Hagga movie review “ಹಗ್ಗ” ಚಿತ್ರ ವಿಮರ್ಶೆ ನೊಂದ ಹೆಣ್ಣುಗಳ ಆತೃಪ್ತ ಆತ್ಮಾವಲೋಕನ.”
ಚಿತ್ರ: ಹಗ್ಗ
ನಿರ್ಮಾಪಕರು : ರಾಜ್ ಭಾರದ್ವಾಜ್, ವೇಣು ಭಾರದ್ವಾಜ್
ನಿರ್ದೇಶನ: ಅವಿನಾಶ್. N
ಸಂಗೀತ – ಮ್ಯಾಥುಸ್ ಮನು
ಛಾಯಾಗ್ರಹಣ – ಸಿನಿಟೆಕ್ ಸೂರಿ
ಸಂಕಲನ – NM. ವಿಶ್ವ
ತಾರಾಗಣ: ಅನು ಪ್ರಭಾಕರ್, ಅವಿನಾಶ್, ಹರ್ಷಿಕಾ ಪೂಣಚ್ಚ, ತಬಲಾ ನಾಣಿ, ಭವಾನಿ ಪ್ರಕಾಶ್,
ರೇಟಿಂಗ್ – 3/5.
“ಹೆಣ್ಣು ಹತ್ಯೆಗಳ ಹಿಂದಿನ ನೊಂದ ಹೆಣ್ಣುಗಳ ಆತೃಪ್ತ ಆತ್ಮಾವಲೋಕನ.”
ಹಗ್ಗ” ಚಿತ್ರದ ಕಥೆ ಹಳೆಯದಾದರೂ ನಿರ್ದೇಶಕರು ಹೇಳಿರುವ ರೀತಿ ಹೊಸದಾಗಿದೆ.
ಬಹಳ ಹಿಂದಿನಿಂದಲೂ ಹೆಣ್ಣು ಭ್ರೂಣ ಹತ್ಯೆ ನಡೆದುಕೊಂಡು ಬಂದಿದೆ, ಇಂದಿಗೂ ತೆರೆ ಮರೆಯಲ್ಲಿ ನಡೆಯುತ್ತಲೂ ಇದೆ. ಆದರೆ ಈ ಚಿತ್ರದಲ್ಲಿ ಕಲಿಯುಗದ ಕಂಸೆಯೊಬ್ಬಳ ದುಷ್ಟತನವೇ ಹಗ್ಗದ ಕಥೆಗೆ ಮೂಲ ಬಂಡವಾಳ.
ದ್ವಾಪರದ ಕಂಸ ತನ್ನ ಅಳಿವಿನ ಭಯದಿಂದ ತನ್ನ ಸಹೋದರಿಯ ಹುಟ್ಟಿದ ಮಕ್ಕಳನ್ನೆಲ್ಲಾ ಕೊಲ್ಲಿಸುತ್ತಾನೆ,
ಈ ಕಲಿಯುಗದ ಕಂಸೆ ತನ್ನ ಸ್ವಂತ ಮಗನ ಮಕ್ಕಳನ್ನು ವಂಶೋದ್ಧಾರಕ ಹುಟ್ಟಲಿಲ್ಲ ಎಂಬ ಕಾರಣಕ್ಕೆ ಹುಟ್ಟಿದ ಹೆಣ್ಣು ಮಕ್ಕಳನ್ನು ಕೊಲ್ಲಿಸುತ್ತಾಳೆ. ಇದು ಚಿತ್ರದ ಕಥೆಗೆ ಅಡಿಪಾಯ.

ಚಿತ್ರದ ಮೊದಲ ದೃಶ್ಯವನ್ನು ವಾಹ್ಹ್ ಎನ್ನುವಂತೆ ಬಹಳ ಸುಂದರವಾಗಿ ಚಿತ್ರಸಲಾಗಿದೆ. ಈಡೀ ಚಿತ್ರದಲ್ಲಿ ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೆ ಕಣ್ಣಿಗೆ ಖುಷಿ ಕೊಡುವುದು ಸಿನಿಟೆಕ್ ಸೂರಿಯವರ ಕ್ಯಾಮರಾ ಕೈ ಚಳಕ. ಸೂರಿಯವರು ಈಗಾಗಲೇ ತಮ್ಮ ಕ್ಯಾಮರಾ ಕೆಲಸಗಳಿಗೆ ಪ್ರಶಸ್ತಿಗಳನ್ನ ಪಡೆದವರು ಈ ಚಿತ್ರದಲ್ಲೂ ಸೂರಿಯವರ ಕೆಲಸ ಗಮನ ಸೆಳೆಯುತ್ತದೆ. ಇನ್ನೂ ಈ ಚಿತ್ರದ ಮತ್ತೊಬ್ಬರು ಪ್ರಶಂಸೆಗೆ ಪಾತ್ರವಾಗುವುದು. ಮೇಕಪ್, ಹೌದು ಚಿತ್ರದ ಪಾತ್ರಗಳಿಗೆ ಜೀವ ತುಂಬಿರುವುದು ಮೇಕಪ್.

ನಾಯಕಿ, ಮತ್ತು ಖಳನಾಯಕಿರಿಬ್ಬರಿಗೂ ಅದ್ಬುತವಾಗಿ ಮೇಕಪ್ ಮಾಡಿ ದೃಶ್ಯವನ್ನು ಹುಬ್ಬೇರಿದುವಂತೆ ಮಾಡಿದ್ದಾರೆ, ಹಾಗೇ ಮತ್ತೊಬ್ಬ ಟೆಕ್ನಿಷಿಯನ್ ಬಗ್ಗೆ ಹೇಳಲೇ ಬೇಕು ಅದು ಸಂಕಲನ ಮತ್ತು ಗ್ರಾಫಿಕ್ಸ್. ಈ ಸಿನಿಮಾದಲ್ಲಿ ಗ್ರಾಫಿಕ್ಸ್ ಬಹಳ ಶ್ರಮ ವಹಿಸಿ ಕಾಳಜಿಯಿಂದ ಮಾಡಿದ್ದಾರೆ. ಅದು ಚಿತ್ರವನ್ನು ಚನ್ನಾಗಿ ಬಿಂಬಿಸಿದೆ. ಮತ್ತು ಚಿತ್ರದ ಮ್ಯೂಸಿಕ್, ಮ್ಯಾಥುಸ್ ಮನುರವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಹಗ್ಗವನ್ನು ಬಲಿಷ್ಟಗೊಳಿಸಿದೆ.

ಇನ್ನು ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ
ಅದೊಂದು ಊರು ಅಲ್ಲಿ ಯಾರಿಗೆ ಮದುವೆಯಾಗಿ ಮಕ್ಕಳಾದರೆ ಆ ಮನೆಯ ಹಿರಿಯರು ಊರ ಹೊರಗಿನ ಮರದ ಕೊಂಬೆಯಲ್ಲಿ ನೇಣು ಬಿಗಿದು, ಬೆಂಕಿಯಲ್ಲಿ ಸುಟ್ಟು ನೇತಾಡುತ್ತಿರುತ್ತಾರೆ.ಆ ಕಾರಣಕ್ಕೆ ಆ ಊರಿನಲ್ಲಿ ಯಾರು ಮಕ್ಕಳಿಗೆ ಮದುವೆ ಮಾಡುವುದಿಲ್ಲ ಇದು ಕಥೆಯ ಮುಂದುವರಿದ ಭಾಗ.
ಆ ಊರಿನ ಗೌಡ ಅವಿನಾಶ್, ಗೌಡನ ಮಗ ವೇಣು. ವೇಣು ಪ್ರತೀ ಯೊಂದು ದೃಶ್ಯದಲ್ಲೂ ಬಹಳ ಕಷ ಪಟ್ಟು ಅಭಿಯಿಸಿದ್ದಾರೆ, ಇವರು ಅಭಿನಯದಲ್ಲಿ ಪಕ್ವತೆ ಹೊಂದಬೇಕಾಗಿದೆ ಇದು ಬಹಳ ಮುಖ್ಯ.

ಇನ್ನು ಚಿತ್ರದಲ್ಲಿ ತಬಲ ನಾಣಿ ಕಾಮಿಡಿ ಮಾಡಿದ್ದಾರೆ
ಆದರೆ ಅವರೇ ಚಿತ್ರದ ಒಂದು ದೃಶ್ಯದಲ್ಲಿ ಹೇಳುವಂತೆ ನನ್ನನ್ನೇನು ಕಾಮಿಡಿ ಆಕ್ಟರ್ ಅಂದು ಕೊಂಡಿದ್ದೀರಾ..? ಎನ್ನುವಂತೆ ತಬಲ ಕಾಮಿಡಿಗಿಂತ ಅವರ ತರಲೆ ಡೈಲಾಗ್ ಜಾಸ್ತಿ ಸದ್ದು ಮಾಡಿದೆ. ಒಮ್ಮೊಮ್ನೆ ಹಗ್ಗ ನಮ್ಮ ಕುತ್ತಿಗೆಗೆ ಬಿಗಿದ ಅನುಭವ ವಾಗುತ್ತದೆ.
ತಬಲ ನಾಣಿ ಒಬ್ಬ ನುರಿತ ರಂಗಭೂಮಿ ಕಲಾವಿದ ಯಾವುದೇ ಪಾತ್ರ ಕೊಟ್ಟರೂ ಪ್ರೇಕ್ಷಕರ ಮನಸ್ಸಿನಲ್ಲಿ ಮೃದುವಾಗಿ ತಟ್ಡಿಬಿಡುತ್ತಾರೆ ಆದರೆ ಇಲ್ಲಿ ಎಡವಿದ್ದು ಯಾಕೆ, ಯಾರಿಂದ…? ನಮಗಂತು ಗೊತ್ತಿಲ್ಲ. ನಿರ್ದೇಶಕರು ಸರಿಯಾಗಿ ತಯಾರಿ ಮಾಡಿಕೊಂಡಿರಲಿಲ್ಲವಾ ಎನ್ನಿಸುತ್ತದೆ. ಡೈಲಾಗ್ ಗಳು ಹಾಸ್ಯಕ್ಕಿಂತ ಕಿರಿ ಕಿರಿ ಅನ್ನಿಸುತ್ತದೆ.

ಈಗ ಚಿತ್ರದ ಪ್ರಮುಖ ಕಲಾವಿದರ ಬಗ್ಗೆ ಹೇಳುವುದಾದರೆ ಹಗ್ಗದ ಒಂದು ತುದಿ ಅನು ಪ್ರಭಾಕರ್ ಆದರೆ ಮತ್ತೊಂದು ತುದಿ ಭವಾನಿ ಪ್ರಕಾಶ್. ಈ ಇಬ್ಬರೇ ಹಗ್ಗದ ಜಗ್ಗಾಟದ ಕೇಂದ್ರಬಿಂದು ಎನ್ನಬಹುದು.
ಅನು ಪ್ರಭಾಕರ್ “ಹೃದಯ ಹೃದಯ” ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿಕೊಟ್ಟು 25 ವರ್ಷಗಳಾಗಿವೆ ಅವರ ವೃತ್ತಿ ಜೀವನದ ಬೆಳ್ಳಿ ಹೆಜ್ಜೆಯ ಸಂದರ್ಭದಲ್ಲಿ “ಹಗ್ಗ” ಚಿತ್ರದ ಅವರ ವಿಭಿನ್ನ ಗೆಟಪ್ ಒಂದು ಮೈಲಿಗಲ್ಲು ಎನ್ನಬಹುದು.
ಅನು ಪ್ರಭಾಕರ್ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ,
ಅನು ವಿಭಿನ್ನವಾಗಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು ಅದ್ಬುತವಾಗಿ ಕಾಣುತ್ತಾರೆ. ಇಷ್ಟು ವರ್ಷ ಪ್ರೀತಿ, ಪ್ರೇಮ, ಫ್ಯಾಮಿಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅನು ಪ್ರಭಾಕರ್ ಹಗ್ಗದಲ್ಲಿ ಎಲ್ಲರೂ ಮೆಚ್ಚುವಂತೆ ಕಾಣಿಸಿದ್ದಾರೆ.
ಆದರೆ ನಿರ್ದೇಶಕರು ಈ ಪಾತ್ರಕ್ಕೆ ಮತ್ತಷ್ಟು ಅಭಿನಯಿಸುವ ಅವಕಾಶ ಕೊಡಬೇಕಿತ್ತು.

ಇನ್ನು ಭವಾನಿ ಪ್ರಕಾಶ್ ಈ ಚಿತ್ರದ ಮತ್ತೊಂದು ಆಧಾರ ಸ್ತಂಭ, ಇವರು ಎರಡು ಶೇಡ್ ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಬ್ಬಾ ನಿಜಕ್ಕೂ ಇವರು ದೈತ್ಯ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಭವಾನಿ ಅಲ್ಲಲ್ಲಿ ಸಣ್ಣ ಪಾತ್ರಗಳಿಂದ ಹಿಡಿದು ಕಿರುತೆರೆಗಳಲ್ಲಿ ಖಳ ನಟಿಯಾಗಿ ಅಭಿನಯಿಸಿದ್ದಾರೆ, ಎಲ್ಲೂ ಅವರು ಕಳಪೆ ಪ್ರದರ್ಶನ ನೀಡಿಲ್ಲ. ಆದರೆ ಹಗ್ಗ ಚಿತ್ರದಲ್ಲಿ ಅತ್ತೆಯ ಪಾತ್ರದಿಂದ ಹಿಡಿದು, ಮಾಂತ್ರಿಕಳ ವರೆಗೆ ಎಲ್ಲರ ಹುಬ್ಬೇರಿಸುವಂತೆ ಅಬ್ಬರಿಸಿದ್ದಾರೆ. ನಿಜಕ್ಕೂ ಇವರಿಗೆ ಈ ವರ್ಷದ ರಾಜ್ಯ ಪ್ರಶಸ್ತಿ ಬರುವುದರಲ್ಲಿ ಸಂಶಯವಿಲ್ಲ. ಈ ರಂಗಭೂಮಿ ಪ್ರತಿಭೆ ಮುಂದಿನ ದಿನಗಳಲ್ಲಿ ಒಬ್ಬ ಹೆಣ್ಣು ಖಳನಟಿಯರ ಸ್ಥಾನ ತುಂಬಲಿ ಎಂಬುದು ನಮ್ಮ ಆಶಯ.
ಚಿತ್ರದಲ್ಲಿ ವೇಣು ಭಾರದ್ವಾಜ್, ಪ್ರಿಯಾಂಕಾ ಅರೋರಾ, ಪ್ರಿಯಾ ದರ್ಶಿನಿ, ತಬಲಾ ನಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಹರ್ಶಿಕಾ ಪೂಣಚ್ಚ ಒಂದು ವಾಹಿನಿಯ ವರದಿ ಗಾರ್ತಿಯಾಗಿ ಬಣ್ಣ ಹಚ್ಚಿದ್ದಾರೆ. ನಟ ವೇಣು ಮತ್ತು ತಬಲದ ಸದ್ದಿನಲ್ಲಿ ಅವರು ಅಷ್ಟಾಗಿ ಪ್ರೇಕ್ಷಕರ ಗಮನ ಸೆಳೆಯುವುದಿಲ್ಲ, ಆದರೂ ಅವರ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಪ್ರಯತ್ನ ಮಾಡಿದ್ದಾರೆ.
ಹಗ್ಗ ಚಿತ್ರದ ಕಥೆಯ ಎಳೆ ಚನ್ನಾಗಿದೆ ಆದರೆ ನಿರ್ದೇಶಕರು ಅದನ್ನು ಚನ್ನಾಗಿ ನಿಭಾಯಿಸಬಹುದಿತ್ತು, ಚಿತ್ರದ ಮೊದಲರ್ಧ ಕೆಲವು ಬೇಡದ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಹಾಗೂ ಇನ್ನೂ ಚನ್ನಾಗಿ ಕಥೆಗೆ ಹಾಗೂ ಪಾತ್ರಗಳಿಗೆ ಜೀವ ಕೊಡಬಹುದಾಗಿತ್ತು.

ಇನ್ನು ಈ ಚಿತ್ರತಂಡದಲ್ಲಿ ದಯಾಳ್ ಪದ್ಮನಾಬನ್ ಹೆಸರು ಹೇಳದಿದ್ಧರೆ ಅಪೂರ್ಣವಾಗುತ್ತದೆ. ದಯಾಳ್ ಒಬ್ಬ ಒಳ್ಳೆಯ ನಿರ್ದೇಶಕ ಹಾಗೂ ನಿರ್ಮಾಪಕ ಅವರು ಈ ಸಿನಿಮಾದ ಪ್ರಚಾರದ ಹೊಣೆಯನ್ನು ಅನು ಪ್ರಭಾಕರ್ ರವರ ಮಾತಿಗೆ ಮಣಿದು ಹೊತ್ತುಕೊಂಡು ಅಚ್ಚುಕಟ್ಟಾಗಿ ಈ ಚಿತ್ರವನ್ನು ದಡ ಸೇರಿಸಲು ಶ್ರಮಿಸಿದ್ದಾರೆ ಎನ್ನಬಹುದು.
ಹಗ್ಗ ಹೆಣ್ಣು ಶಿಶುಗಳ ಹತ್ಯೆಯ ಒಂದು ಸಾಮಾಜಿಕ ಪಿಡಿಗಿನ ಕಥೆ, ಇದು ಪ್ರೇತಾತ್ಮಗಳ ಸೇಡಿನ, ಹಾಗೂ ಕಣ್ಣೀರಿನ ವ್ಯಥೆ. ಗ್ರಾಫಿಕ್, ಮೇಕಪ್, ಕ್ಯಾಮರಾ ಹಾಗೂ ಸಂಗೀತದ ಸದ್ದಿನೊಂದಿಗೆ ಒಂದು ಸಂದೇಶವಿರುವ ಚಿತ್ರ. ಪ್ರೇಕ್ಷಕರು ಈ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ.