಭೈರವನ ಪ್ರತೀ ರೂಪವೇ ಕರ್ಕಿ, ಕರ್ಕಿಯ ಮತ್ತೊಂದು ರೂಪವೇ ಭೈರವನ ವಾಹನ ಶ್ವಾನ. ಈ ಶ್ವಾನವೇ ಕಥೆಯ ಆರಂಭದ ಕೇಂದ್ರ ಬಿಂದು.
ಇದು ದಶಮಾನಗಳ ಹಿಂದೆ ಮೇಲು, ಕೀಳುಗಳೆಂಬ ತಾರಕದಲ್ಲಿ ಒಂದು ಜನಾಂಗದ ಜನ ನೀರು ಕುಡಿದು ಮೈಲಿಗೆ ಮಾಡಿದರೆಂಬ ಆಕ್ರೋಶಕ್ಕೆ ಕುಡಿಯುವ ನೀರಿಗೆ ಮೂತ್ರ ಬೆರೆಸುವಂತ ಕೆಲವು ಸಮಾಜದ, ಕೆಲವು ದುಷ್ಟ ವ್ಯಕ್ತಿಗಳ ದುರ್ನಡತೆಯ ಅಟ್ಟಹಾಸದ ಆರ್ಭಟಕ್ಕೆ ಬಲಿಯಾಗುವುದೇ ಕರ್ಕಿಯ (ಶ್ವಾನ) ಕೊಲೆ.

ತಮಿಳಿನ ಹಿರಿಯ ಹಾಗೂ ಖ್ಯಾತ ನಿರ್ದೇಶಕ ಪವಿತ್ರನ್ ಮೊದಲ ಬಾರಿಗೆ ತಮಿಳಿನ ಸಿನಿಮಾ ಒಂದನ್ನು ಕನ್ನಡಕ್ಕೆ ಹಾಗೂ ಕನ್ನಡದ ಪರಿಸರಕ್ಕೆ ಒಗ್ಗಿಸಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಕ್ರಾಂತಿ, ಪ್ರೀತಿ, ದ್ವೇಷ, ಅಸೂಯೇಗಿಂತ ಶಾಂತಿ ಮಂತ್ರವನ್ನು ಬಹಳ ಮನ ಮುಟ್ಟುವಂತೆ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.
ತಾಳಿದವರು ಬಾಳಿಯಾರು ಎಂಬುದನ್ನು ನಿರೂಪಿಸಿದ್ದಾರೆ. ಚಿತ್ರದ ಕೊನೆಯ ದೃಶ್ಯ ತುಂಬಾ ಅರ್ಥಪೂರ್ಣವಾಗಿ ಮುಕ್ತಗೊಳಿಸಿದ್ದಾರೆ.
ತಮಿಳಿನಲ್ಲಿ 90ರ ದಶಕದಲ್ಲಿ ‘ಸೂರ್ಯನ್’, ‘ಐ ಲವ್ ಇಂಡಿಯಾ’, ‘ಇಂದು’, ‘ಕಲ್ಲೂರಿ ವಾಸಲ್’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದವರು ಖ್ಯಾತ ನಿರ್ದೇಶಕ ಪವಿತ್ರನ್. ಈಗ ಪವಿತ್ರನ್ ಕನ್ನಡದಲ್ಲಿ ಮೊದಲ ಬಾರಿಗೆ ಒಂದು ಅರ್ಥಪೂರ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಸಮಾಜದಲ್ಲಿ ತಲೆ ಎತ್ತಿ ಮಾತಾಡಲು, ಜನಾಂಗೀಯ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲು ವಿಧ್ಯಾಭ್ಯಾಸ ಮುಖ್ಯ, ವಿದ್ಯೆ ಇದ್ದರೆ ಎಲ್ಲವನ್ನು ಗೆಲ್ಲಬಹುದು ಎನ್ನುವುದನ್ನು ಮುತ್ತತ್ತಿ ಮುತ್ತುರಾಜ್ LLB ಮೇಲೊಂದು ಗೆರೆ ಎನ್ನುವ ಪಾತ್ರದ ಮೂಲಕ ಹೇಳಿದ್ದಾರೆ. ಈ ಪಾತ್ರವನ್ನು ಈ ಹಿಂದೆ
‘ವಾಟ್ಸಾಪ್ ಲವ್’, ‘ರಾಜರಾಣಿ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಜಯಪ್ರಕಾಶ್ ರೆಡ್ಡಿ (ಜೆ.ಪಿ) ‘ಕರ್ಕಿ’ ಚಿತ್ರದ ನಾಯಕ. ತನ್ನ ಜನರ ಮೇಲೆ ಆಗುತ್ತಿರುವ ಅನ್ಯಾಯಗಳ ಪರ ಧ್ವನಿ ಎತ್ತಲು ಕಾನೂನು ಪದವಿಧರನಾಗಬೇಕು ಎಂಬ ಕನಸಿರುವ ಹಳ್ಳಿ ಹುಡುಗನ ಪಾತ್ರದಲ್ಲಿ ಜೆಪಿ ಅಭಿನಯಿಸಿದ್ದಾರೆ.

ಜೆಪಿ ಪಾತ್ರಕ್ಕೆ ಯಾವುದೇ ಅಪಚಾರವಾಗದಂತೆ ನೈಜವಾಗಿ ಅಭಿನಯಿಸಿದ್ದಾರೆ. ಇಂಗ್ಲೀಷ್ ಬಾರದ ಕಾನೂನು ವಿಧ್ಯಾರ್ಥಿ ಯಾಗಿ ಆತ ಪಡುವ ಬವಣೆ, ಇಂಗ್ಲಿಷ್ ಹೇಳಿಕೊಟ್ಟು ಅವನ ಪಾಲಿಗೆ ದೇವತೆಯಾದ ಜ್ಯೋತಿ ಮಹಾಲಕ್ಷ್ಮಿ, (ಮೀನಾಕ್ಷಿ) ಇವರಿಬ್ಬರ ನಡುವೆ ಪ್ರೀತಿನಾ, ಸ್ನೇಹಾನಾ ಎಂದು ಅರಿಯವು ಮೊದಲೇ ಮುತ್ತುರಾಜನ ಮೇಲೆ ಮತ್ತೆ ಮತ್ತೆ ಅಮಾನವೀಯ ಆಕ್ರಮಣವಾದರೂ, ಅವಮಾನವಾದರೂ ಕೊನೆಯ ವರೆಗೂ ನಾಯಕಿಗೆ ಹೇಳದೇ ಸನ್ನಡತೆಯನ್ನು ಹೇಳಿರುವ ಪಾತ್ರವನ್ನು ಜೆಪಿ ನಿಭಾಯಿಸಿದರೆ, ಆ ಪಾತ್ರವನ್ನು ಅಷ್ಟು ಚನ್ನಾಗಿ ನಿರ್ದೇಶಕರು ಕಟ್ಟಿಕೊಟ್ಟಿರುವುದು ಶ್ಲಾಘನೀಯ.
ಸ್ನೇಹ, ಪ್ರೀತಿ, ಪ್ರೇಮ ಮತ್ತು ಅಮಾನವೀಯತೆಯ ಅಂಶಗಳ ಸುತ್ತ ಈ ಚಿತ್ರ ಸಾಗುತ್ತದೆ. ಆದಷ್ಟು ನೈಜವಾಗಿ ಸಿನೆಮಾದ ಕಥೆ, ಪಾತ್ರಗಳು ಮೂಡಿಬಂದಿದೆ.

ನಾಯಕನ ಗೆಳೆಯನಾಗಿ ಹಳೇಯ ಕಾನೂನು ವಿಧ್ಯಾರ್ಥಿಯಾಗಿ ಸಾಧುಕೋಕಿಲರವರ ಹಾಸ್ಯ ವರ್ಕ್ ಆಗಿದೆ. ಸಾಧು ಕಾಮಿಡಿ ಜೊತೆಗೆ ಸೆಂಟಿಮೆಂಟ್ ಡೈಲಾಗ್ ಗಳಿಂದಲೂ ಪ್ರೇಕ್ಷಕರ ಮನ ತಟ್ಟಿದ್ದಾರೆ. ಚಿತ್ರದಲ್ಲಿ ಹಾಸ್ಯ ಚನ್ನಾಗಿ ಮೂಡಿ ಬಂದಿದೆ.
ಮಲಯಾಳಂನ ಸಹಜ ಸುಂದರಿ ಮೀನಾಕ್ಷಿ ತೆರೆಯ ಮೇಲಿದ್ದಷ್ಟು ಹೊತ್ತು ಪ್ರೇಕ್ಷಕನ ಮನದಲ್ಲಿ ಉಳಿಯುವಂತೆ ಸಹಜ ಅಭಿನಯ ನೀಡಿದ್ದಾರೆ.
ಮುದ್ದು ಮದ್ದಾಗಿ ಕಾಣುವ ಈ ನಟಿ ಅಭಿನಯದಲ್ಲೂ ಚತುರತೆಯನ್ನು ತೋರಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ನಟಿಯರ ಕೊರತೆ ನೀಗುವಲ್ಲಿ ಮೀನಾಕ್ಷಿ ಗಮನ ಸೆಳೆದಿದ್ದಾರೆ.

ಇನ್ನು ಬಲ ರಾಜವಾಡಿ ಅಭಿನಯಕ್ಕಾಗಿಯೇ ಹುಟ್ಟಿದ್ದಾರೇನೋ ಅನ್ನಿಸುತ್ತೆ. ನಾಯಕಿ ತಂದೆಯಾಗಿ ಮಗಳು ಎಲ್ಲಿ ಅನ್ಯ ಜಾತಿಯ ಹುಡುಗನನ್ನು ಪ್ರೀತಸುತ್ತಾಳೋ ಅನ್ನೋ ಆತಂಕ, ಆಕ್ರೋಷದ ಪಾತ್ರವನ್ನು ಬಹಳ ತಾಳ್ಮೆಯಿಂದ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಚಿತ್ರದ ಕೊನೆಯ ದೃಶ್ಯ ನಾಯಕ ಮುತ್ತುರಾಜ್ (ಜೆಪಿ) ಮತ್ತು ನಾಯಕಿಯ ತಂದೆ (ಬಲ ರಾಜವಾಡಿ) ಈ ಇಬ್ಬರ ಕೊನೆಯ ಸನ್ನಿವೇಶ ಎಂತವರ ಕಣ್ಣಂಚಿನಲ್ಲಿ ಸ್ವಾಭಿಮಾನ ಮತ್ತು ಮಮಕಾರದ ನೀರು ಬರುವುದರಲ್ಲಿ ಸಂದೇಹವಿಲ್ಲ.

ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಸಿನೆಮಾಗಳನ್ನು ವಿತರಿಸಿರುವ ವಿತರಕ ಮತ್ತು ಉದ್ಯಮಿ ಪ್ರಕಾಶ್ ಪಳನಿ, ‘ಕರ್ಕಿ’ ಚಿತ್ರವನ್ನು ನಿರ್ಮಿಸಿದ್ದಾರೆ.
‘ಕರ್ಕಿ’ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ಬೇರೆ ಬೇರೆ ಶೈಲಿಯ ಆರು ಹಾಡುಗಳಿದ್ದು, ಈ ಎಲ್ಲಾ ಗೀತೆಗಳನ್ನು ಕವಿರಾಜ್ ಬರೆದಿದ್ದಾರೆ.

ಚಿತ್ರದಲ್ಲಿ ಜೆಪಿ ರೆಡ್ಡಿ, ಮೀನಾಕ್ಷಿ, ಸಾಧು ಕೋಕಿಲ, ಬಲ ರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಮೊದಲಾದವರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಹೃಷಿಕೇಶ ಛಾಯಾಗ್ರಹಣ, ಕ್ರೇಜಿಮೈಂಡ್ಸ್ ಶ್ರೀ ಸಂಕಲನ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಬೃಹತ್ ಕಲಾವಿದರ ತಾರಾಗಣ, ನುರಿತ ತಂತ್ರಜ್ಞರ ದಂಡೇ ‘ಕರ್ಕಿ’ ಸಿನಿಮಾದಲ್ಲಿದೆ.

ಒಟ್ಟಿನಲ್ಲಿ ಕರ್ಕಿ ಚಿತ್ರ ಮರ್ಯಾದೆ ಹತ್ಯೆಗಳ ಕಥೆಗಳೊಂದಿಗೆ ಶುರುವಾದರೂ ಕೊನೆಗೆ ಹತ್ಯೆಗಾರರ ಮರ್ಯಾದೆಯನ್ನು ಕಾಯ್ದು ಅವರಿಗೆ ತಮ್ಮ ಬಗ್ಗೆ ಆಸಹ್ಯ ಮೂಡಿಸುವಂತ ಕರ್ಕಿ ಚಿತ್ರವನ್ನು ಯಾವುದೇ ಮುಜುಗರ ವಿಲ್ಲದಂತೆ ನೋಡಬಹುದು.
ನೀವು ನೀವಾಗೆ ಇರೋವರೆಗೂ,
ನಾನು ನಾಯಿ ಆಗೆ ಇರಬೇಕು ಅಂತ ನೀವು ನಿರೀಕ್ಷೆ ಮಾಡೋ ವರೆಗೂ ಇಲ್ಲಿ ಏನು ಬದಲಾಗಲ್ಲ ಸಾರ್…….