“Kapati” movie teaser released. ದಯಾಳ್ ರವರ “ಕಪಟಿ”ಗೆ ಶುಭಕೋರಿ ಸಾಥ್ ನೀಡಿದ ಡಾರ್ಲಿಂಗ್ ಕೃಷ್ಣ
ಟೀಸರ್ ನಲ್ಲೇ ಮೋಡಿಮಾಡಿದ “ಕಪಟಿ”
ಟೀಸರ್ ಬಿಡುಗಡೆ ಮಾಡಿ ಶುಭಕೋರಿದ ಡಾರ್ಲಿಂಗ್ ಕೃಷ್ಣ* .
ಡಿ.ಪಿಕ್ಚರ್ಸ್ ಲಾಂಛನದಲ್ಲಿ ದಯಾಳ್ ಪದ್ಮನಾಭನ್ ನಿರ್ಮಿಸಿರುವ, ರವಿಕಿರಣ್ ಹಾಗೂ ಚೇತನ್ S.P ಅವರ ಜಂಟಿ ನಿರ್ದೇಶನದ ಹಾಗೂ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಕಪಟಿ” ಚಿತ್ರದ ಟೀಸರ್ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ನಟ ಡಾರ್ಲಿಂಗ್ ಕೃಷ್ಣ ಟೀಸರ್ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇದು ನಮ್ಮ ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹನ್ನೆರಡನೇ ಚಿತ್ರ. ಹನ್ನೆರಡು ಚಿತ್ರಗಳಲ್ಲಿ ಹತ್ತು ಕನ್ನಡ ಹಾಗೂ ಎರಡು ತಮಿಳು ಚಿತ್ರಗಳು. ಹನ್ನೊಂದು ಚಿತ್ರಗಳನ್ನು ನಾನೇ ನಿರ್ಮಿಸಿ , ನಿರ್ದೇಶನವನ್ನೂ ಮಾಡಿದ್ದೇನೆ. ಆದರೆ ಈ ಚಿತ್ರವನ್ನು ನಾನು ನಿರ್ಮಾಣ ಮಾತ್ರ ಮಾಡಿದ್ದೇನೆ. ರವಿಕಿರಣ್ ಹಾಗೂ ಚೇತನ್ S P ನಿರ್ದೇಶನ ಮಾಡಿದ್ದಾರೆ. ಇವರು ಹಿಂದೆ “ಕೋಮ” ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಇವರು ಬಂದು ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. “ಡಾರ್ಕ್ ನೆಟ್” ಕಥಾಹಂದರವನ್ನು ಈ ಚಿತ್ರ ಹೊಂದಿದೆ.

ಕನ್ನಡದಲ್ಲಿ “ಗುಲ್ಟು” ಚಿತ್ರದ ನಂತರ ಈ ಜಾನರ್ ನ ಚಿತ್ರ ಬಂದಿರಲಿಲ್ಲ. ಇನ್ನು, ಕಂಟೆಂಟ್ ಓರಿಯಂಟೆಡ್ ಚಿತ್ರಗಳಿಂದ ಯಾವತ್ತು ಯಾರಿಗೂ ನಷ್ಟವಾಗಲ್ಲ ಎಂದು ನಂಬಿರುವವನು ನಾನು. ಆದರೆ ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ. ಅದಕ್ಕೆ ಉದಾಹರಣೆ ನನ್ನ ಚಿತ್ರಗಳು. “ಕಪಟಿ” ಚಿತ್ರವನ್ನು ಇತ್ತೀಚೆಗೆ ಸ್ನೇಹಿತರ ಜೊತೆ ನೋಡಿದೆ. ಚೆನ್ನಾಗಿ ಬಂದಿದೆ. ಚಿತ್ರ ಆಗಸ್ಟ್ 23 ರಂದು ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಡಾರ್ಲಿಂಗ್ ಕೃಷ್ಣ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ದಯಾಳ್ ಪದ್ಮನಾಭನ್ .

ಸುಮಾರು ಏಳು ವರ್ಷಗಳ (ಕೋಮ ಚಿತ್ರದ) ನಂತರ ನಾವಿಬ್ಬರು ಮತ್ತೆ ನಿರ್ದೇಶಿಸಿರುವ ಚಿತ್ರವಿದು. ಕನ್ನಡದಲ್ಲಿ ತೀರ ವಿರಳ ಎನ್ನಬಹುದಾದ ಕಥಾಹಂದರ ಹೊಂದಿರುವ ಚಿತ್ರವಿದು. ಈ ಕಥೆಯನ್ನು ದಯಾಳ್ ಅವರ ಬಳಿ ಹೇಳಿದ ತಕ್ಷಣ ಒಪ್ಪಿ ನಿರ್ಮಾಣಕ್ಕೆ ಮುಂದಾದರು. ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಿರ್ದೇಶಕದ್ವಯರಾದ ರವಿಕಿರಣ್ ಹಾಗೂ ಚೇತನ್ S P ತಿಳಿಸಿದರು.

ನಾನು ಚಿತ್ರರಂಗವನ್ನು ಬಿಟ್ಟು ಉಡುಪಿಯಲ್ಲಿ ನೆಲೆಸಿದ್ದೆ. ನಿರ್ದೇಶಕರು ಹೇಳಿದ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಬಹು ದಿನಗಳ ನಂತರ ಮತ್ತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ ಎಂದರು “ಜಟ್ಟ” ಚಿತ್ರದ ಖ್ಯಾತಿಯ ಸುಕೃತ ವಾಗ್ಲೆ.

ಪ್ರಮುಖಪಾತ್ರದಲ್ಲಿ ನಟಿಸಿರುವ ದೇವ್ ದೇವಯ್ಯ ಹಾಗೂ ಸಾತ್ವಿಕ್ ಕೃಷ್ಣನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ, ಅವಕಾಶ ನೀಡಿದ ನಿರ್ಮಾಪಕ ದಯಾಳ್ ಅವರಿಗೆ ಧನ್ಯವಾದ ಹೇಳಿದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಜೋಹನ್ ಮಾತನಾಡಿದರು.