Jolly wood ಬೆಂಗಳೂರಿಗರಿಗೆ ಮತ್ತೊಂದು ಫನ್ ಎಂಟರ್ಟೈನ್ಮೆಂಟ್, ಬಿಡದಿ ಸಮೀಪ ಪ್ರಾರಂಭವಾಯಿತು “ಜಾಲಿವುಡ್”

ಬಿಡದಿ ಸಮೀಪ ಪ್ರಾರಂಭವಾಯಿತು “ಜಾಲಿವುಡ್”

ವೇಲ್ಸ್ ಗ್ರೂಪ್‌ನ ಸಂಸ್ಥಾಪಕರಾದ ಐಶರಿ ಕೆ ಗಣೇಶ್ ಅವರ ಸಾರಥ್ಯದ “ಜಾಲಿವುಡ್” ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಇತ್ತೀಚೆಗೆ ಉದ್ಘಾಟನೆಯಾಯಿತು.

ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಸಂಸದರಾದ ಡಿ.ಕೆ.ಸುರೇಶ್ ಹಾಗೂ ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ “ಜಾಲಿವುಡ್” ಅನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಐಶರಿ ಕೆ ಗಣೇಶ್, ಬಹಳ ವರ್ಷಗಳ ಒಂದು ಕನಸು ಇಂದು ನನಸಾಗಿದೆ. ಕಳೆದ 30 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಮನೆಮಂದಿಯಲ್ಲಾ ಒಟ್ಟಿಗೆ ಸಮಯ ಕಳೆಯುವಂತಹ ಒಂದು ಥೀಮ್ ಪಾರ್ಕ್ ಮಾಡಬೇಕು ಎಂಬ ಆಸೆ ಇತ್ತು. ಹೀಗಿರುವಾಗಲೇ, ಇನ್ನೋವೇಟೀವ್ ಫಿಲಂಸಿಟಿಯನ್ನು ಟೇಕ್ ಓವರ್ ಮಾಡುವ ಆಫರ್ ಬಂತು. ಕಳೆದ ಎರಡು ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಫಿಲಂಸಿಟಿಯನ್ನು ನವೀಕರಿಸಿರುವುದಷ್ಟೇ ಅಲ್ಲ, ಹಲವು ಮನರಂಜನೆ ಆಟಗಳನ್ನು ಹೊಸದಾಗಿ ಪ್ರಾರಂಭಿಸಿದ್ದೇವೆ. ಭಾರತೀಯ ಚಿತ್ರರಂಗಕ್ಕೆ ಇದನ್ನು ಸಮರ್ಪಿಸುತ್ತಿದ್ದೇವೆ. ಈ ಪಾರ್ಕ್ ನಲ್ಲಿ 33 ಮುಖ್ಯ ಆಕರ್ಷಣೆಗಳಿವೆ. ವಾಟರ್ ರೈಡ್ ಗಳಲ್ಲದ್ದೆ, ಡೈನೋ ಪಾರ್ಕ್, 5 ರೆಸ್ಟೋರೆಂಟ್ ಗಳು, ಎರಡು ರೆಸ್ಟೋ ಪಬ್ ಗಳು … ಹೀಗೆ ಮನೆಮಂದಿಯಲ್ಲಾ ಒಟ್ಟಾಗಿ ಕಾಲ ಕಳೆಯುವ ಒಂದು ಸ್ಥಳವಿದು. ಈ ಜಾಲಿವುಡ್ ನಲ್ಲಿ ಮನರಂಜನೆ ಖಚಿತ. ಆಗಸ್ಟ್ 27ರಿಂದ ಈ ಜಾಲಿವುಡ್ ಅಧಿಕೃತವಾಗಿ ಪ್ರಾರಂಭವಾಗಲಿದೆ. ಇಂದು ಬಂದು ಉದ್ಘಾಟಿಸಿದ ಗಣ್ಯರಿಗೆ ಮತ್ತು ದೂರದೂರುಗಳಿಂದ ನನಗೆ ಮತ್ತು ನಮ್ಮ ತಂಡಕ್ಕೆ ಶುಭ ಹಾರೈಸುವುದಕ್ಕೆ ಬಂದವರಿಗೆ ಧನ್ಯವಾದಗಳು ಎಂದರು.

ನಾನು ನಾಲ್ಕು ವರ್ಷಗಳಿಂದ ಯಾವುದೇ ಖಾಸಗಿ ಕಾರ್ಯಕ್ರಮಗಳ ಉದ್ಘಾಟನೆಗೆ ಕಾರ್ಯದೊತ್ತಡದಿಂದ ಹೋಗಿರಲಿಲ್ಲ. ಇದೇ ಮೊದಲು ಬಂದಿರುವುದು. “ಜಾಲಿವುಡ್” ಚೆನ್ನಾಗಿದೆ. ಒಳ್ಳೆಯದಾಗಲಿ. ಇಡೀ ಬೆಂಗಳೂರಿನವರು ಹಾಗೂ ಬೇರೆ ಊರಿನವರು ಬಂದು ಇದನ್ನು ವೀಕ್ಷಿಸಲಿ ಎಂದು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹಾರೈಸಿದರು.

ಸ್ಯಾಂಡಲ್ವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ‌ ಒಂದು ಕಡೆ ಸೇರುವ ಸ್ಥಳ “ಜಾಲಿವುಡ್” ಆಗಲಿ ಎಂದು ತಿಳಿಸಿದ್ದ ಶಿವರಾಜಕುಮಾರ್, ಹಿಂದೆ ಇಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಇಲ್ಲಿಗೆ ಬಂದಾಗ ಹಳೆಯ ದಿನಗಳು ನೆನಪಾದವು. ಗಣೇಶ್ ಅವರ ಈ ಪ್ರಯತ್ನಕ್ಕೆ ಎಲ್ಲರು ಪ್ರೋತ್ಸಾಹ ನೀಡಿ ಎಂದರು.

ಸಂಸದರಾದ ಡಿ.ಕೆ.ಸುರೇಶ್, ಶಾಸಕ ಬಾಲಕೃಷ್ಣ ಸಹ “ಜಾಲಿವುಡ್” ಗೆ ಶುಭ ಕೋರಿದರು. ಸಿ.ಇ.ಓ ಆರವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor