Gicchi GiliGili Comedy c show started @ Saturday & Sunday 9.00pm. ಮತ್ತೆ ಶುರುವಾಗಿದೆ ನಗೆಯ ರಸದೌತಣದ “ಗಿಚ್ಚಿ ಗಿಲಿಗಿಲಿ” ಶನಿವಾರ, ಭಾನುವಾರ ರಾತ್ರಿ ಒಂಭತ್ತಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ

ಮತ್ತೆ ಶುರುವಾಗಿದೆ ನಗೆಯ ರಸದೌತಣದ “ಗಿಚ್ಚಿ ಗಿಲಿಗಿಲಿ”

ಶನಿವಾರ, ಭಾನುವಾರ ರಾತ್ರಿ ಒಂಭತ್ತಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ

ಬಿಗ್‌ಬಾಸ್‌ ಸೀಸನ್‌ ಹತ್ತರ ಅಭೂತಪೂರ್ವ ಯಶಸ್ಸಿನ ನಂತರ ಕಲರ್ಸ್‌ ಕನ್ನಡ ಇದೀಗ ವಾರಾಂತ್ಯದ ಮನರಂಜನೆಯನ್ನು ಇನ್ನೊಂದು ಹಂತಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದ ಎಲ್ಲೆಡೆ ಮನೆಮಾತಾಗಿರುವ, ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿ ವಿ ಶೋ “ಗಿಚ್ಚಿಗಿಲಿಗಿಲಿ”ಯ ಎರಡು ಸೂಪರ್‌ ಹಿಟ್‌ ಸೀಸನ್‌ಗಳ ನಂತರ ಭರ್ಜರಿ ಮೂರನೇ ಸೀಸನ್ ಫೆಬ್ರವರಿ 3 ರಿಂದ ಆರಂಭವಾಗಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಈ ಕಾಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಈವರೆಗೆ ಈ ಶೋನ ತೀರ್ಪುಗಾರರಾಗಿದ್ದರು. ಈಗ ಇವರಿಬ್ಬರ ಜೊತೆಗೆ ಮೂರನೇ ತೀರ್ಪುಗಾರರಾಗಿ ಜನಪ್ರಿಯ ಕಾಮಿಡಿ ನಟ ಕೋಮಲ್ ಜತೆಗೂಡಿರುವುದು ಮೂರನೇ ಸೀಸನ್ನಿನ ವಿಶೇಷ ಆಕರ್ಷಣೆ.

ಹೊಸ ಸೀಸನ್ನಿನಲ್ಲಿ ಹತ್ತು ಹೊಸ ಜೋಡಿಗಳು ಭಾಗವಹಿಸಲಿದ್ದು ಗಿಚ್ಚಿಗಿಲಿಗಿಲಿಗೆ ಹೊಸ ರಂಗು ತುಂಬಲಿವೆ. “ಬಿಗ್‌ಬಾಸ್‌ ಗ್ರಾಂಡ್‌ ಫಿನಾಲೆಯಲ್ಲಿ ಬಿಗ್‌ಬಾಸ್‌ ಅಣಕು ಪ್ರಹಸನ ಮಾಡಿ ರಂಜಿಸಿದ್ಧ ಗಿಚ್ಚಿ ಗಿಲಿಗಿಲಿ ತಂಡದ ಶೋ ಇದೀಗ ಬಿಗ್‌ಬಾಸ್‌ ಪ್ರಸಾರ ಆಗುತ್ತಿದ್ದ ಸಮಯದಲ್ಲಿ ಪ್ರಸಾರವಾಗಲಿದೆ. ಕಲರ್ಸ್‌ ಕನ್ನಡದ ಅದ್ಭುತ ಕಾಮಿಡಿಯನ್‌ಗಳ ಜೊತೆಗೆ ಬಿಗ್‌ಬಾಸ್‌ನ ಈ ಸೀಸನ್‌ ಸೇರಿದಂತೆ ವಿವಿಧ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳು ಈ ಬಾರಿಯ ಗಿಚ್ಚಿ ಗಿಲಿಗಿಲಿಯಲ್ಲಿ ಭಾಗವಹಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು” ಎನ್ನುತ್ತಾರೆ ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪ್ರಶಾಂತ್‌ ನಾಯಕ್.

ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತೀರ್ಪುಗಾರರಾದ ಶೃತಿ, ಸಾಧುಕೋಕಿಲ, ಕೋಮಲ್ ಕುಮಾರ್, ಶೋ ನ ನಿರ್ದೇಶಕ ಪ್ರಕಾಶ್, ನಿರ್ಮಾಪಕರಾದ ಶಿವಧ್ವಜ್, ಪ್ರಶಾಂತ್ ರೈ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಉಪಸ್ಥಿತರಿದ್ದರು.

ನಾನು ಹಾಸ್ಯ ಕಲಾವಿದನಾಗಿ, ನಿರ್ದೇಶಕನಾಗಿ ಎಲ್ಲರಿಗೂ ಪರಿಚಯನಾಗಿದ್ದೆ‌. ಆದರೆ “ಕನ್ನಡ ಕೋಗಿಲೆ” ಶೋ ಮೂಲಕ ಎಲ್ಲರಿಗೂ ನಾನು ಸಂಗೀತ ನಿರ್ದೇಶಕ ಎಂದು ಗೊತ್ತಾಯಿತು. ಈಗ ಜನರು ಕಿರುತೆರೆಯನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. “ಗಿಚ್ಚಿ ಗಿಲಿಗಿಲಿ” ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಮೂರನೇ ಸೀಸನ್ ಕೂಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದರು ಸಾಧುಕೋಕಿಲ.

“ಗಿಚ್ಚಿ ಗಿಲಿಗಿಲಿ” ಶೋ ನ ಮೂಲಕ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಇಂತಹ ಶೋ ಆಯೋಜಿಸಿರುವ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದ. ಎರಡು ಸೀಸನ್ ಗಳಿಗೆ ನಾನು ಹಾಗೂ ಸಾಧುಕೋಕಿಲ ಅವರು ತೀರ್ಪುಗಾರರಾಗಿದ್ದೆವು. ಈಗ ನಮ್ಮೊಂದಿಗೆ ಕೋಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ ಎಂದು ನಟಿ ಶ್ರುತಿ ತಿಳಿಸಿದರು.

ನಾನು ಈ ಹಿಂದೆ ಒಂದು ಕಾಮಿಡಿ ಶೋ ನ ನಿರ್ಮಾಣ ಮಾಡಿದ್ದೆ‌ ಎಂದು ಮಾತನಾಡಿದ ನಟ ಕೋಮಲ್ ಕುಮಾರ್, ಕಲರ್ಸ್ ವಾಹಿನಿಯ ಅನುಬಂಧ ಅವರ್ಡ್ಸ್ ನಲ್ಲಿ ಸಿಕ್ಕ ಈ ಕಾರ್ಯಕ್ರಮದ ನಿರ್ಮಾಪಕರು “ಗಿಚ್ಚಿ ಗಿಲಿಗಿಲಿ” ಶೋ ಬಗ್ಗೆ ಹೇಳಿದರು. ನಾನು ಕೂಡ ಈ ಶೋ ನೋಡಿದ್ದೇನೆ‌. ಈಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ ಎಂದರು.

ನಾವು ಈ ಹಿಂದೆ “ಮಜಾಭಾರತ” ಎಂಬ ಶೋ ಮಾಡಿದ್ದೆವು. ಈಗ ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ “ಗಿಚ್ಚಿ ಗಿಲಿಗಿಲಿ” ಯನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದೇವೆ. ಸಹಕಾರ ನೀಡುತ್ತಿರುವ ವಾಹಿನಿಯವರಿಗೆ, ತೀರ್ಪುಗಾರರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು ನಿರ್ಮಾಪಕರಾದ ಶಿವಧ್ವಜ್ ಹಾಗೂ ಪ್ರಶಾಂತ್ ರೈ.

“ಬಿಗ್ ಬಾಸ್” ಸೀಸನ್ ಹತ್ತು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈಗ ಶನಿವಾರ, ಭಾನುವಾ ಅದೇ ಸಮಯಕ್ಕೆ “ಗಿಚ್ಚಿ ಗಿಲಿಗಿಲಿ” ಪ್ರಸಾರವಾಗಲಿದೆ. ನಮ್ಮ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಪ್ರಕಾಶ್.

ಗಿಚ್ಚಿ ಗಿಲಿಗಿಲಿಯ ಕಾಮಿಡಿಯನ್‌ಗಳು ಈಗಾಗಲೇ ರಾಜ್ಯದ ಎಲ್ಲೆಡೆ ಜನಪ್ರಿಯರು. ಇವರೊಂದಿಗೆ ಹೊಸ ಹತ್ತು ಸ್ಪರ್ಧಿಗಳೂ ಸೇರಿದ್ದು ಈ ಸೀಸನ್‌ನಲ್ಲಿ ಕಾಮಿಡಿಯ ಮಹಾಪೂರವೇ ಹರಿದುಬರಲಿದೆ.


‌ಈ ಬಾರಿಯ ಬಿಗ್‌ಬಾಸ್‌ನ ಹೈಲೈಟ್‌ಗಳಲ್ಲಿ ಒಬ್ಬರಾಗಿದ್ದ ಕಾಮಿಡಿಯನ್‌ ತುಕಾಲಿ ಸಂತೋಷ್‌ ತಮ್ಮ ಪತ್ನಿ ಮಾನಸ ಅವರೊಂದಿಗೆ ಸೇರಿ ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡಲಿದ್ದಾರೆ. ಇವರ ಜೊತೆಗೆ ಬಿಗ್‌ಬಾಸ್‌ ಸೀಸನ್‌ ಎಂಟರ ವಿಜೇತ, ಮಜಾಭಾರತ, ಕಾಮಿಡಿ ಟಾಕೀಸ್‌ ಮುಂತಾದ ಕಾಯಕ್ರಮಗಳ ಮೂಲಕ ಮಿಂಚಿರುವ ಮಂಜು ಪಾವಗಡ ಒಂದೆರಡು ವರ್ಷಗಳ ಬ್ರೇಕ್‌ನ ನಂತರ ಗಿಚ್ಚಿಗಿಲಿಗಿಲಿಗೆ ಮರಳಿದ್ದಾರೆ. ಬಿಗ್‌ಬಾಸ್ ಸೀಸನ್‌ ಒಂಬತ್ತರಲ್ಲಿ ರಂಜಿಸಿದ್ದ ಇನ್ನೊಬ್ಬ ಹೆಸರಾಂತ ಮಜಾಭಾರತ ಮತ್ತು ಗಿಚ್ಚಿಗಿಲಿ ಕಲಾವಿದ ವಿನೋದ್‌ ಗೊಬ್ಬರಗಾಲ ಇದ್ದೇ ಇರುತ್ತಾರೆ.
ಇವರ ಜೊತೆಗೆ ಈ ಬಾರಿ ಬಿಗ್‌ಬಾಸ್‌ನಲ್ಲಿದ್ದ ದ್ರೋಣ್‌ ಪ್ರತಾಪ್‌ ಮತ್ತು ಇಶಾನಿ ಕೂಡಾ ಕಾಮಿಡಿಯಲ್ಲಿ ಒಂದು ಕೈ ನೋಡೇ ಬಿಡೋಣ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಬಿಗ್‌ಬಾಸ್‌ ಸೀಸನ್‌ ನಾಲ್ಕರಲ್ಲೇ ಜನಮನ ಗೆದ್ದಿದ್ದ ಸಂಜನಾ ಚಿದಾನಂದ್‌ ಕೂಡಾ ಹಾಸ್ಯದಲ್ಲಿ ತಾನೇನೂ ಕಮ್ಮಿಯಿಲ್ಲ ಎಂಬಂತೆ ಸ್ಫರ್ಧಿಸಲಿದ್ದಾರೆ.


ಉಳಿದಂತೆ ಕಲರ್ಸ್‌ ಕನ್ನಡದ ಜನಪ್ರಿಯ ಕಾಮಿಡಿಯನ್‌ಗಳಾದ ಹುಲಿ ಕಾರ್ತಿಕ್‌, ಶಿವು, ಚಿಲ್ಲರ್‌ ಮಂಜು, ಚಂದ್ರಪ್ರಭಾ, ಮಾನಸ, ಪ್ರಶಾಂತ್‌, ನಂದೀಶ್‌ ಮಡಿವಾಳ ಎಂದಿನಂತೆ ವೀಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. “ಕನ್ನಡ ಕೋಗಿಲೆ” ಸಂಗೀತ ಕಾಯಕ್ರಮದಲ್ಲಿ ಜನಪ್ರಿಯರಾಗಿದ್ದ ಹಾಡುಗಾರ ಕರಿಬಸವ, “ನನ್ನಮ್ಮ ಸೂಪರ್‌ಸ್ಟಾರ್‌” ನ ಪುನೀತಾ, “ಮಜಾ ಟಾಕೀಸ್‌”ನ ಮೋಹನ್‌, ದೀಕ್ಷಾ, ಖುಷಿ, ಮಧುಮತಿ- ಹೀಗೆ ಮಜರಂಜನೆಯ ರಸದೌತಣ ನೀಡುವಂಥಾ ತಂಡವೇ ರೆಡಿಯಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor