“Gana” movie review. ಗಣ ಚಿತ್ರದ ವಿಮರ್ಶೆ. ಗಣನೆಗೆ ಸಿಲುಕದ ಕಥಾವಸ್ತು
ಚಿತ್ರ ವಿಮರ್ಶೆ
Rating – 3/5
ಚಿತ್ರ : ಗಣ
ನಿರ್ದೇಶಕ : ಹರಿ ಪ್ರಸದ್ ಜಕ್ಕಾ
ನಿರ್ಮಾಪಕ : ಪಾರ್ಥು
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಣ : ಜೈ ಆನಂದ್
ಸಂಕಲನ : ಹರೀಶ್ ಕೊಮ್ಮೆ
ತಾರಾಗಣ : ಪ್ರಜ್ವಲ್ ದೇವರಾಜ್, ವೇದಿಕ, ಯಶ ಶಿವಕುಮಾರ್, ಸಂಪತ್ ರಾಜ್, ರವಿಕಾಳೆ, ಕೃಷಿ ತಾಪಂಡ, ವಿಶಾಲ್ ಹೆಗಡೆ, ಶಿವರಾಜ್ ಕೆ.ಆರ್. ಪೇಟೆ.
ಗಣನೆಗೆ ಸಿಲುಕದ ಕಥಾವಸ್ತು

ಗಣ ಅವನೊಬ್ಬ ಟಿವಿ ವಾಹಿನಿಯ ವರದಿಗಾರ. ಅಚಾನಕ್ಕಾಗಿ ಬರುವ ಒಂದು ಅನಾಮದೇಯ ಫೋನ್ ಕರೆ ಇಡೀ ಚಿತ್ರದ ಕಥೆಯನ್ನೇ ಬದಲಿಸುತ್ತದೆ. ಈ ಕಥೆಗೆ ಪ್ರಮುಖ ನಾಯಕ 1990 ದಶಕದ ದೂರವಾಣಿ ಸಾಧನ.
ತಾಂತ್ರಿಕ ದೋಷದಿಂದಾಗಿ ಯಾರಿಗೋ ಮಾಡಲು ಹೋಗಿ ಮತ್ಯಾರಿಗೋ ತಗುಲಿಕೊಳ್ಳುವ ಕರೆಯಿಂದಾಗಿ ಒಂದು ಸ್ವಚ್ಚವಾದ ಅನುರಾಗ, ಪ್ರೀತಿ, ವಾತ್ಸಲ್ಯ, ಮಮತೆ, ಸ್ನೇಹ ಅರಳುತ್ತದೆ. ಆಕಡೆಯಿಂದ ಮಾತಾಡುವ ಇನ್ನೂ ಮದುವೆಯಾಗದ ಹುಡುಗಿ ವೇದಿಕ ಇತ್ತಕಡೆ ಯಿಂದ ಮಾತಾಡುವ ನಾಯಕ ಪಾತ್ರದಲ್ಲಿ ಪ್ರಜ್ವಲ್. ಆದರೆ ಆಕೆ 1993ರ ಕಾಲಘಟ್ಟದಲ್ಲಿದ್ದರೆ. ಈತ 2022ರಲ್ಲಿರುತ್ತಾನೆ.
ಹೌದು ಇದು ಟೈಮ್ ಟ್ರಾವೆಲ್ ಕಥೆಯ ಚಿತ್ರ. ಸತ್ತು ಹೋಗಿರುವ ತನ್ನ ತಾಯಿಯೊಂದಿಗೆ ಈ ದೂರವಾಣಿ ಮೂಲಕ ನಾಯಕ ಮತ್ತೆ ಮಾತಾಡುತ್ತಾನೆ. 93ರಲ್ಲಿ ಕೊಲೆಯಾದ ತನ್ನ ತಾಯಿ ತಂದೆಯರನ್ನು ಹೇಗೆ ಈ ಟೈಮ್ ಟ್ರಾವಲ್ ಮುಖಾಂತರ, ಬದುಕಿಸಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರು ಯಾರು ತನಗೂ ತನ್ನೊಂದಿಗೆ ದೂರವಾಣಿ ಮೂಲಕ ಮಾತಾಡುವ ಆ ಯುವತಿ ಯಾರು..? ಈ ಎಲ್ಲಾ ಕುತೂಹಲಕ್ಕೆ ಪ್ರೇಕ್ಷಕ ಚಿತ್ರ ಮಂದಿರಗಳಲ್ಲಿ ಸಿನಿಮಾ ನೋಡಲೇ ಬೇಕಾಗುತ್ತದೆ.
ನಿಜಕ್ಕೂಈ ರೀತಿಯ ವಿಭಿನ್ನ ಕಥೆಯನ್ನು ಹೆಣೆದಿರುವ ನಿರ್ದೇಶಕ ಹರಿಪ್ರಸಾದ್ ಜಕ್ಕರಿಗೆ ಶಹಬ್ಬಾಸ್ ಎಂದು ಬೆನ್ನ ತಟ್ಟಬೇಕು. ಈಗಾಗಲೇ ಇದೇ ನಿರ್ದೇಶಕರ ನಿರ್ದೇಶನದಲ್ಲಿ ಇದೇ ರೀತಿಯ ಕಥೆಯ ಚಿತ್ರ ಮೂಡಿ ಬಂದಿದೆ. ಈಗ ಕನ್ನಡದಲ್ಲಿ ಮತ್ತಷ್ಟು ಅಪ್ ಗ್ರೇಡ ನೊಂದಿಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕ ನಟನಾಗಿ ಪ್ರಜ್ವಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೊಂದು ಕಮರ್ಷಿಯಲ್ ಚಿತ್ರವಾದರೂ ತಾಯಿ ಮಗನ ಕರುಳ ಸಂವೇದನೆ ಮನ ಮುಟ್ಟುವಂತಿದೆ. ನಟಿ ವೇದಿಕ ಕೂಡ ಚಿತ್ರದ ನಾಯಕಿಯಾಗಿ ಅಮ್ಮನಾಗಿ ಎರಡು ಪಾತ್ರಗಳನ್ನು ನಿರ್ವಹಿಸಿದ್ದಾರೆ. ವೇದಿಕರವರಿಗೆ ಜೋಡಿಯಾಗಿ ವಿಶಾಲ್ ಹೆಗಡೆ ಅಭಿನಯಿಸಿದ್ದಾರೆ. ಬಹಳ ವರ್ಷಗಳ ನಂತರ ವಿಶಾಲ್ ಮತ್ತೆ ತೆರೆ ಮೇಲೆ ಕಾಣಿಸಿ ಕೊಂಡಿದ್ದಾರೆ.

ಇನ್ನು ವರ್ತಮಾನದ ನಾಯಕಿಯಾಗಿ ಪ್ರಜ್ವಲ್ ಗೆ ಸಾಥ್ ನೀಡಿರುವುದು ಉದಯೋನ್ಮುಕ ನಟಿ ಬಟ್ಟಲುಕಣ್ಗಳ ಚಲುವೆ ಯಶ ಕುಮಾರ್. ಯಶ ತುಂಬಾ ಲವಲವಿಕೆಯಿಂದ ಮುದ್ದಾಗಿ ಕಾಣುತ್ತಾರೆ. ಹಾಗೆ ತೆರೆಯ ಮೇಲೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಶಿವರಾಜ್ ಕೆ.ಆರ್. ಪೇಟೆ ಪ್ರಜ್ವಲ್ ಗೆಳೆಯನಾಗಿ ಚಿತ್ರದ ಕಥೆಯುದ್ದಕ್ಕೂ ಪ್ರಜ್ವಲ್ ದೇವರಾಜ್ ಗೆ ಸಾಥ್ ನೀಡಿದ್ದಾರೆ.
ನಟ ರವಿಕಾಳೆ ಬಹಳ ವರ್ಷಗಳ ನಂತರ ಕನ್ನಡದ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇಲ್ಲಿ ರವಿಕಾಳೆಯ ಜೊತೆಗೆ ಸಂಪತ್ ರಾಜ್ ಖಳನಟನಾಗಿ ಎರಡು ಕಾಲಘಟ್ಟದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರ ಪ್ರಾರಂಭದಿಂದ ಕೊನೆಯವರೆಗೂ ಕುತೂಹಲ ಭರಿತವಾಗಿದೆ. ನೋಡುಗರಿಗೆ ಕಣ್ಣಿಗೆ ಹಿತವೆನಿಸುವಂತೆ ಛಾಯಾಗ್ರಾಹಕ ಜೈ ಆನಂದ್ ಚಿತ್ರೀಕರಿಸಿದ್ದಾರೆ.
ಹಾಗೆಯೇ ಅನೂಪ್ ಸೀಳಿನ್ ರವರ ಸಂಗೀತ ಕಥೆಯ ಜೊತೆಗೆ ಜೀವಿಸಿದೆ ಎನ್ನಬಹುದು.
ನಿರ್ಮಾಪಕರಾದ ಪಾರ್ಥುರವರು ಒಂದು ಒಳ್ಳೆಯ ಚಿತ್ರಕ್ಕೆ ಹಣ ಹೂಡಿದ್ದಾರೆ ಮತ್ತು ಒಳ್ಳೆಯ ಕಥೆಯನ್ನು ಆರಿಸಿ ಕೊಂಡಿದ್ದಾರೆ.
ಒಟ್ಟಾರೆ ಒಂದು ಮನರಂಜನಾತ್ಮಕವಾದ ಒಂದು ವಿಭಿನ್ನ ಪ್ರಯತ್ನದ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ಕುಳಿತು ಸವಿಯಬಹುದು.